Audio by Mrs. Nandini Sripad
ಶ್ರೀ ಗೋಪಾಲದಾಸರಾರ್ಯ ವಿರಚಿತ ಸರ್ವವ್ಯಾಪ್ತಿ ಸುಳಾದಿ
(ಈ ಸುಳಾದಿ ಜಾತಾಪರೋಕ್ಷಿಗಳಾದ ಭಾಗಣ್ಣ ದಾಸರು ಅಂಕಿತಪೂರ್ವದಲ್ಲೇ ವೆಂಕಟಕೃಷ್ಣ ಎಂಬ ಅಂಕಿತದಿಂದ ರಚಿಸಿದ್ದು)
ರಾಗ ಯಮನ್ ಕಲ್ಯಾಣಿ ಧ್ರುವತಾಳ
ಎಲ್ಲಿ ನೋಡಲು ನೀನಿಲ್ಲದ ಸ್ಥಳವಿಲ್ಲ |
ಎಲ್ಲರಂತರ್ಯಾಮಿ ಎಲ್ಲ ಪೂರ್ಣನು ನೀನೇ |
ಹುಲ್ಲು ಕಾಷ್ಠ ಅಚೇತನಗಳಲ್ಲಿ ನೀ |
ನಿಲ್ಲದಿಲ್ಲವೆಂದು ಎಲ್ಲ ಸಾರುತಲಿದೆ |
ಸಲ್ಲದ ಮನುಜ ನಿನಗೆ ತನಗೆ ಭೇದ - |
ವಿಲ್ಲೆವೆಂಬುವಾಗ ಏನೆಂಬೆ ಹರಿಯ ಉ |
ತ್ಪಲಾ ಕಮಲ ನೀರೊಳಗಿದ್ದು ಲೇಪನ ।
ವಿಲ್ಲದ ಸಾಮ್ಯ ಪೇಳುವುದಯ್ಯ ನಿಮಗೆ |
ಎಲ್ಲರಲ್ಲಿ ನೀನು ಎಲ್ಲ ಆನಂದವಿತ್ತು
ಎಲ್ಲಾಕ್ಕೆ ಭೇದ ಎಲ್ಲಾ ನಿರ್ಲೇಪ
ಚಿಲ್ಲರ ದೈವದ ಗಂಡ ವೆಂಕಟಕೃಷ್ಣ
ನಿನ್ನ ಬಲ್ಲವ ಬಲ್ಲ ಬಲ್ಲಾರು ಪೂರ್ಣವರಿಯ ॥ 1 ॥
ಮಟ್ಟತಾಳ
ವಿಶ್ವತೋಮುಖ ನೀನೇ ವಿಶ್ವತೋಚಕ್ಷು ನೀನೇ |
ವಿಶ್ವತೋ ಬಾಹು ನೀನೆ ವಿಶ್ವಕರ್ನನು ನೀನೆ |
ವಿಶ್ವತೋ ಶ್ರವಣನೆ ವಿಶ್ವಾಧಾರನೆ |
ವಿಶ್ವವ್ಯಾಪಕ ಸರ್ವವಿಶ್ವಮಯನೆ |
ವಿಶ್ವಕರ್ತೃತ್ವ ಮಹೇಶ್ವರಗುಂಟೆಂಬ ಆ ।
ವಿಶ್ವಾಸಘಾತಕಿಗೇನೆಂಬೇನು ಹರಿಯೆ ।
ವಿಶ್ವನಾಮಕ ಸಿರಿ ವೆಂಕಟಕೃಷ್ಣ |
ವಿಶ್ವಾಸ ಕೊಡೋ ನಿನ್ನ ವಿಶ್ವಚರಣದಲಿ ॥ 2 ॥
ತ್ರಿವಿಡತಾಳ
ಅಂಗುಟ ಮಾತುರ ಪರಿಮಾಣು ಮೂರುತಿ ನೀನೇ |
ರಂಗಾ ಆತುಮ ಅಂತರಾತ್ಮ ಮೂರುತಿ ನೀನೆ |
ಲಿಂಗದೇಹವು ಭಂಗವಾಗುವುದಕ್ಕೆ ಸಾಧು |
ಸಂಗದಿಂದಲ್ಲಿ ಸಾಧನಾಂತರದಲ್ಲಿ |
ಶೃಂಗಾರದಿಂದಲಿ ಒಂದೇ ಜನ್ಮವು ನಿಲ್ಲೆ ।
ಕಂಗಳಿಗೆ ಕಾಣಿಸಿಕೊಂಬ ಬಿಂಬಮೂರುತಿ ನೀನೆ ।
ಹಿಂಗದೆ ಮುಕ್ತಿಯೋಗ್ಯ ಜೀವಂಗಳು ಕರ್ಮ ಫ ।
ಲಂಗಳನುಭವಿಪ ವಾಸನಾ ಮೂರುತಿ ನೀನೆ ।
ಲಿಂಗದೇಹವು ನಿತ್ಯಸಂಸಾರಿಗಳಿಗೆ ।
ಭಂಗವಿಲ್ಲದೆ ಸ್ವರ್ಗ ನರಕನೀಯುವವ ನೀನೆ ಉ ।
ತ್ತುಂಗ ಮಹಿಮನೆ ತಾಮಸಜನರಿಗೆ ದುಷ್ಕ ।
ರ್ಮಂಗಳ ಮಾಡಿಸಿ ತಮಸನೀಯುವವ ನೀನೆ ।
ಗಂಗಾದಿ ತೀರ್ಥದಲ್ಲಿದ್ದು ಸುಜನರ ದೋ ।
ಷಂಗಳ ಕಳೆವ ಮಂಗಳಾತ್ಮಕ ನೀನೆ |
ತುರಂಗವದನ ಸಿರಿ ವೆಂಕಟಕೃಷ್ಣ ವಿ |
ಹಂಗವಾಹನ ನೀನೆ ಭುಜಂಗಶಯನನೆ ॥ 3 ॥
ಅಟ್ಟತಾಳ
ಸಿರಿಯಲ್ಲಿ ನೀನೆ ಪರಮೇಷ್ಠಿಯಲ್ಲಿ ನೀನೆ |
ಮಾರುತ ವಾಣಿ ಭಾರತಿಯರಲ್ಲಿ ನೀನೆ |
ಉರಗನಲ್ಲಿ ನೀನೆ ಗರುಡನಲ್ಲಿ ನೀನೆ |
ಹರನಲ್ಲಿ ನೀನೆ ಸೌಪರಣಿಯಲ್ಲಿ ನೀನೆ ।
ಗಿರಿಪತಿಯ ಸುತಳಲ್ಲಿ ಪೂರ್ಣ ನೀನೆ |
ಸುರಪತಿ ಕಾಮಾದಿ ಸುರರಲ್ಲಿ ನೀನೆ ।
ನಾರದ ತುಂಬುರ ಗಂಧರ್ವರಲ್ಲಿ ನೀನೆ ।
ಸುರಸಿದ್ಧಸಾಧ್ಯ ಕಿನ್ನರರಲ್ಲಿ ನೀನೆ |
ಶರಧಿಯಲ್ಲಿ ನೀನೆ ಗಿರಿಗುಹ್ಯಗಳಲ್ಲಿ ।
ಕರೆದರೆ ಓ ಎಂಬ ಪ್ರತಿಶಬ್ದ ನೀನೆ |
ಪರಶುರಾಮನಾಗಿ ಪಾವಕನಲ್ಲಿ ನೀನೆ |
ಬಾಹಿರ ಅಂತರ ದಶದಿಕ್ಕುಗಳಲ್ಲಿ |
ಪರಿಪೂರ್ಣವಾಗಿದ್ದ ಪರಮಾತ್ಮನು ನೀನೆ ।
ನೊರಜು ಗಜ ಸಿಂಹ ಶಾರ್ದೂಲ ಮೊದಲಾದ |
ಸರುವ ಜೀವರಲ್ಲಿ ಪರಿಪೂರ್ಣ ನೀನೆ |
ಮುರು ಮಧು ಮಾಗಧ ಮೊದಲಾದ ಖಳರಲ್ಲಿ ।
ಕುರುಮಾನೆಂದು ದುಷ್ಕೃತ ಪ್ರೇರಕ ನೀನೆ ।
ಧುರವಿಕ್ರಮನಾಮನೆ ವೆಂಕಟಕೃಷ್ಣ |
ದೂರಾ ದೂರನೆ ಅತಿದೂರತರನೆ ॥ ೪ ॥
ಆದಿತಾಳ
ನಿಗಮ ತಂದವ ನೀನೆ ನಗಧರ ನೀನೆ |
ಜಗವನು ತಂದ ಅಸುರಾಂತಕ ನೀನೆ |
ಮೃಗರೂಪ ನರರೂಪ ತಾಳಿದ ನರಸಿಂಹ ನೀನೆ |
ಮಗುವಾಗಿ ಗಗನ ಮೀರಿದ ತ್ರಿವಿಕ್ರಮ ನೀನೆ ।
ಮಗನಾಗಿ ಮಾತೆ ಘಾತಿಸಿದ ಭಾರ್ಗವ ನೀನೆ |
ಜಗವನರಿಯೆ ರಾವಣಾಂತಕ ನೀನೆ |
ನಗುತ ಪೂತನಿ ಅಸುವ್ಹೀರಿ ಶಕಟನೊದ್ದ |
ಹಗೆ ಕಂಸನ ಕೊಂದ ಕೃಷ್ಣ ನೀನೆ|
ಮೃಗಧರಗೊಲಿದು ಬತ್ತಲೆ ನಿಂದು ತ್ರಿಪುರವ |
ಬಗಿದು ಮೆರೆವ ಬೌದ್ಧಾವತಾರನು ನೀನೆ |
ಸೊಗಸಾಗಿ ಹಯನೇರಿದ ಕಲಿಕಿ ನೀನೆ |
ಮಿಗೆ ಅನಂತಾನಂತ ಅವತಾರನೆ |
ಜಗಜನ್ಮಾದಿ ಕಾರಣನೆ ವೆಂಕಟಕೃಷ್ಣ |
ನಿಗಮಗೋಚರ ಆಘಶೂನ್ಯ ಪಾವನನೆ ॥ 5 ॥
ಜತೆ
ಸರ್ವಾರಾಧಾರನೆ ಸರ್ವನಿರ್ಲೇಪನೆ |
ಸರ್ವದರ್ಶನನಾಮ ವೆಂಕಟಕೃಷ್ಣ ॥
************
No comments:
Post a Comment