Saturday 26 June 2021

ಧ್ಯಾನ ಮಾಡು ಮನವೆ gopala vittala ankita suladi ಉಪಾಸನಾ ಸುಳಾದಿ DHYANA MAADU MANAVE UPASANA SULADI

 

Audio by Mrs. Nandini Sripad


ಶ್ರೀಗೋಪಾಲದಾಸಾರ್ಯ ವಿರಚಿತ 

 ಉಪಾಸನಾ ಸುಳಾದಿ 


(ಚಲ ಅಚಲಗಳಲ್ಲಿ ಸರ್ವಕ್ರಿಯಾದಲ್ಲಿ ಅದ್ವೈತತ್ರಯನಾದ ಶ್ರೀಹರಿಕರ್ತೃ ನಿಯಾಮಕನೆಂದರಿತು, ಸಕಲರೂಪ ಬಿಂಬನಲ್ಲಿ ಐಕ್ಯ ಚಿಂತಿಸಿ ಧ್ಯಾನೋಪಾಸನ ಕ್ರಮ. ) 


 ರಾಗ ಭೌಳಿ 


 ಧ್ರುವತಾಳ 


ಧ್ಯಾನ ಮಾಡು ಮನವೆ ದೈನ್ಯ ವೃತ್ತಿಯಲಿನ್ನು

ಜ್ಞಾನವಂತನಾಗಿ ಗೆದ್ದು ವಿಷಯಾ

ಹಾನಿ ಲಾಭಗಳಿಗೆ ಹರುಷ ಕ್ಲೇಶವು ಬಡದೆ

ಜಾಣತನದಿ ಚಿಂತಿಸು ಜಗದೀಶನ್ನ

ನಾನು ಎಂಬೊದು ಬಿಟ್ಟು ನಿತ್ಯದಲ್ಲಿ ಇನ್ನು

ಜ್ಞಾನಪೂರ್ಣ ಶ್ರೀಹರಿಯ ಧೇನಿಸಿನ್ನು

ಯೋನಿ ಯಂಭತ್ತು ನಾಲ್ಕು ಲಕ್ಷ ಬಂದ ಕಾಲಕ್ಕೂ

ನೀನು ಪಕ್ವ ಬಾರದಾ ಗತಿಯು ಇಲ್ಲಾ

ಕಾಣೆ ನಿನಗೆ ಮುಖ್ಯ ಸಾಧನ ಸಂಪತ್ತು

ಮಾನವ ಯೋನಿಯಲ್ಲೆ ಘಳಿಸಬೇಕು

ಕ್ಷೋಣಿಯೊಳಗೆ ಈ ಜನ್ಮ ಬಪ್ಪದೆ ದುರ್ಘಟ

ಶ್ರೀನಾಥನ ಕಾರುಣ್ಯವೆಂದು ತಿಳಿಯೋ

ಶ್ವಾನ ಸೂಕರ ನಾನಾ ಯೋನಿ ಬಂದ ಕಾಲಕ್ಕೂ

ಮಾನಿಸನಾಗೆ ಚಿಂತಿಸಲಿ ಬೇಕು

ಜ್ಞಾನ ಅಲ್ಲಿ ದೊರೆಯದು ಕುಚ್ಛಿತ ಯೋನಿಯಲ್ಲಿ

ನಾನಾ ಭವಣೆ ಯುಂಟು ನಾ ಏನೆಂಬೆ

ನಾನಾಕು ಜೀವರಿನ್ನು ನಾಲ್ಕು ಬಗೆಯ ಕರ್ಮ

ತಾವು ಮಾಡುತಿಹರೋ ದೇಹಧಾರಿಗಳಾಗಿ

ಕಾಣಿಸುವರು ಎಲ್ಲಾ ಜಗದವೊಳಗೆ ಇನ್ನು

ಜ್ಞಾನ ಮಾತ್ರ ನೀ ಪಿಡಿದು ಕುಳಿತುಕೋ

ಗೇಣು ಮೊಳವು ಅಣುರೇಣು ಸ್ಥಳದ ಪರಿ

ನಾನಾ ದೇಹಧಾರಿಗಳಿಂದ ಆಗುವ ಕರ್ಮ ಕಾಣೋ

ನಿನ್ನಲ್ಲಿ ಇದ್ದು ಸ್ವಾಮಿ ಮಾಡಿಪನೆಂದು

ಖೂನ ಪಿಡಿದು ಕುಣಿ ಕುಣಿದಾಡೋ 

ನಾನು ಅಸ್ವತಂತ್ರ ನನ್ನಂತೆ ಅವರೆಂದು

ಕಾಣು ಅಲ್ಲಿ ವ್ಯಾಪಾರ ಹರಿಯೆ ಎಂದು

ಮಾನವಾ ಬಿಟ್ಟು ಮಮತೆಯಲ್ಲಿ ನಮೋ ಯೆಂದು

ಪ್ರಾಣನಾ ಸಾಕ್ಷಿಯಾಗಿ ಹರಿಗರ್ಪಿಸು

ಹೀನರಲ್ಲಿ ದಯಾಘನರುಗಳಲ್ಲಿ ಸೇವೆ

ನೀನು ಅರಿತು ಮಾಡು ನಿತ್ಯದಲ್ಲಿ

ದೀನಜನಬಂಧು ಗೋಪಾಲವಿಟ್ಠಲನ್ನ 

ಕಾಣು ಚೇತನಾಚೇತನದಿ ಇಪ್ಪನೆಂದು ॥ 1 ॥ 


 ಮಟ್ಟತಾಳ 


ಭಾವಾದ್ವೈತ ಕ್ರಿಯಾದ್ವೈತ ದ್ರವ್ಯಾದ್ವೈತ

ಇವು ಮೂರನೆ ದೇವನಲ್ಲಿ ಇಪ್ಪವೆಂದು

ಅರಿದು ನೋಡು ಆವಾವಲ್ಲಿ ಚಿಂತಿಸು ಬಿಡದೆ

ಕಾವಾ ಕೊಲ್ಲುವಲ್ಲಿ ಈವಲ್ಲಿ ಕೊಂಬಲ್ಲಿ

ಧಾವತಿಗಳಲ್ಲಿ ಸುಲಭ ಸೂಕ್ಷ್ಮದಲ್ಲಿ

ಭಾವ ಕ್ರೀಯ ದ್ರವ್ಯ ದೇವ ದೇವ ಎಂದು

ನೀ ವಿವೇಕದಿ ನೀಚ ಊಚ ಕ್ರಮದಿ

ಜೀವಿಗಳ ಗತಿಯು ಜಿತವಾಗಿ ಅರಿತು

ಭಾವ ಶುದ್ಧದಲ್ಲಿ ಭಕುತಿ ಪೂರ್ವಕದಿಂದ

ನೀ ವೊಲಿವೊಲಿದು ತಿಳಿದು ವೊಲಿಸು ವೊಲಿಸಿ ಪಾಡು

ಸೇವ್ಯ ಸೂತ್ರವು ನಿಂದ್ಯ ನೋವು ದಂಡನೆ ಯೆಲ್ಲಾ

ದೇವ ಪೂಜ್ಯ ಎಂಬ ಭಾವ ಕ್ರೀಯವ ಘಳಿಸು

ಆವ ವಿಷಯದಲ್ಲಿ ದೇವಾದೇವರನ್ನ

ಸಾವಧಾನದಿ ಹುಡುಕಿ ಪಾವನಾಂಗನಾಗೊ

ಕೋವಿದರ ಪ್ರಿಯ ಗೋಪಾಲವಿಟ್ಠಲ 

ಕಾವ ನಿನ್ನ ಬಿಡದೆ ಆವಲ್ಲಿ ಇದ್ದರು ॥ 2 ॥ 


 ರೂಪಕತಾಳ 


ನೋಡಿಸಿದರೆ ನೋಡು ಆಡಿಸಿದರೆ ಆಡು

ಕೂಡಿಸಿದರೆ ಕೂಡು ಓಡಿಸಿದರೆ ಓಡು

ಬೇಡಿಸಿದರೆ ಬೇಡು ನೀಡಿಸಿದರೆ ನೀಡು

ಮಾಡಿಸಿದರೆ ಮಾಡು ವಿಹಿತ ಅವಿಹಿತಗಳು

ಕೇಡು ಎಂದು ತಿಳಿಯೊ ಅವಿಹಿತ ಮಾಡಿಸಿದರೆ

ಕೇಡು ಲಾಭಂಗಳು ಮಾಡಿಸಿದರೆ ನೀನು

ಮಾಡಿಸಿದರೆ ಕೇಡು ಬೇಡಿಕೊ ದೈನ್ಯದಿ ಪಶ್ಚಾತ್ತಾಪನಾಗು

ನೋಡು ನಿನಗಾವ ವಿಷಯಂಗಳಲಿನ್ನು

ಮಾಡಿಸುವ ಅನುಭವ ಹರಿಯೆ ಯೆನ್ನು

ಕೂಡಿಸು ಯಾವತ್ತೂ ಜಡ ಚೇತನಗಳಲ್ಲಿ

ಗೂಡು ಮಾಡಿಟ್ಟಂಥ ಮೂರ್ತಿಗಳೆಲ್ಲ

ಕ್ರೋಢಿಕರಿಸಿ ಧ್ಯಾನ ಮಾಡು ನಿನ್ನ ಮನದಿ

ಕೇಡು ತೋರದು ನಿನ್ನ ಸಾಧನಕೆ

ಮೂಢಮತಿಯಲ್ಲಿ ಜಡ ಪ್ರತಿಮೆ ಪಿಡಿದು

ಮಾಡೊ ಅಲ್ಲಿ ಪೂಜಿ ಇದೆ ಬಗೆ ಚಿಂತಿಸು

ಷೋಡಶ ಕಳೆಯುಳ್ಳ ಲಿಂಗದ ಒಳ ಹೊರಗೆ

ಮಾಡಿ ಮಾಡಿಸುವ ಹರಿಯ ಮಹಿಮೆ ತಿಳಿ

ನಾಡಿಗೊಡೆಯ ರಂಗ ಗೋಪಾಲವಿಟ್ಠಲ 

ಈಡಿಲ್ಲದ ದೈವನ ನೋಡು ಮನದಿ ನಿಲಿಸಿ ॥ 3 ॥ 


 ಝಂಪಿತಾಳ 


ಒಂದೆ ಪಿಡಿದು ಮತ್ತಾನಂತವ ಚಿಂತಿಸು

ಒಂದೆ ಚಿಂತಿಸು ಮತ್ತಾನಂತವೆಲ್ಲ

ತಂದುಕೊ ನಿನ್ನಲ್ಲಿ ಕ್ಷಣಕ್ಷಣಕೆ ಸ್ಮೃತಿಯನು

ಸಂದೇಹ ಬಿಟ್ಟು ಸರ್ವೋತ್ತಮನೆಂದು ಭಿ -

ನ್ನಾದಿಯನು ತಿಳಿಯದಿರು ಹರಿ ಅಂಶಿ ಅಂಶಕ್ಕೆ

ಒಂದೊಂದೆ ಪೂರ್ಣ ಬಲವುಳ್ಳವೆಂದು

ಇಂದ್ರಿಯಗಳು ಎಲ್ಲ ಪೂರ್ಣಮಯ ಯೆಂತೆಂದು

ಒಂದು ರೂಪಕನ್ನ ಇಂದ್ರಿಯ ಭೇದವು ಇಲ್ಲ

ಪೊಂದಿಪ್ಪವು ಕಪಿಲಾದಿ ನಾಮಗಳಿಂದ

ಗಂಧ ಆಘ್ರಾಣಿಸುತ ನೋಡುತ ಕೇಳುತ

ನಿಂದಿಪ್ಪವು ಪೂರ್ಣವಾಗಿ ತನ್ನ ಮನ -

ಬಂದಂತೆ ಕ್ರೀಡೆಗಳನು ತೋರಿ

ಸಂದಿ ಸಂದಿಲಿ ಇನ್ನು ವ್ಯಾಪ್ತನಾಗಿ ಇನ್ನು

ಒಂದು ಪಿಡಿದು ನೋಡಿ ಅಡಿ ಕಂಡೇವೆನಲು

ಇಂದಿರೆಗೆ ತಿಳಿಯಲಾಗೋಚರವು

ಬಂದು ನಿಲ್ಲುವ ತತ್ತದ್ಯೋಗ್ಯತಿ ಅನುಸಾರ

ಸಂದರುಶನವಿತ್ತು ಸಲಹುವನೋ

ಒಂದು ಕೊಂಡು ಮತ್ತೊಂದು ಕೊಡುವವನಲ್ಲ

ಒಂದು ಕೊಳ್ಳದೆ ಮತ್ತೆ ಈವನಲ್ಲಾ

ಒಂದು ಕೊಟ್ಟರೆ ಮತ್ತೆ ಒಂದು ಕೊಡುವನಲ್ಲಾ

ಒಂದಕನಂತವ ಅನಂತಕೆ ವೊಂದೀವಾ

ನಂದಮೂರುತಿ ರಾಮ ಗೋಪಾಲವಿಟ್ಠಲ 

ಅಂದಿ ಕೈಗೆ ತೋರಿ ಅಂದದಂತೆ ಪೊಳೆವಾ ॥ 4 ॥ 


 ತ್ರಿವಿಡಿತಾಳ 


ಮಾಡುವ ಕರ್ಮ ಉಂಟು ನೋಡುವ ಕರ್ಮ ಉಂಟು

ಬೇಡುವ ಕರ್ಮ ಉಂಟು ಮಾಡಿಸುವರುಂಟು

ಮಾಡಿ ಮಾಡಿಸುವರು ಸಾಂಶ ಸುರಾದಿ ದಿವಿಜರು

ಮಾಡುವರೂ ಮಾತ್ರ ನಿರಂಶರೂ

ನೋಡುವರೊ ಉತ್ತಮರು ಕರ್ಮಾಧಮರೊ

ಬೇಡಿ ಮಾಡುವ ಕರ್ಮ ಸರ್ವ ಜೀವರಿಗುಂಟು

ಕೂಡುವ ಮಲಗುವ ಓಡುವ ನಿಲ್ಲುವ

ಮಾಡುವ ನಾಲ್ಕು ಕರ್ಮ ದೇಹಿಗಳು

ಮಾಡಿಸುವವ ಹರಿಯೆಂದು ತಿಳಿಯಬೇಕು

ಮಾಡಿಸುವವರ ದಯ ಮಾಡುವರ ದಯ

ನೋಡುವರ ದಯ ಬೇಡು ನಿನಗೆ ಬೇಕು

ಮಾಡುವ ಕರ್ಮವು ಈ ಪರಿ ತಿಳಿಯದೆ

ಮಾಡಲು ಏನೇನು ಫಲ ಬಾರದು

ನಾಡನೆಲ್ಲವ ತಿರುಗಿ ತೀರ್ಥಾದಿಗಳ ಮಿಂದು

ಮಾಡೆ ನಾನಾ ದಾನ ಯಜ್ಞಾದಿಗಳೆಲ್ಲ

ಕೂಡಿಸವು ಗತಿಗೆ ಎಂದೆಂದಿಗೂ

ಪಾಡಿದವರ ಪ್ರಾಣ ಗೋಪಾಲವಿಟ್ಠಲ 

ಮಾಡಿ ಮಾಡಿಸುವಂಥ ಕರ್ತನರಿತು ಬಾಳು ॥ 5 ॥ 


 ಅಟ್ಟತಾಳ 


ಮುಕ್ತಾ ಅಮುಕ್ತಾ ಚೇತನದೊಳಗೆಲ್ಲ

ನಿತ್ಯಾ ನಿತ್ಯ ಜಡಗಳ ವೊಳಗೆಲ್ಲ

ತತ್ತತದಾಧಾರಾ ಸತ್ಪ್ರವೃತ್ತಿಯೊ

ನಿತ್ಯ ಮುಕುತಾ ನಿರ್ಲಿಪ್ತ ನಿರಾಶ್ರಯಾ

ಸತ್ವಾದಿ ರಹಿತ ನಿತ್ಯಾನಂದ ಮೂರ್ತಿ

ಚಿತ್ರ ಚಾರಿತ್ರ ವಿಮಲ ಜ್ಞಾನಪೂರ್ಣ

ಭಕ್ತವತ್ಸಲ ಬಂಧಕ ಮೋಚಕ ದೇವಾ

ರಕ್ತ ಶುಕ್ಲ ಶ್ಯಾಮದಳ ವರ್ನಾ

ತತ್ತಳಿಸುವ ಹರಿ ಮೂರ್ತಿಯ

ಸುತ್ತ ಪರಿವಾರ ನಿಲ್ಲಿಸಿ ನಿನ್ನಯ

ಹೃತ್ಕಮಲದಲ್ಲಿ ನಿತ್ಯ ವಾಸವಾದ

ನಿತ್ಯ ಮೂರುತಿಯನು ಚಿತ್ತಜನೈಯ್ಯಾ

ಸರ್ವೋತ್ತಮ ಹರಿಯ

ಮತ್ತೆ ಪೇಳಿದಂತೆ ಭಗವಂತ ತದ್ರೂಪಾ -

ಕತ್ಯಂತ ಅಭೇದ ಚಿಂತಿಸಿ ತುತಿಸಿ

ಪ್ರತ್ಯೇಕ ಪ್ರತ್ಯೇಕಧಿಷ್ಠಾನಗಳಲ್ಲಿ

ಭಕ್ತಿ ಪೂರ್ವಕದಿ ಎತ್ತಿ ಕರವ ಮುಗಿದ -

ತ್ಯಂತ ಮಹಿಮನೆ ನಿತ್ಯ ಕಾಯೊ ಎಂದು

ಉತ್ತಮರ ಸಂಗ ಜತ್ತಾಗಿ ಮಾಡಿನ್ನು

ಸತ್ಯಸಂಕಲ್ಪ ಗೋಪಾಲವಿಟ್ಠಲರೇಯಾ 

ತುತ್ತ ಮಾಡಿಪ್ಪಂತೆ ಸಾಧನ ಮಾಡಿಪಾ ॥ 6 ॥ 


 ಆದಿತಾಳ 


ಎಂತೆಂತು ಬಿಂಬನ ಚಿಂತನೆ ಮಾಡಲು

ಅಂತಂತೆ ಬರುವನು ಪ್ರತಿಬಿಂಬಕ್ಕೆ ಸ್ವಾ -

ತಂತ್ರ ವೊಂದು ಮಾತ್ರ ಹೊರತಾಗಿ

ಚಿಂತಿಸಿ ನೋಡಲು ಜೀವ ಚಿದ್ರೂಪನು

ಸಂತೋಷಾದಿಗಳೆಲ್ಲ ಹರಿಯಾಧೀನ ನಿ -

ರಂತರ ಪರಾಧೀನ ಜೀವ ಸ್ವಾಮಿಭೃತ್ಯ ನ್ಯಾಯ -

ವೆಂದು ಉಪಾಸನೆ ಎದುರಿಲಿ 

ಚಿಂತಿಸಿ ಕರಮುಗಿದು ಚಿಂತನೆ ಮಾಡಲು

ಸಂತೋಷದಲ್ಲಿ ಪ್ರಾಣದ್ವಾರಾ

ಚಿಂತಾಯಕ ತಂತ್ರಮೂರ್ತಿ ತೋರಿ ಭವ -

ಗ್ರಂಥಿಯ ಹರಿಸುವ ತಡವಿಲ್ಲದೆ

ಶಾಂತ ಮೂರುತಿ ನಮ್ಮ ಗೋಪಾಲವಿಟ್ಠಲ 

ನಿಂತಲ್ಲೆ ನಿಧಾನವಾಗಿ ಉಣಿಸುವಾ ॥ 7 ॥ 


 ಜತೆ 


ಚಲ ಅಚಲಗಳಲ್ಲಿ ಈ ಪರಿ ಧೇನಿಸೆ

ಒಲಿವ ಗೋಪಾಲವಿಟ್ಠಲ ಇವಗೆ ಕರುಣದಲಿ ॥

****


No comments:

Post a Comment