* ಮನೆ ಮದ್ದು *
ಕುಂತ್ರೆ ನಿಂತ್ರೆ ಡಾಕ್ಟರ್ ಹತ್ರೆ ಓಡ ಬ್ಯಾಡ್ರೋ
ಮನೆಮದ್ದು ಅಂಗೈಲಿದ್ರೆ ಚಿಂತೆಯಾಕ್ರೋ ll
ನೆಗಡಿ ಶೀತ ಕೆಮ್ಮು ಆದ್ರೆ ನಡುಗ ಬ್ಯಾಡ್ರೋ
ದೊಡ್ಡಪತ್ರೆ ಜೇನುತುಪ್ಪ ಕುಡಿದು ನೋಡ್ರೋ
||೧||
ಹೊಟ್ಟೆಬಾಧೆ ಬಂದದ್ದಾದ್ರೆ ಹೆದರಬ್ಯಾಡ್ರೋ
ಆಗೊಮ್ಮೆ ಈಗೊಮ್ಮೆ ಜೀರಿಗೆ ಕಷಾಯ ಕುಡ್ದು ನೋಡ್ರೋ
||೨||
ಕಫಕ್ಕೇನು ಮದ್ದಿಲ್ವೆ? ಕೇಳ ಬ್ಯಾಡ್ರೋ
ಕಾಳ್ಮೆಣ್ಸು-ಶುಂಠಿ ಕಷಾಯ ಇಲ್ವೇನು ತಿಳ್ದು ನೋಡ್ರೋ
||೩||
ಬಹಳವೇನು ಬಾಯಾರಿಕೆಯೇ ಏನು ಗೋಳ್ರೋ
ತುಳಸಿ ಎಲೆಯ ಸೇವ್ನೆ ಮಾಡಿ ಆಮೇಲ್ಹೇಳ್ರೋ ||೪||
ಬಾಯಾರಿಕೆಯೇ ಇಲ್ಲವೆಂದು ಮರುಗಬ್ಯಾಡ್ರೋ
ಬೆಲ್ಲವನ್ನು ಸವಿಯುತ್ತ ಸುಧಾರ್ಸಿಕೊಳ್ರೋ ||೫||
ಪಿತ್ತವಾದ್ರೆ ಚಹಾ ಸೇವನೆ ಬಿಟ್ಟುಬಿಡ್ರೋ
ಉಷ್ಣವಾದ್ರೆ ಕಾಫಿ ಕುಡಿಯೋದ್ ಬಂದುಮಾಡ್ರೋ
||೬||
ಬಹುಮೂತ್ರಕೆ ದಾಲ್ಚಿನ್ನಿಯ ಮದ್ದು ಸರಳ ಕಣ್ರೋ
ಮೂತ್ರ ತಡೆಗೆ ಮತ್ತೆ ಜೀರ್ಗೆ ಕಷಾಯ ಮಾಡ್ರೋ ||೭||
ಮಧುಮೇಹಕ್ಕೆ ರಾಗಿ ಮುದ್ದೆ ಮೆದ್ದು ನೋಡ್ರೋ
ಮೂಲವ್ಯಾಧಿಗೆ ಎಳ್ಳು ಸೇವ್ನೆ (ನಿತ್ಯ) ಬಿಡ ಬ್ಯಾಡ್ರೋ
||೮||
ವಾಂತಿಯಾದ್ರೆ ಎಳ್ನೀರ್-ಐತೆ ಹೆದರ ಬ್ಯಾಡ್ರೋ
ಭೇದಿ ಆದ್ರೆ ಅನ್ನ ಮಜ್ಜಿಗೆ ಊಟ ಮಾಡ್ರೋ ||೯||
ಹಲ್ಲು ಸಡಿಲತೆಗೆ ದಾಳಿಂಬೆ ಸಿಪ್ಪೆಯ ಕಷಾಯ ಕೊಡ್ರೋ
ಮೊಸರು ತಿಂದು ಕಾಮಾಲೆ ರೋಗವ ದೂರವಿಡ್ರೋ
||೧೦||
ತುಟಿ ಸೀಳಿದಿಯೇ? ಹಾಲಿನ ಕೆನೆಯ ಹಚ್ಚಿ ನೋಡ್ರೋ
ತೆಳ್ಳಗಾಗಲು ಬಿಸಿ ನೀರ್ ಕುಡಿವುಪಚಾರವ ಮಾಡ್ರೋ ||೧೧||
ರಕ್ತ ಹೀನತೆಗೆ ಪಾಲಕ್ ಸೊಪ್ಪು ಇಲ್ಲಿದೆ ಕಾಣ್ರೋ
ಹೊಟ್ಟೆಯ ಹರಳಿಗೆ ಬಾಳೆದಿಂಡಿನ ಪಲ್ಯವ ತಿನ್ರೋ
||೧೨||
ತಲೆ ಸುತ್ತುವುದಕೆ ಬೆಳ್ಳುಳ್ಳಿ ತಿನ್ನುತ
ಗುಣಮುಖರಾಗ್ರೋ
ರಕ್ತ ದೋಷಕೆ ಕೇಸರಿ ಹಾಲಿನ ಸವಿ-ಸುಖ ನೀಡ್ರೋ
||೧೩||
ಓಂ ಕಾಳಲಿದೆ ಹಸಿವೆ ಮಾಡುವ ಶಕ್ತಿಯ ಕಾಣ್ರೋ
ನೀಗದ ಹಸಿವೆಗೆ ಹಸಿ ಹಸಿ ಶೇಂಗಾ ಚಮತ್ಕಾರ ನೋಡ್ರೋ ||೧೪||
ಮಲೆನಾಡಿನ ಮಲೆ ಮಡಿಲಿನ ಮದ್ದಿನ ಮಹಿಮೆಯ ಪಾಡ್ರೋ
ಭಾಗ್ಯದ ಆರೋಗ್ಯದ ಬುನಾದಿಯಿದು ಮೂಗ-ಮುರಿಯಬ್ಯಾಡ್ರೋ
||೧೫||
ವಿಷಮ ಸಂದರ್ಭಕೆ ರಾಮ ಬಾಣವು ಮನೆ ಮದ್ದದು
ನೋಡ್ರೋ
ದಿವ್ಯೌಷಧಗಳ ಜ್ಞಾನಭಂಡಾರಕೆ ನಮೋನಮನ ಹಾಡ್ರೋ ||೧೬||
*******
No comments:
Post a Comment