Audio by Mrs. Nandini Sripad
ಶ್ರೀ ಪ್ರಾಣದೇವರ ವಿರೋಧಾಭಾಸ ಸ್ತೋತ್ರ ಸುಳಾದಿ
ರಾಗ ತಿಲಂಗ್
ಧ್ರುವತಾಳ
ಜಲಜಸಂಭವನ ಪಟ್ಟಕ್ಕೇರುವ ಗುರುವೆ
ಇಳಿಯೊಳು ಕೋತಿಕಾಯ ಧರಿಸಿ ಪುಟ್ಟಿದ್ದೇನೊ
ಬಲು ಪ್ರಳಯದಲ್ಲಿ ಜಾಗ್ರತನಾಗಿಪ್ಪ ಮರುತ
ಕುಲಿಶಧರನಿಂದ ನೊಂದು ಮೂರ್ಛೆಗೊಂಡದ್ದೇನೊ
ಕಲಕಾಲ ಸಮಸ್ತ ಶ್ರುತಿ ನಿರ್ಣಯವಂತನೆ
ಜಲಜಾಪ್ತನಲ್ಲಿ ನಿಂದು ಓದು ಓದಿದ್ದೇನೊ
ಬಲವಂತನಾಗಿ ಸುರರ ಕೈಯ ಕಪ್ಪವ ಗೊಂಬುವನೆ
ಒಲಿದು ಸುಗ್ರೀವಂಗೆ ದೂತನಾದದ್ದೇನೊ
ಗಳಿಗೆ ಬಿಡದೆ ಶ್ರೀ ಹರಿಯ ಕೂಡ ಇಪ್ಪಗೆ
ತಲೆಬಾಗಿ ರಾಮನ ಕಂಡನೆನಿಸುವದೇನೊ
ಛಲದಿಂದ ಖಳಜಾತಿಯ ಕೊಲಿಸುವ ಹರಿಪ್ರಿಯ
ಹುಲುವಾಲಿಯೊಬ್ಬನ್ನ ಕೊಲ್ಲಿಸಿದ ಬಗೆಯೇನೊ
ಜಲಜಜಾಂಡ ಕರತಲದಲ್ಲಿ ಕಾಂಬ ಪ್ರಾಣ
ಚೆಲುವ ಸೀತೆಗೋಸುಗ ಹುಡುಕಲು ಪೋದದ್ದೇನೊ
ಸಲೆ ಆಲೋಚನೆಯಿಂದ ಎಲ್ಲೆಲ್ಲಿದ್ದ ದ್ರವ್ಯ ನೋಳ್ಪನೆ
ಕುಳಿತು ಕಪಿಗಳ ಕೂಡಾಲೋಚನೆ ಮಾಡಿದ್ದೇನೊ
ಪಳಮಾತ್ರ ಕಾಲ ಭೀತಿಯಿಲ್ಲದ ಪ್ರತಾಪನೆ
ಸುಳಿದೆ ಬಿಡಾಲನಾಗಿ ಲಂಕೆಯೊಳು ಸೋಜಿಗವೇನೊ
ಮಲೆತ ಮಲ್ಲರ ವೈರಿ ವಿಜಯವಿಠ್ಠಲನಂಘ್ರಿ
ಜಲಜಾರ್ಚನೆ ಮಾಳ್ಪ ಸೂತ್ರನಾಮಕವಾಯು ॥ 1 ॥
ಮಟ್ಟತಾಳ
ಹರಿಸಿರಿಗೆ ನಿತ್ಯ ಅವಿಯೋಗ ಚಿಂತಿಪನೆ
ವರ ಕೋಡಗನಾಗಿ ಮುದ್ರೆ ಇತ್ತದ್ದೇನೋ
ಉರಗನೊಡನೆ ಮೇರುಮಗನ ಕಿತ್ತಿದ ಧೀರ
ತರುಜಾತಿಗಳ ಕಿತ್ತು ಬಿಸುಟಿದ್ದೇನೊ
ಕರಣಾಭಿಮಾನಿಗಳ ಜಯಸಿದ ಜಗಜ್ಜೀವ
ನೊರಜು ದಾನವರ ಗೆದ್ದದ್ದು ಮಹಾ ಸೊಬಗೆ
ಸರುವ ಭುವನ ನಿನ್ನ ವಶವಾಗಿ ಇರಲು
ಪುರುಹೂತನವೈರಿ ಕೈಗೆ ಸಿಕ್ಕಿದ್ದೇನೊ
ಪರಮಪುರುಷರಂಗ ವಿಜಯವಿಠ್ಠಲರೇಯನ
ಕರುಣದಿಂದಲಿ ನಮ್ಮನು ಪೊರೆವ ಪ್ರಾಣ ॥ 2 ॥
ತ್ರಿವಿಡಿತಾಳ
ಗರಳ ಧರಿಸಿ ಸುರರ ಕಾಯ್ದ ಕರುಣಾನಿಧಿ
ದುರುಳ ರಾಮಣನ ಸಭೆಯೊಳಂಜಿದ್ದೇನೊ
ಸರಸಿಜಜಾಂಡವ ಸಖನಿಂದ ದಹಿಸುವನೆ
ಭರದಿಂದ ಲಂಕೆಯ ದಹನ ಮಾಡಿದ್ದದ್ದೇನೊ
ನಿರುತ ಅಮೃತ ಉಂಡು ಸುಖಿಸುವ ಸಮರ್ಥ
ಪರಿಪರಿ ಫಲದಿಂದ ಹಸಿವೆ ನೂಕಿದ್ದೇನೊ
ಧರೆ ಚತುರ್ದಶದಲ್ಲಿ ನೀನೆ ಚೇಷ್ಟಪ್ರದನು ವಾ -
ನರ ಬಳಗವನ್ನು ಖ್ಯಾತಿ ಮಾಡಿದ್ದದ್ದೇನೊ
ನೆರದ ಕಟಕವೆಲ್ಲ ಕರತಲದಲ್ಲಿ ದಾಟಿಪನೆ
ಗಿರಿಗಳ ಹೊತ್ತು ತಂದು ಶರಧಿ ಬಿಗಿದಿದ್ದೇನೊ
ಹರಿಯ ರೂಪಾನಂತ ಸಂತತ ಧರಿಪನೆ
ಧುರದೊಳು ರಾಮನ ಪೊತ್ತ ನೆನಿಪದೇನೊ
ಕರದಲ್ಲಿ ಮಹಾಗದೆ ಪಿಡಿದಿಪ್ಪ ಪುರುಷನೆ
ಗಿರಿತರು ಶಾಖದಿಂದ ರಣವ ಮಾಡಿದ್ದೇನೊ
ಸರ್ವನಿಯಾಮಕನಾಗಿ ವ್ಯಾಪಾರ ಮಾಡಿಪನೆ
ಕರೆದು ವಿಭೀಷಣನ ಪ್ರಶ್ನೆ ಕೇಳುವದೇನೊ
ಭರಣ ಮಿನಗುವ ವಸನದಿಂದೊಪ್ಪುವ
ವರ ಕಾಪೀನವ ಹಾಕಿ ಚರಿಸಿದ ಬಗೆ ಏನೊ
ತರಣಿವಂಶಜ ರಾಮ ವಿಜಯವಿಠ್ಠಲರೇಯನ
ಚರಿತೆಯಂದದಿ ನಿನ್ನ ಚರಿಯ ತೋರಿದ ಹನುಮ ॥ 3 ॥
ಅಟ್ಟತಾಳ
ದ್ವಿತಿಯ ಕೂರ್ಮನಾಗಿ ಜಗವ ಪೊತ್ತ ಶಕ್ತ
ಭೃತ ಸಂಜೀವನಾದ್ರಿ ಭಾರತರವೇನೊ
ಸತತ ಆರಬ್ಧಾಂತಗಾಮಿ ನೀನಾಗಿದ್ದು
ಜಿತಶಕ್ರ ಪಾಶದೊಳಗೆ ಬಿದ್ದದ್ದೇನೊ
ಅತಿಶಯ ಜ್ಞಾನದಲ್ಲಿಪ್ಪ ಪವನನೆ
ಖತಿಗೊಂಡು ಮಾಯಾ ಸೀತೆಗೆ ಚಿಂತಿಸಿದ್ದೇನೊ
ಅತಿಶಯ ಕೋಟಿ ರಾವಣ ಭಂಗ ನೆರೆದು
ಪತಿಯ ಬಾಣದಲಿಂದ ಅವನ ಕೊಲ್ಲಿಸಿದ್ದೇನೊ
ಶ್ರುತಿತತಿವಿನುತ ಶ್ರೀವಿಜಯವಿಠ್ಠಲನ್ನ
ಸ್ತುತಿಸಿ ಕೊಳುತ ಹರಿಗೆ ಪ್ರೀತನೆನಿಸಿದ ಪ್ರಾಣ ॥ 4 ॥
ಆದಿತಾಳ
ಆ ಮಹಾದೇವಾದ್ಯರಿಗೆ ಪಟ್ಟಕೊಡಿಸಿದವನೆ
ಭೂಮಿಯೊಳಗೆ ವಿಭೀಷಣಗೆ ಪಟ್ಟ ಕೊಡಿಸಿದ್ದು ಘನವೆ
ರೋಮ ರೋಮಕೆ ಕೋಟಿ ಲಿಂಗ ಉದರಿಸಿದವನೆ
ಆ ಮಹಾಕಾಶಿಗೆ ಲಿಂಗ ತರಲು ಪೋದ ಬಗೆಯೇನೊ
ಕಾಮಿಸಿದಲ್ಲಿ ವ್ಯಾಪ್ತನಾಗಿ ಇರುವನೆ ಸು -
ತ್ರಾಮ ಸುತನ ರಥದಲ್ಲಿ ನಿಂತದ್ದೇನೊ
ಕೋಮಲಾಂಗನೆ ನಿನ್ನ ವರ್ಣಿಸಲು ಭಾರತಿಗರಿದು
ಈ ಮರ್ತ್ಯಲೋಕದಲ್ಲಿ ಈ ರೂಪವಾದದ್ದೇನೊ
ಸೋಮಾರ್ಕ ಸೋಲಿಸುವ ಮಾಣಿಕ್ಯ ಮನೆಯಿರಲು
ಧಾಮ ಮಾಡಿದ್ದೇನೊ ಕಿಂಪುರುಷ ಖಂಡದೊಳಗೆ
ಸಾಮಗಾಯನಲೋಲ ವಿಜಯವಿಠ್ಠಲರೇಯ
ಸ್ವಾಮಿಕಾರ್ಯ ಧುರಂಧರ್ಯ ಭಕ್ತ ಸೌಕರ್ಯ ॥ 5 ॥
ಜತೆ
ಒಡೆಯನಾಜ್ಞವ ತಾಳಿ ಕಾರ್ಯ ಮಾಡಿದ ಗುರುವೆ
ಕಡುಸಮರ್ಥ ವಿಜಯವಿಠ್ಠಲನ ನಿಜದಾಸ ॥
**********
No comments:
Post a Comment