Sunday, 8 December 2019

ಇಂದಿರಾದೇವಿ ಮಾತೇ gopala vittala ankita suladi ಲಕ್ಷ್ಮೀಸ್ತೋತ್ರ ಸುಳಾದಿ INDIRADEVI MAATE LAKSHMI STOTRA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ ಶ್ರೀಲಕ್ಷ್ಮೀಸ್ತೋತ್ರ ಸುಳಾದಿ 

( ಶ್ರೀಮಹಾಲಕ್ಷ್ಮೀದೇವಿಯ ಪರಾಧೀನಾವ್ಯಾಪ್ತ ಸೃಷ್ಟಿ )

 ರಾಗ ಆರಭಿ 

 ಧ್ರುವತಾಳ 

ಇಂದಿರಾದೇವಿ ಮಾತೇ ತಂದೆ ವಿಠ್ಠಲನರ -
ವಿಂದ ಚರಣಕ್ಕಿನ್ನು ಅಂದಿಗಿ ಗೆಜ್ಜೆ ಆದ
ಹೊಂದಿಕೆಯಾದ ಊರು ಜಾನು ಕೈಯ ಮೇಲೆ
ಚಂದಾದ ಸ್ವರೂಪ ಪೀತಾಂಬರೊಡ್ಯಾಣಾದೆ
ಮಂದರಧರನೊಕ್ಷ ಸ್ಥಳದಲಿ ನೀ ನಿಂದೆ
ಕಂದರದಲಿ ಚಿತ್ರ ವೈಚಿತ್ರ ಪರಿ -
ಗಂಧವು ಪದಕ ಹಾರಂಗಳು ಪುಷ್ಪ ತುಲಸೀ -
ಯಿಂದೊಪ್ಪುವ ಅಲಂಕಾರನಂದ ಶೋಭಿತಳಾದೆ
ಒಂದೊಂದು ಹಸ್ತದಲಿ ಆಯುಧಗಳಾದೆ
ಚಂದುಳ್ಳ ಕಡಿಯ ತೋಳ್ಬಂದಿ ಭುಜಕೀರ್ತಿ
ಕುಂದು ಇಲ್ಲದೆ ಕರನಕುಂಡಲ ನಾನಾಪರಿ
ಅಂದವಾದರಳೆಲೆ ಸುಂದರ ಕಿರೀಟವು
ಸಂದಿ ಸಂದಿಗೆ ನಾನಾಭರಣಾಲಂಕಾರಳಾದೆ
ಇಂದಿರೇಶನ ಪ್ರತಿ ಅವಯವಗಳಲಿ ಇನ್ನು
ಇಂದಿರೇ ಪ್ರತಿ ಪ್ರತಿ ವಸ್ತುವಾದೆ 
ಕಂದರ್ಪನಯ್ಯನ ಆನಂದದಿ ಬೆರೆದು ಸುಖ ಸುರಿದೆ ನೀ
ಒಂದರಘಳಿಗೆ ಅಗಲಾದೆ ಇನ್ನು
ಕಂದ ಬೊಮ್ಮನು ಮತ್ತೆ ನಂದಿವಾಹನ ಅಮ -
ರೇಂದ್ರ ಸನಕ ಸನಂದರಿಂದಲಿನ್ನು
ಕುಂದಿಲ್ಲದೋಲಗವ ನಂದಾದಿ ಕೊಳುತ ಮುಕ್ತ-
ರಿಂದ ಸೇವಿತಳಾಗಿ ಎಂದೆಂದು ಬಿಡದಲೆ
ಸಂದೇಹವಿಲ್ಲದೆ ಗೋಪಾಲವಿಟ್ಠಲನ್ನ 
ಪೊಂದಿ ಸುಖದಲಿ ಚಂದದಿ ಮೆರದೆ ॥ 1 ॥

 ಮಟ್ಟತಾಳ 

ಹರಿ ಅನಿರುದ್ಧನಾಗೆ ಸಿರಿ ಶಾಂತಿದೇವಿ ಆದೆ
ಹರಿ ಪ್ರದ್ಯುಮ್ನನಾಗೆ ಸಿರಿ ಕೃತಿದೇವಿ ಆದೆ
ಹರಿ ಸಂಕರುಷಣನಾಗೆ ಸಿರಿ ಜಯಾದೇವಿ ಆದೆ
ಹರಿ ವಾಸುದೇವನಾಗೆ ಸಿರಿ ಮಾಯಾದೇವಿ ಆದೆ
ಎರಡೆರಡವತಾರಕ್ಕೆ ಮರಳಿ 
ಮರಳಿ ಚತುರ ಅವತಾರಗಳು ಆದೆ
ಪರಿಪರಿ ಅವತಾರಕ್ಕೆ ಪರಿಪರಿ ರೂಪಳಾದೆ
ಶರಣರ ಪಾಲಕ ಗೋಪಾಲವಿಟ್ಠಲನ್ನ 
ಚರಣ ಕಮಲವನ್ನು ಪರಿಪರಿ ಸೇವಿಸುತ ॥ 2 ॥

 ತ್ರಿಪುಟತಾಳ 

ಧರಿಯ ರೂಪದಿ ಹರಿಗೆ ಕುಳ್ಳಿರ ಗದ್ದಿಗೆಯಾದೆ
ಮೆರೆವ ಅವ್ಯಾಕೃತ ಗಗನವೇ ಕೊಡೆಯಾದೆ
ಎರಡೆರಡೊಂದು ರೂಪದಿ ಹರಿ ಇತ್ತಲು ರಮಾ
ಮರಳಿ ಶ್ರೀರೂಪದಿ ಹರಿಯಿಂದ ಬೆರೆದು
ಸ್ವರಮಣನ ರಮಿಸಿ ಯೋಗನಿದ್ರೆಯ ಮಾಡಿ
ಹರಿ ಆಜ್ಞೆದಿಂದ ಅಂಭ್ರಣಿ ರೂಪಳಾದೆ
ಪರಿಪರಿ ಶ್ರುತಿಯಿಂದ ಸೃಷ್ಟಿಯ ರಚಿಸೆಂದು
ಹರಿಯ ಕೊಂಡಾಡಿದೆ ಹರುಷದಿ ನಲಿದೆ
ಹರಿಯ ನಾಭಿಯಲಿನ್ನು ಸರಸಿಜ ರೂಪದಿ
ವಿರಿಂಚಿಯನ ಪಡದೆ ಕರುಣಾಕರ ಮತ್ತೆ
ಅರಿವಂತೆ ಅಜಗಿನ್ನು ತಪ ತಪವೆಂದು ಅ -
ಶರೀರ ಹಿತ ನುಡಿದೆ ಅವ್ಯಾಕೃತಕೆ ಅಭಿಮಾನಿ
ಪರಿಪೂರ್ಣ ಗುಣಭರಿತ ಗೋಪಾಲವಿಟ್ಠಲನ್ನ 
ಕರುಣದಿಂದೆರಡೆರಡು ಸೃಷ್ಟಿಯ ರಚಿಸಿದೆ ॥ 3 ॥

 ಅಟ್ಟತಾಳ 

ಹರಿ ಆಜ್ಞೆದಿಂದಲಿ ಜಡ ಪ್ರಕೃತಿ ದೆಶೆಯಿಂದ
ವರ ತ್ರಿಗುಣಾತ್ಮಕವಾದಂಥ ಮಹತತ್ವದ -
ದರಿಂದ ವೈಕಾರಿಕ ತೈಜಸ ತಾಮಸವನ್ನು
ಭರಿತವಾದಂಥ ಅಹಂಕಾರ ತತ್ವ
ಪರಿಪರಿ ಸೃಷ್ಟಿಸಿದೆ ವರಮಾಯಾ ನೋವಿಲ್ಲದೆ
ಪರಮದಯಾಳು ಗೋಪಾಲವಿಟ್ಠಲನು 
ಕರುಣಿಸುವನು ನೀ ಕರವಿಡಿವವರ ॥ 4 ॥

 ಆದಿತಾಳ 

ಮಹತತ್ವ ದಶೆಯಿಂದ ಬೊಮ್ಮನ ಸೃಷ್ಟಿಸಿದೆ
ಅಹಂಕಾರ ವೈಕಾರಿಕದಿಂದ ಮನಸು 
ಇಂದ್ರಿಯಗಳಭಿಮಾನಿ ದೇವತೆಗಳನ್ನು
ಅಹಂಕಾರ ಪಂಚ ತನ್ಮಾತ್ರಿಯನು ಸೃಷ್ಟಿಸಿದೆ
ಅಹಂಕಾರ ತೈಜಸದಿಂದ ಚಕ್ಷುರಾದಿ
ಇಂದ್ರಿಯಗಳನು ಎಲ್ಲ ಸೃಷ್ಟಿಸಿದೆ
ಅಹಂಕಾರ ತಾಮಸದಿಂದಲಿ ಪಂಚ -
ಮಹಾ ಭೂತಂಗಳ ಸೃಷ್ಟಿಸಿದೆ 
ಮೋಹದಿಂದ ಸಕಲ ತತ್ವೇಶರ ಸೃಷ್ಟಿಸಿದೆ
ಆ ಹರಿ ಕರುಣಾಪೂರ್ಣ ಕಟಾಕ್ಷದಿ ಈ
ಮಹಾ ಜಗಕೆಲ್ಲ ಪ್ರೇಮದಿ ಸಲಹುವೆ
ಮೋಹನ್ನ ಮೂರುತಿ ಗೋಪಾಲವಿಟ್ಠಲನ್ನ 
ಸಹಸಾವಿಲ್ಲದೆ ರಹಸ್ಯ ಪೂಜಿಪೆ ॥ 5 ॥

 ಜತೆ 

ನಮೋ ನಮೋ ನಿನ್ನ ಪಾದಕಮಲವೆ ಮೊರೆ ಹೊಕ್ಕೆ
ಮಮತಿ ಪುಟ್ಟಿಸೆನಗೆ ಗೋಪಾಲವಿಟ್ಠಲನಲ್ಲಿ ॥
*********

No comments:

Post a Comment