Audio by Vidwan Sumukh Moudgalya
ಶ್ರೀ ಪುರಂದರದಾಸಾರ್ಯ ವಿರಚಿತ
ಗೋರಂಟ್ಲ ಚನ್ನರಾಯನ ಅಭೂತೋಪಮ ಮಹಿಮಾ ಸುಳಾದಿ
ರಾಗ : ಕೇದಾರಗೌಳ
ಧೃವತಾಳ
ಗಂಗಾಜನಕನಿಗೆ ಹೊಂಗಲಶಗಳಿಂದ
ಮಂಗಳ ಮಜ್ಜನ ಮಾಡಿಸುವಳು
ಅಂಗನೆ ದ್ರೌಪದಿಗೆ ಅಕ್ಷಯಾಂಬರವಿತ್ತ
ರಂಗಗೆ ಪೊಂಬಟ್ಟೆಯ ಉಡಿಸುವಳು
ಅಂಗಜನಯ್ಯಗೆ ಅನರ್ಘ್ಯ ರತ್ನಾಭರ
ಣಂಗಳಿಂದಲಿ ಶೃಂಗರಿಪಳು
ಇಂಗಡಲೊಡಿಯಗೆ ಕೆನವಾಲು ನೈವೇದ್ಯ
ಸಂಗ್ರಾಮ ಭೀಮಗೆ ರಕ್ಷೆ ಬಟ್ಟು ಆ
ಭೃಂಗ ಗೋರಂಟ್ಲಿಯ ಚನ್ನರಾಯ
ಶಾರಂಙ್ಞಧರ ಪುರಂದರವಿಠಲರೇಯಾ ॥೧॥
ಮಟ್ಟತಾಳ
ಬೊಮ್ಮಾಂಡಕೋಟಿಗಳ ಬೊಂಬೆಮನೆಯ ಮಾಡಿ
ಬೊಮ್ಮ ಭವಾದಿಗಳ ಬೊಂಬೆಗಳ ಮಾಡಿ
ಒಮ್ಮೆಮ್ಮೆ ಗೋರಂಟ್ಲಿಯ ಚನ್ನರಾಯಾ
ಶಾರಂಙ್ಞಧರ ಪುರಂದರವಿಠಲರೇಯಾ ॥೨॥
ತ್ರಿವಿಡಿತಾಳ
ಈತ ವಿರಂಚನು ಈತನು ಭುವನು
ಈತ ಇಂದಿರಾ ಈತ ಚಂದಿರಾ
ಈತ ನೋಡಲು ಈತನು ನುಡಿಸಲು
ಈತ ಗೋರಂಟ್ಲಿ ಚನ್ನರಾಯ ಪುರಂದರವಿಠಲ
ಈತನ ಮಹಿಮೆ ಎಂತುಂಟೋ ॥೩॥
ಅಟ್ಟತಾಳ
ಮಾನವರಿಗೆ ದೇವತೆಗಳೊಡಿಯರು
ದೇವತೆಗಳಿಗೆಲ್ಲಾ ದೇವೇಂದ್ರ ಒಡಿಯ
ದೇವೇಂದ್ರಗೆ ಒಡಿಯ ಮಹಾದೇವ
ಮಹಾದೇವಗೊಡಿಯ ಬೊಮ್ಮ ಬೊಮ್ಮಗೊಡತಿ
ಲಕ್ಷ್ಮೀದೇವಿಗೆ ಒಡೆಯನು ಗೋರಂಟ್ಲ
ಚನ್ನರಾಯ ಪುರಂದರವಿಠಲ ॥೪॥
ಆದಿತಾಳ
ಉರು ಮೂರುತಿ ಉರು ಕೀರುತಿ
ಉರು ಕರ್ಮವು ಉರು ಕಲ್ಯಾಣ
ಉರು ಮಹಮಹಿಮ ಉರು
ಗೋರಂಟ್ಲನಿಲಯ
ಚನ್ನರಾಯ ಪುರಂದರವಿಠಲ
ಉರು ಕಲ್ಯಾಣ ಉರು ಮಹಿಮಾ ॥೫॥
ಜತೆ
ಇನ್ನು ಸರಿಯುಂಟೆ ಈ ಗೋರಂಟ್ಲಿಯ
ಚನ್ನರಾಯ ಪುರಂದರವಿಠಲ ॥೬॥
******
No comments:
Post a Comment