ಶ್ರೀ ಹುಯಿಲಗೋಳ ನಾರಾಯಣರಾಯರ ಕೃತಿ
ರಾಗ - : ತಾಳ -
ಸ್ಮರಿಸುವುದು ರಘುನಂದನನ ll ಪ ll
ನಿರುತದಿ ಬೆಳಗಿನೊಳೆದ್ದು ಭಕುತಿಯಲಿ ll ಅ ಪ ll
ಜನಪತಿ ದಶರಥನುದರದಿ ಜನಿಸಿದ
ವನಿತೆ ಅಹಲ್ಯೆಯ ತಾನುದ್ಧರಿಸಿದ
ಘನ ಶಂಕರ ಧನುವ ಭಂಗಿಸಿದ
ಜನಕ ಸುತೆಯ ವರಿಸಿದ ಶ್ರೀರಾಮನ ll ೧ ll
ತಾಯಿ ಕೈಕೇಯಿಯ ಮಾತು ನಡೆಸಿದ
ನೋಯದೆ ವನವನು ಸತಿಸಹ ಸೇರಿದ
ಮಾಯಾಮೃಗದಾಶೆಗೆ ಸತಿಯನಗಲಿದ
ರಾಯ ಲಕ್ಷ್ಮಣನಣ್ಣ ಶ್ರೀರಾಮನ ll ೨ ll
ದಂಡಕದೊಳು ಸತಿಯನು ಶೋಧಿಸಿದ
ಚಂಡ ಹನುಮಗೆ ತಾ ದೊರೆಯಾದ
ಪುಂಡ ಜಲಧಿಯ ದಾಟಿಸಿದ
ಹೆಂಡತಿ ಇರವನು ತಿಳಿದ ಶ್ರೀರಾಮನ ll ೩ ll
ಜಲಧಿಗೆ ಸೇತುವೆ ನಿಂತು ಬಿಗಿಸಿದ
ಖಳ ರಾವಣನ ರಣದೊಳು ಕೆಡಹಿದ
ಒಲಿದು ವಿಭೀಷಣನನು ತಾ ಪೊರೆದ
ನೆಲದೊಳು ಸುಖ ಬೀರಿದ ಶ್ರೀರಾಮನ ll ೪ ll
ಧರುಮವ ನೆಲೆಸಲು ದುಷ್ಟರ ತರಿದಾ
ಧರೆಯೊಳು ಶಿಷ್ಟರ ಪೊರೆಯಲು ಬಯಸಿದ
ಸಿರಿಪತಿ ಗದುಗಿನ ವೀರನಾರಾಯಣ
ನರನಾಗವತರಿಸಿದ ಶ್ರೀರಾಮನ ll ೫ ll
**
No comments:
Post a Comment