ARALUMALLIGE PARTHASARATHI
ಶ್ರೀ ಪಾರ್ಥಸಾರಥಿವಿಠ್ಠಲರು ಗುರುಗಳಾದ ಶ್ರೀ ವಿಜ್ಞಾನನಿಧಿತೀರ್ಥರನ್ನು....
ಗುರುಗಳ ನೋಡಿರೈ । ಜ್ಞಾನಿಗ ।
ಳರಸ ವಿಜ್ಞಾನನಿಧಿಗಳ ಪಾಡಿರೈ ।। ಪಲ್ಲವಿ ।।
ಕ್ಲೇಶ ದೋಷ ರೋಷ ವಿಕಾರ ।
ಗಳನೆಲ್ಲ ಎದ್ದು ಗೆದ್ದಿದ್ದ ಧೀರ ।
ಜಪ ತಪ ಅನುಷ್ಠಾನದ ಸಾರ ।
ಜ್ಞಾನ ಭಕ್ತಿ ವೈರಾಗ್ಯದ ಸದ್ವಿಚಾರ ।। ಚರಣ ।।
ಮುಳಬಾಗಿಲಿನ ದಿವ್ಯ ಅತಿಶಯದ ಜಾಗದಿ ।
ಬೃಹತೀ ಸಹಸ್ರ ವಿಷ್ಣು ಮಹಾಯಾಗದಿ ।
ಕಲಿಯುಗದಲ್ಲಿ ಕೃತ ಯುಗ ಧರ್ಮದ ।
ಸಂಸ್ಥಾಪಿಸಿದ ಯತಿಕುಲ ತಿಲಕ ।। ಚರಣ ।।
ಎಲ್ಲೆಲ್ಲೂ ಸಂಚರಿಸಿ ಉಪದೇಶ ನೀಡುತ ।
ಬಳಿಗೆ ಬಂದವರ ಭವ ನಾಶ ಮಾಡುತ ।
ಮತಿವಂತರಿಗೆ ಸತ್ಪಂಥ ತೋರಿಸಿ ।
ವರ ವಿಜ್ಞಾನ ಸಂಸ್ಥೆಯ ಸ್ಥಾಪಿಸುತ ।। ಚರಣ ।।
ಪಾರ್ಥಸಾರಥಿವಿಠ್ಠಲನ ಕೀರ್ತಿ ಎಲ್ಲೆಡೆ ಪಸರಿಸಿ ।
ವಸುಧೆ ಸುರರಿಗೆಲ್ಲ ಭೂರಿ ಭೂರಿ ದಾನವನಿತ್ತ ।। ಚರಣ ।।
****
No comments:
Post a Comment