ತಾರಮ್ಮ ಶ್ರೀ ರಂಗಧಾಮನ ತಂದು
ತೋರಮ್ಮ ಎನ್ನಯ ಪ್ರೇಮನ
ವಾರಿಜಸಖಶತಕೋಟಿತೇಜನ ಹೊಂತ-
ಕಾರಿಯ ನೀ ಕರತಾರೆ ಸೈರಿಸಲಾರೆ ಪ.
ವೃಂದಾವನದೊಳಗಾಡುವ ಶ್ರೀ-
ಗಂಧವ ಮೈಯೊಳು ತೀಡುವ
ಚಂದದಿ ಕೊಳಲೂದಿ ಪಾಡುವ ನಮ್ಮ
ಕಂದರ್ಪ ಜಲಕ್ರೀಡೆಯಾಡುವ
ನಂದ ನಂದನ ಗೋವಿಂದನ ಕಾಣದೆ
ಒಂದು ನಿಮಿಷ ಯುಗವಾಗಿ ತೋರುತಲಿದೆ 1
ಉಡುವ ಸೀರೆಯ ಸೆಳೆದೋಡುವ ದೊಡ್ಡ
ಕಡಹದ ಮರವೇರಿ ನೋಡುವ
ಕೊಡಲೊಲ್ಲದೆ ಬಹುಕಾಡುವ ಲಜ್ಜೆ-
ಗೆಡಿಸಿ ಮಾನಿನಿಯರ ಕೂಡುವ
ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿ ಎ-
ನ್ನೊಡೆಯನ ಕರತಾರೆ ಅಡಿಗೆರಗುವೆ ನಾ 2
ನೀಲವರ್ಣನ ನಿಜರೂಪನ ಶ್ರೀ-
ಲೋಲ ಹೆಳವನಕಟ್ಟೆವಾಸನ
ಜಾಲಿ ಹಾಳ ವೆಂಕಟೇಶನ ಭಕ್ತ-
ಪಾಲಕ ಪರಮವಿಪೋಷನ
ಆಲಸ್ಯವ್ಯಾಕೆನ್ನ ಇನಿಯನ ಕರೆತಾರೆ
ಬಾಲೆ ನಿನಗೆ ಕಂಠಮಾಲೆಯ ಕೊಡುವೆ. 3
***
No comments:
Post a Comment