Sunday, 8 December 2019

ಅಣುಮೂರುತಿ ಪರಮಾಣು vijaya vittala suladi ಉಡುಪಿ ಶ್ರೀ ಕೃಷ್ಣ ಸುಳಾದಿ ANUMOORUTI PARAMAANU SRI KRISHNA SULADI


Audio by Mrs. Nandini Sripad

ಶ್ರೀ ವಿಜಯದಾಸಾರ್ಯ ಕೃತ  ಉಡುಪಿ ಶ್ರೀಕೃಷ್ಣ ಸುಳಾದಿ
( ದಾಸರು ಉಡುಪಿಯಾತ್ರೆ ಮಾಡಿದಾಗ್ಯೆ ರಚಿಸಿದ್ದು)

ರಾಗ ಯಮನ್ ಕಲ್ಯಾಣಿ 

ಧ್ರುವತಾಳ

ಅಣುಮೂರುತಿ ಪರಮಾಣು ಮೂರುತಿ ಇದೆ 
ಘನ ಮೂರುತಿ ಮಹ ಘನವಾದ ಮೂರುತಿ 
ತೃಣಕಾಷ್ಠ ಮೊದಲಾದ ಪರಿಪೂರ್ಣ ಮೂರುತಿ 
ಗುಣತ್ರಯಾತ್ಮಕವಾದ ಗುಣವಂತ ಮೂರುತಿ 
ಮನುಜೋತ್ತಮರ ವಿಡಿದು ವನಜಭವಾದ್ಯರ 
ಮನಕೆ ಪೊಳೆವ ಮೂರುತಿ ಚಿನುಮಯ ಮೂರುತಿ 
ದನುಜ ಕುಲಕೆ ದಲ್ಲಣವಾದ ಮೂರುತಿ 
ರಣದೊಳಗರ್ಜುನನ್ನ ತನು ಉಳುಹಿದ ಮೂರ್ತಿ 
ಕ್ಷಣವಗಲದೆ ಜೀವನ ಕೂಡಲಿಪ್ಪದೆ 
ಅನಿರುದ್ಧ ಮೂರುತಿ ಅಚ್ಯುತ ಮೂರುತಿ 
ಜನನಿ ಗೋಪಿಯ ಮುಂದೆ ಮೊಸರು ಕಟುವಾಗ 
ಕುಣಿದ ಮೂರುತಿ ಅಪ್ರಮೇಯ ಮೂರುತಿ ಇದೆ 
ಪ್ರಣವ ಮೂರುತಿ ಮಧ್ವಮುನಿಗೊಲಿದ ಉಡು -
ಪಿನ ವಾಸ ಶಿರಿ ಕೃಷ್ಣ 
ಎನ್ನ ಮೂರುತಿ ವಿಜಯವಿಠ್ಠಲ ನಿರುತಿಪ್ಪ ॥ 1 ॥

ಮಟ್ಟತಾಳ

ದ್ವಾರವತಿ ಎತ್ತ ಪಡುವಲ ದಿಕ್ಕಿನ 
ವಾರಿನಿಧಿ ಎತ್ತ ಗೋಪಿಚಂದನವೆತ್ತ 
ಮಾರಾಟದ ಹಡಗ ಪೋಗಿಬರುವದೆತ್ತ 
ಭಾರತಿಪತಿಯಾದ ಮಧ್ವಮುನಿ ಎತ್ತ 
ಈ ರೀತಿ ಸಂಗತಿಯಾ ಆವಲ್ಲಿ ಕಲ್ಪಿಸೀ 
ತೋರಿದಿಯೋ ದೇವ ಆರು ಬ -
ಲ್ಲರು ನಿನ್ನ ಮಹಾ ವಿಚಿತ್ರವು 
ಸಾರಲಾಪಿನೆ ನಿತ್ಯ ಉಡುಪಿನ ಸಿರಿ ಕೃಷ್ಣ 
ಜಾರ ಚೋರ ನಮ್ಮ ವಿಜಯವಿಠ್ಠಲರೇಯಾ
ದ್ವಾರಾವತಿ ಎತ್ತ ಪಡುವಲ ದಿಕ್ಕಿನ ॥ 2 ॥

ತ್ರಿವಿಡಿತಾಳ

ಅಂದು ದೇವಕಿದೇವಿ ದ್ವಾರಕಾಪುರದಲ್ಲಿ 
ಒಂದು ದಿವಸ ನಿನ್ನ ಮಾಯಾ ಮುಸುಗೇ 
ಕಂದ ನೀನಾಗಿ ಗೋಕುಲದಲ್ಲಿ ಗೋಪಿಯಾ 
ಮುಂದೆ ಬಾಲಕನಾಗಿ ತೋರಿದಾಟಾ 
ಒಂದಾದರು ನೋಡಿ ದಣಿಯಾಲಿಲ್ಲವು ಮನಸು 
ಎಂದೆನೆ ಜನನಿಯಾ ಮಾತು ಕೇಳಿ 
ನಂದನನಾಗಿ ತೋರುವೆನೆಂದು ನೆನೆದು ಗೋ -
ವಿಂದನು ಗೋಪಳ್ಳಿಯಲಿ ನಲಿದದ್ದು 
ಒಂದೊಂದು ತೋರುತ್ತ ಬರಲಾದಾರೊಳಗಿದೆ 
ಚಂದವಾದಾರೂಪಾ ಮನಕೆ ಪೊಳಿಯೇ 
ನಿಂದಿರ ಪೇಳಿ ಮಗನಾ ಮುದ್ದಾಡಿ ನೋಡಿ 
ತಂದೆ ಈ ರೂಪದಲಿ ಭೂಮಿಯೊಳಗೆ 
ಕುಂದಾದರ್ಚನೆಗೊಂಡು ಕೀರ್ತಿ ಮೆರೆವದೆಂದು 
ಮಂದಹಾಸದಲ್ಲಿ ಪೇಳಲು ಕೈಕೊಂಡು
ಒಂದು ಕೈಯಲಿ ಕಡಗೋಲು ಪಿಡಿದು ಮ -
ತ್ತೊಂದು ಕೈಲಿ ನೇಣು ಧರಿಸಿ ಬಾಲಾ 
ನಂದದಿ ಇರಲಿತ್ತ ಭೈಷ್ಮಿ ವಿಶ್ವಕರ್ಮಾ -
ನಿಂದ ಅದರಂತೆ ರಚಿಸಾ ಪೇಳಿ 
ನಂದಾದಿಂದಲೆ ತನ್ನ ಮೂಗುತಿಯನು ಇಟ್ಟು 
ಸುಂದರ ವಿಗ್ರಹದೊಡನಾಡುತ 
ಇಂದಿರೆ ಇರ ಇತ್ತ ಕಲಿಯುಗ ಬರೆ ಗೋಪಿ -
ಚಂದನದೊಳು ನಿನ್ನ ಅಡಗಿಸಲೂ 
ಸಿಂಧುವಿನೊಳಗೊಬ್ಬ ಹಡಗದ ವಶಕೆ 
ತಂದಿರೆ ತವಕದಿಂದಲಿ ಅಲ್ಲಿಂದ 
ನಂದತೀರ್ಥರಿಗೊಲಿದ ಉಡುಪಿನ ಶಿರಿ ಕೃಷ್ಣ 
ಕಂದರ್ಪಪಿತ ನಮ್ಮ ವಿಜಯವಿಠ್ಠಲರೇಯಾ ॥ 3 ॥

ಅಟ್ಟತಾಳ

ಈ ಉಡುಪಿನ ಯಾತ್ರಿ ಶ್ರೀ ವೈಕುಂಠದ ಯಾತ್ರಿ
ಆವಾವ ಮನುಜನು ಸೇವಿಸಾಲು ದುರಿ -
ತವನ ದಾವನ ಪಾವನ ಮಾಡುವ 
ಯಾವತ್ತು ಜನುಮದ ನೋವು ಕಳದು ತನ್ನ 
ಸೇವಿಯೊಳಿಟ್ಟು ಅಪವರ್ಗ ಕೊಡುವಾನು 
ದೇವಕಿನಂದನ ಕೃಷ್ಣ ಮೂರುತಿ ಕರು - 
ಣಾವಾರಿಧಿ ನಮ್ಮ ವಿಜಯವಿಠ್ಠಲರೇಯ 
ಜೀವೋತ್ತುಮಾ ಮಧ್ವಮುನಿ ಮನ ದೈವವೇ ॥ 4 ॥

ಆದಿತಾಳ

ಇದೆ ಜನುಮ ಸಾರ್ಥಕಾ ಇದೆ ಸರ್ವಕಾರ್ಯಸಿದ್ಧಿ 
ಇದೆ ಕುಲಕೋಟಿ ಉದ್ಧಾರ ಇದಕ್ಕಿಂತಧಿಕವಿಲ್ಲ 
ಇದಕೆ ಸಮಾನವಿಲ್ಲ ಇದೆ ಮುಖ್ಯಯಾತ್ರಿ ಎನ್ನಿ 
ಇದೆ ಇದೆ ಇದೆ ಸಿದ್ಧ ಯದುಕುಲೇಶನ ದಿವ್ಯ 
ಪದಗಳ ಒಮ್ಮೆ ನೋಡೆ ಪದವಿಗೆ ಸೋಪಾನ 
ಮುದದಿಂದ ಸ್ಥಿರವಹದು 
ಸದಮಲಾನಂದಮುನಿಗೊಲಿದ ಮುದ್ದು ಕೃಷ್ಣನು 
ಹೃದಯರ ಮನೋವಾಸ ವಿಜಯವಿಠ್ಠಲ ಪಡುವಲ 
ಉದಧಿ ತೀರದಲಿಪ್ಪ ಇದೆ ದ್ವಾರಕಿ ಎಂದು ॥ 5 ॥

ಜತೆ

ಮಧ್ವಸರೋವರ ಸ್ನಾನ ಮುದ್ದು ಕೃಷ್ಣನ ಧ್ಯಾನ 
ಶುದ್ಧನಾಗಿ ಮಾಡೆ ವಿಜಯವಿಠ್ಠಲ ಕಾವಾ ॥
**************

No comments:

Post a Comment