ಶ್ರೀಗೋಪಾಲದಾಸಾರ್ಯ ವಿರಚಿತ
ಹರಿಸ್ವತಂತ್ರ ಸುಳಾದಿ
(ಕಾರಣವಿಲ್ಲದೇ ಕಾರ್ಯ ಮಾಡಿಸುವರಾರಿಲ್ಲ. ಮುಖ್ಯಕಾರಣ ವಿಷ್ಣು ಸ್ವತಂತ್ರನಿಂದೆಲ್ಲ ಕಾರ್ಯವಾಗುವವವು)
ರಾಗ ಭೈರವಿ
ಧ್ರುವತಾಳ
ಅರಿಯಾಗಿ ಸಖನಾಗಿ ಸರ್ವೇಶನೆ
ಅರಸಾಗಿ ಆಳು ಆಗಿ ಅಪ್ರಮೇಯ
ಸರಸಾಗಿ ವಿರಸನಾಗಿ ಸಿರಿ ಹರಿಯೆ
ಇರಳಾಗಿ ಹಗಲಾಗಿ ಶ್ರೀವಿಷ್ಣುನೆ
ನರಕಾಗಿ ಸ್ವರ್ಗವಾಗಿ ನಾರಾಯಣ
ದುರಿತನಾಗಿ ದೂರಾಗಿ ದುರುಳಾಂತಕ
ವರ ಮಾತಾ ಪಿತನಾಗಿ ಪುರುಷುತ್ತೋಮ
ಪುರನಾಗಿ ಕಾನನಾಗಿ ಪುರಂದರಾ
ತುರುವಾಗಿ ಕರುವಾಗಿ ದಾಮೋದರ
ಮರಿಯಾಗಿ ಮಗನಾಗಿ ಮಂಗಳಾಂಗ
ಧರಿಯಾಗಿ ಧೈರ್ಯನಾಗಿ ಶ್ರೀಕೃಷ್ಣನೇ
ನೆರೆಯಾಗಿ ನೆಂಟನಾಗಿ ಶ್ರೀರಂಗನೆ
ಹೊರಗಾಗಿ ಒಳಗಾಗಿ ಅನಂತನೆ
ಸರಳಾಗಿ ಕಠಿಣವಾಗಿ ಸರ್ವಜ್ಞನೆ
ಪರವಾಗಿ ಇಹವಾಗಿ ಪರಮೇಷ್ಟಿಯೆ
ದೂರನಾಗಿ ಸಾರ್ಯಾಗಿ ಮುಕುಂದನೆ
ಕಿರಿದಾಗಿ ಹಿರಿದಾಗಿ ತ್ರಿವಿಕ್ರಮಾ
ವರನಾಗಿ ಅಭಯನಾಗಿ ವಾಸುದೇವ
ಜಿರಿದಾಗಿ ಅಲ್ಪವಾಗಿ ಸಿರಿಕಾಂತನೆ
ಎರಡಾಗಿ ಏಕೋನಾಗಿ ಶ್ರೀಹರಿಯೆ
ಪರಿಪಾಲಿತನಾಗಿಪ್ಪ ಬಿಡದೆ ಎಂದೆಂದು ಎನ್ನ
ಸಂರಕ್ಷಿಸುವ ಭಾರಕರ್ತಾ ಮುಕ್ತ
ಅರಿದವರಿಗೆ ಲಭ್ಯಾ ಗೋಪಾಲವಿಟ್ಠಲ
ಧೊರಿಯೆ ಪೂರ್ಣ ಕಾಮ ನಿತ್ಯ ನಿರ್ಲಿಪ್ತ ॥ 1 ॥
ಮಟ್ಟತಾಳ
ಬಲ್ಲೆನೆಂದವ ಅರಿಯಾ ಅರಿಯನೆಂದವ ಬಲ್ಲ
ಇಲ್ಲವೆಂದವಗುಂಟು ಇದ್ದೆನೆಂಬವಗಿಲ್ಲ
ಪೊಳ್ಳು ಗಟ್ಟ್ಯಾಗುವದು ಗಟ್ಟಿ ಪೊಳ್ಳಾಗುವದು
ವಲ್ಲದವನೆ ವೊಲಿವಾ ವೊಲಿದು ಇದ್ದವ ಬಿಡುವ
ಕಲ್ಲು ಕಲ್ಲಿಗೆ ತಾಕಿ ಅಗ್ನಿ ಪೊರಟರಿನ್ನು
ನಿಲ್ಲು ಅದಕ್ಕೆ ಒಬ್ಬ ಪುರುಷ ಬೇಕು
ಇಲ್ಲೊ ಸ್ತ್ರೀಲಿಂಗವು ಪುರುಷ ಎರಡು ಇದ್ದರೆ ಸೃಷ್ಟಿ
ಎಲ್ಲ ಆಗುವದೆಂಬೊ ಸೊಲ್ಲನಾಡಲಿ ಬೇಡ
ಪುಲ್ಲಲೋಚನ ಕೃಷ್ಣ ಗೋಪಾಲವಿಟ್ಠಲ
ಎಲ್ಲರಿಂದಲಿ ಭೇದ ಅಭೇದನಾಗಿಪ್ಪ ॥ 2 ॥
ರೂಪಕತಾಳ
ಧನದಿಂದ ವಿಕ್ರಯ ಸಕಲ ಪದಾರ್ಥವು
ಧನವ ವಿಕ್ರಯಿಪಂಥ ಅರ್ಥಾವದು
ಧನಕಿಂತ ಉತ್ತಮ ಮನುಜಾರಾವೆ ನೋಡು
ಎನಗಿಂದ ಉತ್ತಮರಾದವರ
ಅನುಸಾರ್ಯಾಗಿ ನಡೆದು ಅಲ್ಲಿದ್ದ ಹರಿಯಾ
ಗುಣಗಳೇವೆ ಧನವ ಮಾಡಿಕೊಂಡು
ಮನಿಯ ಮಾಡಿಕೊಂಡು ಮೂರು ಅವಸ್ಥೆಯ
ನೆನೆದು ನೆನೆದು ದಿನ ಒಪ್ಪಿಸುವೆ
ಸನಕಾದಿಗಳ ಪ್ರೀಯಾ ಗೋಪಾಲವಿಟ್ಠಲ
ಎನಗೆ ನೀ ವಿಷಯನೊ ಸರ್ವ ಪರಿಯಲಿ ॥ 3 ॥
ಝಂಪೆತಾಳ
ಉಪ ಜೀವನವೆಂಬದಾವದು ನೋಡಲು
ವಿಪರೀತ ವಾಗಿಹುದು ಈಗ ನೋಡ
ತಪರಹಿತನಾಗಿ ಬಿಂಬನ್ನ ಮರೆದು ಅನ್ಯವಿಷಯ
ಉಪಜೀವನವೆಂದು ತೋಷ ಬಡುವೆ
ಕಪರ್ದಿಕವಾದರು ಲಾಭವಾದರು ಕಾಣೆ
ತಪಿಸುವೆನು ಹಗಲಿರುಳು ವಿಷಯದಿಂದ
ಸ್ವಪನದಲ್ಲ್ಯಾದರು ನಿಜ ಸುಖವನ್ನು ಕಾಣೆ
ಉಪವಾಸ ಬಹು ಜನ್ಮ ದೀನ ಉದ್ಧಾರ
ಕೃಪಪೂರ್ಣ ನೀ ಎನಗೆ ಗುಪಿತ ಸಖನಾಗಿದ್ದು
ಉಪವಾಸದಲಿ ಎನ್ನ ಇಡಲಿಬಹುದೇ
ಸಪುತ ದ್ವಿ ಲೋಕಕ್ಕೆ ಅನ್ನದಾತಾನೆಂದು
ಅಪರಿಮಿತ ನಿನ್ನ ಕೀರುತಿಯು ಎತ್ತ
ತೃಪುತನಾಗೊಂತೆನಗೆ ಅನ್ನ ನೀ ಉಣಿಸಿದರೆ
ನೀ ಪರಮ ಕರುಣಿ ಎಂದು ತುತಿಪೆ
ಕಪಟನಾಟಕಧಾರಿ ಗೋಪಾಲವಿಟ್ಠಲ
ಅಪರಾಧ ಮುನ್ನೇ ನಾ ಮಾಡಿದವನೆ ॥ 4 ॥
ತ್ರಿವಿಡಿತಾಳ
ನಾ ನಿನ್ನ ಮರೆವದಕ್ಕೆನಗೊಂದುಪಾಧಿ ಉಂಟು
ನೀ ಎನ್ನ ಮರೆವದಕ್ಕೆ ಆವ ಉಪಾಧಿಯೊ
ಅನಾದಿ ಅವಿದ್ಯ ಎನಗಾವರ್ಕವಾಗಿದೆ
ನೀನು ನೋಡದಂತೆನ್ನ ನಿನಗಾವ ಆವರ್ಕ
ಜ್ಞಾನಪೂರ್ಣನೆ ಎನಗೆ ನೀನೆ ಆವರ್ಕ ಅಭಿ -
ಮಾನಿಗಳೆ ಎನ್ನ ಸ್ವಾತಂತ್ರರೆ
ನೀನೆ ಅವರಿಗೊಂದು ಮರ್ಯಾದಿ ಮಾಡಿಟ್ಟು
ಪ್ರಾಣಿಗಳಾವನ್ನ ಕರ್ತಾರೆನಿಪೆ
ಗಾಣಕಟ್ಟಿದ ಎತ್ತು ಏನು ಬಲ್ಲವೊ ತೈಲ
ತಾನು ಪಕ್ವವಾದ ಪ್ರಮಾಣವು
ಧೇನಿಪವು ತಮ್ಮ ಆವಾಗ ಬಿಡೋನೆಂದು
ಗಾಣಿಗನಾಧೀನ ಎಲ್ಲ ಜೀವ
ನಾನೇ ಮುಂತಾದ ಎಲ್ಲ ಜೀವ ತಿಲಸ್ಥಾನ
ಗಾಣದ ವರಳವೇ ಸಂಸಾರವೋ
ಅನಾದಿ ಅವಿದ್ಯ ಸಂಸಾರದೊಳು ಹಾಕಿ
ನೀನು ಮರ್ದಿಸಿ ಜ್ಞಾನ ಭಕುತಿ ತೈಲ -
ವಾನು ತೆಗೆದು ಸರ್ವ ಜೀವರಿಗೆ ಎರದು
ನೀನು ಮಾಡುವ ಮರಿಯಾದಿ ಇದು
ನಾನೇವೆ ಅಪರಾಧಿ ತಿಳಿಯೆದೊಂದೆನ್ನಿಂದ
ಕಾಣಿಸುತಲದೆ ಕರುಣಾಕರ
ಗೋಣಿ ಹೊರಿಸಿದವನೆ ಇಳಿಸಬೇಕಲ್ಲದೆ
ಏನನ್ನ ಸ್ವಾತಂತ್ರ ಎಮಗೆ ಉಂಟೊ
ಜಾಣ ಚನ್ನಿಗರಾಯ ಗೋಪಾಲವಿಟ್ಠಲ
ಜ್ಞಾನ ಅಂಬುಧಿ ನಿನ್ನ ಮೊರೆಯ ಹೊಕ್ಕೆ ॥ 5 ॥
ಅಟ್ಟತಾಳ
ಆರಾಧಿತನಾಗು ಸರ್ವ ಇಂದ್ರಿಯಗಳಿಂದ
ಆರಾಧನಿಯ ಮಾಡಿ ಸಾರೆ ನೀನಲ್ಲದೆ
ಆರಾಧನಿಯಿಂದೊಂದು ಆಶೆ ಎನಗೆ ಬೇಡ
ಆರಾಧಿಸಿದೆನೆಂಬೊ ಅಹಂಕಾರವನು ಬೇಡ
ಆರಾಧನೆಯ ಸಾಧನಾರಾದಕ್ಕಾಗಲಿ
ತಾರತಮ್ಯ ಪರಿವಾರ ಸಹಿತ ತಂತ್ರ -
ಸಾರಯುಕುತವಾದ ಆರಾಧನಿಯ ಮಾಡಿ
ಸಾರ ಭೋಕ್ತ ಸುಂದರ ಮೂರುತಿಯನು
ತೋರಿ ಎನ್ನೊಳಗೆ ಸ್ಫೂರುತಿಯನು ಕೊಟ್ಟು
ಕೀರುತಿ ನಿನ್ನದು ಕೊಂಡಾಡುತ ಸದಾ
ವಾರಣಾಸಿಯು ಮುಂತಾದ ಕ್ಷೇತ್ರಗಳೆಲ್ಲ
ತೋರಿಸಿ ಅಲ್ಲಲ್ಲಿ ಸ್ತೋತ್ರ ಮಾಡಿಸಿ ನಿನ್ನ
ಚಾರು ಚರಣದಲ್ಲಿ ಸೇರಿಸಿ ಸಲಹುವದೊ
ಕಾರಣ ನೀಬಲ್ಲಿ ಎನ್ನ ತಂದದಕಿನ್ನು
ನಾರಾಯಣ ನಿನ್ನ ತುತಿಯ ಮಾಡಿಸು ಪೂರ್ಣ
ಮೀರಿ ಬಂದವು ದಿನ ಸಾರಿ ಪೇಳುತ ಹೀನೆ
ಶಾರೀರ ವೆಂಬುದು ಅನಿತ್ಯ ಬಲು ಸಿದ್ಧ
ಊರಿಗೆ ಮುತ್ತಿಗೆ ಬರುತಿರೆ ಎಂಬಂಥ
ವಾರುತಿ ಆದರು ಸಾರೋರಪರೋಕ್ಷ
ಭಾರ ನಿನ್ನದು ಕಂಡ್ಯಾ ಗೋಪಾಲವಿಟ್ಠಲ ವಿ -
ಚಾರ ನಿನ್ನಲ್ಲಿರಳ್ಹಗಲೆನಗಿರಲಿ ॥ 6 ॥
(ನಿನ್ನಲ್ಲಿ ಇರುಳು ಹಗಲು ಎನಗಿರಲಿ)
ಆದಿತಾಳ
ಛಲವಾಗಿರಿಸು ಮತ್ಕುಲ ಸ್ವಾಮಿಯೇ ನಿಹ -
ಫಲವು ಅಧಿಕ ನೋಡಿ ಕಲಿಯುಗ ಸಾಧನ
ಹಲವು ಬಗೆಯಲ್ಲಿ ಬೇಡುವದೇನಿಲ್ಲ
ಸುಲಭದಿ ಸುರನದಿ ಸ್ನಾನವ ಮಾಡಿಸಿ
ಸ್ಥಳವ ಸೇರಿಸಿ ಬಂಧುಗಳ ಸಹಿತ ತಂದಿಲ್ಲಿ
ನಿಲಿಸಿದ ಮ್ಯಾಲೆನ್ನ ತಿಳದದ್ದು ಮಾಳ್ಪೋದು
ಕಳವಳ ಇದರ ಹೊರತೊಂದು ಕಾಣಿಸೊದಿಲ್ಲ
ಉಳಿದ ಧರ್ಮಗಳ ಬಲ್ಲ ನಾನಾಗಲಿ
ತಿಳಿವಿಕೆ ಬಲು ಕೊಡು ನಿನ್ನ ಕಥೆಯಲ್ಲಿ
ಚಲಿಸದೆ ಮನಸಿಗೆ ನಿಲುಕುತ ನೀನಿರು
ಗೆಲಿದೆ ನಾನಾ ಸಂಕಲಿಪಿಸಿದದನೆಲ್ಲ
ಸಲಿಗೆಲಿ ಎನೆ ನಾ ಬಿನ್ನೈಸಿದದನೆಲ್ಲ
ಭಳಿಭಳಿರೆ ಸ್ವಾಮಿ ಭಕುತಜನರ ಪ್ರೇಮಿ
ಚಲುವ ಶುಭಾಕಾರ ಚಕ್ರ ಶಂಖಧರ
ಬಲು ವೈಚಿತ್ರ ಕೋಮಲ ಮನಪುರುಷ
ಜಲಜಾಕ್ಷನೆ ಮಹಾ ಕಲುಷ ಸಂಹಾರನೆ
ಜಲಜಸಂಭವ ಪಿತ ಜನನ ಮರಣ ದೂರ
ಚಲ ಅಚಲಾಗತ ಅಚಲಾನಂದನೆ
ಚಲಿಸುವ ಕರನ ಕುಂಡಲಗಳ ಪ್ರಭೆಯ
ಖಳೆಯ ಪ್ರಕಾಶಿತಾ ಮೊಗನೆ ಮನೋಹಾರಾ
ವಳಿ ಪಂಕ್ತಿಯ ಸುಜಠರ ಶಿರಿವತ್ಸ
ಸುಳಿಯ ಗುಂಭ ಪೊಕ್ಕಳ ಕಟಿ ಸುಗುಣ
ಘಿಲಘಿಲಕು ಊರು ಎತ್ತಿ ಕುಣೋ ಚರಣ
ನಿಲುಕುತ ಇರು ಎನ್ನ ಮನಕೆ ಆಭರಣ
ಸುಲಭ ತಾರಕ ನೋಡು ಹರಿ ನಿನ್ನ ಸ್ಮರಣೆ
ಚಲುವ ದೇವರ ದೇವ ಗೋಪಾಲವಿಟ್ಠಲ
ಸಲಿಗೆ ಬಿನ್ನಪಿದೊಂದು ಸಲಿಸೋ ಹೇ ಜೀಯಾ ॥ 7 ॥
ಜತೆ
ಕಾರಣಿಲ್ಲದ ಕಾರ್ಯ ಮಾಡುವರುಂಟೇನೈಯ್ಯ
ಕಾರಣ ಪುರುಷ ಕಾಯೊ ಗೋಪಾಲವಿಟ್ಠಲ ॥
*******
No comments:
Post a Comment