Audio by Mrs. Nandini Sripad
ರಾಗ ಭೈರವಿ
ಧ್ರುವತಾಳ
ಗರ್ಭದೊಳಗೆ ಇದ್ದು ಒಂದು ವತ್ಸರ ನಿನಗೆ
ಹಬ್ಬ ಮಾಡಿಸಿ ಉಣಲಿತ್ತರಾರೊ
ಒಬ್ಬರ ಹಾಗೆ ಹಾಗೆ ಯೋಚಿಸಿ ನೋಡು ಬಲು
ಉಬ್ಬಿ ತಿರುಗದಿರು ಮುಂದೋರದೇ
ಉಬ್ಬಸ ಗೈವರನ್ನುಬ್ಬಸರೊಳಗಿಂದ ತೆಗೆದು
ಊರ್ಭಿಯೊಳಗೆ ಇಟ್ಟು ಪಾಲಿಪನಂತೆ
ನೆಬ್ಬವು ತೆರದಂತೆ ಸಂಸ್ಕೃತಿ ಕಾಣೆ ನೀನು
ಗಬ್ಬಿನಲ್ಲಿ ಕೆಟ್ಟು ಪೋಗದಿರೂ
ಅಬ್ಬರದಲ್ಲಿ ನಿನ್ನ ಮಿತಿಕಾಲನೋಡಿ ಬಹು
ಆರ್ಭಟದಲ್ಲಿ ಎಳೆದೊಯ್ದಾಗಲು
ಒಬ್ಬರಾದರು ಬಂದು ಬಿಡಿಸಿ ಕೊಂಬುವರಿಲ್ಲ
ಮಬ್ಬಿನಲ್ಲಿ ಇದ್ದು ಮರುಳಾಹರೆ
ಈರ್ಬಗೆ ಕಾರ್ಯದಲ್ಲಿ ನಿನ್ನ ನಿನ್ನವರ ಯತ್ನ
ಅಬ್ಬಿತೇನೊ ನೋಡು ಗುಣಿಸಿ ಎಣಿಸೀ
ಅರ್ಭಕತನ ಹೀಗೆ ಮಧ್ಯಕಾಲವು ಬರಲು
ಲಬ್ದವಾದುದು ಎನ್ನ ಶೌರ್ಯವೆಂಬೇ
ಹುಬ್ಬಿನ ಮಧ್ಯದಲ್ಲಿದ್ದದ್ದು ಕಾಣೆ ನಿನ್ನ
ಲುಬ್ಧತನವೆ ಬಿಡು ಬಿಂಕವ್ಯಾಕೊ
ಅಬ್ಜಪಾಣಿಯ ಪ್ರೀಯ ವಿಜಯವಿಠ್ಠಲರೇಯ
ತಬ್ಬುಬ್ಬಿಗೊಳಿಸದೆ ಕಾವದು ಮರಿಯದಿರು ॥ 1 ॥
ಮಟ್ಟತಾಳ
ಹರಿಯಿತ್ತ ಭಾಗ್ಯ ಹರಿಗೆ ಸಮರ್ಪಿಸಿ
ಸುರಲೋಕವ ಮೀರಿ ಪರಮ ಪದವಿಯ ಸೇರಿ
ನಿರಯದೂರರ ಕೂಡ ಹರುಷದಿಂದಲಿ ಇದ್ದು
ಪರಿ ಪರಿ ಸುಖವನ್ನು ಸರಿ ಸರಿ ಬಂದಂತೆ
ಚರಿಸಲೊಲ್ಲದೆ ಇನಿತು ಬರಿದೆ ಬಳಲಿ ತೊಳಲಿ
ನರಕಕ್ಕೆ ಬೀಳುವ ತೆರನು ಮಾಡದಿರೂ
ವರದೊರದು ಮನವೆ ಹಿರಿದು ಪೇಳುವೆ ಕೇಳು
ಗರುವ ದೇವರದೇವ ವಿಜಯವಿಠ್ಠಲರೇಯನ
ಇರುಳು ಹಗಲು ನೆನೆಸಿ ನೆರೆನಂಬು ನಂಬೂ ॥ 2 ॥
ತ್ರಿವಿಡಿತಾಳ
ಆದಿ ಅಂತ್ಯದಲ್ಲಿ ಇದ್ದಂತೆ ಇದ್ದು ಸಂ -
ಪಾದಿಸು ಮಧ್ಯಕಾಲದಲಿ ಜ್ಞಾನ
ಸಾಧನದಿಂದಲ್ಲಿ ಹರಿ ಸ್ವತಂತ್ರನೆಂದು
ಭೇದಾರ್ಥದಲಿ ತಿಳಿದು ನಡೆಯಬೇಕು
ವೈದಿಕ ಮಾರ್ಗವನ್ನು ಚನ್ನಾಗಿ ಬಗೆ ಬಗೆ
ಶೋಧಿಸಿ ಸಕಲವು ನಿರ್ಣೈಸಿ
ಓದನಗೋಸುಗ ಚಿಂತೆ ಮಾಡದೆ ನೀನು
ಮೋದದಿಂದಲಿ ಮನವೆ ನಿಂದು ಕಾಮ
ಕ್ರೋಧಾದಿಗಳ ತೊರೆದು ಕೋಮಲ ಮತಿಯಲ್ಲಿ
ಮಾಧವನ್ನ ನಂಬು ಏಕಾಂತದಿ
ಬಾಧೆಯ ಬಿಡಿಸುವ ವಿಜಯವಿಠ್ಠಲರೇಯ
ಆದಿತ್ಯ ಜನರಿಗೆ ಆತನೆ ಗತಿಯನ್ನು ॥ 3 ॥
ಅಟ್ಟತಾಳ
ನಿನ್ನ ಪ್ರಯತ್ನಂಗಳ್ಯಾತಕೆ ಬಾತಿಯಾ
ಬೆನ್ನು ಬಲವಾಗಿ ಹರಿಯದಿದ್ದರೆ ಸರ್ವ
ತನ್ನಿಂದ ತಾನೇವೆ ಪ್ರಾಪ್ತವಾಗುವವು
ನಿನ್ನ ಪ್ರಯತ್ನವು ವ್ಯರ್ಥ ಕಾಣೊ
ಇನ್ನು ಹಿಗ್ಗದಿರು ಹಿತದಿಂದಲಿ ಹರಿ
ತನ್ನವನೆಂದಡೆ ಅತಿಶಯ ನೆನೆದದ್ದು
ಮುನ್ನೆ ತಿಳಿದು ನೋಡು ಆಯು ಕರ್ಮವಿತ್ತ
ವನ್ನು ವಿದ್ಯ ದಾರಿದ್ರ ಪೂರ್ವಕದಿಂದ
ಚನ್ನ ಹರಿ ಅಂದೆ ನಿರ್ಮಾಣ ಮಾಡಿರೆ
ಕುನ್ನಿಯಂತೆ ಕಂಡ ಕಂಡಲ್ಲಿ ಪೋಗದಿರು
ಉನ್ನತಮಹಿಮ ವಿಜಯವಿಠ್ಠಲರೇಯ
ಕನ್ನಡಿಯೊಳಗೆ ಇದ್ದಂತೆ ತೋರ್ವನೆಲ್ಲ ॥ 4 ॥
ಆದಿತಾಳ
ಬಸುರೊಳಗಿದ್ದಾಗ ಸುಖಬಡಿಸಿದಾತ
ಅಸಮ ಸಹಾಸನಾವವನೊ
ಅಸಮ ಸಹಾಸನಾವವನೊ
ವಸುಧೆ ಪಾಲಕ ಹರಿಯಲ್ಲದೆ ರಾ -
ಜಿಸುವ ದೈವವು ಇಲ್ಲ ಎನ್ನು
ಘಸಣಿಗೊಳ್ಳದಿರು ದೃಢಚಿತ್ತ ನೀನಾಗಿ
ಬೆಸಸು ಹರಿಯ ಗುಣ ಕಥೆಯ
ಅಸುರವೈರಿ ವಿಜಯವಿಠ್ಠಲರೇಯ ವಶವಾಗಿ ಇಪ್ಪ ಎಲ್ಲಿರಲು ॥ 5 ॥
ಜತೆ
ಚಿಂತೆ ಮಾಡದಿರು ಚಿತ್ರ ವಿಚಿತ್ರವು
ಕಂತುಜನಕ ವಿಜಯವಿಠ್ಠಲ ಮಾಡಿದನೆನ್ನು ॥
************
No comments:
Post a Comment