ಬಟ್ಟೆಯ ನೆವದಿಂದ ಬಂದು
ತಟ್ಟ ಕವನೆ ಕಂಡು ಕಣ್ಣ ತೆರೆದ ಕೃಷ್ಣವೇಣಿ ನಿಮ್ಮ ಕಂಡೆ
ದುಷ್ಟ ಮಾನವರ ಬಾಧೆಗೆ ಅಂಜಿ ಇತ್ತ ಬಂದೆ
ಕಷ್ಟ ದುರಿತಗಳ ಕಳೆಯೆ ತಾಯೆ ಪ.
ಭೋರಿಡುವ ಮಳೆಗೆ ಹಲ್ಲುಗಿಟಗರಿದು ಶೀತತಲೆ-
ಗೇರಿ ಕಂಪಿಸಿ ನಡುಗುತ್ತ
ಜಾರಿ ಕೆಸರೊಳು ಬಿದ್ದು ಮತ್ತೇಳುತಲಿ
ದಾರಿಯನು ಕೇಳಿಕೊಳ್ಳುತ
ಕ್ರೂರವಾಗಿದ್ದ ಜಾಲಿಯ ಮುಳ್ಳನೆ ತುಳಿದು
ಹರಿ ನಾರಾಯಣ ಎನ್ನುತ
ಹಾರೈಸಿ ನಿಮ್ಮ ದರುಶನಕ್ಕೆ ನಾ ಬಂದೆ
ಘೋರ ದುರಿತವನು ಕಳೆಯೆ ತಾಯೆ 1
ನಿತ್ಯ ಕಲ್ಯಾಣಿ ನಿರ್ಜರಸ್ತೋತ್ರೆ ಶುಭಗಾತ್ರೆ
ಪ್ರತ್ಯಕ್ಷ ವಿಷ್ಣುಜಾತೆ ಮಾತೆ
ವಿಸ್ತರಿಸಲಾರೆ ಶ್ರೀ ವಿಷ್ಣು ಸಂಪ್ರೀತೆ
ಸತ್ಪಾತ್ರ ಸಂಪೂಜಿತೆ ಪ್ರೀತೆ
ಸತ್ತು ಹುಟ್ಟುವ ಜನ್ಮ ಕೋಟಲೆಯ ಖಂಡ್ರಿಸೆ
ಪತಿತ ಪಾವನ ಚರಿತೆ
ವ್ಯರ್ಥವಾಯಿತು ಜನ್ಮ ಸಾರ್ಥಕವ ಮಾಡಮ್ಮ
ಮುಕ್ತಿಸಾಧನದಾತೆ ಮಾತೆ 2
ಸುರಗಂಗೆ ಕೃಷ್ಣಮಲಾಪಹಾರಿ ಮೂವರು ಕೂಡಿ
ಬೆರೆದಿದ್ದ ಸಂಗಮದಲ್ಲಿ
ಅರಿಸಿಣ ಅಕ್ಷತೆ ಗಂಧ ಕುಂಕುಮ ತಾಂಬೂಲಗಳ
ಹರುಷದಿಂದರ್ಪಿಸುತಲಿ
ಥರಥರದಿ ನೆರೆದ ಮುತ್ತೈದೆಯರೆಲ್ಲರು
ಮರದ ಬಾಗಿನವ ಕೊಡುತಲಿ
ಹರುಷದಿಂದಿಪ್ಪುದನು ಕಂಡೆ ಹೆಳವನಕಟ್ಟೆ
ಅರಸು ರಂಗನ ಕೃಪೆಯಲ್ಲಿ ತಾಯೆ 3
****
No comments:
Post a Comment