Monday, 9 December 2019

ನಾನಾಪರಿಯಿಂದ ನಿನ್ನ vijaya vittala ankita suladi ಪಾಂಡುರಂಗ ಮಹಿಮಾ ಸುಳಾದಿ NAANAAPARIYINDA NINNA PANDURANGA MAHIMA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ಪಂಢರಪುರಿ ಪಾಂಡುರಂಗನ ಮಹಿಮಾ ಸುಳಾದಿ 

 ರಾಗ ಪಂತುವರಾಳಿ 

 ಧ್ರುವತಾಳ 

ನಾನಾಪರಿಯಿಂದ ನಿನ್ನ ಚರಣಾಬ್ಜಾ 
ಮಾನಸದಲ್ಲಿ ಧ್ಯಾನಿಸೆ ಕಾಣಿಸದಿಪ್ಪ ಕಪಟ -
ವೇನಯ್ಯಾ ನಾನು ಬಲು ಅಪರಾಧಿಯೋ 
ಸ್ನಾನ ಸಂಧ್ಯಾವಿಲ್ಲದಿರೇ ವಿಪ್ರ 
ಯೋನಿಯಲ್ಲವೆ? ಜಾತಿಯು 
ಭಾನುಕೋಟಿತೇಜಾ ಭಕ್ತರ 
ಧೇನು ಸಂತತ ದಯಾಂಬುಧಿ 
ಹೀನ ಯೋನಿಜ ಮಾನವರು ನಿನ್ನ 
ಏನು ತುತಿಪಾರು ಕೇಳಿದಯ್ಯಾ 
ನೀನೆ ತಾವೆ ಎಂದು ಭಜಿಸಿ ಇಂಥ 
ಅಜ್ಞಾನದ ಕುಣಿವಾರತಿ 
ಏನೆಂಬೆ ನಿನ್ನ ಮಾಯಾಶಕ್ತಿಗೆ 
ಆನು ವಿಸ್ಮಿತನಾಗುವೆ ಶ್ರೀ 
ನಾರಿಪತಿ ಬೊಮ್ಮನಯ್ಯಾ ಕೃ -
ಶಾನು ನೇತ್ರನ ತಾತನೆ ಆ
ನಿರ್ಜರಾದಿ ವಂದ್ಯ ಮಮ ಸ್ವಾಮಿ 
ಈ ನುಡಿ ನಿನಗದೋ ಮಾಣಿ ನಿನ್ನ ಸ್ವ
ಭಾವ ಎಂದಿಗೂ ಮಾಣಿಯಲ್ಲಾವೆ ಪಿರಿ -
ಯನೆ ಮಾಣಿಕಾ ಕಾಣಿಕೆ ಇತ್ತು 
ದೀನತನದಲ್ಲಿ ಬಾಯಿದೆರೆದು 
ಪ್ರಾಣನಾಗಿ ಇರು ಎಂದರೆ 
ನಾನೊಲ್ಲೆನೆಂಬೋ ಗಾದಿಯೋ 
ಕಾಣಿಗಾಗದ ಕಾಡಗಲ್ಲಾನು 
ಪಾಣಿಯೊಳು ತೋರಾಲು 
ಮೌನದಲ್ಲಿ ಬಂದು ಅವನ ಬಳಿಯಲ್ಲಿ 
ಮಾನವಂತ ನಿಲವಂತೆ 
ಹೂಣ, ಕಂಕ ಕಿರಾತ ಪುಲಕಸ 
ಹೀನಜಾತಿಗಳಿಂದಾದ 
ನೀನೆ ಪರದೈವ ಸರ್ವೋತ್ಕೃಷ್ಟನೆಂಬೋ 
ಜ್ಞಾನ ಒಂದಿರಬ್ಯಾಡವೇ 
ನಾನಾ ಪರಿಯಲಿ ನಿನ್ನ ಚರಣಾಬ್ಜಾ 
ಏನೂ ತಿಳಿಯದಾ ಪಶುವಿಗಳಿಗೆ 
ನೀನೆ ಒಲಿದದ್ದು ಎಂತಯ್ಯಾ 
ಆನಂದ ಪಂಢರಿಪುರಿರಾಯಾ 
ಮಾನಿಸರೂಪ ವಿಜಯವಿಠ್ಠಲ 
ನಾನು ನಿನಗಲ್ಲದವನೇನೊ ॥ 1 ॥

 ಮಟ್ಟತಾಳ 

ಭಕುತಿ ಭಾರಣೆಯಿಂದ ನಿನ್ನರ್ಚನೆ ಮಾಡಿದ 
ಭಕುತ ಜನದಗಿಂತ ಮಾಯಾದ ಸೊಬಗೆ 
ಅಖಿಳ ಶಕ್ತಿ ಉಳ್ಳ ಅನಿಮಿತ್ಯ ಬಂಧು 
ಲಕುಮಿವಲ್ಲಭ ನಮ್ಮ ವಿಜಯವಿಠ್ಠಲರೇಯಾ 
ಮುಕ್ತಾ ಕೇಳಿಗೆ ಒಲಿದ ಪಂಢರಪುರಿರಾಯಾ ॥ 2 ॥

 ತ್ರಿಪುಟತಾಳ 

ಎಲ್ಲಾರಿಗೆ ಇಂತು ಮೋಹಾವೆ ಕಲ್ಪಿಸಿ 
ಗಲಭೆ ಎಬ್ಬಿಸಿ ನಾನಾ ಪರಿಯಿಂದ 
ಸೊಲ್ಲುಗಳಾಡಿ ಕಂಡಲ್ಲೆ ತಿರುಗುತಿಹರು 
ಯಲ್ಲೆ ಮಾತೆಂಬಿಯಾ ತ್ರಿವಿಧ ಜೀವರ ಭೇದ 
ಇಲ್ಲದಂತಾಗುವದಲ್ಲೋ ಜೀಯಾ 
ಎಲ್ಲೆ ಸ್ತೋತ್ತರವಿದು ಕರ್ನಕ್ಕೆ ಕಠೋರ 
ನಿಲ್ಲಾದೆಯಾಗುತಿದೆ ನಿರ್ದೋಷನೆ 
ಬಲ್ಲೆನೋ ನಾ ನಿನ್ನ ವಂಚಕತನವು, ಶ್ರೀ -
ವಲ್ಲಭ ಕೇಳೆಲೋ ಜಾರಚೋರ 
ಕೊಲ್ಲುವ ಮೃಗಗಳಿಗೆ ಪರಿಪರಿವಿಧದಿಂದ 
ಹುಲ್ಲು ನೀರೆರೆದು ಸಂತೋಷಬಡಿಸಿ 
ಎಲ್ಲಾ ಪರಿಯಿಂದ ಮೆಚ್ಚಿಸಿ ಕೊನೆಗೆ, ತಾ 
ನೊಲ್ಲದೆ ಹಿಂಸೆಯಾ ಮಾಡುವಂತೆ 
ಇಲ್ಲಿಗೆ ಬರುವ ಮಾನವರಿಗೆ ಇದರಂತೆ 
ಮೆಲ್ಲನೆ ಸವಿತೋರಿ ಅಹಿಕ ಸುಖವ 
ಅಲ್ಲಿಗಲ್ಲಿಗೆ ಇತ್ತು ಕಡಿಗೆ ಕೆಡಿಸುವ ಯೋಗಾ 
ಮಲ್ಲಮರ್ಧನ ನಿನ್ನದು ನಿಶ್ಚಯಾ 
ಖುಲ್ಲಾ ಏಕಲವ್ಯ ಗುರುಭಕ್ತಿ ಮಾಡಿ ಘನ 
ಬಿಲ್ಲು ವಿದ್ಯವ ಕಲೆತು ಕೆಡಲಿಲ್ಲವೇ 
ಹೊಲ್ಲೆ ಜೀವರು ಭಕುತಿ ಮಾಡಿದರು ಫಲವಿಲ್ಲ 
ಇಲ್ಲವೊ ಏಸು ಜನುಮಕ್ಕೆ ದೇವ 
ಗೊಲ್ಲವಲ್ಲಭ ನಮ್ಮ ಸ್ವಾಮಿ ವಿಜಯವಿಠ್ಠಲ 
ಪಂಢರಿರಾಯಾ ನಿನಗೆ ನಮೋ ನಮೋ ॥ 3 ॥

 ಅಟ್ಟತಾಳ 

ಕಲಿಯುಗದೊಳಗಿಂದ ಧರ್ಮ ಹೆಚ್ಚಿತು ಕಾಣೋ 
ಹೊಲೆ ಹದಿನೆಂಟು ಜಾತಿಗಳೆಲ್ಲಾ ಒಂದಾಗಿ
ತಲೆದೂಗಿ ಪಾಡೋದು ಪೂರ್ವೋತ್ತರಾ ಜ್ಞಾನ 
ಕೆಲವು ಕೆಲವು ಇಲ್ಲದಲೆ ಸರಿ ಬಂದಂತೆ 
ಜಲಜನಾಭನೆ ನೀನೆ ಇದರೊಳಗಾವವ 
ನೆಲೆವಂತರಿಪ್ಪಾರೋ ತಿಳಿದಿಪ್ಪ ಚನ್ನಾಗಿ 
ಚಲುವ ಅಪ್ರಾಕೃತಗಾತುರ ಎನಗಿಂತು 
ತಿಳಿದಿಪ್ಪದು ಪಂಚಭೇದ ತತ್ವಜ್ಞಾನ 
ಒಳಿತಾಗಿ ಒಲಿಸಿ ಸಂಪಾದಿಸದ ದನ್ನಕ
ಸುಲಭ ಮುಕುತಿಯಾಗದೆಂದು ಅನುದಿನ 
ಬಲವಂತ ವಿಜಯವಿಠ್ಠಲ ಪಂಢರಿಪುರ 
ನಿಲಯಾ ನಿನ್ನಿಚ್ಛೆ ಮತ್ತಾವದೂ ಕಾಣೆ ॥ 4 ॥

 ಆದಿತಾಳ 

ಅವರಂತಿರಲಿ ನೀ ನನಗೆ ಸರಿಬಂದ ಗತಿಯಾ ಕೊಡು 
ತವಕದಿಂದಲಿ ಎನ್ನ ಬಿನ್ನಪ ಲಾಲಿಸಯ್ಯಾ 
ದಿವಸ ದಿವಸಕ್ಕೆ ಕ್ರಮಾನುಸಾರವಾಗಿ 
ನವನವರೂಪವನ್ನು ತೋರುತ್ತ ಸಲಹಬೇಕೋ 
ಅವಗುಣ ಎಣಿಸದಲೆ ಕರಪಡಿದು ಉದ್ಧರಿಸು 
ಭವದೂರ ಭಕುತವತ್ಸಲಾ ದಿವಿಗಂಗಾಸ್ನಾನ ಪಾದದರುಶನ 
ಲವಲವಿಕೆಯಿಂದ ಸುಜನರ ಸಂಗವಿತ್ತು 
ಪವನಾಂತರಿಯಾಮಿ ಮಾಡಿಸೋ, ನಿರ್ವಿಘ್ನ 
ಅವನಿ, ಜಲ, ತೇಜ, ವಾಯು, ಗಗನದಲ್ಲಿ ನೀನೆ 
ವಿವರಿಸಿ ಪೇಳುವುದೇನು ವಿಶ್ವಂಭರ ಕೃಷ್ಣ 
ಶಿವನಂದನ ವಾಸ ವಿಜಯವಿಠ್ಠಲರೇಯ 
ಕವಿ ಪುಂಡರಿಕ ವರದ ಪಂಢರಿಪುರರಾಯಾ ॥ 5 ॥

 ಜತೆ 

ಶರಣು ಶರಣು ನಿನ್ನ ಚರಣಾಬ್ಜಯಗಳಕ್ಕೆ 
ಕರುಣಿ ಪಂಢರಿಪುರಿ ವಿಜಯವಿಠ್ಠಲರೇಯಾ ॥
****

No comments:

Post a Comment