Saturday, 1 May 2021

ಶ್ರೀಸುಧೀಂದ್ರತೀರ್ಥ ಯತಿರಾಜ ಚರಣ ankita prasannashreenivasa sudheendra teertha stutih

sudheendra teertha rayara mutt yati stutih

ರಚನೆ : ಶ್ರೀ ಪ್ರಸನ್ನ ಶ್ರೀನಿವಾಸ ದಾಸರು

ರಾಗ : ಸಾವೇರಿ ತಾಳ : ಆದಿ

ಶ್ರೀ ಸುಧೀಂದ್ರತೀರ್ಥ

ಯತಿರಾಜ ಚರಣ ।

ಬಿಸಜ ದ್ವಂದ್ವದಲಿ

ನಾ ಶರಣಾದೆ ಸತತ ।

ಅಸಮ ಗುಣವಾರಿನಿಧಿ

ಶ್ರೀ ರಾಮಚಂದ್ರ ।

ವ್ಯಾಸ ನರಹರಿ

ಕೃಷ್ಣಸೈಂಧವಾಸ್ಯ ಪ್ರಿಯ ।। ಪಲ್ಲವಿ ।।

ಅಶೇಷ ಗುಣಸಿಂಧು

ಶ್ರೀ ರಮಣ ಹಂಸನಿಗೆ ।

ಬಿಜಸ ಭವ ಸನಕಾದಿ

ಗುರು ಪರಂಪರೆಗೆ ।

ದಶ ಪ್ರಮತಿ ಪಾದಾಂಬುಜ

ಯುಗ್ಮಕೆ ಮನಸಾ ।

ನ ಸದಾ ಸನ್ನಮಿಸಿ

ಶರಣಾದೆ ಮುದದಿ ।। ಚರಣ ।।

ಅರವಿಂದನಾಭ ನರಹರಿ

ಮಾಧವತೀರ್ಥ ।

ಸೂರಿಕುಲ ತಿಲಕ

ಅಕ್ಷೋಭ್ಯ ಜಯತೀರ್ಥ ।

ಪರ ವಿದ್ಯಾ ಕುಶಲ

ಶ್ರೀ ವಿದ್ಯಾಧಿರಾಜೇಂದ್ರ ।

ಚರಣಂಗಳಲಿ

ಶರಣು ಶರಣಾದೆ ।। ಚರಣ ।।

ಕೋವಿದ ಶಿರೋಮಣಿ

ಕವೀಂದ್ರ ವಾಗೀಶರು ।

ಭಾವುಕಾಗ್ರಣಿ ರಾಮಚಂದ್ರ

ವಿಬುಧೇಂದ್ರ ।

ದೇವ ಹರಿಪ್ರಿಯ

ಜಿತಾಮಿತ್ರ ರಘುನಂದನ ।

ದೇವಿ ತುಳಸೀಪತಿ

ಒಲಿದಿಹ ಸುರೇಂದ್ರ ।। ಚರಣ ।।

ಈ ಸರ್ವ ಗುರುಗಳ

ಚರಣ ಕಮಲಗಳಲ್ಲಿ ।

ನಾ ಸರ್ವದಾ ಶರಣು

ಶರಣೆಂಬೆ ಮುದದಿ ।

ಶ್ರೀ ವ್ಯಾಸಮುನಿ ಮಿತ್ರ

ಶ್ರೀ ಸುರೇಂದ್ರರ । ಕರಸ ।

ರಸಿಜಜ ಶ್ರೀ ವಿಜಯೀಂದ್ರರಿಗೆ

ನಮಿಪೆ ।। ಚರಣ ।।

ತೋಯಜೇಕ್ಷನ ನಾರಾಯಣ

ಲಕ್ಷ್ಮೀಗೆ ಮುಖ್ಯ ।

ವಾಯುಗೆ ಭಾರತಿಗೆ

ಪ್ರಿಯತಮರು ।

ಜಯಶೀಲ ವಿಜಯೀಂದ್ರತೀರ್ಥರ

ಕರದಿಂದ । ಅಭ್ಯು ।

ದಯವಾದರು ಸುಧೀಂದ್ರ

ಯತಿವರರು ।। ಚರಣ ।।

ಬುದ್ಧಿ ತೀಕ್ಷಣ್ಯಯುತ

ಉದ್ಧಾಮ ಪಾಂಡಿತ್ಯ ।

ಮಾಧವ ಮಧ್ವಾನುಗ್ರಹ

ಪಾತ್ರತ್ವ ।

ಶ್ರೀದನಪರೋಕ್ಷ

ಯೋಗ್ಯತೆಯನ್ನ ಕಂಡು ।

ಸುಧೀಂದ್ರ ನಾಮವನು

ಇತ್ತರು ಗುರುಗಳು ।। ಚರಣ ।।

ಶ್ರೀ ವಿಜಯೀಂದ್ರರನುಗ್ರಹ

ಪೂರ್ಣ ಪಾತ್ರರು ।

ದೇವಾಂಶರು ಶ್ರೀ

ಸುಧೀಂದ್ರ ಯತಿಯು ।

ದಿಗ್ವಿಜಯದಲಿ ಇವರ

ಮಹಿಮೆಗಳ ಕಂಡು ।

ಸರ್ವರು ಎಲ್ಲೆಲ್ಲು

ಮಾಡಿದರು ಮರ್ಯಾದೆ ।। ಚರಣ ।।

ಸುಭದ್ರಾ ಪರಿಣಯದ

ಸೊಬಗು ರಸತರವು ।

ಈ ಭಾರಿ ಕವಿಗಳ

ಸಾಮರ್ಥ್ಯ ಯೇನೆಂಬೆ ।

ಗಂಭೀರ ಧಾಟಿಯಲಿ

ವ್ಯಾಸರಾಜಾಭ್ಯುದಯ ।

ಸದ್ಭಕ್ತಿ ವೈರಾಗ್ಯ

ಬೋಧಿಪ ಗ್ರಂಥಗಳು ।। ಚರಣ ।।

ವ್ಯಾಖ್ಯಾನ ಮಾಡಿದರು

ಶ್ರೀ ಭಾಗವತದ ।

ಏಕಾದಶ ಸ್ಕಂದ

ದ್ವಿತೀಯ ಸ್ಕಂದ ।

ತರ್ಕ ತಾಂಡವಕೆ

ವ್ಯಾಖ್ಯಾನ ಇನ್ನು ಬಹು । ಅ ।

ಲಂಕಾರಮಂಜರಿಯಾದಿ

ಗ್ರಂಥಗಳು ।। ಚರಣ ।।

ಸುಧೀಂದ್ರ ಗುರುಗಳಲಿ

ಪಾಠ ಓದುವುದಕ್ಕೆ ।

ಬಂದಿದ್ದರು ವೇಂಕಟ-

ನಾಥಾಚಾರ್ಯ ।

ಸಾಧು ಧೀಮಂತರು

ವಿನಯ ಸಂಪನ್ನರು ।

ಶ್ರೀದನಿಗೆ ಪ್ರಿಯತಮ

ಭಕ್ತ ವಿಜ್ಞಾನಿ ।। ಚರಣ ।।

ರಾಘವನ ಪ್ರೇರಣೆಯಿಂ

ಸಂನ್ಯಾಸವನಿತ್ತು ।

ರಾಘವೇಂದ್ರತೀರ್ಥಾಖ್ಯ

ನಾಮವ ಕೊಟ್ಟು ।

ಮುಖ್ಯ ವಿದ್ವಜ್ಜನ

ಭೂಪಾಲರ ಮುಂದೆ ।

ಶಂಖದಿ ಸುಧೀಂದ್ರರಭಿಷೇಕ

ಮಾಡಿದರು ।। ಚರಣ ।।

ತುಂಗಾ ತೀರದಲ್ಲಿ

ವೃಂದಾವನಗಳು ।

ಪಂಕಜನಾಭರು 

ಜಯತೀರ್ಥ ಕವೀಂದ್ರ ।

ವಾಗೀಶರು 

ವ್ಯಾಸರಾಯರು ಇಹರು ।

ತಾಕುಳಿತರಲ್ಲೇವೆ 

ಶ್ರೀ ಸುಧೀಂದ್ರಾರ್ಯ ।। ಚರಣ ।।

ಫಾಲ್ಗುಣ ಕೃಷ್ಣ

ದ್ವಿತೀಯಾ ಪುಣ್ಯದಿನ ।

ಳಾಳುಕನ ಸ್ಮರಿಸುತ

ಹರಿಪುರ ಐದಿ ।

ಇಲ್ಲಿ ವೃಂದಾವನದಿ

ಒಂದಂಶದಿ ಇಹರು ।

ಬಲು ಭಕ್ತಿಯಿಂ ನೆನೆಯೆ

ಒದಗುವರು ಬಂದು ।। ಚರಣ ।।

ಪದುಮಭವಪಿತ

ಶ್ರೀ ಪದುಮಾಲಯಪತಿ ।

ನಿರ್ದೋಷ ಗುಣನಿಧಿ

ಪ್ರಸನ್ನ ಶ್ರೀನಿವಾಸ ।

ಯದುಪತಿಗೆ ಪ್ರಿಯತಮ

ಸುಧೀಂದ್ರ ಗುರುವರ ನಿಮ್ಮ ।

ಪದುಮಾಂಘ್ರಿ ಯುಗ್ಮದಲಿ

ಶರಣು ಮಾಂ ಪಾಹಿ ।। ಚರಣ ।।

****

No comments:

Post a Comment