ಶ್ರೀ ಪುರಂದರದಾಸರ ಕೃತಿ
ರಾಗ : ಕೀರವಾಣಿ ಮಿಶ್ರಛಾಪು
ಶರಣು ಶರಣು ಶರಣು ನಿನಗೆಂಬೆನೋ ವಿಠಲ
ಕರುಣನಿಧಿ ನಿಧಿಯೆಂಬೆ ಕಾಯಯ್ಯ ವಿಠಲ ॥ಪ॥
ಶಿಶುವಾಗಿ ಜನಿಸಿದ್ಯೋ ಶ್ರೀರಾಮ ವಿಠಲ
ಶಶಿಧರ ನುತ ಗೋಪಿ ಕಂದನೆ ವಿಠಲ
ಅಸುರೆ ಪೂತನಿ ಕೊಂದೆ ಶ್ರೀಕೃಷ್ಣ ವಿಠಲ
ಕುಸುಮನಾಭ ಸಿರಿ ವರಮುದ್ದು ವಿಠಲ ॥೧॥
ಅರಸಿ ರುಕ್ಮಿಣಿಗೆ ನೀ ಅರಸೋ ವಿಠಲ
ಸರಸಿಜ ಸಂಭವ ಸನ್ನುತ ವಿಠಲ
ನಿರುತ ಇಟ್ಟಿಗೆ ಮೇಲೆ ನಿಂತ್ಯೋ ನೀ ವಿಠಲ
ಚರಣಸೇವೆಯನಿತ್ತು ಕಾಯಯ್ಯ ವಿಠಲ ॥೨॥
ಕಂಡೆ ಗೋಪುರ ವೆಂಕಟ ಪ್ರಭು ನೀ ವಿಠಲ
ಅಂಡಜವಾಹನ ಹೌದೋ ನೀ ವಿಠಲ
ಪಾಂಡುನಂದನ ಪರಿ ಪಾಲನೆ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರವಿಠಲ ॥೩॥
*****
No comments:
Post a Comment