Audio by Mrs. Nandini Sripad
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಸತ್ಸಂಗ ಸುಳಾದಿ
( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. )
ರಾಗ ಅಠಾಣ
ಧ್ರುವತಾಳ
ಸುಜನರಾವನ ಮನೆಯಲ್ಲುಂಡು ದಣಿದರೆ
ಅಜನಜನಕನೇವೆ ತೃಪುತನಾದನು ಗಡ
ಅಜನಜನಕ ತೃಪುತನಾದಡೆ ತಡಿಯದೆ
ತ್ರಿಜಗಜ್ಜೀವರುಂಡಂತಾಯಿತು ನೋಡಿರೊ
ಸುಜನರಿಂದುರು ವಿಷಯದ ನಿವೃತ್ತಿ
ಸುಜನ ಸಂಗವೆ ಭವಾಂಬುಧಿಗೆ ಪ್ಲವ
ಪ್ರಸನ್ನವೆಂಕಟ ಕೃಷ್ಣನೆ ಕರ್ಣಾಧಾರ ॥ 1 ॥
ಮಠ್ಯತಾಳ
ಎಲ್ಲಿ ಹರಿಯ ಪೂಜಕರಿದ್ದ ದೇಶ
ಅಲ್ಲಿ ಗಂಗಾದಿ ನದಿಗಳ ನಿವಾಸ
ಅಲ್ಲಿ ಸರ್ವಸಂಪದ ಶ್ರೇಯಸಕ್ಕು
ಸಲ್ಲಲಿತ ಪಾತ್ರ ಲಾಭವೆಲ್ಲಕ್ಕು
ಫುಲ್ಲಲೋಚನ ಪ್ರಸನ್ನವೆಂಕಟ ಕೃಷ್ಣನ
ಬಲ್ಲ ಭಾಗ್ಯನಿಧಿಗಳ ಬರವೆಲ್ಲಿ
ಅಲ್ಲಿ ಸರ್ವಸಂಪದ ಶ್ರೇಯಸಕ್ಕು ॥ 2 ॥
ರೂಪಕತಾಳ
ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ
ಬ್ರಾಹ್ಮರಿದ್ದಲ್ಲಿ ಪರಬ್ರಹ್ಮನಿಪ್ಪನಾಗಿ
ಬೊಮ್ಮನಲ್ಲಿ ವಿಶ್ವವಿಪ್ಪದು ತಪ್ಪುದ
ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ
ಬೊಮ್ಮನ ಪ್ರತಿಮರು ಬ್ರಹ್ಮಜ್ಞ ಬ್ರಾಹ್ಮರು
ಬ್ರಾಹ್ಮರ ದೈವ ಪ್ರಸನ್ವೆಂಕಟ ಕೃಷ್ಣ
ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ ॥ 3 ॥
ಅಟ್ಟತಾಳ
ಪುಷ್ಕರತ್ರಯ ಕುರುಕ್ಷೇತ್ರ ಪುಲ -
ಹಾಶ್ರಮ ಗಯಾ ಪ್ರಯಾಗ ಶ್ರೀ -
ಪುಷ್ಕರಾಕ್ಷನ ದಾಸರಲ್ಲಿ ನೈ -
ಮಿಷಾರಣ್ಯ ಫಲ್ಗುಶೇತು ಕು -
ಶಸ್ಥಳ ಮಧುರಾಪುರವು ಪ್ರಭಾ -
ಸಕ್ಷೇತ್ರವು ವಾರಣಾಸಿ ಬಿಂದುಸರ ಪಂ -
ಪಾಕ್ಷೇತ್ರವು ಶ್ರೀಪ್ರಸನ್ನವೆಂಕಟ ಕೃಷ್ಣ ತೀರ್ಥಚರಣ ಶ್ರೀ -
ಪುಷ್ಕರಾಕ್ಷನ ದಾಸರಲ್ಲಿ ॥ 5 ॥
ಏಕತಾಳ
ನಾರಾಯಣಾಶ್ರಮ ನಂದಾಶ್ರಮ ಸೀ -
ತಾರಾಮಾಶ್ರಮ ಸರ್ವಾಶ್ರಮದಲಿ
ನೈರಂತರವಾಸಕೆ ಸಹಸ್ರಾಧಿಕವು
ಶ್ರೀರಮಣನ ಶರಣರು ಕೊಂಡರೆ
ಮೇರು ಮಹೇಂದ್ರವು ಮಲಯಾದಿ ಕುಲಗಿರಿ
ಭೂರಿಪುಣ್ಯದ ಧರ್ಮಾದಿ ಫಲಸ್ಥಳ
ಕಾರುಣ್ಯನಿಧಿ ಪ್ರಸನ್ನವೆಂಕಟ ಕೃಷ್ಣ
ಚಾರು ಚರಣ ಚಾರಕರೆ ಪಾವನರು ॥ 6 ॥
ಜತೆ
ಸುಜ್ಞಜನರ ಪ್ರಿಯ ಪ್ರಸನ್ವೆಂಕಟಕೃಷ್ಣ
ಸುಜ್ಞರೆ ಹರಿಪ್ರಿಯರಹರೆಂದೆಂದು ॥ 7 ॥
*******
No comments:
Post a Comment