ಶ್ರೀ ಭಾರತೀದೇವಿ ಸ್ತೋತ್ರ ಪದ "
ರಾಗ : ಆನಂದಭೈರವಿ ತಾಳ : ಆದಿ
ಎಂತು ನೀ ವಶವಾದಿಯೇ
ಭಾರತೀದೇವಿ ।
ಎಂತು ನೀ ಮರುಳಾದಿಯೇ ।। ಪಲ್ಲವಿ ।।
ಎಂಟು ನೀ ವಶವಾದಿ ।
ಕಂತುಹರನ ತಾಯಿ ।
ದಂತಿಗಮನೆ । ದಮ ।
ಯಂತಿ ಕಾಂತ ಸುತೆ ।। ಅ ಪ ।।
ಧರೆಯಲಿ ಪುಟ್ಟುತಲಿ ಆಕಾಶಕೆ ।
ಭರದಿಂದ ಜಿಗಿಯುತಲಿ ।
ಸರಿಸಿಜ ಸಖನಾದ ।।
ತರಣಿಯ ಫಲವೆಂದು ।
ಅರಿತು ಭಕ್ಷಿಸಲ್ಹೋದ ।
ತರುಚರ ರೂಪಿಗೆ ।। ಚರಣ ।।
ಪುಂಡರೀಕಾಕ್ಷೆ ಕೇಳಿ -
ದ್ವಾಪರದಿ । ಪ್ರ ।
ಚಂಡಗೆ ಒಲಿಯುತಲಿ ।
ಭಂಡ ಬಕನ ಶಿರ - ।।
ದಂಡುಗೆಡಹಿ ಅವನ ।
ಭಂಡಿ ಓದನ ।
ಉಂಡ ಪುಂಡಗೆ
ಮಾತೆ ।। ಚರಣ ।।
ಶ್ರೀ ಶ್ಯಾಮಸುಂದರನನೇ
ತ್ರೈಲೋಕಕ್ಕೆ ।
ಈಶನೆಂಬುದು ತಾನು ।
ಲೇಸಾಗಿ ಪೇಳಲು ।।
ಲೇಶವಾದರು ನಿನ್ನ ।
ಆಶೆ ಇಲ್ಲದ ತಾ ।
ಸಂನ್ಯಾಸಿ ಆದವನಿಗೆ ।। ಚರಣ ।।
***
ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ
ಕಂತುಹರನ ತಾಯಿ = ಮನ್ಮಥನ ಸುಟ್ಟ ಶ್ರೀ ಮಹಾರುದ್ರದೇವರ ತಾಯಿ.
ದಂತಿಗಮನೆ = ಗಜಗಮನೆ
" ದಮಯಂತಿ ಕಾಂತ ಸುತೆ "
ದಮಯಂತಿಯಿಂದ ಜನಿಸಿದ ನಳನಂದಿನಿ ಇಂದ್ರಸೇನಾ ನಾಮಕಳಾದ ಶ್ರೀ ಭಾರತೀದೇವಿ
ಸರಸಿಜ ಸಖ = ಕಮಲ ಮಿತ್ರನಾದ ಸೂರ್ಯ
ತರುಚರ ರೂಪಿ = ವೃಕ್ಷ ಚರನಾದ ವಾನರ ರೂಪಿ ಶ್ರೀ ಹನೂಮಂತದೇವರು
ಓದನ = ಅನ್ನ
" ವಿಶೇಷ ವಿಚಾರ "
ಶ್ರೀ ಶ್ಯಾಮಸುಂದರದಾಸರು ತಮ್ಮಿಂದ ರಚಿತವಾದ ಈ ಕೃತಿಯಲ್ಲಿ....
ಮೊದಲನೆಯ ನುಡಿಯಲ್ಲಿ " ಶ್ರೀ ಹನೂಮಂತದೇವರು "
ಎರಡನೆಯ ನುಡಿಯಲ್ಲಿ " ಶ್ರೀ ಭೀಮಸೇನದೇವರು "
ಮೂರನೆಯ ನುಡಿಯಲ್ಲಿ " ಶ್ರೀ ಸರ್ವಜ್ಞಾಚಾರ್ಯರು "
ಶ್ರೀ ವಾಯುದೇವರ ಅವತಾರತ್ರಯಗಳಿಗೆ ನೀನು ಹೇಗೆ ವಶವಾದಿ ಮತ್ತು ಮರುಳಾದೆಯಮ್ಮಾ ಎಂದು ಶ್ರೀ ಭಾರತೀದೇನ್ನು ಕೇಳಿದ್ದಾರೆ.
****
No comments:
Post a Comment