Tuesday 19 January 2021

ಎತ್ತಣ ಶಬ್ದವಿದು gopala vittala ankita suladi ಉಡುಪಿ ಶ್ರೀಕೃಷ್ಣ ಸ್ತೋತ್ರ ಸುಳಾದಿ ETTANA SHABDHAVIDU UDUPI SRIKRISHNA STOTRA SULADI


 Audio by Mrs. Nandini Sripad


ಶ್ರೀ ಗೋಪಾಲದಾಸಾರ್ಯ ವಿರಚಿತ ಉಡುಪಿ ಶ್ರೀಕೃಷ್ಣದೇವರ ಸ್ತೋತ್ರ ಸುಳಾದಿ 


 ರಾಗ ಷಣ್ಮುಖಪ್ರಿಯ 


 ಧ್ರುವತಾಳ 


ಎತ್ತಣ ಶಬ್ದವಿದು ಎನ್ನ ಕರ್ಣಕಿದು ಯವ್ವ

ಎತ್ತಣ ಸ್ಪರ್ಶವಿದು ಎನ್ನ ಅಂಗಕಿದು ಯವ್ವ

ಎತ್ತಣ ರೂಪವಿದು ಎನ್ನ ನಯನಕಿದು ಯವ್ವ

ಎತ್ತಣ ರಸವಿದು ಎನ್ನ ಜಿಹ್ವೆಗೆ ಇದು ಯವ್ವ

ಎತ್ತಣ ಗಂಧವಿದು ಎನ್ನ ನಾಸಕಿದು ಯವ್ವ

ಸುತ್ತಿಹ ಶಿರದಿ ನಾನಾ ಲತೆಯು ಎಳೆದಳಿರು

ರತುನ ಮುಕುಟ ಪಣೆಯ ಕಸ್ತೂರಿ ಕಮಲ ನಯನ

ವೃತ್ತವದನವು ಮಂದಸ್ಮಿತ ಚಲ್ವ ಕಿರಿದಂತ

ತತ್ಥಳಿಪ ಕಪೋಲ ಚಲತ್ತು ಮಕರ ಕುಂಡಲ

ಉತ್ತಮದ ಕಂಬು ಕಂಠ ಉರದಲ್ಲಿ ಶ್ರೀವತ್ಸ

ಶ್ರೀತುಲಸಿ ಮಾಲ ಶೃಂಗಾರಿತ್ತವಾದ ಭುಜಕೀರ್ತಿ

ತಿತ್ತಿರಿ ಮವೂರಿ ಕೊಳಲೂದುತ್ತ ಸ್ವರವೆತ್ತಿ ಗಾನ

ಕುತ್ತಿಗಿಯ ಬಾಗಿ ತಾಳಕಿಕ್ಕಿ ತೋಳ ಕರವನ್ನು

ಗುತ್ತಿ ಗುಲಗುಂಜಿ ದಂಡೆ ಚಿತ್ರೆ ಹೊನ್ನುಂಗುರ ಬೆರಳ -

ಲೊತ್ತಿ ವೇಣು ಮೀಟುತ್ತ ಮತ್ತೆ ಸರಿಗಮದಿಂದ

ಚಿತ್ತಜನಯ್ಯ ಜಗದ್ಭರಿತ ಉದರ ತ್ರಿವಳಿಯ

ಸುತ್ತಿದ ಕಟಿಯ ಕಾಂಚೀದಾಮ ಗುಲ್ಲಿಯ ಚೀಲ

ಬುತ್ತಿಯ ಚಿಕ್ಕವು ಬಚ್ಚಣಿಯ ಕೋಲು ಬಲಸೆಕ್ಕಿ

ಎತ್ತಿ ಎತ್ತಿ ಮೆಲ್ಲನೆ ಪಾದೆತ್ತಿ ಹೆಜ್ಜೆ ನಿಡುತ್ತ

ಮತ್ತೆ ಮಹ ಅರ್ಥಿಗಿನ್ನು ಪೃಥ್ವಿ ಆತುರಳಾಗಿ

ಇತ್ತ ವಿಭವು ಮುಂದತ್ತ ಚಿಂತಿಸುತಿಪ್ಪಳೊ

ಸತ್ಯ ಸಾಕಾರ ಸರ್ವಜ್ಞ ಗೋಪಾಲವಿಟ್ಠಲ 

ಮತ್ತೆ ಈ ಉಡುಪಿನ ಕೃಷ್ಣ ಸುತ್ತುಸುಳಿದು ಸಲಹೆನ್ನ ॥ 1 ॥ 


 ಮಟ್ಟತಾಳ 


ಸುಖಪೂರ್ಣ ಜ್ಞಾನಪೂರ್ಣ ಸುಖತೀರ್ಥರ ಪ್ರೀಯ

ಭಕುತವತ್ಸಲ ದೇವ ಬಂಧಕ ಮೋಚಕ

ಶಕುತ ಲಕುಮಿ ಮನೋಹರ ರಾಜರಾಜೇಶ್ವರ

ಮುಕುತಿದಾಯಕ ಮೂಲ ಅವತಾರ ಅಭೇದ

ನಖಶಿಖ ಪರಿಪೂರ್ಣ ನರಸಖ ನಿರ್ದೋಷ

ಸಕಲರಲ್ಲಿ ವ್ಯಾಪ್ತ ಸಕಲ ಸಾರ ಭೋಕ್ತ

ಭಕುತಿಯಿಂದ ಲಭ್ಯ ಬಡವ ಬಲ್ಲಿದನೆನ್ನ

ಮಕ್ಕಳ ಮಾಣಿಕ್ಯ ದೇವಕ್ಕಿ ಪುಣ್ಯೋದಯ

ರಕ್ಕಸಾಂತಕ ರಾಮ ಪ್ರಾಕೃತರಹಿತ

ಸಕಲ ಗುಣಪೂರ್ಣ ಗೋಪಾಲವಿಟ್ಠಲ 

ಶ್ರೀಕೃಷ್ಣ ಉಡುಪಿ ನಿವಾಸ ಸಲಹೋ ನಮ್ಮ ॥ 2 ॥ 


 ರೂಪಕತಾಳ 


ದ್ವಾಪರದಲಿ ಅಂದು ಅವತರಿಸಿದ ಹರಿಯೆ

ಗೋಪಾಲರೊಡನಿನ್ನು ಆಡಿ ಆಕಳ ಕಾಯ್ದ

ಅಪ್ರಮೇಯ ಪೂರ್ಣ ಪೂರ್ಣ ಮಾಡಲಿಬೇಕು ಎಂತೆಂದು

ಈ ಪೃಥ್ವಿಯಲ್ಲಿ ಈ ಸ್ಥಳದಲ್ಲಿ ನಿಂತಿನ್ನು

ಗೋಪಾಲಕರೆ ಗೋವುಗಳ ಅಂದಾದವರ

ಸುಪರಮ ಸನ್ಯಾಸಿಗಳ ಮಾಡಿ ಸೃಷ್ಟಿಸಿ

ತಾ ಪೂಜೆ ಇವರಿಂದ ನಿರತ ತೆಗೆದುಕೊಂಡು

ಶ್ರೀಪತಿ ಇವರಿಂದ ಸರ್ವ ಸಾಧನಗಳನ

ತಾ ಪಾಲಿಸುವ ಸಂಭಾಷ ಸಂದರಶನದಿ

ನಾ ಪ್ರತಿಕಾಣೆ ಈ ಕ್ಷೇತ್ರಕ್ಕೆ ಮಿಗಿಲೊಂದು

ಶ್ರೀಪುರುಷೋತ್ತಮ ಉಡುಪಿನ ಸಿರಿಕೃಷ್ಣ

ಅಪಾರ ಮಹಿಮ ಗೋಪಾಲವಿಟ್ಠಲ 

ಈ ಪರಿ ಇರುತಿಪ್ಪ ಇಲ್ಲಿ ಪಾಲಿಸುತ್ತ ॥ 3 ॥ 


 ಝಂಪೆತಾಳ 


ಅಣುಮೂರುತಿ ಇದೆ ಘನಮೂರುತಿ ಇದೇ

ಅಣು ಘನ ಪರಿಪೂರ್ಣ ಮೂರುತಿ ಇದೆ

ವನಜ ಭವಾದಿಗಳ ಮನಕೆ ಧೇಯವು ಇದೇ

ಸನಕಾದಿಗಳ ಮನಕೆ ಒಪ್ಪುವದಿದೇ

ಅಣಿಮಾದಿ ಅಷ್ಟಾಂಗ ಯೋಗ ಸಾಧನವುಳ್ಳ

ಮುನಿಗಳ ಮನಕೆ ಪೊಳೆಯುತಲಿಹದಿದೆ

ಕನಸು ಜಾಗ್ರತೆ ಸ್ವಪ್ನ ಸುಷುಪ್ತಿ ವ್ಯಾಪಾರ

ದಿನಗಳನು ನಡೆಸುವ ಮೂರ್ತಿ ಇದೇ

ಫಣಿ ಫಣದಲ್ಲಿ ನಾಟ್ಯವಾಡಿ ಭಕ್ತರ ಕಾಯ್ದ

ಮನುಜ ರೂಪವ ತಾಳ್ದ ಮೂರ್ತಿ ಇದೆ

ಜನನಿಗಾಟವ ತೋರಿ ಜನರ ತೋಷ ಬಡಿಸಿದ

ಘನ ಕರುಣಾಕರ ಮೂರ್ತಿ ಇದೇ

ವನಧಿ ತೀರವಾಸ ಗೋಪಾಲವಿಟ್ಠಲ 

ಚಿನುಮಯಮೂರ್ತಿ ಸುಖಮುನಿ ಮನ ಮಂದಿರ ನಿವಾಸ ॥ 4 ॥ 


 ತ್ರಿವಿಡಿತಾಳ 


ಚಿತ್ತಜನಯ್ಯ ಕಾಣೋ ಚಿಂತನಿಗೆ

ಭಕ್ತವತ್ಸಲ ಕಾಣೋ ಅಭಿಮುಖಕೆ

ನಿತ್ಯ ವ್ಯಕ್ತನು ಕಾಣೊ ನಿರುಪಾಧಿಕರಿಗೆಲ್ಲ

ಸತ್ಯ ಅವ್ಯಕ್ತ ವಿಷಯಾಸಕ್ತರಿಗೆ

ಸತ್ಯ ರೂಪನು ಕಾಣೊ ಭೃತ್ಯ ಜನರಿಗಿನ್ನು

ಮೃತ್ಯುರೂಪನು ಕಾಣೊ ದೈತ್ಯಜನಕೆ

ಮತ್ತೆ ಮಧ್ಯಮರಿಗೆ ಮನುಜರೂಪದಿ ತೋರ್ಪ

ಮತ್ತಾ ಜಾರ ಸ್ತ್ರೀಯರಿಗೆ ಜಾರ

ಸುತ್ತ ಆಡಿದ ಗೋಪಾಲಕರಿಂಗೆ ಗೋವಳ

ತತ್ತದಾಕಾರವು ವೊಂದರಲ್ಲೇ

ಪ್ರತ್ಯೇಕ ಅವರವರಿಷ್ಟ ರೂಪಕನಾಗಿ

ನಿತ್ಯ ತೋರುವ ನಿಲಕೆ ಜೀವರಿಗೆ

ಮುಕ್ತಿದಾಯಕ ಕೃಷ್ಣ ಗೋಪಾಲವಿಟ್ಠಲ 

ಪ್ರತ್ಯಕ್ಷ  ನೋಡಿಲ್ಲಿ ಬಲ್ಲವರಿಗೆ ॥ 5 ॥ 


 ಅಟ್ಟತಾಳ 


ಇದೇ ಶ್ವೇತ ದ್ವೀಪ ಇದೇ ಅನಂತಾಸನ

ಇದೇ ಶ್ರೀವೈಕುಂಠ ಇದೇ ಮುಕ್ತಭಾಗ

ಇದೇ ಮಧ್ವ ಸರೋವರ ವಿಧಿಯಿಂದ ಮಾಡಿದ್ದು

ವಿಧಿ ಕಾಣೋ ವಿರಜಾನದಿಯ ಸ್ನಾನಕೆ ಮುಂದೆ

ಪದುಮೆ ಯಿಂದರ್ಥಿಲಿ ಪೂಜಿತ ಮೂರ್ತಿದು

ವಿಧಿಯಿಂದ ನಿರ್ಮಿತವಾದ ಮೂರ್ತಿಯು ನೋಡಾ

ಅಧಿಕಧಿಕವಾಹ ಮೂರ್ತಿ ಅಪ್ರತಿ ಈ ಕ್ಷೇತ್ರ

ಬುಧರೇವೆ ಬಲ್ಲರು ವಿಧಿಸಿ ನೋಡಲು ಇನ್ನು

ಮದನನಯ್ಯ ಚಲ್ವ ಗೋಪಾಲವಿಟ್ಠಲ 

ಸದಾ ನಮ್ಮ ಸಲಹೋ ಶ್ರೀ ಉಡುಪಿನ ಕೃಷ್ಣ ॥ 6 ॥ 


 ಆದಿತಾಳ 


ನಮೊ ನಮೊ ಪಾಂಡವ ಪಕ್ಷಪಾತಿಯೆ

ನಮೊ ನಮೊ ಅಗಣಿತ ಗುಣಗಣಾಂಬುಧೆ

ನಮೊ ನಮೊ ನಿರ್ದೋಷ ನಿಜ ಆನಂದ

ನಮೊ ನಮೊ ಪ್ರಾಕೃತ ಗಂಧ ವಿದೂರನೆ

ನಮೊ ನಮೊ ನಿತ್ಯ ನಿರಂಜನ ಪೂರ್ಣ

ನಮೊ ನಮೊ ಸ್ವಗತ ಭೇದ ವಿವರ್ಜಿತ

ನಮೊ ನಮೊ ನಿರ್ಜಿತಮಾಯ ಸುವರ್ಗ

ನಮೊ ನಮೊ ಕಾರುಣ್ಯ ಕಾಪಟ್ಯ ರಹಿತ

ನಮೊ ನಮೊ ವಿಷ್ಣು ಸಾಕಾರ ಚಲುವ

ನಮೊ ನಮೊ ನಿತ್ಯತೃಪ್ತ ನಿರಾಶ್ರಯ

ನಮೊ ನಮೊ ಸಿರಿ ಅಬುಜ ಭವ ವಂದಿತ

ನಮೊ ನಮೊ ಸರ್ವ ಜೀವ ಜಡ ವ್ಯಾಪ್ತ

ನಮೊ ನಮೊ ಸೃಷ್ಟ್ಯಾದಿ ಅಷ್ಟಕರ್ತ ರಾಜ

ನಮೊ ನಮೊ ಸುರನದಿ ಜನಕ ಹೇ ತಾತ

ನಮೊ ನಮೊ ಗೋಪಾಲವಿಟ್ಠಲ ಮೂರುತಿ

ನಮೊ ನಮೊ ಜಯ ಜಯ ಉಡುಪಿನ ಸಿರಿಕೃಷ್ಣ ॥ 7 ॥ 


 ಜತೆ 


ನೋಡಿದವನಲ್ಲ ನಾ ನಿನ್ನ ನಿಜರೂಪ

ನೋಡಿಸೊ ಕರುಣದಿ ಗೋಪಾಲವಿಟ್ಠಲ ॥

*******


No comments:

Post a Comment