Tuesday, 5 October 2021

ಕೇಳಮ್ಮಾ ತಂಗಿ ಕೇಳಮ್ಮಾ ಕೇಳಿ ಪುರಾಣದಿ ankita shyamasundara KELAMMA TANGI KELAMMA KELI PURAANADI



ಕೇಳಮ್ಮಾ ತಂಗಿ ಕೇಳಮ್ಮಾ ।। ಪಲ್ಲವಿ ।।


ಕೇಳಿ ಪುರಾಣದಿ ಪೇಳಿದ ಕೃಷ್ಣನ ।

ಲೀಲೆಯ ಪಾಡುತ " ಬಾಳಮ್ಮ " ।। ಚರಣ ।।

ನಿಷ್ಟಿಲಿಂದ ಬಲು ಶಿಷ್ಯಳಾಗುತಾ ।

ದುಷ್ಟರಿಂದ " ದೂರಾಗಮ್ಮ  ।। ಚರಣ ।।


ಹರಿದಾಸರ ಪದ ಹರುಷದಿ ಪಾಡುತ ।

ಗುರು ಹಿರಿಯರ ಮನ " ಕೊಪ್ಪಮ್ಮ " ।। ಚರಣ ।।


ಹಾಳು ಹರಟೆಯಲ್ಲಿ ಕಾಲ ಕಳೆಯದೆ ।

ಶೀಲವಂತಿ " ನೀ ನಾಗಮ್ಮ " ।। ಚರಣ ।।


ವಿದ್ಯಯ ಕಲಿತು ಬುದ್ದಿ ವಂತಳಾ -

ಗಿದ್ದರೆ ಸುಖಶತ " ಸಿದ್ಧಮ್ಮಾ " ।। ಚರಣ ।।


ವಂದಿಸಿ ತುಲಸಿ ವೃಂದಾವನ ಪೂಜಿಸಿ ।

ಮುಂದೆ ನಿನಗೆ " ಆನಂದಮ್ಮ " ।। ಚರಣ ।।


ಹೀನರ ಬೆರೆಯದೆ ಮೌನ ವ್ರತದಲಿ ।

ಜ್ಞಾನಿ ಜನರ " ನೀನರಸಮ್ಮ " ।। ಚರಣ ।।


ಮೂಢ ಜನರ ಒಡನಾಡದೆ ಭಕ್ತಿಲಿ ।

ಮಾಡು ಸಜ್ಜನರ " ಸಂಗಮ್ಮ " ।। ಚರಣ ।।

ಧರ್ಮದಿಂದ ಸತ್ಕರ್ಮ ಮಾಡುತ ।

ನಿರ್ಮಲಗೊಳಿಸಂತ " ರಂಗಮ್ಮ " ।। ಚರಣ ।।


ಪವನ ಪಿತನ ಕಥಾ ಶ್ರವಣವೆ ಪುಣ್ಯವು ।

ಭವವಿದು ಕತ್ತಲು " ಕಾಳಮ್ಮ " ।। ಚರಣ ।।


ಸದನಕೆ ಬಂದಿಹ ಬುಧರಾದರಿಸಲು ।

ಮುದ ಬಲು ನಿನಗಿದ " ರಿಂದಮ್ಮ " ।। ಚರಣ ।।


ಎಂದೆಂದಿಗು ಪರನಿಂದೆಯ ಮಾಡದೆ ।

ಮಂದಿರದಿರುವುದೆ " ಚಂದಮ್ಮ " ।। ಚರಣ ।।


ಸಾರಿದ ಜನರಘ ದೂರಗೈದು ಹರಿ ।

ತೋರುವ ನಿಜ ಗುರು " ಈರಮ್ಮ " ।। ಚರಣ ।।


ಅತ್ತಿಯ ಮನೆಗೆ ಹೆತ್ತವರಿಗೆ ।

ಉತ್ತಮ ಕೀರುತಿ " ತಾರಮ್ಮ " ।। ಚರಣ ।।


ಗೋ ವಿಪ್ರಾವಳಿ ಸೇವಿಸುತ್ತಿರುವುದೆ ।

ಕೋವಿದರಿಗೆ ಬಲು " ಜೀವಮ್ಮ " ।। ಚರಣ ।।


ಭವದೊಳಗೆ ಪರದೇವನೆ ಪತಿಯಂದು ।

ಭಾವಿಸುತಲಿ ಪಡಿ " ಭೋಗಮ್ಮ " ।। ಚರಣ ।।


ಭೇದ ಜ್ಞಾನ ಸಂಪಾದಿಸು ಕ್ಷಮಿಸುವ ।

ಶ್ರೀಧರ ನಿನ್ನಪ " ರಾಧಮ್ಮ " ।। ಚರಣ ।।


ಕೋಪದಿ ಪರರಿಗೆ ತಾಪವ ಬಡಿಸಲು ।

ಲೇಪವಾಗುವದು " ಪಾಪಮ್ಮ " ।। ಚರಣ ।।


ಇಂಗಡಲಾತ್ಮಜೆಯಂಘ್ರಿ ಸರೋಜಕೆ ।

ಭೃಂಗಳೆಣಿಸು ಸತಿ " ತುಂಗಮ್ಮ " ।। ಚರಣ ।।


ದಾಸ ಜನರ ಸಹವಾಸದೊಳಗಿರುವುದೆ ।

ಕಾಶಿಗಿಂತ ವಿ " ಶೇಷಮ್ಮ " ।। ಚರಣ ।।


ಕಲಿಯುಗದಲಿ ಸಿರಿ ನಿಲಯನ ನೆನೆದರೆ ।

ಸುಲಭ ಮುಕ್ತಿ ತಿಳಿ " ಕಂದಮ್ಮ " ।। ಚರಣ ।।


ಪತಿಯ ಸದ್ಗತಿಗೆ ಗತಿಯಂದರಿತಿಹ ।

ಮತಿಯುತ ಸತಿಯೆ " ಯಮನಮ್ಮ " ।। ಚರಣ ।।


ಮಧ್ವ ಸಿದ್ಧಾಂತದ ಪದ್ಧತಿ ತಪ್ಪದೆ ।

ಇದ್ದರೆ ಹರಿ ಗತಿ " ಮುದ್ದಮ್ಮ " ।। ಚರಣ ।।


ಸೋಗಿಗೆ ನೀ ಮರುಳಾಗಿ ನಡೆದರೆ ।

ಯೋಗಿ ಜನರ ಮನ " ಕಲ್ಲಮ್ಮ " ।। ಚರಣ ।।

ಶೀಲ ಗುಣದಿ ಪಾಂಚಾಲಿಯು ಎಲ್ಲ ।

ಬಾಲೆಯರೊಳು ತಾ " ಮೇಲಮ್ಮ " ।। ಚರಣ ।।


ನೆಮಾಡಿ ನಡೆದರೆ ಪ್ರೇಮದಿ ಸಲಹುವ ।

ಶ್ಯಾಮಸುಂದರನು " ಸತ್ಯಮ್ಮ " ।। ಚರಣ ।।

***


ಭಗವಂತನ ಪ್ರಸಾದಕ್ಕೆ ಸಜ್ಜನರು ಮಾಡಬೇಕಾದ ಸಾಧನೆಯನ್ನು ಅಚ್ಛ ಕನ್ನಡದಲ್ಲಿ ಸರಳ ಸುಂದರವಾಗಿ ಜನಪದ ಶೈಲಿಯಲ್ಲಿ ಶ್ರೀ ಶ್ಯಾಮಸುಂದರದಾಸರು ಅತ್ಯಂತ ಮನೋಜ್ಞವಾಗಿ ತಿಳಿಸಿದ್ದಾರೆ. 

***


No comments:

Post a Comment