ಶ್ರೀ ವಾದಿರಾಜ ಗುರುಸಾರ್ವಭೌಮ ವಿರಚಿತ ಉಡುಪಿ ಶ್ರೀಕೃಷ್ಣ ವೈಭವ
ರಾಗ ಆರಭಿ ಮಿಶ್ರಛಾಪುತಾಳ
ಭಾಮಿನಿ ಷಟ್ಪದಿ
ಇಂದ್ರಲೋಕವ ಪೋಲ್ವ ದ್ವಾರಕೆ ।
ಯಿಂದ ನಮ್ಮನು ಸಲಹಲೋಸುಗ ।
ಸಿಂಧುವಿನ ಮಾರ್ಗದಲಿ ತೌಳವ ಜನರ ದೇಶಕ್ಕೆ ।
ಬಂದು ಮಧ್ವಾಚಾರ್ಯರಾ ಕೈ -
ಯಿಂದ ಪೂಜೆಯಗೊಂಬ ಕೃಷ್ಣನ ।
ಮಂದಹಾಸದ ಮುದ್ದುಮೊಗ ಸೇವಿಪಗೆ ಸಂಪದವು ॥ 1 ॥
ಒಂದು ಕರದಲಿ ನೇಣಸಿರಿ ಮ - ।
ತ್ತೊಂದರಲಿ ಕಡೆಗೋಲು ವರಮಣಿ ।
ಯಿಂದ ಶೋಭಿಪ ನಾಭಿ ವಕ್ಷ ತಾವರೆ ಕಿರಿಡೊಳ್ಳು ।
ಚಂದ್ರನಂದದಿ ವದನ ಸಮದಲಿ ।
ನಿಂದ ಪಾದ ಮನೋಹರ ಮುರು ।
ದ್ವಂದ್ವ ಶ್ರೀಕೃಷ್ಣನ ಮೂರ್ತಿಯ ನೋಳ್ಪರ ನಯನ ಸುಕೃತಫಲ ॥ 2 ॥
ನಿತ್ಯದಲಿ ಗೋಘೃತದ ಮಜ್ಜನ ।
ಮತ್ತೆ ಸೂಕ್ತ ಸ್ನಾನ ತದನು ಪ - ।
ವಿತ್ರ ಮಂತ್ರ ವಿಚಿತ್ರ ತರವಹ ಕಲಶದಭಿಷೇಕ ।
ವಸ್ತ್ರಗಂಧ ವಿಭೂಷಣಂಗಳ ।
ವಿಸ್ತರಿಪ ಶ್ರೀತುಲಸಿ ಪುಷ್ಪದಿ ।
ಭಕ್ತಿಭರಿತರು ಮಾಡುವಾರಾಧನೆಯನೇನೆಂಬೆ ॥ 3 ॥
ಸುತ್ತ ಸುಪ್ತಾವರಣದರ್ಚನೆ ।
ವಿಸ್ತರಿಪ ಸ್ತೋತ್ರಗಳ ಗಾನ ವಿ - ।
ಚಿತ್ರ ನೈವೇದ್ಯವು ಸುವೀಳೆಯ ಧೂಪ ದೀಪಗಳು ।
ರತ್ನದಾರುತಿಗಳ ಸಂಭ್ರಮಾ ।
ಛತ್ರ ಚಾಮರ ನೃತ್ಯಗೀತಾ - ।
ದ್ಯುತ್ಸವಗಳೊಪ್ಪಿಹ ದೇವನ ಮುಂದೆ ದಿನದಿನದಿ ॥ 4 ॥
ಅಪ್ಪ ಮೊದಲಾದಮಲ ಭಕ್ಷ್ಯವ ।
ತುಪ್ಪ ಬೆರೆಸಿದ ಪಾಯಸವ ಸವಿ - ।
ದೊಳ್ಪ ಶಾಕಗುಡಗಳನು ಕಂದರ್ಪನಪ್ಪನಿಗೆ ।
ಅರ್ಪಿಸುವರನುದಿನದಿ ರಸ ಕೂ - ।
ಡಿಪ್ಪ ಪಕ್ವಫಲಾದಿಗಳು ರಮೆ ।
ಯಪ್ಪಿಕೊಂಬಿರ್ಪ್ಪಚ್ಯುತಗೆ ಪೂಜಿಸುವ ಯೋಗಿಗಳು ॥ 5 ॥
ಮೆರೆವ ದೀಪ ಸಹಸ್ರ ಅಚ್ಯುತ - ।
ನೆರಡು ಭಾಗದೊಳಿಂದ್ರ ನೀಲ ।
ಸ್ಫುರದಮಲ ಮಣಿಗಳಂತಪ್ಪಿಹ ವೊಪ್ಪಿಹವು ।
ದುರಿತರಾಶಿಗಳವನ ಸೇವಾ ।
ನಿರತ ಸುಜನರ ತನುಮನಂಗಳ ।
ತೊರದಿಹುದು ಸಿರಿನೆಲಸಿಹನು ಶ್ರೀಕೃಷ್ಣನ ಮನೆ ಶೃಂಗಾರ ॥ 6 ॥
ತೊಟ್ಟ ಭೂಷಣವಿಟ್ಟ ಮಕುಟವ - ।
ನುಟ್ಟ ಪಟ್ಟೆಯ ಮುಟ್ಟಿ ತ್ರಿಗುಣವ ।
ಬಿಟ್ಟ ದುರಿತವ ಕೊಟ್ಟ ನೀ ಶುಭ ವಾಕ್ಯಗಳ ನಮಗೆ ।
ನಿಷ್ಠ ಸುಜನರು ತಟ್ಟನೆ ಮನ - ।
ಮುಟ್ಟಿ ನೆನೆವರಿಗಿಷ್ಟ ಅಖಿಳವ ।
ಕೊಟ್ಟು ಸಲಹದೆ ಸೃಷ್ಟಿಯೊಳು ನೀನಿಷ್ಟೊ ಗುಣಪುಷ್ಪ ॥ 7 ॥
ಏನನೆಂಬೆನು ಕೃಷ್ಣ ದೀನರ ದೊರೆಯು ।
ನೀನೆಂದಾದ ಕಾರಣ ।
ಮಾನವರ ಸುರಧೇನುತನ ನಿನಗಿಂದು ಸೇರಿತಲ ।
ಹೀನತೆಯ ಪರಿಹರಿಸಿ ಭಾಗ್ಯಾಂ ।
ಭೋ ನಿಧಿಯೆ ನಿಜರ್ಗೀವ ನಿನ್ನ ಮ - ।
ಹಾನುಭಾವದ ಬಲುಮೆಗೆಣೆಗಾಣೆನು ಮಹಾಪ್ರಭುವೆ ॥ 8 ॥
ಭಾಪು ದಿವಿಜರ ದೇವರಾಯನೆ ।
ಭಾಪು ಭಜಕರಭೀಷ್ಟವೀವನೆ ।
ಭಾಪು ಹರಿನೀಲೋತ್ಪಲನೆ ಶ್ಯಾಮಲನೆ ಕೋಮಲನೆ ।
ಭಾಪು ಹಯವದನಾ ಖಿಲೇಶನೆ ।
ಭಾಪು ಸುಜನರ ಪಾಪ ನಾಶನ ।
ಭಾಪು ಕೃಷ್ಣಾಲಸ ತ್ರೈಪಾಲಕನೆ ಬಾಲಕನೆ ॥ 9 ॥
*********
No comments:
Post a Comment