ಅಂಕೀತೋಪದೇಶ : ಶ್ರೀ ವ್ಯಾಸ ವಿಠ್ಠಲರು ( ಶ್ರೀ ಕಲ್ಲೂರು ಸುಬ್ಬಣ್ಣದಾಸರು )
ಅಂಕಿತ : ಶ್ರೀ ರಘುಪತಿ ವಿಠ್ಠಲ
" ಅಂಕಿತ ಪ್ರದಾನ ಪದ "
ರಾಗ : ಕಾಂಭೋಧಿ ತಾಳ : ಝ೦ಪೆ
ಅತಿ ದಯಾಪರಮೂರ್ತಿ । ಅನಿ ।
ಮಿತ್ತ ಬಂಧು । ರಘು ।
ಪತಿ ವಿಠ್ಠಲ ಸಲಹೋ ಇವನಾ ।। ಪಲ್ಲವಿ ।।
ಪತಿತ ಪಾವನ ನಿನ್ನ ಪರಮ ಮಂಗಳ ನಾಮ ।
ಸತತ ಪೊಗಳುವಂತೆ ಸಾನುಕೂಲನಾಗಿ ।। ಅ ಪ ।।
ಜನನಿ ಗರ್ಭದಲಿಂದ ಜನಿಸಿದ ಮೊದಲು ಮಾಡಿ ।
ಗುಣವಂತ ನೆನೆಸಿದವನೋ ।
ಕನಸಿನೊಳಗಾದರೂ ಧನ ವನಿತೆ ತನು ಭೋಗ ।
ನೆನಸದಿಹ ನಿಪುಣನಿವನೋ ।।
ಕ್ಷಣಕ್ಷಣಕೆ ನಿನ್ನನೇ ಧ್ಯೇನಿಸುತ ಪರಮ ಸುಖ ।
ವನಧಿಯೊಳಗಾಡುವನೋ ।
ಪ್ರಣತ ಜನ ಮಂದಾರ ಪ್ರಾಣನಂತರ್ಯಾಮಿ ।
ನಿನಗೆ ಸಮ್ಮತವಾದ ನಿಜ ದಾಸನ ಮ್ಯಾಲೆ ।। ಚರಣ ।।
ಶೀತೋಷ್ಣ ಸುಖ ದುಃಖ ಮಾನಾಪಮಾನಗಳು ।
ಮಾತು ಮನಸಿಗೆ ತಾರನೋ ।
ಧಾತುಗೆಡದಲೆ ತಿಳಿದು ದಯಾ ಪಯೋನಿಧಿ ನಿನ್ನ ।
ಪ್ರೀತಿಯೆಂದಾಡುವವನೋ ।।
ವಾತಜನ ಮತದವರ ಪ್ರೀತಿಯಲಿ ಸೇವಿಸಿ । ಕೃ ।
ಪಾತಿಶಯ ಪಡದಣುಗನೋ ।
ಈ ತೆರದಿ ಭಕ್ತನ್ನ ರೀತಿ ನೀ ಬಲ್ಲವನೇ ।
ನಾ ತುತಿಸಿ ಪೇಳ್ವ ಪೊಸಮಾತು ಮತ್ತುಂಟೆ ।। ಚರಣ ।।
ನಿನ್ನ ಕರುಣದಳತಿ ಇನ್ನಿವನಮ್ಯಾಲಿರಲು ।
ಚನ್ನಿಗನೆ ನಿನಗೆ ನಾನೂ ।
ಬಿನ್ನೈಸಿದೆನೋ ಸ್ವಾಮಿ ಎನ್ನ ಗುರುಗಳ ಆಜ್ಞ ।
ಚನ್ನಾಗಿ ಶಿರದಿವೊಹಿಸಿ ।।
ಸಣ್ಣವಗೆ ಅಂಕಿತವ ಕೊಟ್ಟನಲ್ಲದೆ ಲೇಶ ।
ಎನ್ನ ಸ್ವತಂತ್ರವಿಲ್ಲ ।
ಚನ್ನಾಗಿ ಕಾಪಾಡಿ ಬೆಳಸಿ ಫಲವನೇ ತೋರೋ ।
ಸನ್ನುತಾಂಗಿಯರಮಣ ವ್ಯಾಸ ವಿಠ್ಠಲವಿಭುವೇ ।। ಚರಣ ।।
****
No comments:
Post a Comment