..
kruti by ಬೇಲೂರು ವೈಕುಂಠ ದಾಸರು belur vaikunta dasaru
ಕೇಶವನೊಲುಮೆಯು ಆಗುವತನಕ ಹರಿ
ದಾಸರೊಳಿರು ಮನವೆ
ಆಶೆಪಾಶಂಗಳು ಬಿಟ್ಟು ವಿಲಾಸದಿ
ದಾಸರ ಸ್ತುತಿಯನು ಪೊಗಳುತ ಮನದೊಳು ಪ
ಮೋಸದಿ ಪ್ರಾಣಿಹಿಂಸೆಯನು ಮಾಡಿದ ಫಲ
ಕಾಶಿಗೆ ಪೋದರೆ ಪೋದೀತೆ
ದಾಸರು ಕರೆದು ಕಾಸುಕೊಟ್ಟ ಫಲ
ಲೇಸಾಗದೆ ಸುಮ್ಮನಿದ್ದೀತೆ
ಆಸೆಕೊಟ್ಟು ನಿರಾಸೆ ಮಾಡಿದ ಫಲ
ಮೋಸವ ಮಾಡದೆ ಬಿಟ್ಟೀತೆ
ದಶಶಿರನನುಜನು ಹರಿಯ ಒಲಿಸಿಕೊಂಡದ್ದು
ನಿಜವಲ್ಲದೆ ಪುಸಿಯಾದೀತೆ 1
ಕನಕದ ಪಾತ್ರೆ ಘನಪ್ರಭೆಯೊಳಿರೆ
ಸೊಣಕನ ಮನಸಿಗೆ ಸೊಗಸೀತೆ
ಹೀನ ಮನುಜಗೆ ಜ್ಞಾನವ ಬೋಧಿಸೆ
ಹೀನ ವಿಷಯಗಳು ಬಿಟ್ಟೀತೆ
ಮಾನಿನಿ ಮನಸು ನಿಧಾನವಿಲ್ಲದಿರೆ
ಮಾನಾಭಿಮಾನವು ಉಳಿದೀತೆ
ಭಾನುಕೋಟಿ ಪ್ರಕಾಶನ ಭಜಿಸದ
ದೀನಗೆ ಮುಕ್ತಿಯು ದೊರಕೀತೆ 2
ಶ್ರುತ್ಯಾರ್ಥಗಳು ನಿತ್ಯದಿ ಪೇಳಲು
ಕತ್ತೆಯ ಮನಸಿಗೆ ಬಂದೀತೆ
ಸ್ಮøತ್ಯಾರ್ಥಂಗಳು ನಿತ್ಯದಿ ಬೋಧಿಸೆ
ತೊತ್ತಿನ ಮನಸಿಗೆ ಬಂದೀತೆ
ಕಸ್ತುರಿ ಫಣೆಯಲಿ ಬತ್ತಿ ತಿಲಕವಿಡೆ
ಅರ್ಥ ತೊರೆಯದೇ ಬಿಟ್ಟೀತೆ
ಚಿತ್ರದಿ ಬೊಂಬೆ ವಿಚಿತ್ರದಿ ಬರೆದಿತ್ತ
ಮುತ್ತು ಕೊಟ್ಟರೆ ಮಾತಾಡೀತೆ 3
ನ್ಯಾಯವ ಬಿಟ್ಟು ಅನ್ಯಾಯವ ಪೇಳ್ದವ
ನಾಯಾಗಿ ಹುಟ್ಟೋದು ಬಿಟ್ಟೀತೆ
ತಾಯಿ ತಂದೆಯ ನೋಯಿಸಿದ
ಮಾಯಾವಾದಿಗೆ ಮುಕುತಿಯು ದೊರಕೀತೆ
ಬಾಯಿಬೊಬ್ಬಿಲಿ ಬೊಗಳುವ ಮನುಜಗೆ
ಘಾಯವಾಗದೆ ಬಿಟ್ಟೀತೆ
ಛಾಯಮಾಯವಾ ಕಲಿತಾ ಮನುಜಗೆ
ಕಾಯಕ ಕಷ್ಟ ಬಿಡದಿದ್ದೀತೆ 4
ಸಾಧು ಸಜ್ಜನರ ನಿಂದಿಸಿದ ದು
ರ್ವಾದಿಗೆ ಮುಕುತಿಯು ದೊರಕೀತೆ
[ಶುದ್ಧರಾಗಿ]ಭಜಿಸಿ ಬರುವರನನರ್ಥವ
ಗೈದವಗೆ ವ್ಯಾಧಿ ಕಾಡದೆ ಬಿಟ್ಟೀತೆ
ಕ್ಷುಧ್ರಮನುಜ ಬಹು ಕ್ಷುಧ್ರವ ನುಡಿಯಲು
ಬುದ್ಧಿಹೀನನೆಂಬೋದು ಬಿಟ್ಟೀತೆ
ಕದ್ದು ಒಡಲಹೊರುವ ಮನುಜಗೆ
ಇದ್ದದ್ದೋಗದೆ ಉಳಿದೀತೆ 5
ಅಂಗವಿಷಯಗಳು ಹಿಂಗಿದ ಮನುಜಗೆ
ಅಂಗನೆಯರ ಬಯಸೀತೆ
ಸಂಗಸುಖಗಳು ಹಿಂಗದ ಮನುಜಗೆ
ಶೃಂಗಾರದ ಬಗೆ ತೋರೀತೆ
ಮಂಗಳ ಮಹಿಮನ ಪದಾಂಘ್ರಿಯ ಭಜಿಸದ
ಭೃಂಗಗೆ ಮುಕ್ತಿಯು ದೊರಕೀತೆ 6
ಕರುಣಾನನಾಭರಣ ಧರಿಸಿದ ಪರಮಗೆ ಸರಳೆದುರಾದೀತೆ
ಕರುಣಾನನ ಸ್ಮರಣೆವುಳ್ಳರಿಗೆ ಪರಮ ಪದವಿ ಆಗದಿದ್ದೀತೆ
ವರದ ವೇಲಾಪುರಿ ವೈಕುಂಠ ಕೇಶವನ
ಚರಣ ಸೇವಕನಾಗಿ ಇರು ಕಂಡ್ಯ ಮನವೆ 7
***
No comments:
Post a Comment