ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ (ವಾಸುದೇವವಿಟ್ಠಲ ಅಂಕಿತ)
ಶ್ರೀಹರಿ ಪ್ರಾರ್ಥನಾ ಸುಳಾದಿ
ರಾಗ ಬಾಗೇಶ್ರೀ
ಧ್ರುವತಾಳ
ಒಲ್ಲೆ ವಿಷಯಗಳೆಂದವರಿಗೆ ಒಂ -
ದಲ್ಲದೆ ದ್ವಿಗುಣಿತ ವಿಷಯವೆಂಬ
ಫಲ್ಲಿಸುತಿಪ್ಪ ಅದರಲ್ಲಿ ನೀನೆವೆ
ಬಲ್ಲಿದನೆಂಬನುಭವಸಿದ್ಧ
ಒಳ್ಳಿತು ನಾವೊಂದು ಮಾಡುವೆ ಬಿನ್ನಪ
ಸಲ್ಲಿಸಬೇಕಲ್ಲದಿದ್ದರುಪೇಕ್ಷ
ಸಲ್ಲದೊ ಕೃಷ್ಣಯ್ಯಾ ವಿಷಯದೊಳಿದ್ದದ್ದು
ಸಿಲ್ಲುಕದ ಜನರು ಇಪ್ಪರಂತೇ
ವಲ್ಲಭ ನೀನಿದು ತೋರಿಸೊ ಎನ್ನಲ್ಲಿ
ಇಲ್ಲದಿದ್ದರೆ ಮಹಾ ಶಕುತಿ ಏನೋ
ಮಿಳ್ಳಿತಯೇ ನೀನಾಗಿ ವಾಸುದೇವವಿಟ್ಠಲ
ಒಲ್ಲಿಯೊ ವಿಷಯದ ಸಾರಭೋಕ್ತಾ ॥ 1 ॥
ಮಟ್ಟತಾಳ
ಬಡತನ ಹಿಂಗದಿರೆ ಧೊರೆಗಳು ತಾವಾಗಿ
ಪಿಡಿದು ಅವಗೆ ಮೇಟಿ ಪೊಲಗಳು ಕಟ್ಟೀಗ
ತಡಿಯದೆ ಬೇಕಾದ ಸಕಲ ಸಾಧನ ನೀಡಿ
ನಡಸುತ ಬರುವಂಥ ಧೊರಿಗಳ ಅಭಿಮಾನ
ಪೊಡವಿಗೆ ಪತಿ ವಾಸುದೇವವಿಟ್ಠಲ ನೀನೆ
ಒಡೆಯ ಎನ್ನ ಭಾರ ನಿನಗಲ್ಲದೆನಗೇನೊ ॥ 2 ॥
ತ್ರಿವಿಡಿತಾಳ
ನೀನೆ ಗುಣಾಕರನೊ ನಿಖಿಳ ಲೋಕದಲ್ಲಿ
ಆನೆ ಅನೇಕಾನೇಕ ದೋಷಾಕರನೋ
ನೀನೆ ಪರಮ ಶಕುತಿ ಉಳ್ಳಮರನಿಕರದೊಳು
ಆನೇವೆ ದುರ್ಬಲರೊಳು ಮೊದಲೀಗ
ನೀನೆ ಸ್ವಾತಂತ್ರ ತ್ರಿವಿಧ ಸತ್ವಗಳಲ್ಲಿ
ಆನೆ ಪರಾಧೀನ ಅಖಿಳರೊಳಗೇ
ನೀನೆವೆ ಭಾಗ್ಯದೇವತಿಯ ವಲ್ಲಭನೊ
ಆನೇವೇ ಕೃಪಣರೊಳು ಕೃಪಣನೈಯ್ಯಾ
ಏನೆಂಬೆ ಹೀಗಿರಲು ಎನ್ನಯ ಬಿನ್ನಪ
ನೀನೇಕಚಿತ್ತದಿ ಕೇಳುವದು
ಆನೆವೇ ನಿನಗೆ ಮರುಳಾದೆನೇನಯ್ಯಾ
ಶ್ರೀನಾಥ ನಿನ್ನ ಪ್ರೇರಣೆಯಲ್ಲದೆ
ಅನಾಥ ಬಂಧು ವಾಸುದೇವವಿಟ್ಠಲರೇಯಾ
ನೀನಾದರದಿ ಕೇಳೊ ದುರಿತ ಕೀಳೊ ॥ 3 ॥
ಅಟ್ಟತಾಳ
ಕರ್ದಮ ಸೌಭರಿ ಕಶ್ಯಪ ಮೊದಲಾದ
ದುರ್ದಮ ಮುನಿಗಳು ನಿನಗೆ ಮಾಡಿದುದೇನೊ
ನಿರ್ದಯ ಎನ್ನಲ್ಲಿ ಮಾಡುವರೇ , ದೋಷ -
ಮರ್ದನ ಶ್ರೀವಾಸುದೇವವಿಟ್ಠಲರೇಯಾ ॥ 4 ॥
ಆದಿತಾಳ
ಬಲು ವಿಧ ಸಾಧನ ಜಗದೊಳು ನೀ ಬಲ್ಲಿ
ಛಲವ್ಯಾತಕೊ ಬಡವಗೆ ಇದರಲ್ಲಿ
ತಿಳಿದ ಸಾಧನವಿತ್ತು ವಾಸುದೇವವಿಟ್ಠಲ
ಫಲವಾಗುವಂತೆ ನಿನ್ನ ಭಕುತೀಯ ನೀಡೊ ॥ 5 ॥
ಜತೆ
ಸಾಧನದೊಳಗಿದ್ದು ವಾಸುದೇವವಿಟ್ಠಲಾ -
ರಾಧನೆ ಮಾಡಿಸೋ ಸಾಧ್ಯ ನೀನಾಗೀ ॥
****
No comments:
Post a Comment