Monday, 8 March 2021

ಕಾಯೋ ಕಾಯೋ ಲಕ್ಷ್ಮೀ ankita gurugopala vittala

 


ರಾಗ - ಅಹೇರಿ  ತಾಳ - ಅಟ್ಟತಾಳ


ಕಾಯೋ ಕಾಯೋ ಲಕ್ಷ್ಮೀ l

ನಾಯಕ ಯನ್ನ ಗುಣದೋಷವೆಣಿಸದೆ ll ಪ ll


ಸ್ನಾನವರಿಯೆ ಮೌನವರಿಯೆ l

ಧ್ಯಾನವೆಲ್ಲೊ ನಾನೆಲ್ಲೊ ಬಲ್ಲ್ಯೊ l

ಜ್ಞಾನ ಭಕ್ತಿ ವೈರಾಗ್ಯ ಜಪತಪ l

ಖೂನವರಿಯೇನು ನೀನೇ ವಲಿದು ಯನ್ನ ll 1 ll


ಮನಶುದ್ಧಿ ಇಲ್ಲಾ ಸಜ್ಜನರಸಂಗವಿಲ್ಲಾ l

ತನುಕರಣಗಳೆನ್ನ ವಶವೇ ಇಲ್ಲಾ l

ಘನ ಶ(ತ)ಮ ತಪವ್ರತ ತೀರ್ಥಯಾತ್ರಿಗಳಿಲ್ಲಾ l

ಫಣಿ ಧರಧರ ನಿಕೇತ ಶ್ರೀನಿವಾಸ ll 2 ll


ವಿಧಿ ಮಾಡಲಿಲ್ಲಾ ನಿಷೇಧವು ಬಿಡಲಿಲ್ಲ l

ಹೃದಯದೊಳಗೆ ನಿನ್ನ ಭಜಿಸಲಿಲ್ಲ l

ಮದ ಮತ್ಸರ ಕ್ರೋಧ ಡಂಭ ಬಿಟ್ಟವನಲ್ಲಾ l

ಸದಯ ಮೂರುತಿ ನೀನೆ ಮುದದಿಂದೊಲಿದು ಯನ್ನ ll 3 ll


ಸತ್ಯ ವಚನ ಶೌಚಾಚಾರ ವಂದಿಲ್ಲಾ l

ಸತ್ಕರ್ಮನುಷ್ಠಾನ ಮಾಡಲಿಲ್ಲ l

ಭೃತ್ಯ ಭಾವದಿ ಗುರುಹಿರಿಯರರ್ಚನೆ ಇಲ್ಲಾ l

ಉತ್ತಮ ಗುಣ ನಿಧಿ ವಲಿದು ಕರುಣದಿಂದ ll 4 ll


ಅಯ್ಯೋ ಯಂಬುವರಿಲ್ಲ ಆದರಿಸುವರಿಲ್ಲಾ l

ಕೈಯಾ ಪಿಡಿದು ಕಾವ ಜನರೇ ಇಲ್ಲಾ l

ಸ್ವೀಯರಾಗಿ ಪ್ರೀಯ ಮಾರ್ಗ ಪೇಳುವರಿಲ್ಲಾ l

ಶ್ರೀಯರಸನೆ ಜಗದಯ್ಯ ಕರುಣದಿಂದ ll 5 ll


ಮನದ ಡೊಂಕು ತಿದ್ದಿ ಮತಿಗೆಲಿಸುವರಿಲ್ಲಾ l

ಮನದ ಸಂಶಯ ಬಿಡಿಸುವರು ಇಲ್ಲ l

ಮನೋವೃತ್ತಿಯೇನೆಂಬೋ ಮಾತು ಕೇಳುವರಿಲ್ಲಾ l

ಮನಸಿಜಪಿತ ತನುಮನ ದೋಷವೆಣಿಸದೆ ll 6 ll


ಅನಂತ ಅಪರಾಧಗಳಿಗೆ ಆಗರ ನಾನು l

ಮನ್ನಿಸಿ ಸಲಹಬೇಕಯ್ಯ ನೀನು l

ಚಿನ್ಮಯ ಗುರುಗೋಪಾಲವಿಠಲರೇಯ l

ನಿನ್ನ ಹೊರತು ಅನ್ಯ ರಕ್ಷಕರನು ಕಾಣೆ ll 7 ll

********

No comments:

Post a Comment