Monday, 9 December 2019

ನಿತ್ಯ ಸಂತೃಪ್ತ vijaya vittala ankita suladi ಭೋಜನವಿಧಿ ಸುಳಾದಿ NITYA SANTRUPTA BHOJANA VIDHI SULADI



Audio by Mrs. Nandini Sripad

ನಿತ್ಯ ಸಂತೃಪ್ತ ಸರ್ವಸಾರಭೋಕ್ತ  ಭೋಜನವಿಧಿ ಸುಳಾದಿ
Nitya santrupta sarvasaarabhokta

ಶ್ರೀ ವಿಜಯದಾಸಾರ್ಯ ವಿರಚಿತ 

 ಭೋಜನವಿಧಿ ಸುಳಾದಿ 

(ಕರ್ಮದ ಮರ್ಮವನ್ನರಿತು ಹರಿಗೆ ಸಮರ್ಪಿಸುತ್ತ, ಆತ್ಮಯಜ್ಞ ರೂಪವಾದ ಪ್ರಾಣಾಗ್ನಿಹೋತ್ರವನ್ನು ಮಾಡು. ಶುದ್ಧಾನ್ನ ಭೋಜನವನ್ನು ವಿಚಾರಪೂರ್ವಕ ಭುಂಜಿಸಿದರೆ , ಸದ್ಬುದ್ಧಿ ದ್ವಾರಾ ಜ್ಞಾನ ಭಕುತಿ ವಿರಕ್ತಿ ಮುಕುತಿ ದೊರೆಯುವುದು.) 

 ರಾಗ ತೋಡಿ 

 ಧ್ರುವತಾಳ 

ನಿತ್ಯ ಸಂತೃಪ್ತ ಸರ್ವಸಾರಭೋಕ್ತ ಪುರು -
ಷೋತ್ತಮ ಅಚಿಂತ್ಯಮಹಿಮ ಭಕ್ತವತ್ಸಲ
ಸತ್ಯಸಂಕಲ್ಪ ಹರಿಗೆ ನಾನಾ ಉಪಚಾರದಿಂದ
ಭಕ್ತಿ ವೆಗ್ಗಳನಾಗಿ ಮಜ್ಜನಾದಿಯ ಮಾಡಿ
ಚಿತ್ತ ನಿರ್ಮಳದಿಂದ ನಾನಾ ಸೌಖ್ಯವಾಗಿದ್ದ
ಉತ್ತಮ ಪದಾರ್ಥ ಸುಪಕ್ವ ಗೈಸಿ
ಆತ್ಮನ ಮುಂಭಾಗದಲ್ಲಿ ಇಡಿಸಿ ಸ್ತೋತ್ರಗಳಿಂದ
ತುತ್ತು ಸಮರ್ಪಿಸಿ ಧ್ಯಾನ ಮಾಡಿ
ತೆತ್ತಿಗ ನಾನೆಂದು ಅಡಿಗಡಿಗೆ ಹಿಗ್ಗಿ ತನ್ನ
ಸತ್ವ ಪ್ರವೃತ್ತಿಗಳಿಗೆ ಹರಿ ಎಂದು
ವಿಸ್ತಾರವಾಗಿ ತಿಳಿದು ನಿಜವಾಗಿ ಶ್ರೀಬ್ರಹ್ಮ ದೇ -
ವತ್ತಿಗಳಿಗೆ ಸನಕಾದಿಗಳಿಗೆ
ಮತ್ತೆ ಶುಕ ಮೊದಲಾದ ಅವತಾರ ಜನಕ್ಕೆ ತಾ -
ರತ್ತಮ್ಯದಿಂದ ಕೊಡಲಿ ಬೇಕು ಮನುಜಾ
ಇತ್ತರೆ ನಿನ್ನಿಂದ ಅವರವರು ಕೈಕೊಂಡು ಮಾ -
ರುತ್ತ ಪರಿಯಂತ ಒಪ್ಪಿಸಿ ಕೊಡುವರು
ಅತ್ತಣ ಕಾರ್ಯ ಕೇಳು ಲಕುಮಿ ದ್ವಾರದಿಂದ
ಉತ್ತಮ ಶ್ಲೋಕ ಕೈಕೊಂಬನಯ್ಯಾ
ಪ್ರತ್ತೀಕಾದಲ್ಲಿ ಮನಸು ಅಗ್ನಿಯಲ್ಲಿ ವಾಕು
ಆತ್ಮದಲ್ಲಿ ಗಾತ್ರ ಧ್ಯಾನ ಅವದಾನ ಭುಕ್ತಿ
ಚಿತ್ರ ವಿಚಿತ್ರವುಂಟು ಇದರೊಳಗನುಭವ
ಪುತ್ರಜನಕರೊಬ್ಬ ಸುಂದರ ನಾರಿಯ
ಹತ್ತಿಲಿ ಇದ್ದವಳ ಸ್ಪರ್ಶ ಮಾಡಿದರಾಗೆ
ಇತ್ತಂಡ ಮಾನವರ ಮನಸಿನ ಪ್ರೇಮ ಬೇರೆ
ಮಾತೃ ಭಾವವೊಬ್ಬನಿಗೆ ಪತ್ನಿ ಭಾವವೊಬ್ಬನಿಗೆ
ಅತ್ಯಂತವಾಗಿಪ್ಪದು ವಿವೇಕರಿಗೆ
ತತ್ವೇಶ ಜೇವಿಗೆಲ್ಲಾ ಸಮಸ್ತ ರಸದ ಜ್ಞಾನ
ಪ್ರತ್ಯೇಕ ಪ್ರತ್ಯೇಕ ಇಪ್ಪದಯ್ಯಾ
ಚಿತ್ತದಲ್ಲಿ ನೋಡು ನೋಡುವದನುಭವ
ಮಾತ್ರ ಬೇರೆ ಉಂಟು ವಿರೋಧವಿಲ್ಲಾ
ಹೊತ್ತು ಹೊತ್ತಿಗೆ ಇದನೆ ಸ್ಮರಿಸಿ ವೇಗದಿಂದಲಿ
ತೀರ್ಥ ದಾನವ ಮಾಡಿ ಜ್ಞಾನಿಗಳೊಡನೆ
ಸುತ್ತು ಬಳಗದ ಕೂಡ ಕುಳಿತು ಭಗವತ್ಪದಿಯ
ಪೆತ್ತ ದೇವನ್ನ ಸ್ಮರಣೆ ಮಾಡಿಕೊಳುತ
ಆತ್ಮ ಯಜ್ಞವು ಮಾಡು ತುಲಸಿ ಮಿಶ್ರಿತದಲ್ಲಿ
ಹತ್ತೆಂಟು ದಳ ನಿನಗೆ ಸತತ ಬೇಕು
ಹತ್ತದೆನ್ನಸಲ್ಲಾ ಕ್ಲೇಶಾದಿ ದೋಷಗಳಿಂದ
ಮೃತ್ಯು ಬರುತಿರಲು ನಿವಾರಣ
ಸತ್ತ ಮಾನವನೆನ್ನಿ ತುಲಸಿ ಮಿಶ್ರಿತ ರಹಿತ
ತುತ್ತು ತೆಗೆದುಕೊಂಡರೆ ವಮನ ಸರಿಯೋ
ಎತ್ತಲಾದರೇನು ತುಲಸಿ ಕರ್ನಂಗಳಲ್ಲಿ
ನಿತ್ಯ ಧರಿಸಿದ್ದರು ಆ ಮನುಜ
ಉತ್ತಮನೆ ಸರಿ ಚಂಡಾಲ ಸ್ಪರಶವಾಗೆ
ತತ್ತಳಗೊಳಿಸದೆ ಪವಿತ್ರ ಕಾಣೊ
ಅರ್ಥಿಪುರುಷ ನಮ್ಮ ವಿಜಯವಿಟ್ಠಲರೇಯನು 
ಮುಕ್ತಿಯ ಕೊಡುವನು ಈ ಪರಿ ಚಿಂತಿಸಿದರೆ ॥ 1 ॥ 

 ಮಟ್ಟತಾಳ 

ಭೋಜನ ಪಾತ್ರೆಯ ಮಂಡಿಸಿ ಅದರೊಳಗೆ
ರಾಜಿಸುವ ಅನ್ನ ಶಾಖಾದಿಗಳಿಡಲು
ತೇಜದ ತರುವಾಯ ಪುಟ್ಟಿದ ಭೂತವನ್ನು
ಭ್ರಾಜಿಸುವ ಕರತಳದಲ್ಲಿ ಇಟ್ಟು
ಬೀಜ ಭೂರಾದಿ ತ್ರಿ ಚತುರವಿಂಶತಿ ವರ್ಣದಿ
ರಾಜೀವ ನೇತ್ರನ್ನ ನೆನೆದು ಅಭಿಮಂತ್ರಿಸಿ
ತೇಜ ಮೊದಲಾದ ಪದಾರ್ಥಗಳ ಮೇಲೆ
ಮಾಜದೆ ಪ್ರೋಕ್ಷಿಸಿ ಮೌನ ಮಾನಸದಲ್ಲಿ
ವಾಜಿವದನ ಭಾರ್ಗವ ಕೃಷ್ಣದೇವರ ನೆನೆದು
ಮೂಜಗದೊಳಗೆ ಚೇತನ ಜಡದ ವ್ಯಾಪ್ತಿಯ ತಿಳಿದು
ಸೋಜಿಗ ಸೋಜಿಗವೊ ಭಗವಂತನ ಮಹಿಮೆ
ವಾಜಿಪೇಯ ಯಜ್ಞ ಮಾಡಿದ ಫಲ ಬರುವದು ಜನಕೆ
ಭೋಜಕುಲಾಧೀಶ ವಿಜಯವಿಟ್ಠಲ ಮೆಚ್ಚುವ
ಭೋಜನ ವಿಧಿಯನ್ನು ತಿಳಿದರೆ ಇಹಪರದೀ ॥ 2 ॥ 

 ತ್ರಿವಿಡಿತಾಳ 

ಸಾರ ಹೃದಯನಾಗಿ ಶುದ್ಧ ಸಾಲಿಗ್ರಾಮದ
ವಾರಿಯ ಹಸ್ತದೊಳಗೆ ಧರಿಸಿ
ನಾರಾಯಣ ಮಂತ್ರದಿಂದ ಅನ್ನಕ್ಕೆ ಹಾಕಿ
ಆರೆರಡಾವರ್ತಿಯಲ್ಲಿ ಜಪಿಸಿ
ನೀರು ತೆಗೆದುಕೊಂಡು ಸುತ್ತು ತಿರುಹಿ ಮನೋ -
ಹರದಿಂದಲಿ ಮೂರು ಲೋಕದ ಶಬ್ದ
ತಾರಕ ಮಂತ್ರದಿಂದ ತ್ರಿಪಾದದೇವಿಯ
ಹಾರೈಸು ಪಾತ್ರಿಗೆ ಚತುರಾಂಗಲಿ ಬಿಟ್ಟು
ಬೇರೆ ಬೇರೆ ಇದ್ದ ಸಂಪ್ರದಾಯಕ ತಿಳಿದು
ಪೂರೈಸು ಚಿತ್ರಗುಪ್ತಾದ್ಯರಿಗೆ ಆಹಾರ
ಬೋರೆ ಫಲದನಿತು ಕೊಟ್ಟು ನೀರೆರೆದು ವಿ -
ಚಾರವ ಗೈಯ್ಯೋ ಆಹುತಿಕೊಂಬೋ ದಿಕ್ಕುಗಳು
ಆರಂಭದಲ್ಲಿ ತಕ್ಕೋ ಅಂಗುಟಿಕಾ ತರ್ಜನಿ ಮಧ್ಯಮಾ
ಮೂರು ಬೆರಳಿನಿಂದ ಪೂರ್ವಭಾಗದ ಅನ್ನ
ಸಾರಿದೆ ಮಧ್ಯಮಾ ಅನಾಮಿಕಾ ಅಂಗುಟದಿಂದ
ಧೀರ ದಕ್ಷಿಣ ದಿಕ್ಕಿನಲ್ಲಿ ಗ್ರಾಹ್ಯವೋ
ಮೀರದಲೆ ಅನಾಮಿಕಾ ಅಂಗುಟದಿಂದ
ನೀರೇಶ ದೇವನ್ನ ದಿಕ್ಕಿಲಿ ಸಾಧಿಸಿರೊ
ತೋರುವ ಕನಿಷ್ಟ ತರ್ಜನ್ಯಾಂಗುಟದಿಂದ
ಮಾರಾರಿ ಸಖನ ದಿಕ್ಕಿಲಿ ಕೊಳ್ಳಿರೋ
ಈ ರೀತಿ ಆದ ಮೇಲೆ ಪಂಚಾಂಗುಲಿಯಿಂದ
ಸೇವಿಸಿರೊ ಊರ್ಧ್ವ ಭಾಗದ ಓದನ
ಮಾರುತ ಐವರು ಪ್ರಾಣಾಪಾನಾದ್ಯರ
ಶಾರೀರದೊಳು ಸ್ಥಾನ ಭೇದ ತಿಳಿದು
ಮೋರೆ ಹೃದಯ ನಾಭಿ ದಕ್ಷಿಣೋತ್ತರದಲ್ಲಿ
ಮಾರುತ ಸಖನೊಳಗೆ ಹೋಮಿಸುವದು
ಸಾರಿರಯ್ಯ ಶಾಂತಿ ಕೃತಿ ಜಯಾ ಮಾಯಾ ಲಕ್ಷ್ಮಿ ಮನೋ -
ಹರ ಮೂರ್ತಿಗಳು ಅನಿರುದ್ಧಾದಿಯ
ಮೂರೆರಡು ರೂಪಗಳು ಸ್ಮರಿಸಿ ಪ್ರಾಣಾಹುತಿ
ದ್ವಾರದಿಂದಲಿ ತತ್ತ್ವಜನ ಸಮೇತದಲ್ಲಿ
ವಾರವಾರಕ್ಕೆ ವೈಶ್ವಾನರ ನಾಮದಿಂದಲಿ
ಬೇರೆ ಬೇರೆ ಪೆಸರುಕೊಂಡು ಸುಖಿಸು
ಆರಾಧನೆಯೆಂದು ತಿಳಿದು ರೇಚಕ ಕ್ರಮದಿ
ವಾರಿಜಭವ ವಿಷ್ಣು ಮಹಾದೇವರ
ಮೂರು ನಾಡಿಯಲ್ಲಿ ನೋಡು ಪಿಂಗಳ ಇಡಾ
ಧಾರಳ ಸುಷುಮ್ನ ನಾಡಿ ಮಧ್ಯದಲ್ಲಿ
ಮಾರುತನ್ನ ಬಿಗಿದು ನಿಲ್ಲಿಸಿ ಮಾತಾಡದೆ
ನಾರಾಯಣ ಕೃಷ್ಣ ಎನ್ನಿರೊ
ನೀರು ಕುಡಿದು ಶಿಖಾಗ್ರಂಥಿಯನ್ನು ಬಿಟ್ಟು ವಿ -
ಸ್ತಾರವಾಗಿ ಮಧ್ವಾಂತರ್ಯಾಮಿಯ
ಸಾರೆ ದೂರದಲ್ಲಿದ್ದ ಲೋಕ ಕೇಳುವಂತೆ
ವೈರಾಗ್ಯದಿಂದ ಉಣಲಿಬೇಕು
ಕಾರುಣ್ಯವಂತರಾದ ಅಭಿಮಾನಿಗಳ
ಭಾರಿ ಭಾರಿಗೆ ಅನ್ನಗಳಲ್ಲಿ ನೆನಿಯೊ
ನೀರು ಕಣ್ಣಿಗೆ ತೊಡಿಯೊ ಶೂದ್ರಾದಿ ಪ್ರತಿಗ್ರಹ -
ಪಾರ ದೋಷಗಳೆಲ್ಲ ಪೋಗುವಂತೆ
ಶರೀರ ಬಲು ಸ್ಥೂಲವಾಗಬೇಕೆಂದು ಆ -
ಹಾರ ಮೆಲ್ಲದಿರೂ ಮೂಢ ಮನುಜಾ
ಧಾರುಣಿಯೊಳಗೆ ಶ್ರೀಹರಿ ಸೇವೆಗೋಸುಗ
ಆರು ಬಗೆಯ ರಸ ಸವಿಯೊ ಹರಿ ಪ್ರೇರಣೆ
ಆರಿಗೆ ದೊರಕದು ವಿಜಯವಿಟ್ಠಲರೇಯನ 
ಕಾರುಣ್ಯ ಪಡೆದರೆ ಬಲು ಸುಲಭ ಸುಜನಕ್ಕೇ ॥ 3 ॥ 

 ಅಟ್ಟತಾಳ 

ಹೊತ್ತು ತಿಳಿದು ಎದ್ದು ಜಗ ಎಚ್ಚರಿಸುವ ಜೀವ
ತತ್ತಿಯ ಪ್ರಮಾಣ ಕವಳನ್ನು ಮಾಡಿ
ಆತ್ಮ ಈಶ್ವರನೆಂದು ಧ್ಯಾನಂಗತನಾಗಿ
ಚಿತ್ತ ನಿರ್ಮಳದಿಂದ ಚತುರ್ವಿಧ ಅನ್ನ ಮೂ -
ವತ್ತೆರಡು ತುತ್ತು ಅನುಸಂಧಾನದಿಂದ
ಎತ್ತಿ ಕ್ರಮಾನುಸಾರ ಒಂದೊಂದು ಕವಳ ನುಂ -
ಗುತ್ತ ಶ್ರೀನಾರಾಯಣ ಹರಿ ರಾಮ ಗೋವಿಂದ
ಸತ್ಯಾವಲ್ಲಭ ಸರ್ವಸ್ವತಂತ್ರ ಚಿನುಮಯ
ಮೂರ್ತಿ ತ್ರಿಲೋಕೇಶ ನಾನಾವತಾರ ದೇ -
ವೋತ್ತಮನೆ ಬಿಂಬ ತದಾಕಾರ ಅಖಂಡ
ವ್ಯಾಪ್ತ ರೂಪನೆಂದು ತನ್ನ ಮೊದಲು ಮಾಡಿ
ಸತ್ವಾದಿ ಚೇತನರಲ್ಲಿ ತಿಳಿಯಬೇಕು
ಆತ್ಮ ಯಜ್ಞವಿದು ಒಂದೊಂದು ತುತ್ತು ಮೂ -
ವತ್ತೆರಡು ಕಕ್ಷಾ ತಾರತಮ್ಯದಿಂದ
ಇತ್ತರಾದಡೆ ಒಬ್ಬ ಭಗವಂತ
ತೃಪ್ತನಾಹೋನು ಕಾಣೊ ವಿಶ್ವಾದಿ ನಾಮದಲ್ಲಿ
ಆಪ್ತಕಾಮನು ನಮ್ಮ ಭಕ್ತಿಗೆ ವಶವಾಗಿ
ಭುಕ್ತಿಯ ಕೈಕೊಂಬ ಅಚಿಂತ್ಯ ಮಹಿಮನೊ
ಸತ್ಯವೊ ಇದೆ ಸರಿಯೆ ಪ್ರಣವ ಸಹಿತ ಗಾ -
ಯಿತ್ರಿ ಮಂತ್ರದ ಪ್ರತಿಪಾದ್ಯ ವರಣಾಧಿಷ್ಠಾನ
ಮೂರ್ತಿಗಳುಂಟು ದ್ವಾತ್ರಿಂಶತಿ ಗಣನೆ
ಎತ್ತಲಾದರೇನು ಹರಿ ಸ್ಮರಣೆ ಪೂರ್ವಕ
ತುತ್ತು ತೆಗೆದುಕೊಂಡು ಧನ್ಯನಾಗೆಲೊ ಜೀವಾ
ಉತ್ತಮೋತ್ತಮ ನಮ್ಮ ವಿಜಯವಿಟ್ಠಲನ್ನ 
ಭೃತ್ಯನಾಗಿ ಬಾಳೊ ಜನ್ಮ ಜನ್ಮಾಂತರದೀ ॥ 4 ॥ 

 ಆದಿತಾಳ 

ಗುಣ ಕರ್ಮ ಕಾಲ ಕ್ರಿಯ ಅಣು ಸ್ಥೂಲ ಪಂಚಭೇದ
ತನು ಶುಚಿ ತರತಮ್ಯ ತಾತ್ಪರ್ಯ ವೇದಶಾಸ್ತ್ರ
ಅನುಕೂಲ ವಿಹಿತಾಚಾರ ವಿಚಾರ ಧರ್ಮಾಧರ್ಮ
ಅನುಭವ ಪಾಪ ಪುಣ್ಯ ವ್ರತ ಸಂಪ್ರದಾಯಕ
ಅನುಸೂಯ ಗುರುಪದೇಶ ಜ್ಞಾನ ಭಕ್ತಿ ವೈರಾಗ್ಯ
ವಿನಯ ರೂಪ ವರಣಾಶ್ರಮ ಜಾತಿ ಭೇದ ವ್ಯಾಪಾರ
ಅನಿಮಿತ್ಯ ಮೌನ ಅಮಿತ ಧೈರ್ಯ ಏಕಾಂತ ಧ್ಯಾನ
ಜನ ಲಜ್ಜೆ ಸತ್ಯಾಸತ್ಯ ಭಯಚ್ಛಿನ್ನ ಧೈರ್ಯ ಉದಾ -.
ಸೀನ ಅಸ್ವಾತಂತ್ರ ವ್ಯಾಪ್ತಾ ಸಂಗ ನಿಸ್ಸಂಗ ಸ್ನೇಹ
ಜನನಾದಿ ಭಾವ ಕ್ರೀಯ ಶಬ್ದ ದುಷ್ಟ ಚೇ -
ತನ ಜಡಮಾನಿಗಳು ವಿಶೇಷ ಅನಾದಿ ಪುರುಷ
ನೆನಹೋ ಐಶ್ವರ್ಯ ಅಫಲ ರಸ ಸಂಬಂಧ ಪವಿತ್ರ
ಮನ ಪ್ರಾಣ ಇಂದ್ರಿಯಗಳ ವ್ಯಾಪಾರ ತ್ರಿವಿಧ ಜೀವ
ಧನ ಆಶಾ ಮಮತಾಯುಕ್ತ ಕಾರ್ಯ ಕಾರಣ ಶಕ್ತಿ
ಅನೈಶ್ವರ್ಯ ವೈದೀಕ ಬಾಹ್ಯಾಂತರ ಖಂಡಾ
ಅನಪೇಕ್ಷ ಅಲೌಕಿಕ ಸಾದಿ ಅನಾದಿ ಲಕ್ಷ
ಘನ ಜಾಗ್ರತಿ ಸಂತೋಷ ಹರಿ ಪೂಜಾ ನಿರಾಕೂಲ
ಅನಿತ್ಯ ನಿತ್ಯ ಅಜ್ಞಾನ ಪೂರ್ಣಾಪೂರ್ಣ ಕರ್ತೃತ್ವ
ಅನುಕಂಪನ ಅನಾಲಸ್ಯ ಆಲಸ್ಯ ಲಾಭಾಲಾಭ
ಇನಿತು ತಿಳಿಯಬೇಕು ತತ್ತ್ವವಿಧ ಸಂಖ್ಯಾನಾ
ಎಣಿಸಿ ಆವಾವ ಕಾಲ ಹರಿ ಸ್ವಾತಂತ್ರ್ಯ ಸಂಪೂರ್ಣ
ಗುಣಗಣ ಸಾಂದ್ರನೆಂದು ಕೊಂಡಾಡಿ ಪ್ರತಿದಿನ
ಉಣುತಿರುವಾ ಮನುಜ ನಿತ್ಯ ಉಪವಾಸಿಯೊ
ಹನುಮ ಭೀಮ ಮಧ್ವಾಂತರ್ಯಾಮಿ ಮೆಚ್ಚುವ
ಮುನಿ ವಿಶ್ವಾಮಿತ್ರನು ನಿತ್ಯ ಉಪವಾಸಿ ಎಂದು
ಅನುದಿನದಲ್ಲಿ ಜನರು ಪೊಗಳುತಿಪ್ಪರು ನೋಡೋ
ಗಣನೆ ಮಾಡುವದೇನು ಈ ಪರಿ ಬಲ್ಲವನು
ಜನುಮ ಜನುಮದಲ್ಲಿ ಪವಿತ್ರ ಫಲಪ್ರದನು
ಪ್ರಣವ ಮೂರುತಿ ನಮ್ಮ ವಿಜಯವಿಟ್ಠಲರೇಯನ್ನ 
ಮನದಲ್ಲಿ ನಿಲ್ಲಿಸಿ ಭೋಜನ ಮಾಡು ವಿಧಿಯಿಂದ ॥ 5 ॥ 

 ಜತೆ 

ತೃಪ್ತನಾಗೆಲೊ ಮನುಜಾ ಭುಂಜಿಸಿದ ದೋಷ ನಿ -
ರ್ಲಿಪ್ತನಾಗು ವಿಜಯವಿಟ್ಠಲ ವಿಲಕ್ಷಣನೆಂದು ॥
******

for sahitya please click

************

No comments:

Post a Comment