Wednesday 7 April 2021

ಅರ್ಚನೆ ಮಾಡುವ ಅರ್ಚಕ ಬುಧರಿಗೆ ankita prasannavenkata ARCHANE MAADUVA ARCHAKA BUDHARIGE


Audio by Vidwan Sumukh Moudgalya

 ಶ್ರೀ ಪ್ರಸನ್ನವೆಂಕಟದಾಸರ ನವ ವಿಧ ಭಕ್ತಿ ಕೀರ್ತನೆಗಳು


 ೫ . " ಅರ್ಚನ ಭಕ್ತಿ "


 ರಾಗ : ಮೋಹನ   ಆದಿತಾಳ


ಅರ್ಚನೆ ಮಾಡಿರಯ್ಯಾ 

ಶ್ರೀ ಭಗವದರ್ಚನೆ ಮಾಡಿರಯ್ಯ ॥ಪ॥

ಅರ್ಚನೆ ಮಾಡುವ ಅರ್ಚಕ ಬುಧರಿಗೆ

ಅರ್ಚಿಪ ಪದದಲ್ಲಿ ಅಚ್ಯುತ ದೊರೆವನೆಂದು ॥ಅ.ಪ॥


ಅಂತರಂಗದ ಶುದ್ಧಿಲಿ ತನ್ನಯ ಬಾ-

ಹ್ಯಾಂತರ ಪರಿಪೂರ್ಣನ

ಚಿಂತಿಸಿ ಸರ್ವಸ್ವತಂತ್ರ ಶ್ರೀಹರಿ ವೇದ

ತಂತ್ರೋಕ್ತಪಥದಿ ನಿರಂತರ ಮರೆಯದೆ ॥೧॥


ಪೃಥು ಧೃವ ಅಂಬರೀಷ ಸುಧರ್ಮಜ

ದಿತಿಜೋದ್ಭವ ಅಕ್ರೂರ

ಕೃತವರ್ಮ ಸಾತ್ಯಕಿ ಯದುಕುಲ ಸುರ ಋಷಿ

ಯತಿತತಿ ಅರ್ಚಿಸಿ ಅತಿಧನ್ಯರಾದರೆಂದು ॥೨॥


ಅನಂತಮೂರ್ತಿಯೊಳು ತನಗೊಂದು

ಧ್ಯಾನಕ್ಕೆ ತಂದುಕೊಂಡು

ಆನಂದತೀರ್ಥರ ಸಂತತಿಗಳಿಂದ

ತಾನು ಇಷ್ಟನಾಗಿ ನಾರಾಯಣಾತ್ಮನೆಂದು ॥೩॥


ಬ್ರಹ್ಮಸೂತ್ರದಿ ಸಾಹಸ್ರ ಸ-

ನ್ನಾಮಪೂರ್ವಕ ಸ್ತೋತ್ರದಿ

ಶ್ರೀಮತ್ಪಂಚಸೂಕ್ತ ಪಂಚಾಮೃತಸ್ನಾನ

ರಮ್ಯಾಯುಧ ಕೌಸ್ತುಭಮಣಿ ಮಾಲೆಯಿಂದ ॥೪॥


ಧ್ಯಾನಾವಾಹನ ಸ್ನಾನ ಸುಪಾದ್ಯಾ ಚ-n

ಮನಾರ್ಘ್ಯ ಧೂಪದೀಪ ಪ್ರ-

ಸೂನ ತುಳಸಿ ಗಂಧಮೋಘ ನೈವೇದ್ಯದಿಂ

ಮಾನಸಾರ್ಚನೆ ಪ್ರತ್ಯಕ್ಷಾಗಲಿ ಎಂತೆಂದು ॥೫॥


ಪೀಠವರ್ಣದ ಮಧ್ಯದಿ ಶ್ರೀಮಧು

ಕೈಟಭಾಂತಕ ಕೃಷ್ಣನ

ಕೋಟಿಕಾಂಚನ ರತ್ನಾಭರಣ ವೈಜಯಂತಿ ಕಿ-

ರೀಟ ಕುಂಡಲದಾಮ ಹಾರ ನೂಪುರಗಳಿಂದ ॥೬॥


ದಿವ್ಯಾಂಬರಾ ಭೂಷಣಾ 

ನವರತುನ ಭವ್ಯಮಂಟಪವಸನ

ಅವ್ಯಾಕೃತಾಧ್ಯಕ್ಷ ಶ್ರೀಭೂಮುಕ್ತಾಮುಕ್ತ

ಸೇವ್ಯಮಾನಾಪಾದಮೌಳ್ಯಾಂತ ವೀಕ್ಷಿಸಿ ॥೭॥


ಬಹುನೀರಾಂಜನಗಳಿಂದ ಸದ್ವೇದೋಕ್ತ

ಗಹನ ಸೂತ್ರಗಳಿಂದ

ಅಹಿವರಶಯನಾಜಭವಾಹಿಪ ವಿಪ್ರವಂದ್ಯ

ಮಹಿಮನನಂತನೆಂತೆಂದು ಪರವಶದಿಂದ ॥೮॥


ತಾಳದಂಡಿಗಿ ಝಾಗುಂಟಿ ಶಂಖ ಮ-

ದ್ದಳೆ ಕಂಸಾಳ ಭೇರಿ

ಆಲಾಬು ತಂಬೂರಿ ಭಾಗವತಗಾನ

ಮೇಳೈಸಿ ತುತ್ತೂರಿ ವಾಜಂತ್ರಿ ಘೋಷದಿಂದ ॥೯॥


ಅಲವಬೋಧರು ಪೇಳಿದ ಪೂಜಾವಿಧಿ

ಗಳ ಪ್ರದಕ್ಷಿಣೆ ಪ್ರಮಾಣ

ಲಲಿತಗೀತ ನೃತ್ಯಾ ಬಲು ಪ್ರೇಮದಲಿ ಮಾಡಿ

ಹೊಳೆವ ಬಿಂಬಾತ್ಮನ ಕಾಂಬ ಲವಲವಿಕೆಯಿಂದ ॥೧೦॥


ಆತ್ಮಕರ್ತೃತ್ವ ನೀಗಿ ಸರ್ವಾಂತ-

ರಾತ್ಮ ಪರಮಾತ್ಮನೆಂದು

ಆತ್ಮ ಮತ್ತೆ ಜ್ಞಾನಾತ್ಮ ಪ್ರೇರಕ ಪ್ರೇ-

ರ್ಯಾತ್ಮ ನಿವೇದನ ಭಕ್ತಿನವಕಗಳಿಂದ ॥೧೧॥


ಮಂದಜನರು ಭಕ್ತಿಲಿ ದೂರ್ವಾನೀ-

ರೆಂದೆ ಪೂಜೆಯ ಮಾಡಲು

ತಂದೆ ಪ್ರಸನ್ವೆಂಕಟ ಕೃಷ್ಣ ಕಾರುಣ್ಯ

ಸಿಂಧು ಪ್ರಸನ್ನಾತ್ಮ ಬಂದು ಮುಕ್ತಿಯನೀವಾ ॥೧೨॥

******


No comments:

Post a Comment