Monday 1 February 2021

ಸೂರ್ಯಾಂತರ್ಗತ ನಾರಾಯಣ ಪಾಹಿ ಆರ್ಯಮೂರುತಿ ankita shreenidhi vittala SURYANTARGATA NARAYANA PAHI ARYA MOORUTI

 ರಾಗ ಪೂರ್ವಿಕಲ್ಯಾಣಿ   ಆದಿತಾಳ 
Audio by Mrs. Nandini Sripad

ಶ್ರೀ ದೀಪದ ಅಣ್ಣಯ್ಯಾಚಾರ್ಯರ ಕೃತಿ -ಶ್ರೀನಿಧಿವಿಠಲ ಅಂಕಿತ
(ಶ್ರೀನಿಧಿವಿಠಲ ಅಂಕಿತರು - ಶ್ರೀವಿಜಯದಾಸರ ಶಿಷ್ಯರಾದ ಶ್ರೀವೇಣುಗೋಪಾಲದಾಸರ ಶಿಷ್ಯಪೀಳಿಗೆಯಲ್ಲಿ ಶ್ರೀ ತಂದೆಶ್ರೀಪತಿವಿಟ್ಠಲ ದಾಸರ ಶಿಷ್ಯರು)


ಸೂರ್ಯಾಂತರ್ಗತ ನಾರಾಯಣ । ಪಾಹಿ
ಆರ್ಯಮೂರುತಿ ಪಂಚಪ್ರಾಣ ॥ ಪ ॥
ಭಾರ್ಯಳಿಂದೊಡಗೂಡಿ ಸರ್ವಜೀವರೊಳಿದ್ದು
ವೀರ್ಯ ಕೊಡುತಲಿರ್ದ ಶರ್ವಾದಿವಂದ್ಯ ॥ ಅ ಪ ॥

ದ್ರುಪದನ ಸುತೆ ನಿನ್ನ ಕರೆಯೆ । ಅಂದು
ಕೃಪಣವತ್ಸಲ ಶೀರೆ ಮಳೆಯೇ ।
ಅಪರಿಮಿತವು ನೀರ ಸುರಿಯೆ । ಸ್ವಾಮಿ
ಕುಪಿತ ದೈತ್ಯರ ಗರ್ವ ಮುರಿಯೇ ॥
ಜಪಿಸೋ ಜನರ ವಿಪತ್ತು ಕಳೆದೆ 
ಈ ಪರಿಯ ದೇವರನೆಲ್ಲಿ ಕಾಣೆನೊ
ತಪನಕೋಟಿಪ್ರಕಾಶ ಬಲ ಉಳ್ಳ
ಕಪಿಲರೂಪನೆ ಜ್ಞಾನದಾಯಕ ॥ 1 ॥

ಹೃದಯ ಮಂಟಪದೊಳಗೆಲ್ಲ । ಪ್ರಾಣ -
ದದುಭುತ ಮಹಿಮೆಯ ಬಲ್ಲ
ಸದಮಲನಾಗಿ ತಾನೆಲ್ಲ । ಕಾರ್ಯ
ಮುದದಿ ಮಾಡಿಸುವ ಶ್ರೀನಲ್ಲ ॥
ಹದುಳ ಕೊಡುತಲಿ ಬದಿಲಿ ತಾನಿದ್ದು
ಒದಗಿ ನಿನಗೆನ್ನ ಮದುವೆ ಮಾಡಿದ
ಪದುಮಜಾಂಡೋದರ ಈ ಸುದತಿಯ
ಮುದದಿ ರಮಿಸೆಂದು ಒದಗಿ ಬೇಡುವೆ ॥ 2 ॥

ಎನ್ನ ಬಿನ್ನಪವನ್ನು ಕೇಳೊ । ಪ್ರಿಯ
ಮನ್ನಿಸಿ ನೋಡೊ ದಯಾಳೋ
ಹೆಣ್ಣಬಲೆಯ ಮಾತು ಕೇಳೋ । ನಾನು
ನಿನ್ನವಳಲ್ಲವೇನು ಹೇಳೋ ॥
ನಿನ್ನ ಮನದನುಮಾನ ತಿಳಿಯಿತು
ಕನ್ಯಾವಸ್ಥೆಯು ಎನ್ನದೆನ್ನದೆ
ಚೆನ್ನ ಶ್ರೀನಿಧಿವಿಟ್ಠಲ ಪ್ರಾಯದ
ಕನ್ಯೆ ಇವಳನು ದೇವ ಕೂಡಿಕೊ ॥ 3 ॥
****

kruti by ಶ್ರೀನಿಧಿವಿಠಲರು shreenidhi vittalaru

ಸೂರ್ಯಾಂತರ್ಗತ ನಾರಾಯಣ ಪಾಹಿ

ಆರ್ಯ ಮಾರುತಿ ಪಂಚಪ್ರಾಣ ಪ


ಭಾರ್ಯಳೆಂದೊಡಗೂಡಿ ಸರ್ವಜೀವರೊಳಿದ್ದು

ವೀರ್ಯ ಕೊಡುತಲಿರ್ದ ಶರ್ವಾದಿ ವಂದ್ಯಾತಿಅ.ಪ.


ದ್ರುಪದನ ಸುತೆ ನಿನ್ನ ಕರೆಯೆ ಅಂದು

ಕೃಪಣ ವತ್ಸಲ ಶೀರೆ ಮಳೆಯೇ

ಅಪರಿಮಿತವು ನೀರ ಸುರಿಯೆ ಸ್ವಾಮಿ

ಕುಪಿತ ದೈತ್ಯರ ಗರ್ವ ಮುರಿಯೇ

ಜನಸೋ ಜನರ ವಿಪತ್ತು ಕಳೆದೆ

ಈ ಪರಿಯ ದೇವರನೆಲ್ಲಿ ಕಾಣೆನೊ

ತಪನಕೋಟ ಪ್ರಕಾಶ ಬಲ ಉಳ್ಳ

ಕಪಿಲರೂಪನೆ  ಜ್ಞಾನದಾಯಕ 1


ಹೃದಯ ಮಂಟಪದೊಳಗೆಲ್ಲ ಪ್ರಾಣ-

ದದುಭುತ ಮಹಿಮೆಯ ಬಲ್ಲ

ಸದಮಲನಾಗಿ ತಾವೆಲ್ಲ ಕಾರ್ಯ

ಮುದದಿ ಮಾಡಿಸುವ ಶ್ರೀನಲ್ಲ

ಹದುಳ ಕೊಡುತಲಿ ಬದಿಲಿ ತಾನಿದ್ದು

ಒದಗಿ ನಿನಗೆಲ್ಲ ಮದುವೆ ಮಾಡಿದ

ಪದುಮಜಾಂಡೋದರ ಸುದತಿಯ

ಮುದದಿ ರಮಿಸೆಂದು ಒದಗಿ ಬೇಡುವೆ 2


ಎನ್ನ ಬಿನ್ನಪವನ್ನು ಕೇಳೊ ಪ್ರಿಯ

ಮನ್ನಿಸಿ ನೋಡೊ ದಯಾಳೋ

ಹೆಣ್ಣಬಲೆಯ ಮಾತು ಕೇಳೂ ನಾನು

ನಿನ್ನವಳಲ್ಲವೇನು ಹೇಳೋ

ನಿನ್ನ ಮನದನುಮಾನ ತಿಳಿಯಿತು

ಕನ್ಯಾವಸ್ಥೆಯು ಎನ್ನದೆನ್ನದೆ

ಚೆನ್ನ ಶ್ರೀನಿಧಿವಿಠಲ ಪ್ರಾಯದ

ಕನ್ನೆ ಇವಳನು ದೇವ ಕೂಡಿಕೊ 3

***

ಈ ದೇವರನಾಮದಲ್ಲಿ , ಪರಮಾತ್ಮನನ್ನು ಪುರುಷ , ಮನಸ್ಸನ್ನು ಹೆಂಡತಿ ಎಂದು ದಾಸರಾಯರು ಸಂಬೋಧಿಸಿದ್ದಾರೆ. ನಮಗೆ ಸಾಮರ್ಥಿಕೆ ಬರುವುದೇ ಪರಮಾತ್ಮನಿಂದ (ಯಜಮಾನನಿಂದ)  ಆದ ಕಾರಣ ಮನಸ್ಸು ಹೆಂಡತಿ.


1ನೇ ನುಡಿಯಲ್ಲಿ ಭಕ್ತರು ಕರೆದಾಗಲೆಲ್ಲ ಪರಮಾತ್ಮ ಬಂದು ಒದಗಿರುವನು ಎಂಬ ವಿಷಯವನ್ನು ಹೇಳಿದ್ದಾರೆ.


2ನೇ ನುಡಿ - 

ಹದುಳ ಕೊಡುತಲಿ ಬದಿಲಿ ತಾನಿದ್ದು ।

ಒದಗಿ ನಿನಗೆನ್ನ ಮದುವೆ ಮಾಡಿದ ।


- ಕ್ಷೇಮ(ಹದುಳ)ದಿಂದ ನನ್ನ ಬದಿಯಲ್ಲೇ ಇದ್ದು , ದುರ್ವಿಷಯದೊಳು ಮಗ್ನವಾಗಿರುವ ನನ್ನ ಮನಸ್ಸನ್ನು ನಿನ್ನ ಪಾದಪದ್ಮಗಳಲ್ಲಿ ಭಕ್ತಿಪೂರ್ವಕದಿಂದ ಸ್ಥಿರ(ಮದುವೆ)ಗೊಳಿಸುವಂತೆ ಮಾಡು ಎಂದು ಬೇಡುತ್ತಾರೆ. ಪದುಮಜಾಂಡೋದರ(ಪರಮಾತ್ಮ)......

ಹೀಗಾಗಿ , ಮನಸ್ಸು ಹೆಂಡತಿ ಎನಿಸಿಕೊಳ್ಳುತ್ತದೆ. ಪರಮಾತ್ಮನೇ ಗಂಡ. ನನ್ನ ಮನಸ್ಸು ಸದಾ ಪರಮಾತ್ಮನ ಪಾದಾರವಿಂದಗಳಲ್ಲಿ ಇಟ್ಟಿರುವುದರಿಂದ ಸುದತಿ(ಪತಿವ್ರತೆ) ಎನಿಸಿಕೊಳ್ಳುತ್ತದೆ.


3ನೇ ನುಡಿ -

ಪ್ರಿಯ ಅಂತ ಗಂಡ(ಪರಮಾತ್ಮ)ನಿಗೆ ಸಂಬೋಧನೆ.

ನಿನ್ನವಳಲ್ಲವೇನೋ ಹೇಳೋ - ನಾನು ಮನಸ್ಸನ್ನು ನಿನ್ನಂಘ್ರಿಯಲ್ಲಿರಿಸಿದವಳಲ್ಲವೇ.....


ನಿನ್ನ ಮನದನುಮಾನ ತಿಳಿಯಿತು

ಕನ್ಯಾವಸ್ಥೆಯು ಎನ್ನದೆನ್ನದೆ.......

ನನ್ನ ಮನಸ್ಸು ಕನ್ಯಾವಸ್ಥೆ ಅಂದರೆ ನಾನು ನಿನಗೆ ಮೀಸಲಿಲ್ಲವೆಂದು ನಿನ್ನ ಅನುಮಾನವೆಂದು ನನಗೆ ತಿಳಿಯಿತು...


ಪ್ರಾಯದ ಕನ್ಯೆ ಇವಳನು ಕೂಡಿಕೋ.....

ಮನಸ್ಸನ್ನು ಬೇರೆಯವರಲ್ಲಿ ಸಮರ್ಪಿಸಿಲ್ಲವಾದ್ದರಿಂದ ಮನಸ್ಸೆಂಬ ಈ ಪ್ರಾಯದ ಕನ್ಯೆಯನ್ನು ಕೂಡಿಕೊ - ಅಂದರೆ ಮನಸ್ಸನ್ನು ನಿನ್ನ ಪಾದಾರವಿಂದದಲ್ಲಿ ಸ್ಥಿರಗೊಳಿಸುವಂತೆ ಮಾಡು ದೇವಾ.

****


No comments:

Post a Comment