Thursday, 2 December 2021

ಎಷ್ಟು ಪುಣ್ಯ ಮಾಡಿ ಇಲ್ಲಿ ಇಟ್ಟಿಗೆ ನೆಲಸಿತೋ ankita gopalakrishna vittala ESHTU PUNYA MAADI ILLI ITTIGE NELASITO



ಎಷ್ಟು ಪುಣ್ಯ ಮಾಡಿ ಇಲ್ಲಿ ಇಟ್ಟಿಗೆ ನೆಲಸಿತೋ

ವಿಠ್ಠಲನ್ನ ಚರಣ ಶಿರದಿ ಮೆಟ್ಟಿಸಿ ಕೊಂಡಿತೋ ಪ.


ಭಕ್ತನಾದ ಪುಂಡಲೀಕನ ಕರಕೆ ಸೋಕಿತೋ

ಚಿತ್ತಧೃಡನು ಎಸೆಯೆ ರಂಗನ ಪಾದಕೆರಗಿತೋ 1


ಹರಿಯೆ ಎನ್ನ ಶಿರವ ಮೆಟ್ಟೆಂದ್ಹರಿಕೆ ಮಾಡಿತೋ

ಪರಮ ಪುರುಷ ಬಂದು ನಿಲ್ಲೆ ಖ್ಯಾತಿ ಪೊಂದಿತೋ 2


ಒಲಿದು ಮೆಟ್ಟಿದಂಥ ಪಾದ ಶಿರದಿ ಪೊತ್ತಿತೋ

ಇಳೆಯನಳೆದ ಪಾದ ಇಲ್ಲಿ ಅಡಿಗಿಸಿಕೊಂಡಿತೋ 3


ಗೋಕುಲದಲಿ ಮೆರೆದ ಪಾದ ಸೋಕಿಸಿಕೊಂಡಿತೋ

ನಾಕ ಜನರು ವಂದಿಪ ಪಾದ ನನ್ನದೆಂದಿತೋ 4


ಯಮುನ ದಡದಿ ಸುಳಿದ ಪಾದಯತ್ನದಿ ಪೊಂದಿತೋ

ರಮೆಯು ಸೇವಿಪಂಥ ಪಾದ ರಜವ ಧರಿಸಿತೋ 5


ಬಂಧ ಬಿಡಿಸುವಂಥ ಪದದಿ ಬಂಧಿಸಿಕೊಂಡಿತೋ

ಸುಂದರ ಸುಕೋಮಲನ ಪಾದ ಸೂಕ್ಷ್ಮದಿ ಪೊತ್ತಿತೋ 6


ಪೊಗಳಲೊಶವು ಅಲ್ಲದ ಪಾದ ಘಳಿಗೆ ಬಿಡದಾಯ್ತೋ

ಜಗದಲಿಟ್ಟಿಗೆ ನಿಲಯನೆಂಬೊ ಲಾಭ ಹೊಂದಿತೋ 7


ನಂದ ಕಂದ ಬಂದನೆಂದು ನಲಿದು ನಿಂತಿತೋ

ಇಂದಿರೇಶ ಪೋಗದಿರೆಂದು ಇಲ್ಲೆ ಹಿಡಿದಿತೋ 8


ಪಾಪ ಕಳೆದು ಪಾವನ್ನದಲಿ ಮುಕ್ತಿ ಪೊಂದಿತೋ

ಗೋಪಾಲಕೃಷ್ಣವಿಠ್ಠಲನ ಚರಣ ಸೇರಿತೋ9

***


No comments:

Post a Comment