Audio by Mrs. Nandini Sripad
ಶ್ರೀ ಗೋಪಾಲದಾಸರ ಕೃತಿ
ರಾಗ ಕಲ್ಯಾಣಿ ಆದಿತಾಳ
ಚರಣ ಕಮಲವನ್ನು ನೆನೆವೆ ನಾ । ಗುರು
ಚರಣ ಕಮಲವನ್ನು ನೆನೆವೆ ನಾ ॥ ಪ ॥
ಚರಣ ಕಮಲವನ್ನು ನೆನೆದು ನೆನೆದು । ಹರಿ
ಚರಣ ಕಮಲವ ಅರ್ಚಿಸುವೆ ನಾ ॥ ಅ ಪ ॥
ಸುರದ್ವಿಜ ವೇಷದಿಂದಲಿ ತನ್ನ । ತ್ರೀಣಿ
ಸುರಗಂಗೆಯನ್ನು ಸೇವಿಸಿದನ್ನ ॥
ಸುರಮುನಿಯಿಂದುಪದೇಶನ್ನ । ಭೂ
ಸುರರ ಕರುಣ ಸಂಪಾದಿಸುವನ್ನ ॥ 1 ॥
ಪರಮತಗಳನ್ನು ಖಂಡಿಸಿದನ್ನ । ಸತ್ಯ
ಹರಿಪರನೆಂದು ಸ್ಥಾಪಿಸಿದನ್ನ ॥
ಪರತತ್ವವನ್ನು ಅರುಪಿದನ್ನ । ತನ್ನ
ವರ ಗುರುಮಧ್ವಮತ ಪೊಂದಿದಾತನ್ನ ॥ 2 ॥
ಪರಿಪರಿ ವ್ರತಾಚರಿಸಿದನ್ನ । ಮನೋ
ದುರ್ವ್ಯಸನ ಸಂಹರಿಸಿದನ್ನ ॥
ಪರಿಪರಿ ಯಾತ್ರೆ ಚರಿಸಿದನ್ನ । ನಮ್ಮ
ಗುರುವರ ಶಿರೋರತುನನ್ನ ॥ 3 ॥
ಶುದ್ಧ ಸಂಪ್ರದಾಯಕನನ್ನ । ತತ್ವ
ತಿದ್ದಿ ಮುದ್ದಿ ಮಾಡಿದಾತನ್ನ ॥
ಅದ್ವೈತ ಮತವ ದೂಷಿಸಿ ತನ್ನ । ಸಿರಿ
ಮಧ್ವಮತಕೆ ಭೂಷಿತನ್ನ ॥ 4 ॥
ಪರಸತಿ ಪರಧನ ತೊರೆದನ್ನ । ತನ್ನ
ಪರಿಚಾರಕರಿಗ್ಹಿತ ವರದನ್ನ ॥
ಹರಿನಾಮಾಮೃತವನ್ನು ಸುರಿದನ್ನ । ತನ್ನ
ಸರಿ ಬಂದ ಶಿಷ್ಯರ ಪೊರೆದನ್ನ ॥ 5 ॥
ದೂರ ಧರಿಸಿ ಸರ್ವ ಕಂಡನ್ನ । ನಿಜ
ಪ್ರಾರಬ್ಧ ಭೋಗವ ಉಂಡನ್ನ ॥ ತನ್ನ
ಆರಾಧಿಪರ ಅಘ ಖಂಡನ್ನ । ನಮ್ಮ
ನಾರಾಯಣನ ನಿಜ ತೋಂಡನ್ನ ॥ 6 ॥
ವೈಷ್ಣವ ಸಿದ್ಧಾಂತ ವರದನ್ನ । ಅ -
ವೈಷ್ಣವಾಚಾರವು ತೊರದನ್ನ ॥ ವರ
ವೈಷ್ಣವರಿಗುಪದೇಶನ್ನ । ವೀರ
ವೈಷ್ಣವರ ದಾಸವರ್ಯನ್ನ ॥ 7 ॥
ತಪಸೇ ಸಂಸಾರವೆಂದರಿದನ್ನ । ತನ್ನ
ಸ್ವಪನದಿ ಬಂದು ತೋರಿದನ್ನ ॥
ಉಪದೇಶ ಬಲಿಕೆ ಮಾಡಿದನ್ನ । ನಿಜ
ಉಪದೇಶ ಜಪಿಸಿ ಪೇಳಿದನ್ನ ॥ 8 ॥
ವಿಜಯವಿಠಲನ ದಾಸನ್ನ । ತನ್ನ
ಭಜಿಸುವರಿಗೆ ವರದಾತನ್ನ ॥ ಸಿರಿ
ಅಜ ಗೋಪಾಲವಿಠಲ ದೂತನ್ನ । ನಿತ್ಯ
ಭಜಿಸಿ ಬದುಕುವೆ ಪುಣ್ಯಾತ್ಮನ್ನ ॥ 9 ॥
*******
No comments:
Post a Comment