ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ
ಶರಣ ಜನಕನು ಪೊರೆವ ಕಾರುಣ್ಯಧಾಮ ಪ.
ದಶರಥಾತ್ಮಜ ಯಜ್ಞ ಕಾಯ್ದು ಸೀತೆಯ ವರಿಸಿ
ಕುಶಲದಿಂದಲಿ ಬಂದು ನಗರದಲ್ಲಿರಲೂ
ದಶರಥನ ಆಜ್ಞೆಯಲಿ ಸತಿ ಅನುಜಸಹ ವನದಿ
ನಸುನಗುತ ಚರಿಸಿ ರಕ್ಕಸರ ಸದೆಬಡಿದೆ 1
ಸತಿಯೆ ಕಳೆದಿರೆ ಹನುಮ ಹಿತವಾರ್ತೆ ಬಿನೈಸೆ
ಹತಗೈದು ರಾವಣಾದಿಗಳನೆಲ್ಲ
ಹಿತದ ರಾಜ್ಯದ ವಿಭೀಷಣ ರವಿಜರಿಗೆ ಇತ್ತು
ವ್ರತ ಬಿಡಿಸಿ ಭರತನಿಗೆ ಧರಣಿಯಾಳಿದನೇ 2
ಪಟ್ಟಾಭಿರಾಮ ಮಂಗಳ ನಾಮ ಕೃಪೆಯಿಂದ
ಇಷ್ಟಾರ್ಥವೀಯೊ ಸನ್ಮಂಗಳವನೂ
ದಿಟ್ಟ ಶ್ರೀ ಹನುಮ ವಂದಿತ ಚರಣ ನಮಿಸುವೆನು
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೇ 3
****
No comments:
Post a Comment