Sunday, 8 December 2019

ನಮೋ ನಮೋ vijaya vittala suladi ತತ್ತ್ವಾಭಿಮಾನಿ ಸ್ತೋತ್ರ ಸುಳಾದಿ NAMO NAMO TATWAABHIMAANI STOTRA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ಕೃತ ತತ್ತ್ವಾಭಿಮಾನಿಗಳ ಸ್ತೋತ್ರ ಸುಳಾದಿ 

 ರಾಗ ದೇಶ್ 

 ಧ್ರುವತಾಳ 

ನಮೋ ನಮೋ ಸಮಸ್ತ ತತ್ವಾಭಿಮಾನಿಗಳಿರಾ
ನಿಮಗೆ ಹಸ್ತವ ಮುಗಿದು ಕೊಂಡಾಡುವೆ
ಕ್ರಮದಿಂದ ಬಿನ್ನಪವ ಲಾಲಿಸಿ ಕೇಳುವುದು
ಅಮರ ನಿಮ್ನಗ ಮಜ್ಜನ ಗೋಸುಗ
ಅಮಲಮತಿ ಇತ್ತು ಜ್ಞಾನ ಭಕ್ತಿಯಿಂದ
ರಮೆಯರಸನ್ನ ನೋಳ್ಪಸಾಧನ ತೋರಿ
ಗಮನಾದಿ ಮೊದಲಾದ ವ್ಯಾಪಾರ ನಿಮ್ಮಾಧೀನ
ಶ್ರಮ ಸಾಧ್ಯವಾಗದಂತೆ ಪೈಣವಿತ್ತು
ತಮೊ ರಜೋಗುಣದವರ ಬಾಧಿಯ ತಪ್ಪಿಸಿ ಉ -
ತ್ತಮ ಯಾತ್ರಿ ಮಾಡಿಸುವುದು ತ್ರಯ ಕ್ಷೇತ್ರದ
ಕುಮತ ಪೊಂದಿದ ನಿತ್ಯ ಕುಮತಿ ಜನರ ಸಂಗ
ನಿಮಿಷವಾದರೂ ಕೊಡದೆ ಪಾಲಿಸಬೇಕು
ಯಮ ನೇಮ ಮಿಗಿಲಾದ ಸತ್ಕರ್ಮಾಚಾರದಿಂದ
ಸಮಚಿತ್ತ ಭೇದದಿಂದ ಇರಲಿ ಎನಗೆ
ನಮೊ ನಮೊ ಸಮಸ್ತ ತತ್ವಾಭಿಮಾನಿಗಳಿರಾ
ಕುಮತಿಯ ಬಿಡಿಸುವದು ನಾನೆಂಬೊ ಮಾತಿನಲ್ಲಿ
ಭ್ರಮಣವಲ್ಲದೆ ಲೇಸು ಲೇಸು ಕಾಣೆ
ರಮೆಯರಸ ನಮ್ಮ ವಿಜಯವಿಠ್ಠಲನಂಘ್ರಿ 
ಕಮಲ ಹೃತ್ಕಮಲದಲ್ಲಿ ಪೊಳೆವಂತೆ ಕೃಪೆ ಮಾಡಿ ॥ 1 ॥

 ಮಟ್ಟತಾಳ 

ತನುವೆನ್ನದೆಂಬೆನೆ ತನುವೆನ್ನದಲ್ಲ
ಮನವೆನ್ನದೆಂಬೆನೆ ಮನವೆನ್ನದಲ್ಲ
ಧನವೆನ್ನದೆಂಬೆನೆ ಧನವೆನ್ನದಲ್ಲ
ಜನವೆನ್ನದೆಂಬೆನೆ ಜನವೆನ್ನದಲ್ಲ
ತನು ಮನ ಧನ ಜನವು ಅನುದಿನದಲ್ಲಿ ನೋಡೆ
ವನಜಭವಾದಿಗಳೆ ಎಣಿಸಿ ಪೇಳುವದೇನು
ಕೊನೆ ಮೊದಲು ನಿಮ್ಮಾಧೀನವಯ್ಯಾ ಬಿಡದೆ
ಇನಿತು ಪೊಂದಿರಲಿಕ್ಕೆ ಮಣಿದು ಹೇಳುವ ಮಾ -
ತಿನ ಉಪಚಾರವ್ಯಾಕೆ ಘನಮೂರು -
ತಿ ನಮ್ಮ ವಿಜಯವಿಠ್ಠಲನ್ನ ಪ್ರೇ -
ರಣೆಯಿಂದಲಿ ನಿಮ್ಮ ಸಕಲ ಚೇಷ್ಟೆ ಪ್ರದವೊ ॥ 2 ॥

 ತ್ರಿವಿಡಿತಾಳ 

ಭೀತಿಪ್ರದ ಜೀವಜಡಗಳೆಲ್ಲ ನಿಮ್ಮ
ಚಾತುರ್ಯ ಪ್ರೇರಣೆ ಸಿದ್ದವಾಗಿರಲಿಕ್ಕೆ
ಭೂತಳದೊಳು ನಾನಾ ಯಾತ್ರಿ ಚರಿಸುವಾಗ
ಭೀತಿ ಬಡಲ್ಯಾಕೆ ತಾತ್ವಿಕರೆ 
ದೈತ್ಯರ ಗಣದಿಂದ ಇಂತಾಗುವದಲ್ಲ
ಪ್ರೀತಿವಂತರು ನೀವು ನಾನನ್ಯನೇ
ಜಾತಕರ್ಮಾರಭ್ಯ ಅಂದಿನ ಪರಿಯಂತ
ಯಾತಕಾಲೋಚನೆ ಸರ್ವರಿರಲು
ಆತುಮದೊಳಗೆ ಸತ್ವ ರಾಜಸ ತಾಮಸ
ಗಾತುರ ಗೋಳಕ ನಿಮ್ಮ ದೇಹ
ಈ ತೆರದಲಿ ಮೂರು ವಿಧವಾಗಿ ಸಮಸ್ತ
ಭೂತಳದೊಳಗೆ ನೀವು ಪೊಂದಿರಲು
ಭೀತಿ ಎನಗೆ ಉಂಟೆ ಎಲ್ಲಿದ್ದರು ಕೇಳಿ
ಮಾತ್ರಕಾಲವಾಗೆ ಬಲು ಸೌಖ್ಯವೆ
ಗೋತುರ ತರು ಗುಹ ವನಾರಣ್ಯ ಪೊದೆ ಮಿಕ್ಕ
ಭೀತಿಗಳಿರಲೇನು ನಿಮ್ಮ ಬಲವು
ಸ್ವಾತಂತ್ರಪುರುಷ ಶ್ರೀವಿಜಯವಿಠಲರೇಯನ 
ದೂತನಾದವನಿಗೆ ಭಯವಿಲ್ಲ ಭಯವಿಲ್ಲ ॥ 3 ॥

 ಅಟ್ಟತಾಳ 

ದೇಶ ಕಾಲ ಕರ್ಮ ಗುಣ ವಿಚಾರಾಚಾರ
ಭಾಷೆ ರೂಪ ಕ್ರಿಯಾ ಭೇದವಾದರೇನು
ದೋಷದೂರರು ನೀವು ತತ್ತತ್ತ ಸ್ಥಾನದಲ್ಲಿ
ವಾಸವಾಗಿದ್ದು ನಂಬಿದ ಜನರ ಮನೋ -
ಪಾಸನೆ ಪ್ರಕಾರದಲ್ಲೀಸುತಿರಲಿಕ್ಕೆ
ಏಸುಬಗೆಯಿಂದ ಚಿಂತಿಸೆ ಸಲ್ಲದು
ಈ ಶರೀರವೇ ನಿಮ್ಮ ಚರಣಕ್ಕೆ ಅರ್ಪಿಸಿ
ದಾಸ ದಾಸನೆಂದು ತಲೆವಾಗಿ ಕೊಂಡಿಪ್ಪೆ
ಲೇಸು ಹೊಲ್ಲೆಗಳೆಲ್ಲ ನೀವಿತ್ತದಹುದು
ದೇಶ ಕಾಲಾದಿಯ ಗೊಡಿವೆ ಎನಗೆ ಯಾಕೆ
ಭಾಸುರ ಕೀರ್ತಿ ಅಪಕೀರ್ತಿ ನಿಮ್ಮದೆ ಸರಿ
ಈಸು ದಿವಸ ನಾನು ಬದುಕಿದಕೆ ಎ -
ನ್ನಾಶೆ ಸಿದ್ಧಿಸಲಿ ಉತ್ತಮರ ಸಂಗತಿಯಿಂದ
ಕೋಶ ಭಂಡಾರಾದಿ ಅಹಿಕ ಬೇಡುವುದಿಲ್ಲ
ಸಾಸಿರಕೆ ನಿಮ್ಮ ಪ್ರಸಾದವಾಗಲಿ
ಸಾಸಿವಿ ಕಾಳಷ್ಟು ನಿಮ್ಮ ವಿನಾವಾಗಿ
ದ್ವೇಷ ದೂಷಣೆ ಸ್ನೇಹ ಮಾಡುವರೆ ಇಲ್ಲಾ
ಲೇಶ ಕಾಲದಿಂದ ಮಹಕಾಲ ಪರ್ಯಂತ
ಈಶನೊಬ್ಬನು ಕಾಣೊ ಸರ್ವರ ಪ್ರೇರಕ
ಕಾಶಿಪುರಾಧೀಶ ವಿಜಯವಿಠಲ ಸ -
ರ್ವೇಶನ ತೋರಿಸಿ ಕೊಡುವದು ಸರ್ವದಾ ॥ 4 ॥

 ಆದಿತಾಳ 

ಶರಣು ಜಯಂತ ಮಿತ್ರ ಮನು ಪ್ರಾಣ ಧರಣಿ 
ವರುಣ ಮರುತ ಬಾಂಧವ ವಾಯು ಗಣಪ ಪಂಚ
ಮರುತ ತರಣಿ ದಿಗ್ದೇವ ದಕ್ಷ ಅಶ್ವಿನಿಯರು ಇಂದ್ರ
ಹರ ಶೇಷ ಗರುಡ ವಾಯು ಬ್ರಹ್ಮ ಲಕುಮಿದೇವಿ
ಪರಮ ಕರುಣದಿಂದ ಪ್ರತಿ ಪ್ರತಿ ದಿನದಲ್ಲಿ
ಪೊರೆವುತ್ತ ಬರುವುದು ಭಕ್ತಗೆ ಒಲಿದು ಎಲ್ಲ
ಚಿರಕಾಲದಲಿ ನಿಮ್ಮ ಸ್ಮರಣೆ ಪಾಲಿಸಿ ಪುಣ್ಯ ಶರಧಿಯೊಳಿಡುವದು ಹರಿ ಮೆಚ್ಚುವಂತೆ ಎನ್ನ
ಕರಚರಣಾದಿಗಳಲ್ಲಿ ವ್ಯಾಪಾರ ನಿಮ್ಮದು
ಹಿರಿದಾಗಿ ಪೇಳುವುದೇನು ತಾತ್ವಿಕ ಜನರೆ
ಮೊರೆ ಹೊಕ್ಕೆ ನಿಮ್ಮ ಪಾದ ಮನೋವಾಚಕಾಯದಲಿ
ತ್ವರಿತದಲಿ ಎನ್ನ ಮನೋಭಿಷ್ಟಿಯಾಗಲಿ
ಪುರಂದರನುತ ನಮ್ಮ ವಿಜಯವಿಠಲರೇಯನ 
ಚರಣ ಕಾಣುವ ಯೋಗ ತೋರಿಸಿ ಕೊಡುವದು ॥ 5 ॥

 ಜತೆ 

ಜಗತ್ತಿನ ವ್ಯಾಪಾರ ನಿಮ್ಮಿಂದಾಗುವದು ಪ - 
ನ್ನಗಶಾಯಿ ವಿಜಯವಿಠಲನಲ್ಲಿ ಮನವಿರಲಿ ॥
*******

No comments:

Post a Comment