ಹರಿದಾಸಿ ತಾಯಿ ಸತ್ಯಭಾಮಾರವರೂ ಸಹ ಒಂದು ವಿಶೇಷವಾದ ಪದವನ್ನು ಶ್ರೀ ವಾಮನರೂಪೀ ಪರಮಾತ್ಮನ ಕುರಿತು ರಚನೆ ಮಾಡಿದ್ದು
ಭಿಕ್ಷೆಯ ನೀಡುವ ಪದ - ಉಪನಯನದ ಹಾಡು
ಕಾಮಿನಿ ನೋಡೆ ವಟುವಾಮನಾನಾಗಮನಾ
ಕಾಮಿಸಿ ಭಿಕ್ಷೆಯ ಸ್ವಾಮಿಯು ಬರುತಿಹ ॥
ಅದಿತಿಯು ಕಾಮಿಸಿ ದಧಿವ್ರತ ವಿರಚಿಸಿ
ಪದುಮದಳಾಕ್ಷನ ಮುದದಲಿ ಪಡದಳು ॥
ಜನನಿಗೆ ನಮಿಸಲು ವಿನಯದಿ ಹರಸುತ
ದನುಜರ ಜೈಸಲು ಘನವರವಿತ್ತಳು ॥
ಕರದಿ ಕಮಂಡಲ ಧರಿಸಿ ಭೂಮಂಡಲ
ಚರಿಸುತ ಬಲಿಗೃಹ ಕಿರದೆ ಬರುವನಹಾ ॥
ಕೊರಳೊಳು ಜಪ ಸರ ಬೆರಳೊಳಗುಂಗುರ
ಉರದಿ ಪೀತಾಂಬರ ಧರೆಗೆ ಪ್ರಭಾಕರ ॥
ಭಿಕ್ಷೆಯಪೇಕ್ಷಿಸುತಾಕ್ಷಣ ಬಲಿಯೊಳು
ಕುಕ್ಷಿಯೊಳೀರಡಿ ವಕ್ಷದೊಳೊಂದಡಿ ॥
ದಿನದಿನ ಭಕತನ ಮನೆಯನು ಕಾಯುವ
ದಿನಪ ನಾರಾಯಣ ಕನಕವನೀಯುವ ॥
**
ನಮ್ಮ ಶ್ರೀ ಹರಿದಾಸ ಸಾಹಿತ್ಯದಲ್ಲಿ ಸ್ತುತಿಪದಗಳು, ನಿಂದಾಸ್ತುತಿಗಳು, ಜೋಗುಳ ಪದಗಳು ರಚಿತವಾದದ್ದು ನಾವು ನೋಡಿದ್ದೇವೆ. ಅವುಗಳಂತೆಯೇ ಸಂಪ್ರದಾಯ ಪದಗಳೂ ಅದ್ಭತವಾದ ಕ್ರಮದಲ್ಲಿ ರಚಿತವಾಗಿವೆ. ಅಂತಹ ಶ್ರೀ ನಾರಾಯಣದಾಸರಾಯರ ರಚನೆಯನ್ನು ನೋಡೋಣ ಬನ್ನಿ.
ದಶಾವತಾರದ ಪದಗಳಂತೂ ಪರಮಾದ್ಭುತ. ಆದರೆ ಅದರಲ್ಲಿ ನರಸಿಂಹ ರೂಪ, ರಾಮ,ಕೃಷ್ಣ ಈ ರೂಪಗಳದ್ದೇ ಹೆಚ್ಚು ಪ್ರತ್ಯೇಕ ಕೃತಿಗಳಿದ್ದವೇ ಹೊರತು, ಪರಮಾತ್ಮನ ಮತ್ಸ್ಯ, ಕೂರ್ಮ ಮುಂತಾದ ಅವತಾರಗಳ ಪ್ರತ್ಯೇಕ ಸ್ತುತಿ ಪದಗಳು ಹೆಚ್ಚು ಕಂಡುಬರುವುದಿಲ್ಲ. ಅದರಲ್ಲಿ ವಾಮನ ರೂಪೀ ಪರಮಾತ್ಮನ ಪದಗಳು ಅಲ್ಲಲ್ಲಿ ಕಾಣಬಹುದಷ್ಟೇ. ಹರಿದಾಸಿ ತಾಯಿ ಸತ್ಯಭಾಮಾರವರೂ ಸಹ ಒಂದು ವಿಶೇಷವಾದ ಪದವನ್ನು ಶ್ರೀ ವಾಮನರೂಪೀ ಪರಮಾತ್ಮನ ಕುರಿತು ರಚನೆ ಮಾಡಿದ್ದು ಕಾಣುತ್ತೇವೆ. ಅಂತಹುದೆ ಕೃತಿಯಿದು.
ಶ್ರೀ ವಾಮನ ರೂಪೀ ಪರಮಾತ್ಮನನ ಉಪನಯನದ ಸಂದರ್ಭವನ್ನು ತೆಗೆದುಕೊಂಡು ಸುಂದರವಾಗಿ ರಚಿತವಾದ ಪದ
**
ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರ ರಚನೆ ವಾಮನನ ಚರಿತ್ರೆಯನ್ನು ಉಲ್ಲೇಖಮಾಡುವ ಅದಿತಾ ದೇವಿ ಪಯೋ ವ್ರತವು ಮಾಡಿದಳಾಕೆ ಪತಿಯಾಜ್ಞೆಯ ಬೇಡಿಕೊಂಡು
ಪೃಥಿವೀತಾನೆಲ್ಲ ಆಕ್ರಮಿಸೊ ಸ್ವಾಮಿ ತನ್ನ ಸುತನಾಗಿ ಜನಿಸಬೇಕೆಂದು ಎನ್ನುವ ಪದ ಪರಮಾದ್ಭುತವಾಗಿರುತ್ತದೆ. ಆ ಕೃತಿಯಲ್ಲಿ ಶ್ರೀ ಧೃವಾಂಶಜರು ಶ್ರೀ ವಾಮನದೇವರ ಜನನದಿಂದ ಮೊದಲಾಗಿ ಬಲಿಯ ಬಾಗಿಲು ಕಾಯ್ವವರೆಗಿನ ಎಲ್ಲ ಚರಿತ್ರೆಯನ್ನು ಚಿತ್ರಣ ಮಾಡಿದ್ದಾರೆ. ಹಿರಿಯರ ಹಾದಿಯಲ್ಲೇ ನಡೆದು ಬರುವ ಶ್ರೇಷ್ಠ ದಾಸರೆಲ್ಲರೂ ಹಿರಿಯರಂತೆಯೇ ರಚನೆ ಮಾಡುತ್ತ, ಅವರವರ ಯೋಚನಾ ಶಕ್ತಿಯಂತೆ ತತ್ವಕ್ಕೆ ಧಕ್ಕೆ ಬಾರದಂತೆ ರಚನೆ ಮಾಡಿದ್ದಾರೆ. ಅಂತದ್ದೇ ಸೊಗಸಾದ ರಚನೆ ಇದು.
ಈ ರೀತಿಯ ವಿಶೇಷವಾದ ಪದಗಳು ಮತ್ತಷ್ಟು ತಿಳಿಯುವ, ಕಲಿಯುವ ಸೌಭಾಗ್ಯ ನಮ್ಮದಾಗಲೆಂದು ಶ್ರೀ ದಾಸರಾಯರೆಲ್ಲರಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀನಾರಸಿಂಹಾಭಿನ್ನ ಶ್ರೀ ಕೃಷ್ಣಪರಮಾತ್ಮನು ಸದಾ ನಮ್ಮನ್ನು ಕಾಯಲಿ ಎಂದು ಭಕ್ತಿಯಿಂದ ಬೇಡಿಕೊಳ್ಳುತ್ತಾ...
-padma sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏼
***
No comments:
Post a Comment