ಕಂಡೆ ಕಂಡೆ ಪಂಡರೀಶನ | ಕಂಡೆ ಕಂಡೆ ಪ.
ಕಂಡೆ ಪಂಡರಿಪುರದಿ ಮೆರೆವನ
ಕಂಡೆ ಭಕ್ತರ ಕಾವ ಬಿರುದನ
ಕಂಡೆ ಮಂಡೆಯ ಚರಣದಲ್ಲಿಡೆ
ಹಿಂಡು ಅಘಗಳ ತರಿವ ವಿಠಲನ ಅ.ಪ.
ಕಟಿಯಲೀ ಕರವಿಟ್ಟು ಮೆರೆವನ
ಹಟದಿ ವಗದಿಟ್ಟಿಗೆಲಿ ನಿಂತನ
ಸ್ಪಟಿಕ ಹಾಟಕ ಕಟಕ ಮಕುಟನ
ವಟದೆಲೆ ಮೇಲೊರಗಿದಂಥನ
ಕುಟಿಲ ಕುಂತಳ ಫಣಿಯ ತಿಲುಕನ
ತೃಟಿಯು ತೆರವಿಲ್ಲದಲೆ ನಮಿತನ
ವಟುವೆನಿಸಿ ಬಲಿರಾಯಗೊಲಿದನ
ನಟನೆಗೈಯ್ಯವ ದಿವ್ಯರೂಪನ 1
ಚಂದ್ರಭಾಗಾ ತೀರದಲ್ಲಿಹನ
ಚಂದ್ರ ಕೋಟಿಸ್ಮರನ ರೂಪನ
ಇಂದಿರೆಯ ಸಹಿತದಲಿ ನೆಲಸುತ
ಚಂದ್ರದ್ಹಾರಗಳಿಂದಲೆಸವನ
ಬಂದ ಭಕ್ತರ ಭೇದ ನೋಡದೆ
ಸಂದರುಶನಾನಂದವೀವನ
ಚಂದ್ರಮಂಡಲ ಮಧ್ಯವರ್ತಿಯ
ಚಂದ್ರಕುಲಕೆ ತಾ ಚಂದ್ರನೆನಿಪನ 2
ವಿಠ್ಠಲನ ಪುರದಲ್ಲಿ ಹರಿಯುವ
ಶ್ರೇಷ್ಠ ಇಂದುಭಾಗೆಯಲಿ ಮಿಂದು
ಮುಟ್ಟಿ ವಿಠಲನ ಚರಣಕಮಲವ
ಬಿಟ್ಟು ಮನದ್ಹಂಬಲಗಳೆಲ್ಲವ
ವಿಠ್ಠಲಾ ನೀನೆ ಗತಿ ಕೈ
ಗೊಟ್ಟು ಕಾಯೆಂದೆನುತ ಸ್ತುತಿಸಿ
ಕಷ್ಟಹರ ಗೋಪಾಲಕೃಷ್ಣ
ವಿಠ್ಠಲನ ಚರಣಾಂಬುಜಗಳನು 3
****
No comments:
Post a Comment