ಶ್ರೀ ವಿಜಯದಾಸಾರ್ಯ ವಿರಚಿತ ಸೇತುಮಾಧವ ಸುಳಾದಿ
ಧ್ರುವತಾಳ
ಚಿತ್ರವಿದೇನೊ ಶತಪತ್ರ ನಯನ ಪಾ -
ವಿತ್ರನಾಮಕ ಶ್ರೀ ಕಳತ್ರ ಮುನಿಸ್ತೋತ್ರ
ಸೂತ್ರಧಾರಕ ಲೋಕತ್ರಯವಂದಿತ
ಪಾತ್ರರಿಗೆ ಸತ್ಪಾತ್ರ ತ್ರಿದಶಮಿತ್ರ
ಶತ್ರುಸಂಹಾರ ವೀತಿಹೋತ್ರ
ನೇತ್ರ ಪ್ರತಿಷ್ಟ ಛತ್ರಗದಾದಿಂದ ಪರ
ಮಿತ್ರಪ್ರಕಾಶ ಶ್ವೇತ ಗಾತ್ರ ಮಾಧವಸೇತು
ಕ್ಷೇತ್ರದಧಿಪತಿ ಧಾತ್ರಿಶಾ ವಿಜಯವಿಠಲರೇಯಾ ಸಾ-
ರ್ವತ್ರರ ಮನೋಹರ ಸುತ್ರಮವಂದ್ಯ ll1ll
ಮಟ್ಟತಾಳ
ಜಗದೇವನ ನೀನೆ ಜಗವಮೋಹಿಸುವಾನೆ
ಯುಗಳ ಚರಣಕ್ಕೆ ನಿಗಳ ಹಾಕಿಸಿಕೊಂಡಬಗೆ ಮತ್ತಾವದು
ಅಗಣಿತ ಹರಬೊಮ್ಮಾದಿಗಳನು ಪಾಶದಲಿ
ನಗುತ ನಗುತಲಿದ್ದು ಬಿಗಿದುಕಟ್ಟುವ ಚ-
ನ್ನಿಗ ಬಲು ಚಪ್ಪಳಿಗನೆ ಅಘಹರ ವಿಜಯವಿಠಲ ಶೇತು ಮಾಧವ
ರಘುಕುಲದಲಿ ಬಂದು ಮಗನಾದ ದೈವ ll2ll
ತ್ರಿವಿಡಿತಾಳ
ಮಧುರಿಯಲ್ಲಿ ಪುಣ್ಯನಿಧಿ ಎಂಬೊ ಭೂಪತಿ
ಉರಿಸಿ ಈ ದೇಶವ ಒದಗಿ ಆಳುತಲಿರಲು
ಉದರದಲಿ ಸಂತಾನದುದಭವ ಕಾಣದೆ
ಮುದದಿಂದಲಿ ಚಿಂತಾ ಉದಧಿಯೊಳಗೆ ಮುಳುಗೆ
ಬದಿಯಲ್ಲಿದ್ದ ಸಾರಹೃದಯರು ತಿಳಿದು, ಪೇ -
ಳಿದರು ಈಸು ಸಂಗತಿಯಾ ಸುದತಿಯಳ ಸಹಿತ
ಅದನರಿದರಸು ಬಂದೊದಗಿ ಗಂಧ ಮಾಧವ
ಬದಿಯಲ್ಲಿ ಸೇರಲು ಪದೊಪದಿಗೆ ಲವಣ
ಉದಧಿ ತೀರದಲ್ಲಿ ಸಿರಿ ಮದನನಯನ ನೆನಸುತ
ಸುಧಾ ಸೇತುಮಾಧವ ವಿಜಯವಿಠಲ ನೆನಿ -
ಸಿದ ಕಾಮ್ಯರ್ಥವನೀವ ಮದಗರ್ವವನ ದಾವ ll3ll
ಅಟ್ಟತಾಳ
ಶಪಥವನಾಡಿ ಸಮೀಪದಲಿ ನಿಲ್ಲಾದೆ
ನೃಪತಿಗೆ ಮಗಳಾದಳಪರಿಮಿತೆ ಬಂದು
ತಪವೆ ಸಿದ್ಧಿಸಿತೆಂದು ನೃಪವಿಂದ್ಯಾವಳಿಗಿ
ಕೃಪೆಯಿಂದರುಹಲು ಉಪಚರಿಸಿದಳಂದೂ
ಗುಪಿತ ಸೇತು ಮಾಧವ ವಿಜಯವಿಠಲ
ಕೃಪಣ ವತ್ಸಲ ಬಂದ ಕಪಟ ಭೂಸುರನಾಗಿ ll4ll
ಆದಿತಾಳ
ನಂದವನದಲ್ಲಿ ದೇವಿ ಇಂದಿರೆ ಸುಖಸುತಿರೆ
ಮುಂದಿಳಿಯಾದಂತೆ ಪೋಗಿ
ಇಂದಿರೇಶಾ ನೃಪತಿಯಾ
ನಂದನಿಯಾ ಕರವ ಪಿಡಿಯೆ
ಸಂದೋಹವೆಲ್ಲಾ ನೀಡಿ ತಂದು ನಿನ್ನ ಕಾಲಗಳಿಗೆ
ಬಂಧಿಸಿದರು ನಿಗಳಾ
ಅಂದು ಮೊದಲಾಗಿ ಇಲ್ಲಿ
ನಿಂದು ಪುಣ್ಯನಿಧಿಗೆ ಒಲಿದು
ವಂದಿಸಿದವರಿಗೆ ಬೇಕೆಂದು ಪಾಲಿಸುವೆ ಬಿಡದೆ
ಇಂದುಧರ ವಂದ್ಯಾ ಸೇತು ಬಂಧ ಮಾಧವನೆ
ತಂದೆ ವಿಜಯವಿಠಲ ಸಂಬಂಧಿಗನೆ ಭಕ್ತರಿಗೆ ll5ll
ಜತೆ
ಕಂಡಮಾತುರದಲ್ಲಿ ಭವದ ಶೃಂಖಳವನ್ನು
ಖಂಡ್ರಿಸುವ ಸೇತು ವಿಜಯವಿಠಲ ಮಾಧವ ll6ll
***
ಕ್ಷೇತ್ರದ ಪರಿಚಯ
ತ್ರಿವಿಡಿತಾಳದಲ್ಲಿ ತಿಳಿಸಿದಂತೆ -
ಶ್ರೀಕ್ಷೇತ್ರ ಮಧುಗಿರಿಯಲ್ಲಿ ಪುಣ್ಯನಿಧಿ ಎನ್ನುವ ರಾಜ ದೇಶವನ್ನು ಆಳ್ತಿದ್ದಾ. ಅವನಿಗೆ ಮಕ್ಕಳು ಆಗಲಿಲ್ಲ. ತುಂಬಾ ಬಾಧೆಪಡ್ತಿದ್ದಾ. ತಪಸ್ಸು ಮಾಡಬೇಕು ಅಂತ ನಿಶ್ಚಯಮಾಡಿ ಸಮುದ್ರದ ತೀರಕ್ಕೆ ಬರ್ತಾನೆ. ಆಗ ಅಲ್ಲಿನ ಋಷಿಗಳು ಶ್ರೀ ರಾಮದೇವರು ತ್ರೇತೆಯಲ್ಲಿ ಬಂದು ಲಂಕಾಪುರಿಗೆ ಹೋಗಲು ಕಪಿಹಿಂಡಿನ ಜೊತೆ ಕೂಡಿ ಈ ಸೇತುವನ್ನು ಕಟ್ಟಿಸಿದ, ಸೇತುವಿನ ಸಹಾಯದಿಂದ ಲಂಕೆಯನ್ನು ಸೇರಿ ದಶಗ್ರೀವನನ್ನು ಸಂಹರಿಸಿ, ಪರಮ ಭಕ್ತನಾದ ವಿಭೀಷಣನನ್ನು ಪೊರೆದಾ ಎನ್ನುವ, ಶ್ರೀರಾಮ ದೇವರ ಮಾಹತ್ಮ್ಯ ಎಲ್ಲಾ ತಿಳಿಸಿ, ಲಕ್ಷ್ಮೀ ದೇವಿಯರೂ, ಕೃತಿದೇವಿಯರೂ ನಿತ್ಯ ವಾಸಿಗಳು ಇಲ್ಲಿ, ಇಲ್ಲಿ ನೀನು ತಪವನ್ನಾಚರಿಸು ಖಂಡಿತಾ ಸಂತಾನಪ್ರಾಪ್ತಿಯಾಗ್ತದೆ ಅಂತ ಹೇಳ್ತಾರೆ. ಹಾಗೆಯೇ ಪುಣ್ಯನಿಧಿ ರಾಜನು ಸೇತುಮಾಧವನನ್ನು ಕೊಂಡಾಡಿ, ಸ್ತುತಿಸಿ, ತಪವನ್ನಾಚರಿಸಿ ಸಂತಾನ ಪಡೆದಾ ..
ಈ ಎಲ್ಲಾ ವಿಷಯಗಳನ್ನು ಅಡಗಿಸುವ ಮೂಲಕ ಶ್ರೀ ವಿಜಯಪ್ರಭುಗಳು ಸ್ತುತಿಮಾಡಿದ ಸೇತುಮಾಧವನ ಅದ್ಭುತ ಸ್ತುತಿಯ ಸುಳಾದಿ ಇದು..
ಜೈ ವಿಜಯರಾಯ
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
No comments:
Post a Comment