ವನಹೀನವಾದ ನದಿಗಳು ವ್ಯರ್ಥ
ಧನಹೀನನಾದ ಸಾಹುಕಾರ ವ್ಯರ್ಥ
ತನುಜರು ಇಲ್ಲದ ಮಂದಿರ ವ್ಯರ್ಥ
ಹಣ ವಿಷ್ಣು ದ್ರೋಹಿಗೆ ಕೊಟ್ಟದ್ದು ವ್ಯರ್ಥ
ಗುಣಹೀನ ಸಂನ್ಯಾಸಿಗೆ ವಂದನೆ ವ್ಯರ್ಥ
ಘನ ಘರ್ಜಿಸಿದರೇನು ಮಳೆ ಇಲ್ಲ ವ್ಯರ್ಥ
ಅನಳನು ಧೂಮಯುಕ್ತವಾಗೆ ವ್ಯರ್ಥ
ಅನಿಮಿಷರಿಗೆ ಮಂತ್ರಹೀನಾಹುತಿಯು ವ್ಯರ್ಥ
ವನಿತೆಗೆ ಗಂಡ ಅಂತರಿಸಲು ವ್ಯರ್ಥ
ಮನೆತನದಳಿಯನಾಗುವುದಂತು ಬಲು ವ್ಯರ್ಥ
ವನಜರಹಿತವಾದ ಕಾಸಾರವು ವ್ಯರ್ಥ
ಅನುವಾಗದ ಮದಹೀನಗಜವಾದರು ವ್ಯರ್ಥ
ಕುಣಿಯದ ಹಾರದ ಕುದುರೆ ಇದ್ದೂ ವ್ಯರ್ಥ
ಸನುಮತ ಸ್ವರಹೀನ ವೇದಪಾಠ ವ್ಯರ್ಥ
ತೃಣಕಂಠಕಯುಕ್ತ ಮಾರ್ಗವಾದರೂ ವ್ಯರ್ಥ
ಮನಸು ಸಮಹೀನವಾದ ಜ್ಞಾನ ವ್ಯರ್ಥ
ಕನಸು ಕಾಸೆಂಬುದು ಸುಳ್ಳು ಖ್ಯಾತಿ ವ್ಯರ್ಥ
ಒಣಡಂಭಕವಾದ ದಾನ ಧರ್ಮ ವ್ಯರ್ಥ
ಮನಸಿಜಪಿತ ಶ್ರೀಪ್ರಾಣೇಶವಿಟ್ಠಲನಂಘ್ರಿ -
ಯನು ಸೇವಿಸದೆ ಬಂದ ಮನುಜ ಜನ್ಮವು ವ್ಯರ್ಥ ll - ಶ್ರೀಪ್ರಾಣೇಶದಾಸರು
***
ವ್ಯರ್ಥವಾಗದಿರಲಿ
ಶ್ರೀಪ್ರಾಣೇಶದಾಸರು ಸಾರ್ಥಕ ಜೀವನವನ್ನು ಸಾಗಿಸುವವರು ಹೇಗಿರಬೇಕೆಂಬ ಅಂಶಗಳನ್ನು ನಿಷೇದಾರ್ಥಕ ರೀತಿಯಲ್ಲಿ ತಿಳಿಸಿ, ಜೊತೆಗೆ ಇತರ ವಸ್ತುಗಳೂ ಎಂಥಹ ಸಂದರ್ಭದಲ್ಲಿ ವ್ಯರ್ಥವೆನ್ನಿಸುತ್ತದೆಂದು ತಿಳಿಸುವರು. ಸಾಧನೆಗೆ ಸಿಗುವ ಫಲ ಅವುಗಳ ಸಾರ್ಥಕ್ಯವನ್ನವಲಂಬಿಸಿರುತ್ತದೆ.
ಬಹು ಬಹುಕೋಟಿ ಜನುಮಗಳಿಗೆ ಲಭಿಸಿದ ಈ ಮನುಷ್ಯ ಜನುಮ, ಅದರಲ್ಲೂ ಶ್ರೀಮದಾಚಾರ್ಯರ ಅನುಯಾಯಿಯಾದದ್ದು ಮಹಾಭಾಗ್ಯ. ಇಂತಹ ದುರ್ಲಭ ಜನುಮ ಸಿಕ್ಕಾಗ ಯಾವ ವ್ಯರ್ಥವಾದ ಕಾರ್ಯವೂ ನಮ್ಮಿಂದೆಸಗದಿರಲು ಇಲ್ಲಿ ದಾಸರು ಅನೇಕ ವಿಷಯಗಳನ್ನು ಮುಂದಿಟ್ಟರು. ಜೀವನದ ಪ್ರತಿ ಪ್ರಸಂಗಗಳಲ್ಲೂ ಗಮನವಿಟ್ಟು ಕಾರ್ಯೋನ್ಮುಖರಾಗಿ ಸಿದ್ಧಿಯನ್ನು ಪಡೆಯಿರೆಂದರು. ವ್ಯರ್ಥವೆಂದರೆ ನಿರಂತರ ಕಳೆಯಿತೆಂದೇ ಅರ್ಥ. ಮತ್ತೆ ಬಾರದು, ಸಿಗದು. ಆದ್ದರಿಂದ ಎಂದಿಗೂ ನಮ್ಮ ಕಾರ್ಯವು ವ್ಯರ್ಥವಾಗದಂತೆ ಗಮನಹರಿಸಿರೆಂದು ಆದೇಶವಿತ್ತರು.
***
No comments:
Post a Comment