Friday, 5 March 2021

ಆಹುತಿ ಕೊಡುವದು vijaya vittala ankita suladi ಪಂಚಪ್ರಾಣಾಹುತಿ ಸುಳಾದಿ AAHUTI KODUVUDU PANCHAPRANAHUTI SULADI


Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಪಂಚಪ್ರಾಣಾಹುತಿ ಪ್ರಕ್ರಿಯ ಸುಳಾದಿ 

 ರಾಗ ಕಾಪಿ 

 ಧ್ರುವತಾಳ 
ಆಹುತಿ ಕೊಡುವದು ಪಂಚ ಪ್ರಾಣರಿಗೆ ಸಂ -
ದೇಹ ಮಾಡದಲೆ ಮನಸು ಪೂರ್ವಕದಿಂದ
ದೇಹದೊಳಗೆ ಐದು ಸ್ಥಾನಂಗಳು ತಿಳಿದು
ಸ್ವಾಹಲೋಲನ್ನ ಪ್ರೀತಿ ಬಡಿಸಿ ಉಣಿಸು
ಆಹಾರ ಮೆಲುವಾಗ ಮರಿಯಲಾಗದು ಅತಿ
ಸ್ನೇಹಭಾವದಿಂದ ಸರ್ವದಲ್ಲಿ
ಮಹ ಪುಣ್ಯ ಬಪ್ಪದು ಮಾಡಿದಾಘರಣ್ಯ
ದಹನವಾಗುವದು ತಡವಿಲ್ಲದೇ
ಗಹನವಿದು ಕೇಳಿ ಕಂಡವರಿಗಿಲ್ಲಾ
ಇಹಲೋಕದಲ್ಲಿ ಸಿದ್ದಾಂತ ತಿಳಿದು
ಮೋಹಕ ಶಾಸ್ತ್ರ ಜರಿದು ಮದ ಮತ್ಸರ ಹರಿದು
ಕುಹಕ ಬುದ್ದಿ ಬಿಟ್ಟು ಉಚಿತದಲ್ಲಿ
ಶ್ರೀಹರಿ ವೈಶ್ವಾನರನೆಂಬೊ ನಾಮ ಚತುರ
ಯೂಹಗಳಿಪ್ಪವೆನ್ನಿ ಅಲ್ಲಿಗಲ್ಲೀ
ಬಹಳಾಧಿಷ್ಠಾನದಲ್ಲಿ ಶುಭಸಾರ ಭುಂಜಿಸುವಾ
ದ್ರೋಹಿ ಮಾನವರ ತೊರೆದು ತಿಳಿಯಗೊಡದೆ
ಅಹಂಕಾರ ಮಮಕಾರ ತೊರೆದು ದೈನ್ಯದಲ್ಲಿ ದಾ -
ಸೋಹಂ ಎಂದವಗೆ ಫಲದಾಯಕಾ
ದೇಹಿ ದೇಹಗಳಲ್ಲಿ ಪೂರ್ಣನಾಗಿ ಇಪ್ಪ ವಾರಿ -
ರುಹ ಲೋಚನ ನಮ್ಮ ವಿಜಯವಿಟ್ಠಲನು 
ಅನುಗ್ರಹ ಮಾಡುವವರ್ಪಿತ ಕೈಕೊಂಡು ॥ 1 ॥ 

 ಮಟ್ಟತಾಳ 

ಮೊಗದಲ್ಲಿ ಆಹವನಿಯ ಎಂದೆಂಬೊ ದೇವಾ-
ಮೊಗನುಂಟು ಅಲ್ಲಿ ಓಂ ಪ್ರಾಣನೆಂದೂ
ಮಿಗೆ ಹೋಮಿಸುವದು ಸ್ವಹಾ ಕಡೆಯಲ್ಲಿ
ನುಡಿದು ರುಕುಮವರ್ನ ಕ್ಷುಧಾಗ್ನಿ ಋಷಿದೇವತ
ಗಗನಮಣಿಯನ್ನು ಗಾಯಿತ್ರಿ ಛಂದಸ್ಸು
ಬಗೆಯನ್ನು ತಿಳಿದು ತಿಳಿದು ಶಿವಪುತ್ರನು ಪವನ -
ಮಗನು ಚಕ್ಷು ಶ್ವಾಸೋಚ್ಛ್ವಾಸದಭಿಮಾನಿಗ ರವಿ ಅ -
ಹಿ ಗರುಡ ಪ್ರಣವಾಚ್ಯರಿವರು
ದ್ಯುಗನಾಮಕಳು ಭಾರತಿದೇವಿ ಆಮೇಲೆ
ಜಗಜೀವನತನಕ ಅಧಿಷ್ಠಾನವ ಗ್ರಹಿಸಿ
ನಿಗಮಾಭಿಮಾನಿ ಶ್ರೀಲಕುಮಿಯ ಹೃದಯದೊ -
ಳಗೆ ಪ್ರಾಣನಾಮಕ ಅನಿರುದ್ಧಾತ್ಮಕಾ
ಅಗಣಿತ ಗುಣಸಾರ ವೈಶ್ವಾನರನಿಗೇ
ಸೊಗಸಾಗಿ ಕೊಟ್ಟು ತೃಪ್ತಿಯ ಬಡಿಸಿರೋ
ಪೊಗಳಿದವರ ಪ್ರಾಣ ವಿಜಯವಿಟ್ಠಲ ದೈವಾ -
ದಿಗಳ ಕೈಯ್ಯಾ ವಾಲಗಕೊಳುತಿಪ್ಪಾ ॥ 2 ॥ 

 ರೂಪಕತಾಳ 

ವಕ್ಷ ಪ್ರದೇಶದಲ್ಲಿ ಗಾರ್ಹಸ್ಪತ್ಯ ಚತು -
ರಾಕ್ಷನಲ್ಲಿ ಅಪಾನನೆಂಬಾಹುತಿ
ತೀಕ್ಷಣವಾಗಿ ಹೋಮಿಸುವದು ಮೊದಲಂತೆ
ಲಕ್ಷಣ ಕಡೆ ಮೊದಲು ನೋಡಿ ಪ್ರಣವ ಸ್ವಹಾ
ಗೋಕ್ಷೀರ ವರ್ನ ಶ್ರದ್ನಾಗ್ನಿ ಋಷಿ ದೇವಾದಿ
ನಕ್ಷತ್ರ ಪತಿ ತೃಷ್ಟಪ ಛಂದ
ದಕ್ಷಾರಿ ಪಿತನ ಪುತ್ರ ಮುಖ್ಯಪ್ರಾಣನ ಮಗ
ದಿಕ್ಷು ಶ್ರೋತ್ರಾಭಿಮಾನಿ ಚಂದ್ರ ಮತ್ತೆ ಫಾ -
ಲಾಕ್ಷ ಶೇಷ ಗರುಡ ತನ್ನಾಮಕರಾಗಿ
ನೀಕ್ಷಿಸುತ ತಮ್ಮ ತಮ್ಮಧಿಷ್ಠಾನದಲಿ
ಸೂಕ್ಷ್ಮರೂಪದಲ್ಲಿ ಇಪ್ಪರು ಇವರೊಳಗೆ
ಈ ಕ್ಷಿತಿನಾಮಕ ಭಾರತಿ ಅಲ್ಲೀಗಾ
ಸಾಕ್ಷಾತ ಪ್ರಾಣದೇವನ ತನ್ನ ಮದ್ಯದಲ್ಲಿ
ಲಕ್ಷ್ಮೀ ಇಪ್ಪಳು ಅಧಿಷ್ಠಾನದಲ್ಲಿ
ಅಕ್ಷರ ಪುರುಷ ಅಪಾನನಾಮಕ ಪ್ರ -
ತ್ಯಕ್ಷ ಪ್ರದ್ಯುಮ್ನಾತ್ಮಕ ವೈಶ್ವಾನರಾ -
ಪೇಕ್ಷಾ ರಹಿತ ತಾನೆ ಶುಭರಸ ಕೈಕೊಂಬ
ಮೋಕ್ಷದಾತೃ ಸ್ವಾಮಿ ವಿಜಯವಿಟ್ಠಲ ಕಲ್ಪ -
ವೃಕ್ಷ ಕಾಣೊ ಕರಮುಗಿದು ಬೇಡುವರಿಗೆ ॥ 3 ॥ 

 ಝಂಪೆತಾಳ 

ವ್ಯಾನನೆಂಬಾಹುತಿ ನಾಭಿಯಲ್ಲಿ ಇದ್ದ ದ -
ಕ್ಷಿಣ ಪಾವಕನಲ್ಲಿ ಹೋಮಿಸುವದು
ಈ ನುಡಿಗೆ ಪದ್ಮವರ್ನ ಹುತಾಶನ ಋಷಿ ಕೃ -
ಶಾನು ದೇವತಾ ಅನುಷ್ಟುಪ ಛಂದಸ್ಸು
ಆ ನಿಟಿಲನೇತ್ರನ ಪುತ್ರನೊಬ್ಬನು ಮುಖ್ಯ -
ಪ್ರಾಣಪುತ್ರನು ಮುಂದೆ ವಾಗಾಸ್ಪರಿಶಾಭಿಮಾನಿ
ಅಗ್ನಿದೇವತಾ ಪಾರ್ವತಿ ಪತಿ ಶೇಷ
ವೈನತೇಯ ಇವರಿವರು ಎಲ್ಲಾ
ವ್ಯಾನ ಶಬ್ದವಾಚಕರಾಗೆ ಇವರಧಿಷ್ಠಾನದಲ್ಲಿ ವಿ -
ದ್ಯುನ್ನಾಮಕ ಭಾರತಿ ಪ್ರಾಣದೇವರು 
ವ್ಯಾನ ನಾಮದಲ್ಲಿ ತಾನಿಪ್ಪಾನಾತನೊಳು ಲೋಕಾತುಮ ಉಂಟು
ವ್ಯಾನನಾಮದಲ್ಲಿ ಸಂಕರುಷಣಾತ್ಮಕ ವೈ -
ಶ್ವಾನರ ಭುಂಜಿಸುವ ಶುಭರಸವನ್ನು
ಏನು ಗಣನೆ ಮಾಡಿ ಸಂಖ್ಯ ಪೇಳಲುಂಟೆ
ಆನಂದ ಮೂರುತಿ ವಿಜಯವಿಟ್ಠಲರೇಯಾ 
ಧೇನಿಪರ ಮನಕೆ ಚಿಂತಾಮಣಿ ಸರ್ವದಾ ॥ 4 ॥ 

 ತ್ರಿವಿಡಿತಾಳ 

ಶರಭಿ ಎಂಬೊ ಅಗ್ನಿ ನಾಭಿ ಬಲಭಾಗದಲ್ಲಿ
ಇರುತಿಪ್ಪದು ಉದಾನನೆಂಬಾಹುತಿ
ಸ್ಮರಿಸು ಓಂಕಾರದಲಿ ಸ್ವಾಹಾ ಕಡೆಯಲ್ಲಿ ನುಡಿದು
ಪರಮ ಭಕುತಿಯಿಂದ ಕೊಡಲಿಬೇಕು
ಸ್ಪರಿಶಾಗ್ನಿ ಋಷಿ ವಾಯುರ್ದೇವತಾ ಬೃಹತಿ ಛಂದ
ಹರಿಮಣಿ ವರ್ನ ಎಂಬ ಮಂತ್ರವು
ಹರಪುತ್ರ ಪ್ರಾಣಜ ಅನಿರುದ್ಧ ರುದ್ರಾಹಿ
ಗರುಡ ಇವರಿಗೆ ಉದಾನ ಶಬ್ಧಾ
ಕರಿಸಿಕೊಳುತಿಪ್ಪರೊ ಕವಚದಂದದಲಿ ಇದ್ದು
ಹಿರಿದಾಗಿ ವಾಙ್ ನಾಮ ಭಾರತಿದೇವಿ ಮುಖ್ಯ -
ಮರುತದೇವ ಉದಾನನೆಂಬೊ ನಾಮದಲಿ
ಇರಲು ರಮ್ಮೆದೇವಿ ಅವರೊಳಗೆ
ಸ್ಥಿರವಾಗಿ ಇಪ್ಪಳು ಅಧಿಷ್ಠಾನದಲ್ಲಿ
ಹರಿ ಉದಾನ ವಾಸುದೇವಾತ್ಮಕಾ ವೈಶ್ವಾ -
ನರನೆಂಬೊ ಪೆಸರಿಲಿ ಕರಿಸಿಕೊಂಡು ಸ್ವೀ -
ಕರಿಸುವ ದಿವ್ಯಾನ್ನ ಕರುಣಾರಸದಿಂದ
ಪರಮಪುರುಷ ನಮ್ಮ ವಿಜಯವಿಟ್ಠಲರೇಯ 
ಸುರಧೇನು ಕರದುಂಬ ಭಕ್ತರಾ ಕುಲಕೇ ॥ 5 ॥ 

 ಧ್ರುವತಾಳ 

ಮತ್ತೆ ಸಮಾನವೆಂಬಾಹುತಿ ನಾಭಿ
ಉತ್ತರ ದಿಕ್ಕಿಲಿ ಆವ ಶರಭಿಲಿ
ಹೋತ್ರನಲ್ಲಿ ಹೋಮಿಸು ವಿದ್ಯುದ್ವರ್ನ
ಉತ್ತಮ ವಿರುಪಾಗ್ನಿ ಋಷಿ ಪರ್ಜನ್ಯದೇವತಾ
ಪಂಕ್ತಿ ಛಂದ ಇದೆ ನಾಮಕರಾಗಿ
ಕೃತ್ತಿವಾಸನ ಮಗ ಮರುತದೇವನ
ಪುತ್ರನು ವೃಷ್ಟಿ ಪರ್ಜನ್ಯನು ಅಭಿಮಾನಿ
ವೃತ್ರಾರಿ ರುದ್ರ ಗರುಡ ವಿದ್ಯುನಾಮಕ
ಚಿತ್ತ ಶುದ್ಧವಾದ ಭಾರತಿ ಇವರೊಳು 
ಸೂತ್ರನಾಮಕ ಪ್ರಾಣ ಸಮಾನ ನಾಮದಿ
ತತ್ತಳಿಸುತಿರೆ ಸಮಾನ ನಾರಾಯ -
ಣಾತ್ಮಕ ವೈಶ್ವಾನರನೆಂಬೊ ನಾಮದಿ
ತುತ್ತು ತೆಗೆದುಕೊಂಬ ಪರಮ ಪ್ರೀತಿಯಿಂದ
ಹತ್ತಾದ ಮನುಜಗೆ ಹತ್ತಿಲಿದ್ದರೇನು
ಉತ್ತಮ ಶ್ಲೋಕ ಶ್ರೀವಿಜಯವಿಟ್ಠಲರೇಯ 
ಎತ್ತಿದವರ ಕೈಯ್ಯಾ ಅಮೃತಕಲಶವೊ ॥ 6 ॥ 

 ಝಂಪಿತಾಳ 

ಜಠಾರಾಗ್ನಿ ಬ್ರಹ್ಮಣೆ ಎಂಬಾಹುತಿ
ಸಠೆಯಲ್ಲ ಹೋಮಿಸು ಬ್ರಹ್ಮ ಋಷಿ ಅ -
ಚ್ಚಟ ಅಗ್ನಿರ್ದೇವತಾ ದೇವಿ ತ್ರಿಪದಿ ಛಂದ
ಘಟದೊಳಗೆ ಇಪ್ಪ ಚೇತನಾನಂತರ್ಗತ
ಧಟ ರಮಾಧಿಷ್ಠಾನದಲಿ ವಾಸಾ ನಿ -
ಚ್ಚಟ ಆತ್ಮ ವೈಶ್ವಾನರ ಕೇವಲ ಸಾರಭೋಕ್ತಾ
ತಟಿತ್ಕೋಟಿ ಸಮಪ್ರಭ ವಿಜಯವಿಟ್ಠಲರೇಯ 
ಪಠಿಸಿದವರ ಮನದ ಕುಮುದ ಚಂದ್ರಾ ॥ 7 ॥ 

 ತ್ರಿವಿಡಿತಾಳ 

ಅನಿರುದ್ಧಾತ್ಮಕ ವಿಶ್ವಾ ಅಂತರಾತುಮ ತೈಜ -
ಸನು ಪ್ರದ್ಯುಮ್ನ ಪರಮಾತ್ಮ ಪ್ರಾಜ್ಞಾ -
ನನು ಸಂಕರುಷಣ ಮೂರು ವ್ಯೂಹರಾಗಿ
ಅನುದಿನ ಮಧ್ಯದಲಿ ಸೂಕ್ಷ್ಮ ಸ್ಥೂಲ -
ವನು ಬಿಡದಲೆ ಇದೆ ಉಕ್ತ ಪ್ರಕಾರದಲಿ
ಎಣಿಸಿ ತಿಳಿದು ವೈಶ್ವಾನರನ ಉಪಾ -
ಸನ ಮಾಡಲಾಗಿತ್ತ ನಾಡ್ಯಾಂತರ್ಗತ ರೂಪ
ಅನಿರುದ್ಧಾದಿ ವಿಶ್ವಾದೆಂಟು ಮೂರ್ತಿ
ಮಿನಗುವ ಚತುರ್ವಿಂಶತಿ ಮೂರ್ತಿಗಳು
ಅನ್ನಮಯಾದಿ ಕೃದ್ಧೋಲ್ಕಾದಿ ಪಂಚ 
ಸನತ್ಕುಮಾರ ಮೂರ್ತಿ ಸಾಸಿರ ಮೂರುತಿ
ಮುನಿವೇದವ್ಯಾಸ ಶಿಂಶುಮಾರ
ವನಚರಾದಿ ರೂಪ ಶಕ್ತ್ಯಾದಿ ಹನ್ನೊಂದು
ಗಣನೆ ಇಲ್ಲದ ಪರಾದಿ ಅಜಿತಾದಿ ರೂಪ
ವನಜಜಾಂಡಕ್ಕಾಧಾರ ತ್ರಿಧಾಮದಲ್ಲಿ ವಾಸಾ
ಅನಿಮಿಷ ಪೆಸರಿನನಂತ ಮೂರುತಿ
ತೃಣಕಾಷ್ಟದಲ್ಲಿದ್ದ ತನ್ನಾಮಕ ವರ್ನ
ಘನ ಅಣುವಿನಲಿ ತತ್ ಪ್ರಮಾಣ ಮೂರುತಿ
ಮನುಜ ದನುಜರಲ್ಲಿ ತದಾಕಾರ ಮೂರುತಿ
ದಿನ ಕಾಲ ಮೃಗ ಪಕ್ಷಿ ತರು ಗಿರಿ ನಭ ವಾಯು
ಅನಲ ತೇಜ ಉದಕ ಭೂಮಿ ಶರಧಿ ನದಿ ದ್ವೀಪ
ಮನಸು ನಾನಾ ವಸ್ತು ಮಿಕ್ಕಾದಲ್ಲಿ
ಗುಣಪೂರ್ಣ ಅವಿಕಾರ ಅಖಂಡ ವ್ಯಾಪ್ತ
ಇನಿತು ತಿಳಿದು ಪಂಚ ರೂಪಾತ್ಮಕನಲ್ಲಿ
ನೆನದು ಚಿಂತನೆ ಮಾಡೀ ಏಕೀಭೂತಾ
ಮುನಿಗಳ ಸಮ್ಮತವಾಹುದು ದೇವ ತೃಪ್ತನಾಹ
ಅನುಮಾನಗೊಳದಿರು ಮನದೊಳಗೆ
ಜನನದೂರ ನಮ್ಮ ವಿಜಯವಿಟ್ಠಲರೇಯ 
ಘನದೋಷ ತಿಮಿರಕ್ಕೆ ಮಾರ್ತಾಂಡನು ಕಾಣೊ ॥ 8 ॥ 

 ಧ್ರುವತಾಳ 

ಇಂತು ಭೋಜನ ಮಾಡೆ ಅನ್ನದೋಷದಿಂದ
ಸಂತೋಷವಾಗುವರೊ ಆ ಚಂದ್ರ ಸೂರ್ಯರು
ಮಂತ್ರಿ ದಕ್ಷ ಕಾಮ ಇಂದ್ರ ಉಮಾದೇವಿ
ಕಂತುಹರ ಶೇಷ ಗರುಡ ಇವರ ಸತಿಯರು
ಮುಂತೆ ಭಾರತಿ ವಾಣಿ ವಾಯು ವಾರಿಜಭವ
ಕಂತುಜನನಿ ಲಕುಮಿ ಈ ಸುಜನರು ನಿ -
ರಂತರ ಅನ್ನದಲ್ಲಿ ಅಭಿಮಾನಿಗಳು
ಅಂತರ ಸಂಪ್ರದ ನೇಮಕ ವಿಷ್ಣು ಭಗ -
ವಂತನು ಇರುತಿಪ್ಪ ಇದರ ವಿನವಾಗಿ
ಚಿಂತಿಸು ಭೋಕ್ತರಲ್ಲಿ ಸಂಕರುಷಣ ಪ್ರದ್ಯುಮ್ನ
ಶಾಂತಿಪತಿ ಅನಿರುದ್ಧ ನಾರಾಯಣನು ಭೋಜ್ಯದ್ರವ್ಯದಲ್ಲಿ
ಇಂತಿವರ ಮಧ್ಯ ಅವಕಾಶಪ್ರದ ವಾಸುದೇವ
ಅತ್ಯಂತ ಭಯಂಕರ ನಾರಸಿಂಹ ಸರ್ವರಿಗೆ
ನಿಂತು ಅಪ್ಯಾಯನ ಜಲ ಸಮೂಹದಿಂದ
ಸಂತಸ ಕೊಡುವನು ಹೀಗೆಂದು ತಿಳಿದರೆ
ಯಂತ್ರವಾಹಕ ದೇವ ವಿಜಯವಿಟ್ಠಲರೇಯಾ 
ಅಂತರಂಗದಲ್ಲಿ ಪೊಳೆವ ದುರಿತ ಕಳೆವ ॥ 9 ॥ 

 ಅಟ್ಟತಾಳ 

ಈ ತೆರದಲಿ ಭುಂಜಿಸಿದ ಮಾನವ ತನ್ನ
ಜಾತಿಯೊಳಗೆ ಅಧಿಕನಾಹನು
ತಾ ತೃಪ್ತಿಯಾಗಿ ಉಂಡ ಮಿಕ್ಕ ಎಂಜಲು
ದೂತ ಚಾಂಡಾಲ ಶ್ವಾನ ನಾನಾ ಯೋನಿ
ಜಾತರಿಗೆ ಕೊಡೆ ಅವರಲ್ಲಿ ಇದ್ದ
ಜಾತವೇದಸನು ತೃಪ್ತಿಯಾಗುವನಯ್ಯಾ
ಭೂತಳದೊಳಗೆ ತಿಳಿದವನೆ ಧನ್ಯನೊ
ಪಾತಕದವನಲ್ಲ ಯಾತನಿಗೆ ಸಲ್ಲಾ
ವಾತದೇವನ ದಯ ಪಡೆದು ಮಹಾ ಕೀ -
ರುತಿವಂತನಾಹಾ ಜ್ಞಾನವಂತನಾಹ
ಪೂತುರೆ ಮುಕ್ತಿಲಿ ಸುಖಸಾಂದ್ರದೊಳಗಿಪ್ಪ
ಮಾತಿಗೆ ಗತಿ ಈವ ವಿಜಯವಿಟ್ಠಲರೇಯಾ 
ನೂತನ ನೂತನ ಮಹಿಮೆ ತೋರುವಾ ॥ 10 ॥ 

 ಆದಿತಾಳ 

ಕೇಳುವದುಂಡನ್ನ ಮೂರು ಭಾಗವಾಗಿ
ಸ್ಥೂಲಭಾಗ ಪೂರೀಷ ಮಧ್ಯಭಾಗವೇ ಮಾಂಸ
ಮೇಲು ಸೂಕ್ಷ್ಮ ಭಾಗ ಮನಸಿಗೆ ಉಪಾದಾನ
ವಾಲಯ ಉಂಟು ಮತ್ತೆ ಉದಕ ಮೂರು ಭಾಗ
ಸ್ಥೂಲ ಭಾಗವೆ ಮೂತ್ರ ರಕ್ತ ಮಧ್ಯಮ ಭಾಗವು
ಮೇಲು ಸೂಕ್ಷ್ಮಭಾಗ ವಾಕ್ಯಕ್ಕೆ ಉಪಾದಾನ
ಆಲಸವಿಲ್ಲದೆ ಘೃತ ಮೂರು ಭಾಗವಾಗಿ
ಸ್ಥೂಲಭಾಗವೆ ಅಸ್ಥಿ ಮಧ್ಯಭಾಗವೆ ರೇತಸ್ಸು
ಮೇಲು ಸೂಕ್ಷ್ಮಭಾಗವೆ ಶ್ವಾಸೋಚ್ವಾಸಕ್ಕೆ ಕಾರಣಾ
ಏಳಾಲ ಮಾಡದೆ ಒಲಿಸಿ ಒಲಿಮೆಯಲ್ಲಿ
ಭೂಲೋಕದೊಳಗಿಂತು ತಿಳಿಯದೆ ಭೂಮಿಸುರನು
ಹೋಳಿಗೆ ಪರಮಾನ್ನ ಉಂಡರೆ ಫಲವಿಲ್ಲಾ
ಕೋಳಿ ಸೂಕರ ಕತ್ತೆ ನಾಯಿ ನರಿಗಳು
ಕಾಲವ ಕಳೆಯವೆ ಜಾತಿ ಆಹಾರವ ತಿಂದು
ಪೇಳುವದೇನು ಇವನು ಅವಕ್ಕಿಂತ ಕನಿಷ್ಟ
ಕಾಲನ ಪಟ್ಟಣಕ್ಕೆ ಮೊದಲು ವೀಳ್ಯದವನು
ವ್ಯಾಳಿ ವ್ಯಾಳ್ಯಗೆ ಉಣಲು ಉಂಡವನಲ್ಲಾ
ಮೌಳಿಯ ತೂಗುತ್ತ ಸುರ ಸಮುದಾಯ ನೆರೆದು
ಪಾಲಿಸುತಿಪ್ಪರು ಪ್ರತಿದಿನದಲಿ ಬಂದು
ಪಾಲಸಾಗರಶಾಯಿ ವಿಜಯವಿಟ್ಠಲರೇಯ 
ಆಳುವ ಜ್ಞಾನ ಭಕುತಿ ವೈರಾಗ್ಯವ ಕೊಟ್ಟು ॥ 11 ॥ 

 ಜತೆ 

ಈ ಪರಿಯ ತಿಳಿದು ಯಾಗವ ಮಾಡಿದವರಿಗೆ
ತಾಪತ್ರಯಗಳಿಲ್ಲ ವಿಜಯವಿಟ್ಠಲ ಬಲ್ಲಾ ॥
********

 

No comments:

Post a Comment