ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೆಂಕಟೇಶ ಸ್ತೋತ್ರ ಸುಳಾದಿ
ರಾಗ ನಾಟಿ
ಧ್ರುವತಾಳ
ವೆಂಕಟೇಶನೆ ಚಕ್ರ ಶಂಖ ಕೌಮೋದಕಿ
ಪಂಕಜಾಂಕಿತನೆ ಮೀನಾಂಕನ ಪಿತನೆ ಭ -
ಯಂಕರ ದೈತ್ಯರ ಬಿಂಕವ ತರಿದಕ -
ಳಂಕ ಮಹಿಮ ನಿಶ್ಯಂಕ ಪುಣ್ಯನಾಮ
ಪಂಕಜಭವನಾಗಾ ಕಂಕಣನುತ ಪಾದಾ
ಪಂಕಜ ಶಿರಿವತ್ಸಾಂಕಿತ ಫಣಿ ಪರಿ -
ಯಂಕನೇ ಲಂಕೇಶ ಪೋಷಾ ವೆಂಕಟದೀಶಾ
ಸಂಕಟಹರ ಸುರಲಂಕೃತ ಮನೋಹರ
ಟಂಕಿನೆ ನಾಮದೇವಾ ವಿಜಯವಿಠಲ ಯನ್ನ
ಸೋಂಕಿ ಸಂಸಾರದ ಶೃಂಖಳ ಪರಿಹರಿಸೊ ॥ 1 ॥
ಮಟ್ಟತಾಳ
ನಿರಾಧಾರ ನಿಸ್ಸಂಗ ನಿರಮಲಾಂಗ
ನಿರಾಮಯ ನಿರ್ದೋಷ ನೀರದಭಾಸ
ನಿರಂಜನ ನಿರ್ಗುಣ ನಿರಾವರಣ
ನೀರಜರಮಣಾ ನಿರಾಶ್ರಯನೆ ನಿರ್ವಿಕಲ್ಪ
ನಿರ್ವಿಕಾರಾ ವಿಜಯವಿಠಲ
ತಿರುವೆಂಗಳೇಶ ತಿರುಪತಿವಾಸ ॥ 2 ॥
ತ್ರಿವಿಡಿತಾಳ
ಮಂಗಳ ಮಹಿಮ ತಿರುವೆಂಗಳನಾಥ
ಸುರಂಗಳ ಪಾಲಾ ಜನಂಗಳ ವೊಡಿಯಾ
ಹೆಂಗಳೆಯರ ವಸನಂಗಳಾ ಕದ್ದು ಸು -
ಖಂಗಳಾ ತೋರಿಸಿದ ದಿಕ್ಕಂಗಳೊಳಗೆ
ತಿಂಗಳಾನಂದದಲಿ ಕಂಗಳಿಗೆ ನಿನ್ನ ಪಾ -
ದಂಗಳ ತೋರು ನಾಮಂಗಳ ಉಣಿಸುತ
ಮಂಗಳಕಾಯ ಸಿರಿ ವಿಜಯವಿಠಲ ಹೃದ -
ಯಂಗಳ ಮಧ್ಯ ರೂಪಂಗಳ ನೆಸಗುತಾ ॥ 3 ॥
ಅಟ್ಟತಾಳ
ನಾರಾಯಣ ಕೃಷ್ಣ ಅಚ್ಯುತಾನಂತ
ಘೋರದುರಿತ ಸಂಹಾರ ನಾನಾಕವ -
ತಾರಲಕುಮಿ ರಮಣಾಪತ್ತು ನಾಶನಾ
ಚಾರು ಚರಿತ್ರ ಮುನಿಸ್ತೋತ್ರ ಪಾತ್ರಾ
ಕಾರುಣ್ಯ ನಿಧಿ ತಿಮ್ಮ ವಿಜಯವಿಠಲ ಭವ -
ತಾರಕ ವರಗಿರಿ ವಾಸ ತಿರುಪತೀಶಾ ॥ 4 ॥
ಆದಿತಾಳ
ತಿರುಗುವಂತೆ ಮಾಡು ಮನಸು
ಕರಗುವಂತೆ ಮಾಡು ಮನಸು
ಮಿರಗುವಂತೆ ಮಾಡು ಮನಸು
ಸೊರಗುವಂತೆ ಮಾಡು ಮನಸು
ಸುರಳಿತವಾಗಿ ಈ ಪರಿಯಲ್ಲಿ ಧರ್ಮಗತಿಗೆ
ತಿರುವೆಂಗಳೇಶ ನಮ್ಮ ವಿಜಯವಿಠಲ ಮೇಲ್
ಗಿರಿಯವಾಸ ಸಿರಿ ವೆಂಕಟೇಶ ಮಹಾಮಹಿಮಾ ॥ 5 ॥
ಜತೆ
ಧರೆಯೊಳು ಮೆರೆವ ಸಿರಿ ತಿರುವೆಂಗಳಪ್ಪ
ತಿರುಮಲ ವಿಜಯವಿಠಲ ಜಗನ್ಮೋಹನ ॥
********
No comments:
Post a Comment