Saturday 1 May 2021

ಮಾರುತಾವತಾರ ಗುರುವು ಭಾರತಿಯ ರಮಣನೇ ankita sobagu vittala

ರಾಗ :  ಶಂಕರಾಭರಣ  ತಾಳ : ತ್ರಿವಿಡಿ


ಮಾರುತಾವತಾರ ಗುರುವು ।

ಭಾರತಿಯ ರಮಣನೇ ನಮ್ಮ 

ಗುರುವು ಕಾಣಿರೋ   ।। ಪಲ್ಲವಿ ।।


ಸಂತತಿ ಸಹಿತವಾಗಿ 

ರಾವಣನ  ಮುರಿದ ।

ಹೊತಕಾರಿ ಹನುಮಂತ 

ನಮ್ಮ ಗುರುವು ।

ಅಂತಕಾನ ಪುರಕೆ 

ಕೌರವನ ಕಳೂಹೀದ ।

ಪಂಥದೊಳು ಭೀಮಸೇನ 

ನಮ್ಮ ಗುರು ಕಾಣಿರೋ ।। ಚರಣ ।।


ಯತಿ ರೂಪದಲ್ಲಿ ಬಂದು

ಕ್ಷಿತಿಯಲ್ಲಿ ನಿಂದು । ದು ।

ರ್ಮತವ ಖಂಡ್ರಿಸಿ ದಾಟ 

ನಮ್ಮ ಗುರುವು ।

ಶ್ರುತಿಗೆ ಸಂಮತವಾದ 

ಮತವ ಸ್ಥಾಪಿಸಿ ಮುಕ್ತಿ ।

ಪಥವ ತೋರಿದಾತ 

ನಮ್ಮ ಗುರುವು ಕಾಣಿರೋ ।। ಚರಣ ।।


ಹೇಮ ಭೂಮಿ ಕಾಮಿನಿಯ-

ರಾಕಾಂಕ್ಷಿಯನಳಿದು । ನಿ ।

ಷ್ಕಾಮಿಯಾಗಿದ್ದಾತಾ 

ನಮ್ಮ ಗುರುವು ।

ರಾಮಚಂದ್ರ ಸೊಬಗು-

ವಿಠ್ಠಲನ ಸೇವಕರಾದ ।

ಶ್ರೀಮದಾಚಾರ್ಯರೆ ನಮ್ಮ

ಗುರುಗಳು ಕಾಣಿರೋ  ।। ಚರಣ ।।

*****


 " ಆದ್ಯ ಹರಿದಾಸರಾದ ಶ್ರೀ ಸೊಬಗುವಿಠ್ಠಲರ ಕಣ್ಣಲ್ಲಿ ಶ್ರೀಮದಾಚಾರ್ಯರು "

ಶ್ರೀಮದಾಚಾರ್ಯರಿಂದ ಪ್ರಾರಂಭವಾದ ಹರಿದಾಸ ಸಾಹಿತ್ಯ ಮತ್ತು ಪ್ರಥಮ ಘಟ್ಟದ ( ಶ್ರೀ ಶ್ರೀಪಾದರಾಜ ಯುಗ ) ಹರಿದಾಸ ಸಾಹಿತ್ಯಕ್ಕೆ ಮಧ್ಯ ಕಾಲದಲ್ಲಿ 60 ಜನ ಹರಿದಾಸರು ಬಂದಿದ್ದಾರೆ. 

ಅವರಲ್ಲಿ ಶ್ರೀ ಸೊಬಗುವಿಠ್ಠಲರು ಒಬ್ಬರು. 

ಅವರು ಶ್ರೀ ವಾಯುದೇವರ ಅವತಾರ ತ್ರಯ ಸ್ತೋತ್ರವನ್ನು ಮಾಡಿದ್ದಾರೆ. 

ಸದಾ ಕಾಲದಲ್ಲಿ ಭಾರತೀರಮಣರಾದ ಅವರು ನಮಗೆ ಜ್ಞಾನೋಪದೇಶಕರೆಂಬ ಸ್ತುತಿಯೊಂದಿಗೆ ಮೊದಲೆರಡು ಅವತಾರಗಳಲ್ಲಿ ಅವರು ಮಾಡಿದ ದುಷ್ಟ ಶಿಕ್ಷಣ ಮತ್ತು ಶಿಷ್ಟ ಪರಿಪಾಲನೆ, ಶ್ರೀ ಹರಿಗೆ ಪ್ರಥಮಾಂಗರಾಗಿ ಭೂಭಾರವಿಳುಹಿದ ಭಗವತ್ಕಾರ್ಯ ಸಾಧಕತ್ವ ವಿವರಣೆ ಈ ಪದದಲ್ಲಿದೆ. 

ಈ ಶ್ರೀ ಮಧ್ವನವಮೀ ಶುಭ ಸಂದರ್ಭದಲ್ಲಿ ಸಜ್ಜನರ ಮಾಹಿತಿಗಾಗಿ..

by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

*****

No comments:

Post a Comment