Audio by Mrs. Nandini Sripad
ಶ್ರೀ ವಿಜಯದಾಸರ ಅನುಜರಾದ ಶ್ರೀ ಆನಂದದಾಸಾರ್ಯ ವಿರಚಿತ
(ಹಯವದನವಿಟ್ಠಲ ಅಂಕಿತ)
ಶ್ರೀ ವಿಜಯದಾಸರ ಸಂಕ್ಷೇಪ ಚರಿತ್ರೆ
ರಾಗ ಭೌಳಿ ವಾರ್ಧಿಕ ಷಟ್ಪದಿ
ನೆನೆಸಿದವರಘನಾಶನಾ ॥ ಪ ॥
ನೆನೆಸಿದವರಘನಾಶ ಅನುಮಾನವಿಲ್ಲದಕೆ
ವನಜನಾಭನು ಒಲಿದು ಘನವಾಗಿ ಪಾಲಿಸುವ
ದಿನದಿನದಲಿ ಬಿಡದೆ ವಿಜಯರಾಯರ ದಿವ್ಯ
ಗುಣ ಕರ್ಮ ಕೊಂಡಾಡಿರೊ ॥ ಅ ಪ ॥
ಆದಿಯಲಿ ಸುರಮುನಿಯ ಪಾದಸೇವೆಯ ಮಾಡಿ
ಮೋದದಲಿ ಸುರಲೀಲ ಎಂಬ ಕಪಿ ತ್ರೇತೆಯಲಿ
ಆ ದ್ವಾಪರದಿ ನಿಕಂಪನ ಎಂಬ ನಾಮದಲಿ
ಶ್ರೀಧರನ ಸೇವಿಸುತಿದ್ದು ॥
ಕಾದಿದ್ದ ಕಲಿಯುಗದಿ ಪುರಂದರದಾಸರ
ಸ್ವಾದು ವಚನವ ಕೇಳಿ ತುರುಕರುವು ಆಗಿದ್ದು
ಖೇದವಿಲ್ಲದೆ ಜನಿಸಿ ಬರುತ ಬರುತ ಮತ್ತೆ
ಮೇದಿನೀಸುರ ಜನ್ಮದಿ ॥ 1 ॥
ವರತುಂಗಭದ್ರತೀರದ ಗ್ರಾಮ ಅಶ್ವತ್ಥ -
ನರಸಿಂಹ ಚೀಕನಬರವಿ ಎಂಬ ಗ್ರಾಮದಲಿ
ಇರುತಿಪ್ಪ ಶ್ರೀನಿವಾಸಪ್ಪ ಕೂಸಮ್ಮ ಶ್ರೀ
ಗುರುಸೇವೆ ಮಾಡಿ ಸತತ ॥
ವರವ ಪಡೆದಳೈ ಎರಡೊಂದು ಪುತ್ರರನು
ಹಿರಿಯ ಮಗನಾದ ದಾಸಪ್ಪನೆಂದಿರುವ ನಾಮದಿ
ಕರೆದು ಮುದ್ದಿಸಿ ಸಾಕಿ ಮುಂಜಿ ಮದುವೆ ಮಾಡಿ
ಇರುತಿರಲು ಕೆಲವು ಕಾಲ ॥ 2 ॥
ಲೋಕಜನರಂತೆ ಲೌಕಿಕದೊಳು ಸಂಚರಿಸಿ
ಈ ಕಾಯಗೋಸುಗಾನೇಕ ಜನರ ಸೇವೆ
ಕಾಕಪ್ಪಿಯಾಗಿ ವಸ್ತ್ರಾನ್ನ ಕಾಣದೆ ಮರುಗಿ
ಸಾಕುವಾರಿಲ್ಲೆನುತಲಿ ॥
ಬೇಕಾದ ದೇಶವನು ಚರಿಸುತಿರೆ ಒಂದುಕಡೆ
ತಾಕಿ ಚೋರರು ವಸ್ತ್ರಾದಿಗಳನಪಹರಿಸೆ ಯಿ -
ನ್ಯಾಕೆ ಬಂಧುಬಳಗವೆಂದೆನಿಸುತ ಅಲ್ಲಿಂದ
ನಾಕನದಿಮೀವೆನೆಂದು ॥ 3 ॥
ಹಿರಿಯರಿಗೆ ಪೇಳದಲೆ ತೆರಳಿ ಯಾತ್ರೆಗೆ ಪೋಗಿ
ಎರಡೆಂಟು ವತ್ಸರದ ತರುಳಪ್ರಾಯದಲಿಂದ
ಸರುವ ತೀರ್ಥಕ್ಷೇತ್ರದಲಿ ಮಿಂದು ವಿಂಶತಿ ವ -
ತ್ಸರಕೆ ತಿರುಗಿ ಬಂದು ॥
ವರ ಮಾತೃ ಪಿತೃ ಸಹೋದರರ ಸಹವಾಗಿ
ಬೆರತು ಮಾನವರಂತೆ ಸಂಸಾರವೃತ್ತಿಯಲಿ
ಎರಡೇಳು ವರುಷ ಇರುತಿರ್ದು ಮೆಲ್ಲನೆ ಹರಿ
ವರ ಕೃಪೆಯು ಆಗೆ ತಿಳಿದು ॥ 4 ॥
ಮತ್ತೆ ಪೊರಟರು ಶ್ರೀಉತ್ತಮಶ್ಲೋಕಹರಿ
ಪೆತ್ತ ಗಂಗೆಯ ಸ್ನಾನ ಗಯದಲ್ಲಿ ಪಿಂಡವ -
ನಿತ್ತು ಮರಳಿ ಬಂದು ವಾರಣಾಸಿಯಲ್ಲಿ
ಉತ್ತಮರ ಸಂಗದಿಂದ ॥
ನಿತ್ಯ ಸ್ನಾನ ಸಂಧ್ಯ ಶುಚಿಯಾಗಿ ಮಲಗಿರಲು
ಸತ್ಯವಾಗಿ ಸ್ವಾಪದಲಿ ನರಹರಿ ಪಡೆದ
ಪುತ್ರನೆಬ್ಬಿಸಿದಂತೆ ದಾಸರ ರೂಪಿನಲಿ
ಹತ್ತೆಗರೆದು ಕರುಣದಿ ॥ 5 ॥
ಸುರನದಿಯ ದಾಟಿಸಿ ಆಚೆಯಲಿ ಇರುತಿಪ್ಪ
ವರ ವ್ಯಾಸಕಾಶಿಯ ಪುರದ ದೊರೆಯಾದ
ಸಿರಿವಾಸುದೇವ ಬಲು ಸುರರ ಸಂದಣಿಯೊಳಗೆ
ಮೆರೆವುತಲಿ ಕುಳಿತುಯಿರಲು ॥
ಭರದಿಂದ ತೋರಿಸಿ ಶಿರವಾಗಿ ತುತಿಸೆನುತ
ಕರದು ಪೇಳಿ ಅವರ ಕರದಿಂದ ಆದರಿಸಿ
ಸರಸದಿಂದಲಿ ನೀನು ಹರಿಚರಿತೆ ಪೇಳೆನುತ
ಕರುಣರಸದಿಂದರುಹಲು ॥ 6 ॥
ಎಚ್ಚೆತ್ತುನೋಡೆ ಸಿರಿ ಅಚ್ಯುತನ ಮಹಿಮೆಯನು
ಬಿಚ್ಚುವುದನರಿದೆನು ಹೆಚ್ಚು ಸಂತೋಷದಲಿ
ಕೊಚ್ಚಿಪೋದವು ಮನದಿ ಹೆಚ್ಚಿದ್ದ ಪಾಪಗಳು
ಸ್ವಚ್ಛಚಿತ್ತದಲಿ ಹರಿಯ ॥
ನಿಚ್ಚಮನ ಬಂದಂತೆ ಸಚ್ಚರಿತ ಸಿದ್ಧಾಂತ
ಅಚ್ಚಸುಖತೀರ್ಥಮತ ನೆಚ್ಚಿ ಕವನವ ಪೇಳಿ
ನುಚ್ಚುಮನವುಳ್ಳವರ ತಿದ್ದಿ ಜ್ಞಾನಭಕುತಿ
ಮುಚ್ಚುಗಾಣಿಕೆನಿತ್ತರು ॥ 7 ॥
ತೃತೀಯ ಕಾಶಿಯಾತ್ರೆ ಮಾಡಬಂದಾಗ ಉ -
ನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ
ಅತಿಶಯದಿ ಬಂದು ಮಚ್ಛೋದರಿಯ ನಾಮದಲಿ
ಪ್ರತಿಯಿಲ್ಲದಂತೆ ತೋರೆ ॥
ನುತಿಸಿ ಅಲ್ಲಿಗೆ ಸೇತುಸ್ನಾನಗೈತಂದು
ರತಿಯಿಂದ ಮಾಡಿ ಸರ್ವರನ ಉದ್ಧರಿಸುತ್ತ
ಮಿತಿಯಿಲ್ಲದಲೆ ಕಾಶಿಸೇತು ಪರಿಯಂತರ
ಕಥೆಯಿಂದ ಕೀರ್ತಿಪಡೆದು ॥ 8 ॥
ಲೋಕೋಪಕಾರಕ್ಕೆ ಹದಿನೆಂಟುವತ್ಸರಾ -
ನೇಕ ತೀರ್ಥಯಾತ್ರೆ ತಿರುಗಿ ವೈರಾಗ್ಯದಲಿ
ಶ್ರೀಕಾಂತ ಹರಿಯ ಮನದೊಳಗೆ ಧೇನಿಸಿಕೊಳುತ
ಪ್ರಾಕೃತರ ಸಂಗ ತೊರೆದು ॥
ವೈಕುಂಠಯಾತ್ರೆ ಯುವಸಂವತ್ಸರದ ಶುದ್ಧ
ಆ ಕಾರ್ತಿಕದಶಮಿ ಗುರುವಾರ ಪ್ರಹರದಲಿ
ರಾಕೇಂದುಬಿಂಬ ಹಯವದನವಿಟ್ಠಲನಂಘ್ರಿ
ಜೋಕೆಯಲಿ ಸೇರಿದವರು ॥ 9 ॥
~~~~~~~~~~
ದಿವ್ಯ = ದೇವತೆಗಳ ಪ್ರೀತಿಗೆ ಪಾತ್ರವಾದ ;
ನುಡಿ 1 : ಖೇದವಿಲ್ಲದೆ = ಗರ್ಭವಾಸಾದಿ ದುಃಖಗಳು ನಮ್ಮಂತೆ ಇಲ್ಲದೆ ;
ನುಡಿ 5 : ಹತ್ತೆಗರೆದು = ಹತ್ತಿರ ಕರೆದು ;
ನುಡಿ 6 : ಅವರ ಕಂಠದಿಂದ ಆದರಿಸಿ = ಶ್ರೀಪುರಂದರದಾಸರು ತಮ್ಮ ಕೊನೆಯ ಮಗನಾದ ಶ್ರೀಗುರುಮಧ್ವಪತಿಯನ್ನು ಹೇಗೆ ಆದರಿಸುತ್ತಿದ್ದರೋ ಹಾಗೆಯೇ ;
ನುಡಿ 7 : ಮುಚ್ಚುಗಾಣಿಕೆ = ಶಾಸ್ತ್ರಾರ್ಥ ರಹಸ್ಯ ಕಾಣಿಕೆ ;
ನುಡಿ 9 : ರಾಕೇಂದುಬಿಂಬ = ಪೂರ್ಣಚಂದ್ರನಲ್ಲಿ ಇರುವ ;
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
*******
No comments:
Post a Comment