Audio by Mrs. Nandini Sripad ರಾಗ ಹಂಸಾನಂದಿ
Audio by Vidwan Sumukh Moudgalya ರಾಗ shanmukhapriya
ಶ್ರೀ ವಿಜಯದಾಸಾರ್ಯ ಕೃತ ಗಯಾದ ಮಹಾತ್ಮೆ ಸುಳಾದಿ
ಧ್ರುವತಾಳ
ಶ್ರೀ ಗಯಾದ ಯಾತ್ರಿ ಮಾಡಿ ಸಿದ್ಧ ಸಾಧ್ಯ ಮಾನವರು |
ಆಗಮೋಕ್ತಿಯಿಂದ ತಿಳಿದುನೋಡಿ |
ಭೋಗದಾಸೆಯ ಬಿಟ್ಟು ಭಕುತಿಮಾರ್ಗದಿಂದ |
ಯೋಗಿ ಜನರು ಸಂಗಡದಿಂದಲಿ |
ಯಾಗ ಮೊದಲಾದ ಕರ್ಮಕಲಾಪಂಗಳು |
ತ್ಯಾಗಮಾಡಿದರು ದೋಷವಿಲ್ಲಾ |
ಸಾಗಿ ಬಂದು ಇಲ್ಲಿ ನೂರೊಂದು ಕುಲವ ಲೇ - |
ಸಾಗಿ ಉದ್ಧರಿಸಬೇಕು ತ್ರಿಕರ್ಣದೀ |
ಭಾಗಾದೆಯಾದವ ದ್ವೇಷದಿಂದಲಿ ಬರ - |
ಲಾಗಿ ಮುಕ್ತಿಯುಂಟು ಪಿತ್ರಾದಿಗೇ |
ಈಗಲಾಗೆನ್ನದಿರಿ ಕಂಡ ಮಾತುರ ಬಲು |
ವೇಗಾದಿಂದಲಿ ನರಕಾ ದೂರಾಗೋವೂ |
ಸಾಗರಶಾಯಿ ನಮ್ಮ ವಿಜಯವಿಠಲ ನಂಘ್ರಿ |
ಜಾಗುಮಾಡದೆ ನೆನೆಸೆ ಸಮಸ್ತ ಕಾರ್ಯಸಿದ್ಧಿ ॥ 1 ॥
ಮಟ್ಟತಾಳ
ಪರಮ ಪ್ರೀತಿಯಿಂದ ಫಲ್ಗುಣಿ ಶ್ರಾದ್ಧವನು |
ವಿರಚಿಸಿ ವಿನಯದಲಿ ಪ್ರಥಮ ದಿವಸದಲ್ಲಿ |
ತರುವಾಯ ಕಮಲಾಸನ ತೀರ್ಥಪ್ರೇತ ಶಿಲೆಯು |
ಚರಿಸಿ ಚತುರನಾಗಿ ಎರಡನೆ ಸ್ಥಾನದ - |
ಲಿ ರಾಮ ಪರ್ವತರಾಮಾ ಸರೋವರ ಕಾಕಬಲಿ |
ಎರಡೆರಡೂ ಒಂದೂ ಸ್ಥಳ ಒಂದೇ ದಿವಸ |
ಕರಣಶುದ್ಧಿಯಿಂದ ಪಿಂಡ ಪ್ರದಾನವಗೈದು |
ಸುರಸಾರ್ವಭೌಮ ವಿಜಯವಿಠಲ ಗದಾ - |
ಧರನ ಪ್ರೀತಿಬಡಿಸಿ ಕುಲವನು ಉದ್ಧರಿಸಿ ॥ 2 ॥
ರೂಪಕತಾಳ
ಉತ್ತರ ಮಾನಸ ಕನಕ ತೀರ್ಥ ಸೂರ್ಯ |
ಹತ್ತಿಲಿ ದಕ್ಷಿಣ ಮಾನಸ ಮಧುಕುಲ್ಯಾ |
ಸತ್ಯವಾಗಿ ಐದು ಸ್ಥಾನದಲ್ಲಿ ತಮ್ಮ |
ಪಿತೃಗಳನುದ್ಧರಿಸೆ ಅಲ್ಲಿಂದಾ ಮರುದಿವಸಾ |
ಮಾತೆಮಾತಂಗ ಧರ್ಮಕೂಪ ಅಶ್ವತ್ಥ |
ತತ್ತಳಿಸುವ ಬ್ರಹ್ಮಕುಂಡಕ ಕಾಶ್ವಾನ |
ಪ್ರತ್ಯೇಕವಾಗಿ ಪಿಂಡ ಪ್ರದಾನವ ಗೈದು |
ಪಿತೃಮಾತೃವಂಶ ಗತಿಗೆ ಪೊಂದಿಸುವದು |
ಸತ್ಯಸಂಕಲ್ಪ ವಿಜಯವಿಠಲ ರೇಯ |
ಆತ್ಮಸಮ್ಮತ ಪಾಲಿಸುತಿಪ್ಪ ಪ್ರತಿದಿನ ॥ 3 ॥
ತ್ರಿವಿಡಿತಾಳ
ಇನಿತು ಮಾಡಿದ ಮೇಲೆ ಪಿಷ್ಠಯಳ್ಳು ಪರಮಾನ್ನ |
ಘನಕ್ಷೀರ ತರ್ಪಣ ದೀಪವ ವಿರಚಿಸಿ |
ಅಣೋರಣಿಯಾದ ಶ್ರೀ ವಿಷ್ಣುಮೂರ್ತಿಯ ಮತ್ತೆ |
ವನಜಾಸನಾ ರುದ್ರ ಇಂದ್ರ ಸ್ಕಂದಾರ್ಕಾಬ್ಜಾ |
ಅನಲೈದು ಗಣೇಶ್ವರ ಕ್ರೋಂಚಕಲಶೋದ್ಭವ |
ಮುನಿ ಕಾಣ್ವ ದಧಿಚಿ ಮಾತಂಗಾ ಕಶ್ಯಪಮುನಿ |
ಎಣಿಸಿ ಹತ್ತೊಂಭತ್ತು ಪಾದದ ಮೇಲೆ ಸ - |
ದ್ಗುಣದಿಂದ ಪೂರ್ವೋಕ್ತ ಪ್ರಕಾರಮಾಳ್ಪದೂ |
ಗುಣಪೂರ್ಣ ವಿಜಯವಿಠಲ ಗದಾಧರಗೆ ವಂ - |
ದನೆ ಮಾಡು ಗಜರೂಪದಲ್ಲಿಗೆ ಬಂದು ನಿಂದೂ ॥ 4 ॥
ಝಂಪೆತಾಳ
ಭಕುತಿಯಿಂದಲಿ ಮೂಲವಟದಲ್ಲಿ ಶ್ರಾದ್ಧವನು |
ಸಕಲ ಗೋತ್ರಗಳು ಉದ್ಧಾರಾರ್ಥವಾಗಿ |
ಲಕುಮಿ ಕುಂಡ ಗದಾ ಲೋಲ ಕರ್ನಿಕೆಯಲ್ಲಿ |
ಮಖ ಸಮನಾದ ಪಿಂಡಗಳನಿಟ್ಟೂ |
ಭಕುತಿಯಿಂದಲಿ ಕ್ಷೇತ್ರವಾಸಿಗಳ ಪೂಜಿಸಿ |
ಸುಖಬಡಿಸಿ ವಟದಲ್ಲಿ ಪಿಂಡ ಪ್ರದಾನವಗೈದು |
ಕಕುಲಾತಿ ಸಲ್ಲಾ ನಿಮಗೆಲ್ಲಿ ಈ ನಿಧಿಯಲ್ಲಿ |
ದುಃಖದಿಂದ ಕಡೆಬಿದ್ದು ಪೋಪ ನರನು |
ಅಖಿಳ ಲೋಕೇಶ ಸಿರಿ ವಿಜಯವಿಠಲರೇಯಾ |
ಅಕಳಂಕ ಜನರೊಡನೆ ಇಡುವ ಕರುಣದಲಿ ॥ 5 ॥
ಅಟ್ಟತಾಳ
ಸೀತರಾಮ ಗಯ ಗಯ ಶೀರ್ಷ ಗಯ ರೂಪ |
ನೀತಾ ಮುಂಡ ಪೃಷ್ಠಗಿರಿ ಆದಿಗಯ ಮುಂದೆ |
ಧೌತ ಪಾಪ ಭೀಮ ಗಯ ಗೋಪಾದವು |
ವೈತರಣಿ ತೀರ್ಥ ಇನಿತು ಸ್ಥಾನದಲ್ಲಿ |
ಕಾತುರದಿಂದಲಿ ಪಿಂಡ ಪ್ರದಾನವ |
ಮಾತಾ ಪಿತೃಗಳಿಗೋಸುಗ ಸ್ವಾಮಿ ಕೈಯಲ್ಲಿ ಕೊಟ್ಟುಕೊಂಡಾಡಿ |
ಆತುಮಾರ್ಥವಾಗಿ ದಧ್ಯಾನ್ನದ ಪಿಂಡ |
ದಾತ ಜನಾರ್ದನ ಸ್ವಾಮಿಯ ಕೈಯಲ್ಲಿ |
ತಾ ತೃಪ್ತಿಯಿಂದಲಿ ತಿಲರಹಿತವಾಗಿ |
ಪ್ರೀತಿಯಿಂದಲಿ ಕೊಟ್ಟು ಸ್ತೋತ್ರವ ಮಾಡೀ |
ಗಾತುರ ತೊಲಗಿದಾಗಲಿ ಮುದದಿಂದ ಪ್ರ - |
ಖ್ಯಾತ ವಿಷ್ಣು ಪಾದದಲ್ಲಿ ಹಾಕೆಂದು ಭ -|
ಕೂತಿಯಿಂದಲಿ ಪೇಳಿ |
ಸಂತೋಷವಹುದು ಹೇಯ ದಾನವ ಹರ
ವಿಜಯವಿಠಲರೇಯಾ |
ಭೂತಳದೊಳಗೆ ಈ ತೆರದಲ್ಲಿ ಮೆರೆವ ॥ 6 ॥
ಆದಿತಾಳ
ಶ್ರೀ ಗಯಾ ಯಾತ್ರಿ ಸಾವಿತ್ರಿ ಸರಸ್ವತಿ ತೀರ್ಥ ಮಿಂದು ನಿತ್ಯ |
ಈ ಗಿರಿಗಳಲ್ಲಿ ಇಷ್ಟಾರ್ಥ ಬೇಡುವುದು |
ಯೋಗಿ ಜನರು ಇಲ್ಲಿ ಧ್ಯಾನ ಮಾಡುವದು, ಲೇ - |
ಸಾಗಿ ನಾನಾ ತೀರ್ಥದಲ್ಲಿ ವಾಸವಾಗಿ |
ಭೋಗಭೂಷಣ ಬಹುರೂಪದಲ್ಲಿ ನಿಂದು |
ಸಾಗರತಲ್ಪನ ಧ್ಯಾನ ಮಾಡುವನು |
ಆಗಮೋಕ್ತಿಯಿಂದ ಸಿದ್ಧವಾಗಿದೆ ಕೇಳಿ |
ನಾಗವಹನ ಮಿಕ್ಕಾ ದೇವಾದಿಗಳು, ಅನು - |
ರಾಗ ಮತಿಯಲ್ಲಿ ಹರಿಯ ಪೂಜಿಸುವರು |
ಈ ಗಯಾದ ಯಾತ್ರೆ ಮಾಡೆ ನೂರೊಂದು ಕುಲದವರು |
ಸಾಗುವರು ಸರ್ವಬಾಧೆ ಗೆದ್ದು ಹರಿಪುರಕೆ |
ಭಾಗೀರಥಿ ಜನಕ ವಿಜಯವಿಠಲ ನಂಘ್ರಿಗೆ |
ಬಾಗಿ ಸಮಸ್ತ ಸೌಖ್ಯ ಪಡೆದು ಧನ್ಯನಾಗಿ ॥ 7 ॥
ಜತೆ
ಪಿತ್ರಾದಿಕುಲ ಇಲ್ಲಿ ಉದ್ಧಾರವಾಗುವದು |
ಗೋತ್ರದೊಳಗೆ ಇಪ್ಪಾ ವಿಜಯವಿಠಲ ಬಂಧೂ ॥
*********
No comments:
Post a Comment