Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಪಾಂಡುರಂಗ ಅಪರೋಕ್ಷ ಸುಳಾದಿ
ರಾಗ ತೋಡಿ
ಧ್ರುವತಾಳ
ಅಂದು ಮಾನಿಸನಾಗಿ ಲೋಹಕ್ಷೇತ್ರದಲ್ಲಿ
ಬಂದು ಸುಳಿದು ಪೋದುದು ಅರಿಯಾದೆ
ಮಂದಮತಿಗ ನಾನು ಮಾನುಷ್ಯಾನ್ನವ ಬಿಡದೆ
ತಿಂದ ಪ್ರಯುಕ್ತದಲ್ಲಿ ಇನಿತಾಯಿತೊ
ಹಿಂದೆ ಮಾಡಿದ ಕರ್ಮಾವರ್ಕವಾಗಿದ್ದ ಮರವೋ
ಸಂದೇಹ ಗೊಳಿಸುವದು ನಿನ್ನ ಬಗೆಯೋ
ಎಂದಿಗೆಂದಿಗೆ ತಿಳಿಯಾದಿದ್ದೆ ವಿಷಯಂಗಳಿಗೆ
ಪೊಂದಿಕೊಂಡು ನಿನ್ನ ಮಹಾಮಹಿಮೆಯಾ
ಇಂದು ನೀನೆ ಕೃಪೆಯಿಂದ ಬಾಂಧವನಾಗಿ
ಬಂದು ತಿಳುಪಿದ ಕಾರಣದಿಂದಲಿ
ನಂದವಾಯಿತು ಮನಕೆ ಉತ್ಸಾಹವೆಂದೆಂಬೋ
ಸಿಂಧುವಿನೊಳಗೆ ಮುಣುಗಿ ತೇಲಾಡಿದೆ
ಅಂದೆ ಈ ಪರಿಯಲ್ಲಿ ತಿಳಿಸಿದರಾದರೆ
ಮಂದಿಯೊಳಗೆ ತಲೆ ಹೊರೆಯಾಗುವೆನೆ
ಇಂದಲ್ಲ ನಿನ್ನ ಮಾಯಾ ಅನಂತಕಲ್ಪಕೆ
ಒಂದೊಂದು ಪರಿ ಉಂಟು ಬೊಮ್ಮಗರಿದು
ಕುಂದದೆ ಸತ್ವರಿಗೆ ಮೊದಲು ವಿಷಯಾ ಆಮೇಲೆ
ಸಂದುವದು ಅಮೃತ ನೋಡ ನೋಡೆ
ಎಂದು ನಿನ್ನಂಘ್ರಿದ್ವಯ ಪೂಜಿಪ ಸಜ್ಜನರು
ಒಂದೇ ಮನಸಿನಲಿ ಸಾರುವರೊ
ಇಂದುಕ್ಷೇತ್ರನಿವಾಸ ವಿಜಯವಿಟ್ಠಲ ಕೃಷ್ಣ
ನಂದ ಗೋಕುಲದಲ್ಲಿ ಗೋಪಾಲಕನಾಗಿದ್ದೆ ದೇವ ॥ 1 ॥
ಮಟ್ಟತಾಳ
ಜ್ಯಾರಿಪೋದ ಜೀವ ಇಂದ್ರದೇವರ ಮನೆಯ
ದ್ವಾರದ ಬಳಿಯಲ್ಲಿ ದಾಸ್ಯಭಾವವೆಂದು
ಕಾರುಣ್ಯವೆ ಮಾಡಿ ಸ್ವಪ್ನದಲ್ಲಿ ಇದೆ
ವಾರುತಿ ಪೇಳಲಾಯ್ತು ನಿಶ್ಚಯಿಸಿಕೊಂಡೆ
ಆರಾರ ಸಾಧನ ಆವುದೊ ನಾನರಿಯೆ
ಘೋರಪಾತಕಹಾರಾ ವಿಜಯವಿಟ್ಠಲ ಹದಿ -
ನಾರು ಸಾವಿರ ಗೋಪಸ್ತ್ರೀಯರರಾಳಿದ ಕೃಷ್ಣ ॥ 2 ॥
ತ್ರಿವಿಡಿತಾಳ
ಈರ್ವರ ಕರಸುವದೆಂದವ ಪೇಳಿದ
ಗೀರ್ವಾಣ ಸಭೆಯಲ್ಲಿ ನುಡಿದ ಮಾತು
ಊರ್ವಿಯೊಳಗೆ ಸಿದ್ಧಪ್ರಮೇಯ ಇದೆ ನಿಜವೆಂದು
ನಿರ್ವಾಧಿಕ ಬಾಲಾಪ್ರಾಯವೆನದೆ
ಗರ್ವವ ತಗ್ಗಿಸಿ ಕರದು ವೈಯ್ಯಾದೆ ಬಿಡರು
ನಿರ್ವಾಹಕರ್ತರು ಮೇಲಿನವರು
ನಿರ್ವಹಿಸಲಾರರು ಮರ್ತ್ಯರೆಂದೆನುತ ಆ
ಓರ್ವನು ಕೂಗಿ ಸಾರಿ ಪೋದನು
ಸರ್ವಥಾ ನಾನಿದಕೆ ಶಂಕಿಸುವವನಲ್ಲಾ
ಸರ್ವದ ನಿನ್ನಾಜ್ಞದವನೋ ನಾನು
ಸರ್ವಶಕ್ತನೇ ಕೇಳೋ ಬಿನ್ನಪ ಒಂದುಂಟು
ಪೂರ್ವದಲ್ಲಿದ್ದ ಮನಸ್ಸಿನಪೇಕ್ಷ
ಗೀರ್ವಾಣನದಿ ಸ್ನಾನ ಗಯಾ ಪಿಂಡದಾನಾ
ಸರ್ವೆಂದ್ರಿಯಾಗಳಿಂದ ನಿನ್ನ ಸೇವೆ
ದರ್ವಿಭೂತಸ್ಥನಾಗಿವನೆಂದು ಮನ್ನಿಸಿ
ಪೂರ್ವಮತಿಯ ಕೊಟ್ಟು ಪಾಲಿಸುತ್ತ
ಈರ್ವಗೆ ಮಾಡಿಸು ಪುಸಿಯಗೊಡದೆ ಮಾತು
ದೂರ್ವಿನಾದರೂ ನಿನಗೆ ಕೊಡಲರಿಯೆನೋ
ಶರ್ವಾದಿಗಳಿಂದ ವಂದ್ಯ ವಿಜಯವಿಟ್ಠಲ ಕೃಷ್ಣ
ನಿರ್ವಾಣಗಿಂದಧಿಕ ನಿನ್ನ ಭಕ್ತಿ ಮುಕುತಿ ಸುಖ ॥ 3 ॥
ಅಟ್ಟತಾಳ
ಕಸಗೊಂಡ ಭೂಪತಿ ತಿರುಗಿ ಕೊಡುವೆನೆಂದು
ವಸಿಕರನಾಗಿ ಬಡವಂಗೆ ವೊಲಿದಾರೆ
ವಸುಧಿ ಮಾನವರೆಲ್ಲಾ ವಂದಾಗಿ ಪೋಗಿ ಮಾ -
ಣಿಸಲಾಗಿ ಭೂಪತಿ ಕೊಡದಿಪ್ಪನೇ
ಬಿಸಿಜನಾಭನೆ ಕೃಪಾರಸಪೂರ್ಣ ದೃಷ್ಟಿಲಿ
ನಸುನಗೆಯಲಿ ನಿನ್ನ ಭಕುತನ್ನ ಸಂತಾಪ
ಕೊಸರಿದರಿವಾರೆಂದು ಇಚ್ಛೆ ಮಾಡಿದರೆ ನಿ -
ಲ್ಲಿಸಲಾಪರೆ ಸರ್ವಲೋಕದವರು ಕೂಡಿ
ಪಶುಪತಿ ಮಿಕ್ಕಾದವರು ಈ ಮಾತಿಗೆ
ಕುಶಲವಾಗಲೆಂದು ನಿನ್ನ ಸ್ತುತಿಪಾರು
ವಿಷಭುಂಜ ವಿಜಯವಿಟ್ಠಲ ಕೃಷ್ಣ ವಲಿದಾರೆ
ಹಸಗೆಟ್ಟು ಪೋಗುವುದು ಅನಾದಿ ದುಷ್ಕರ್ಮ ॥ 4 ॥
ಆದಿತಾಳ
ಚಿತ್ತವಾದರು ಹರಿಯೆ ಚಿತ್ತಜನಯ್ಯಾ ನಿನ್ನ
ಚಿತ್ತ ನಮ್ಮ ಭಾಗ್ಯ ಹತ್ತರಾ ತುತ್ತು ಪುಣ್ಯ-
ಕೀರ್ತಿಯನು ಬರುವಂತೆ ವಾರ್ತಿಯಾಗಲಿ ಎನ್ನ
ಆರ್ತವ ಪರಿಹರಿಸು ಸೋತ್ತಮರ ಗುರುವೆ
ಎತ್ತಿ ಕರವ ಮುಗಿವೆ ಮತ್ತೊಂದಾವದು ಅರಿಯೆ
ಮಿತ್ರಾನೆ ನಮಗೆ ನೀನು ನಿತ್ಯದಲ್ಲಿ ರಕ್ಷಿಸು
ಸತ್ಯಸಂಕಲ್ಪ ಸಿದ್ಧಿ ವಿಜಯವಿಟ್ಠಲ ಇದೇ
ಉತ್ತರ ಲಾಲಿಸಯ್ಯಾ ಅರಿಷ್ಟ ನಿವಾರಣಾ ॥ 5 ॥
ಜತೆ
ಸಂತಾಪ ಕಳೆವಲ್ಲಿ ನೀನಲ್ಲದಿನ್ನಿಲ್ಲ
ಶಾಂತಮೂರುತಿ ನಮ್ಮ ವಿಜಯವಿಟ್ಠಲ ಕೃಷ್ಣ ॥
*******
ಲಘುಟಿಪ್ಪಣಿ :
ಹರಿದಾಸರತ್ನಂ ಶ್ರೀಗೋಪಾಲದಾಸರು
ಲೋಹಕ್ಷೇತ್ರನಿವಾಸ = (ಲೋಹ - ರಜತ) ಉಡುಪಿಯಲ್ಲಿ ವಿಶೇಷವಾಗಿ ಆವಾಸಮಾಡುವ ಶ್ರೀಕೃಷ್ಣ ; ಶ್ರೀಕೃಷ್ಣನದೇ ಇನ್ನೊಂದು ರೂಪ - ಪಂಢರಿನಾಥ ಎಂಬ ಅರ್ಥದ ಸೂಚನೆಯೂ ಇಲ್ಲಿದೆ.
ದರ್ವಿಭೂತಸ್ಥ = ಯಾವ ಸ್ವಾತಂತ್ರ್ಯವೂ ಇಲ್ಲದ ಸೌಟಿನಂತೆ ಅಂದರೆ ಕೇವಲ ಜಡದಂತಿರುವ ;
ಪೂರ್ವಮತಿಯ ಕೊಟ್ಟು = ಶ್ರೀವಿಜಯದಾಸರು ಪಂಢರಪುರ ಪ್ರವೇಶ ಮಾಡಿದಂದಿನಿಂದ ಇಲ್ಲಿ ಹಿಂದಿನ ಜನ್ಮದಲ್ಲಿ ತಮ್ಮ ಗುರುಗಳಾದ ಶ್ರೀಪುರಂದರದಾಸಾರ್ಯರೊಡನಿದ್ದಾಗಿನ ವಿಚಾರಧಾರೆಯೇ ಹೊರಹೊಮ್ಮುತ್ತಿದ್ದುದರಿಂದ ಹಿಂದೆ ನಾನು ಗುರುಮಧ್ವಪತಿಯಾಗಿ ನಮ್ಮ ತೀರ್ಥರೂಪರವರ ಜೊತೆಯಲ್ಲಿದ್ದಾಗ ಇದ್ದ ಮನಸ್ಸಿನ ನೆಮ್ಮದಿಯನ್ನಿತ್ತು ಎಂಬ ಪ್ರಾರ್ಥನೆ;
ಈರ್ವಗೆ = ಗಂಗಾಸ್ನಾನ , ಗಯೆಯಲ್ಲಿ ಪಿತೃಗಳಿಗೆ ಪಿಂಡಪ್ರದಾನ , ಈ ಎರಡು ಕರ್ಮ ಮಾಡಿಸು ;
ಈ ಸುಳಾದಿಯ ರಚನೆಯ ಸಂದರ್ಭ :
ಒಮ್ಮೆ ಶ್ರೀವಿಜಯದಾಸರು ಸಂಚಾರಕ್ರಮದಿಂದ ಭೀಮಾತಟದಲ್ಲಿರುವ ಪಂಢರಪುರ ಮಹಾಕ್ಷೇತ್ರದಲ್ಲಿ ಶ್ರೀಪಾಂಡುರಂಗನ ಸನ್ನಿಧಿಯನ್ನು ತಲುಪಿದರು. ಶ್ರೀದಾಸರೊಡನಿದ್ದ ಪರಿವಾರದವರ ಗುಂಪಿನಲ್ಲಿಯೇ ಅಪರಿಚಿತನಾದ ಓರ್ವ ಸುಂದರ ವ್ಯಕ್ತಿ ಬೆಳಗ್ಗಿನಿಂದ ಸಾಯಂಕಾಲದವರೆವಿಗೂ ಓಡಾಡಿಕೊಂಡಿದ್ದನು. ರಾತ್ರಿ ಉಪನ್ಯಾಸವಾದ ಮೇಲೆ ಭಕ್ತರಿಗೆ ತೀರ್ಥ, ಮಂತ್ರಾಕ್ಷತೆ ನೀಡುವ ಸಮಯದಲ್ಲಿ ಆತ ಅಲ್ಲಿರಲೇ ಇಲ್ಲ. ' ಪದಜರೂಪ (ಶೂದ್ರರೂಪ)ದಿಂದ ಕಾಣಿಸಿಕೊಂಡು ನನಗೆ ಚಿಂತೆಗೆ ಎಡೆಮಾಡಿದ್ದ ಆ ಲೋಹಕ್ಷೇತ್ರ(ಉಡುಪಿ) ನಿವಾಸನೇ ಆತನಿದ್ದಿರಬೇಕು ' ಎಂಬ ಯೋಚನೆಗೊಳಗಾದರು ಶ್ರೀದಾಸರು. ನಾಲ್ಕಾರು ದಿವಸಗಳು ಪುನಃ ಆತ ಬರುವನೇನೋ ಎಂದು ನಿರೀಕ್ಷಿಸಿ , ಬಾರದಿರಲು , ' ಇದು ಪಾಂಡುರಂಗನದೇ ನನ್ನೊಡನಾಡುವ ಚೆಲ್ಲಾಟವೆಂದು ' ನಿಶ್ಚಯಿಸಿದರು. ಆ ದಿನ ಧ್ಯಾನಕ್ಕೆ ಕೂತು , ಧ್ಯಾನದಲ್ಲಿ ಶ್ರೀಸ್ವಾಮಿಯನ್ನು ಕಂಡು ರಚಿಸಿದ ಸುಳಾದಿ ಇದು .
ಈ ಸುಳಾದಿಯಲ್ಲಿ , ಕಾಶೀ ಹಾಗೂ ಗಯಾಕ್ಷೇತ್ರಕ್ಕೆ ಪುನಃ ಹೋಗಬೇಕೆಂಬ ತಮ್ಮ ಅಪೇಕ್ಷೆಯನ್ನು ಪೂರೈಸೆಂದು ಶ್ರೀಪಾಂಡುರಂಗನನ್ನು ಪ್ರಾರ್ಥಿಸಿದ್ದಾರೆ.
🙏 ಶ್ರೀಕೃಷ್ಣಾರ್ಪಣಮಸ್ತು 🙏
******
No comments:
Post a Comment