ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೇಂಕಟೇಶದೇವರ ಹಸ್ತಮಹಿಮಾ ಸುಳಾದಿ
ರಾಗ ಬಿಲಹರಿ
ಝಂಪೆತಾಳ
ಮಣಿ ಮಯಾತಿ ಕಿರಣ ಕಂಕಣ ಶೋಭಿತದ ಹಸ್ತ
ಘನ ಮಹಿಮ ಲಕುಮಿಯ ತಕ್ಕೈಸುವ ಹಸ್ತ
ಮನುಜ ವಿಗ್ರಹನಾಗಿ ನಂದವ್ರಜದಲ್ಲಿ ಮಾ -
ನುನಿಯರ ಮನಿಯಾ ನವನೀತ ಕದ್ದ ಹಸ್ತ
ಅನುವಾರದೊಳು ಫಲ್ಗುಣಗೊಲಿದು ದಿವ್ಯತೇ -
ರನು ಪಿಡಿದು ವಾಜಿಯನು ನಲಿದು ನಡಿಸಿದ ಹಸ್ತ
ಘನಗಿರಿಯ ವಾಸಾ ಸರ್ವೇಶ ತಿರ್ಮಲೇಶ
ಎನಗೊಲಿದಾ ವಿಜಯವಿಟ್ಠಲದೇವನ ಹಸ್ತ ॥ 1 ॥
ಮಟ್ಟತಾಳ
ಬಿಲ್ಲು ಮುರಿದ ಹಸ್ತ ಚಳ್ಳುಗುರಿನ ಹಸ್ತ
ಪಲ್ಲವಾರುಣ ಹಸ್ತ ಮಲ್ಲಮರ್ದನ ಹಸ್ತ
ತಲ್ಲಿ ಸವಿದ ಹಸ್ತ ಜಲಧಿ ಎಚದ ಹಸ್ತ
ಬಲ್ಲಿದ ವಿಜಯವಿಟ್ಠಲದೇವನ ಹಸ್ತ ॥ 2 ॥
ರೂಪಕತಾಳ
ಕಮಲಸಂಭವಗೆ ಆಗಮವನಿತ್ತ ಹಸ್ತ
ರಮಣಿಗೋಸುಗ ಪಾರಿಜಾತ ತಂದ ಹಸ್ತ
ಸುಮನಸರಿಗೆ ಸುಧೆ ಉಣಬಡಿಸಿದ ಹಸ್ತ
ಸಮರದೊಳಗೆ ದಿನಕರನ ಮುಚ್ಚಿದ ಹಸ್ತ
ಹಿಮಕರನ ಪಿಡಿದು ನೀಕ್ಷಿಸಿ ಕಳುಹಿದ ಹಸ್ತ
ಸಮಯಾತ್ಮ ವಿಜಯವಿಟ್ಠಲನ್ನ ಹಸ್ತ
ಅಮಿತಗುಣಪೂರ್ಣವಾದ ಹಸ್ತ ಹೃ -
ತ್ಕಮಲದೊಳಗೆ ನಿಂದು ಪೊಳೆವ ಹಸ್ತ ॥ 3 ॥
ಝಂಪೆತಾಳ
ದಾನವನುದರ ಬಗದು ಕರಳ ಕಿತ್ತಿದ ಹಸ್ತ
ದಾನವನು ಕೈಕೊಂಡ ದಿವ್ಯಹಸ್ತ
ಆನೆಯನು ಸೀಳಿ ರಜಕನ್ನ ಮಡುಹಿದ ಹಸ್ತ
ವಾನರೇಶಗೆ ಬೊಮ್ಮಪದವಿ ಕಟ್ಟಿದ ಹಸ್ತ
ನೀನೆ ಗತಿ ಎಂದೆನಲು ಬಿಡದೆ ಸಾಕುವ ಹಸ್ತ
ಶ್ರೀನಾಥ ವಿಜಯವಿಟ್ಠಲ ತಿಮ್ಮನ ಹಸ್ತ
ಮಾನಸ ಪೂಜೆಯಲಿ ಧ್ಯಾನಕೆ ನಿಲುವ ಹಸ್ತ
ಮಾನಿನಿ ಪತಿವ್ರತದಿ ತೃಪ್ತಿ ಬಡಿಸಿದ ಹಸ್ತ ॥ 4 ॥
ತ್ರಿವಿಡಿತಾಳ
ವಿದುರನ ಮನೆಯಲ್ಲಿ ಕ್ಷುಧಿಗೆ ಪಾಲ್ಗುಡಿದ ಹಸ್ತ
ಸುದರುಶನ ಕಂಬು ಗದ ಪದುಮದ ಹಸ್ತ
ಸುಧಾಮನ ಅವಲಿಗೆ ಚದುರವೊಡ್ಡಿದಾ ಹಸ್ತ
ಇದೆ ಕುಬಜಿಯ ತಿದ್ದಿದ ಸುಂದರ ಹಸ್ತ
ಸುಧಾ ತಿರುವೆಂಗಳಾ ವಿಜಯವಿಟ್ಠಲ ಸೂ -
ಹೃದಯರಿಗೆ ಕೈವಲ್ಯ ತೋರುವ ಹಸ್ತ ॥ 5 ॥
ಅಟ್ಟತಾಳ
ಮುದ್ರಿಗಳಿಂದಲಿ ಬಲುರಮ್ಯವಾದ ಹಸ್ತ
ಅದ್ರಿಯ ನೆಗಹಿದ ಅಗೋಚರವಾದ ಹಸ್ತ
ಕದೃವೆ ತುಳಿವಾಗ ಅಭಿನಲಿದಾ ಹಸ್ತ
ಅಧೃತ ವಿಜಯವಿಟ್ಠಲ ತಿರುವೆಂಗಳ
ಭದ್ರ ಗಜರಾಜ ವರದನ್ನ ಹಸ್ತ ॥ 6 ॥
ಆದಿತಾಳ
ವೈಕುಂಠವೆಂದು ತೋರುವ ಹಸ್ತ
ಲೋಕವ ಪಾಲಿಪ ಲಾವಣ್ಯ ಹಸ್ತ
ಸಾಕಾರವಾದ ಸ್ವತಂತ್ರ ಹಸ್ತ
ಏಕಮಯನ ಹಸ್ತ ಆ ಕಟಿಕರ ಹಸ್ತ
ಶ್ರೀಕರ ವಿಜಯವಿಟ್ಠಲ ಸನ -
ಕಾದಿಗಳ ಪಾಲಿಪ ಹಸ್ತ ॥ 7 ॥
ಜತೆ
ದುಷ್ಟ ಮರ್ದನ ಹಸ್ತ ಶಿಷ್ಟಪಾಲಕ ಹಸ್ತ
ಶ್ರಿಷ್ಟೇಶ ವಿಜಯವಿಟ್ಠಲ ತಿಮ್ಮನ ಹಸ್ತ ॥
*******
No comments:
Post a Comment