Saturday, 13 February 2021

ದಾಸರ ಮಹಿಮೆಗೆ vijaya vittala ankita suladi ಪುರಂದರದಾಸ ಸ್ತೋತ್ರ ಸುಳಾದಿ DASARA MAHIMEGE PURANDARA DASA STOTRA SULADI

c

Audio by Mrs. Nandini Sripad



ಶ್ರೀವಿಜಯದಾಸಾರ್ಯ ವಿರಚಿತ  ಶ್ರೀಪುರಂದರದಾಸರ ಸ್ತೋತ್ರ ಸುಳಾದಿ 


 ರಾಗ ಅಠಾಣ 


 ಧ್ರುವತಾಳ 


ದಾಸರ ಮಹಿಮೆಗೆ ಅನಂತ ನಮೊ ನಮೊ

ದೇಶದೊಳಗೆಲ್ಲಿ ಸರಿಗಾಣೆನೋ

ವಾಸುದೇವನ ಪಾದ ಹೃದಯಮಧ್ಯದಲ್ಲಿಟ್ಟು

ಲೇಸಾಗಿ ಪೂಜಿಪರು ಭಕುತಿಯಲ್ಲೀ

ಲೇಶವಾದರು ಕಾಮಕ್ರೋಧಾದಿಗಳೇ ಇಲ್ಲಾ

ಸಾಸಿರ ಜನ್ಮವೆತ್ತಿ ಬಂದ ಕಾಲಕ್ಕೂ ನಾನು

ಈ ಸುಲಭ ಗುರುಗಳಿಗೆ ಆವಲ್ಲಿ ಸರಿಗಾಣೆ

ಏಸು ಬಗೆಯಿಂದ ಕರುಣವ ಮಾಡುವರು

ಈ ಶರೀರವೆ ಅವರ ಸದನದಲ್ಲಿ ಇಪ್ಪ

ದಾಸನುದಾಸರ ಯುಗಳ ಪಾದಕ್ಕೆ ನಿವಾ -

ಳೀಸಿ ಬಿಸುಟುವೆನು ಅನಂತ ಜನುಮದಲ್ಲಿ

ಈ ಸುಖ ತಪ್ಪದೆ ಎನಗಾಗಲಿ ಬಿಡದೆ

ಕೇಶವ ವಿಜಯವಿಟ್ಠಲನ ದಯದಿಂದ

ದಾಸ ಪುರಂದರ ಗುರುಗಳ ಒಲುಮೆ ॥ 1 ॥ 


 ಮಟ್ಟತಾಳ 


ಕೇವಲ ದೃಢವಾಗಿ ಶ್ರೀವಲ್ಲಭನ ರಾ -

ಜೀವ ಪಾದವನ್ನು ಭಾವದಲಿ ನಿಲಿಸಿ

ಪಾವನವಾಗಿಪ್ಪ ಪಾವಮಾನಿ ಮತದ ಕೋವಿದರನುಸರಿಸಿ 

ದೇವ ವಿಜಯವಿಟ್ಠಲ ಒಡೆಯನೆ ಸರ್ವ -

ಜೀವರಿಗೆ ಭಿನ್ನ ದೇವರೆ ಜಗಕೆಂದು

ದೇವರೆ ಜಗಕೆಂದು ॥ 2 ॥ 


 ತ್ರಿವಿಡಿತಾಳ 


ಈ ಪರಿಯಲಿ ವಿಜಯನಗರದಲ್ಲಿ ಇದ್ದು

ತಾಪಸಿಗರ ಗುರುವು ಗುರು ವ್ಯಾಸರಾಯ ಮು -

ನೀಪನ್ನ ಮನ ಮೆಚ್ಚುವಂತೆ ಸೋಜಿಗ ತೋರಿ

ಭೂಪಾಲಕರ ಮಿಗಿಲಾದವರ ತೃಣ ವೆಂ -

ದಾ ಪತಿಕರಿಸದೆ ತುಚ್ಛೆಯ ಮಾಡಿ

ಆಪಾರ ಮಹಿಮೆಯ ತೋರುವ ಶ್ರೀಹರಿಯ

ರೂಪವೆ ಮನದೊಳಗಿಟ್ಟು ನಲಿವ

ಗೋಪಾಲ ವಿಜಯವಿಟ್ಠಲನ ದಾಸರೊಳು

ಈ ಪುರಂದರದಾಸರಿಗೆ ಸಮವುಂಟೆ ॥ 3 ॥ 


 ಅಟ್ಟತಾಳ 


ಇವರಾಡಿದ ಭೂಮಿ ಎನಗದು ವೈಕುಂಠ

ಇವರಿದ್ದ ಸ್ಥಾನವು ಎನಗೆ ಶ್ವೇತದ್ವೀಪ

ಇವರಿದ್ದದೆ ಎನಗಾನಂತಾಸನ ಕಾಣೊ

ಇವರಿದ್ದವನಿ ಎನಗೆ ತ್ರೈಲೋಕ್ಯವೊ

ಇವರು ಮಾಡಿದ ಲೀಲೆ ಎನಗೆ ವೇದೋಕ್ತಿಯು

ಇವರ ಚರಿತೆಯೆಲ್ಲ ಎನಗದು ಪುರಾಣ

ಇವರ ಪಾದಾಂಗುಟದಲ್ಲಿ ಸರ್ವತೀರ್ಥ

ಇವರ ಪಾದಾಂಗುಟದಲ್ಲಿ ಸರ್ವಕ್ಷೇತ್ರ

ಇವರ ಪಾದರೇಣು ಎನಗೊಜ್ರಪಂಜರ

ಇವರಿಂದಲೀ ದೇಹ ಉದ್ಧಾರವಾಗೋದು

ಇವರ ಪಾದ ಹೆಜ್ಜಿ ಬಿದ್ದಲ್ಲಿ ಈ ಕಾ -

ಯವನು ಮಾಡಿ ಹೊರಳಿಸಿ ತೆಗುವೆನೊ

ಅವನೀಶಾ ವಿಜಯವಿಟ್ಠಲನ್ನ ನಂಬಿದ

ಹವಣರ ಪೊಳೆವ ಪಾದವನು ಸೇರುವೆನು ॥ 4 ॥ 


 ಆದಿತಾಳ 


ತಂದೆ ತಾಯಿಗಳೆ ದಾಸರು, ಬಂಧು ಬಳಗವೆ ದಾಸರು

ಹಿಂದೆ ಮುಂದೆ ಕಟ್ಟು ಕಾವಲಿಯಿಂದ ಸಾಕುವರೆ ದಾಸರು

ಅಂದು ಇಂದು ಬಿಡದಲೆ ಬಂದ ಬಂಧನಗಳೆಲ್ಲಾ

ಪೊಂದದಂತೆ ಮಾಡಿ ಪುಣ್ಯ ತಂದು ಕೊಡುವರೆ ದಾಸರು

ಸಂದಿದೆನು ಸಂದಿದೆನು ಎನ್ನ ಕುಲಸಹಿತ ಪು -

ರಂದರದಾಸರ ಪಾದ ದ್ವಂದ್ವದಲ್ಲಿಗೆ ಪೋಗಿ

ಮಂದರಾದ್ರಿಧರ ನಮ್ಮ ವಿಜಯವಿಟ್ಠಲ ಹರಿಯ

ಮಂದಿರಕೆ ಸೋಪಾನ ಸಂದೇಹ ತೊಲಗಿತು ॥ 5 ॥ 


 ಜತೆ 


ದಾಸರೆ ಮನದೈವ ದಾಸರೆ ಮನೆದೈವ

ದಾಸರಲ್ಲದೆ ಇಲ್ಲ ವಿಜಯವಿಟ್ಠಲ ಬಲ್ಲ ॥

******

 


 ಲಘುಟಿಪ್ಪಣಿ : 

 ಹರಿದಾಸರತ್ನಂ ಶ್ರೀಗೋಪಾಲದಾಸರು 


 ತ್ರಿವಿಡಿತಾಳದ ನುಡಿ : 


 ಭೂಪಾಲಕರ = " ನಿಮ್ಮ ಭಾಗ್ಯ ದೊಡ್ಡದೊ ನಮ್ಮ ಭಾಗ್ಯ ದೊಡ್ಡದೊ " ಎಂಬ ಪದ ಸಾಕ್ಷಿ. ಶ್ರೀಕೃಷ್ಣದೇವರಾಯರೆದುರಿಗೆ ಹಾಡಿದ ಪದ ;

 ಪತಿಕರಿಸದೆ = ಹೆಚ್ಚು ಗೌರವಿಸದೆ ; 


 ಅಟ್ಟತಾಳದ ನುಡಿ : 


 ರೀತಿ = ನಡವಳಿಕೆ ;

 ಹವಣರ = ಹಿತಕರರಾದವರ ; 


 ಆದಿತಾಳದ ನುಡಿ : 


 ಕಟ್ಟು ಕಾವಲಿಯಿಂದ = ನಿಯಮ ಮತ್ತು ರಕ್ಷಕ ವಸ್ತುಗಳಿಂದ ;

 ಅಂದು ಇಂದು = ಅಪರೋಕ್ಷದೆಶೆಯಲ್ಲಿ ಮತ್ತು ಈಗ (ಅಪರೋಕ್ಷವಾದ ನಂತರವೂ) ; 


 ಜತೆ ನುಡಿ : 


 ದಾಸರಲ್ಲದೆ ಇಲ್ಲ = ಈ ನಮ್ಮ ಪುರಂದರದಾಸರಲ್ಲದೆ ನಮಗೆ ರಕ್ಷಕರಾದ ಗುರುಗಳು ಅನ್ಯರಿಲ್ಲ ;

ಶ್ರೀಕೃಷ್ಣಾರ್ಪಣಮಸ್ತು

******

No comments:

Post a Comment