Audio by Mrs. Nandini Sripad
ರಾಗ ಕಾಪಿ
ಧ್ರುವತಾಳ
ಆವ ಸುಕೃತವೊ ಮತ್ತಾವ ಗುರುಗಳ ದಯವೊ
ಆವಾವ ಗೋತ್ರದಲ್ಲಿ ಉದ್ಭವಿಸಿದ ಫಲವೊ
ಆವ ಪುತ್ರನು ಸತ್ಕರ್ಮ ಮಾಡಿದ ಪುಣ್ಯವೊ
ಆವ ನಿಜರಾಣಿ ನಡಕೊಂಡ ಬಗೆಯೊ
ಆವ ಸುಜನ ಬ್ರಾಹ್ಮಣರು ಹರಸೀದ ಹರಕೀಯೊ
ಆವ ಬಾಂಧವನು ಪೇಳಿಕೊಟ್ಟ ಮಾರ್ಗವೊ
ಆವ ಕ್ಷೇತ್ರದಲ್ಲಿ ಮಾಡಿದ ಸಾಧನವೊ
ಆವ ತಾತ್ವಿಕರು ಪ್ರೇರಿಸಿದ ಭಾಗ್ಯವೊ
ಆವಾವದು ಎನಗೆ ಒಂದಾದರು ತಿಳಿಯದು
ಭಾವಜ್ಞರು ಬಲ್ಲರು ಸ್ಥಿತಿಗತಿಯಾ
ಈ ಉಡುಪಿನ ಯಾತ್ರೆ ಮಾಡುವಗೋಸುಗ
ಪಾವಮಾನಿಯ ಮತದಲ್ಲಿ ಪೊಂದಿ ನಿತ್ಯ
ಪಾವನನಾಗಿ ನಡೆತಂದವರ ಸೌಭಾಗ್ಯ
ದೇವತಿಗಳು ಕೊಂಡಾಡುವರು
ಜೀವನಮುಕ್ತ ನಾವಾ ಕುಲಗೋತ್ರರೊಡಗೂಡಿ
ಕೈವಲ್ಯಾದಲ್ಲಿ ಮುಂದೆ ಸುಖಿಸುವರು
ಜೀವೇಶ ಮಧ್ವಮುನಿಯಿಂದ ಪೂಜೆಯಗೊಂಡ
ಶ್ರೀವಾಸಾ ನಮ್ಮ ಸಿರಿ ವಿಜಯವಿಠ್ಠಲರೇಯಾ
ಕಾವಾನು ಕೃಪೆಯಿಂದ ಧರ್ಮ ಮಾರ್ಗವು ತೋರಿ ॥ 1 ॥
ಮಟ್ಟತಾಳ
ಸಕಲ ಸಂರಕ್ಷಕರು ಮಾತೆಯ ತರುವಾಯ
ಸಕಲ ಬೋಧಕರೆಲ್ಲಾ ತಂದೆಯ ತರುವಾಯ
ಸಕಲ ಸುಖಗಳೆಲ್ಲ ಭುಕ್ತಿಯ ತರುವಾಯ
ಸಕಲ ಭೋಗಂಗಳು ಸೌಖ್ಯದ ತರುವಾಯ
ಸಕಲ ವ್ರತಂಗಳು ಹರಿದಿನದ ತರುವಾಯ
ಸಕಲ ಕ್ಷೇತ್ರಂಗಳು ಉಡುಪಿನ ತರುವಾಯ
ಸಕಲ ವಿಗ್ರಹಗಳು ಕೃಷ್ಣನ ತರುವಾಯ
ಸಕಲ ಶಾಸ್ತ್ರಂಗಳು ಸುಧಾದ ತರುವಾಯ
ಸಕಲ ವರ್ಚಸವೆಲ್ಲಾ ವೈಷ್ಣವ ತರುವಾಯ
ಸಕಲೇಶ ಉಡುಪಿಯ ಶ್ರೀಕೃಷ್ಣ ವಿಜಯವಿಠ್ಠಲಾ
ಅಖಿಲ ವೈಭವದಿಂ ಮೆರೆದ ತರುವಾಯ ॥ 2 ॥
ತ್ರಿವಿಡಿತಾಳ
ಎಲ್ಲಿ ಕೃಷ್ಣನ ಸದನಾ ಎಲ್ಲಿ ಕೃಷ್ಣನ ಸ್ಥಾನಾ
ಎಲ್ಲಿ ಕೃಷ್ಣನ ಮೂರ್ತಿ ಎಲ್ಲಿ ಕೃಷ್ಣನ ಕೀರ್ತಿ
ಎಲ್ಲಿ ಕೃಷ್ಣನ ಗಾಯನ ಎಲ್ಲಿ ಕೃಷ್ಣನ ಧ್ಯಾನಾ
ಎಲ್ಲಿ ಕೃಷ್ಣನ ಸ್ತೋತ್ರಾ ಎಲ್ಲಿ ಕೃಷ್ಣನ ಯಾತ್ರಾ
ಎಲ್ಲಿ ಕೃಷ್ಣನ ಪ್ರಣಾಮಾ ಎಲ್ಲಿ ಕೃಷ್ಣನ ನಾಮ
ಎಲ್ಲಿ ಕೃಷ್ಣನಾರಾಧನೆ ಎಲ್ಲಿ ಕೃಷ್ಣ ಶ್ರವಣಾ
ಎಲ್ಲಿ ಕೃಷ್ಣನ ಪಾದ ತೀರ್ಥ ಮತ್ತೆ ಪ್ರಸಾದ
ಎಲ್ಲಿ ಎಲ್ಲ್ಯಾದರು ಇಲ್ಲವೋ ಈ ಸೊಬಗು
ಎಲ್ಲಿ ಈ ವೈಷ್ಣವ ರಾಗಮ ಕಾಣೆನೋ
ಸಲ್ಲುವದೂ ಕೀರ್ತಿ ಶ್ರೀ ಮಧ್ವಾಚಾರ್ಯರಿ -
ಗಲ್ಲಾದೆ ಮತ್ತೊಂದು ದೈವವಿಲ್ಲಾ
ಎಲ್ಲಾ ಕ್ಷೇತ್ರಂಗಳ ಶಿರೋರತ್ನವಾಗಿದೇ
ಬಲ್ಲವಗೆ ಫಲ ದೂರವಿಲ್ಲ
ಬಲ್ಲಿದ ಉಡುಪೀನ ಕೃಷ್ಣ ವಿಜಯವಿ -
ಠ್ಠಲನ ಮಹಿಮೆಗೆ ನಮೋ ನಮೋ ॥ 3 ॥
ಅಟ್ಟತಾಳ
ಉಡುಪಿನ ಯಾತ್ರಿಯ ಮಾಡಿದವ ನಿತ್ಯಾ
ಪೊಡವಿಯೊಳಗುಳ್ಳ ಯಾತ್ರಿಯ ಚರಿಸಿದವ
ಉಡುಪಿನ ಯಾತ್ರಿಯ ಮಾಡಿರೋ ಮಾಡಿರೋ
ಕೊಡಬೇಡ ಕೊಡಬೇಡ ಕೊಟ್ಟರೊಂದೆ ಕಾಸು
ಅಡಿಗಡಿಗೆ ನೂರು ಮಡಿ ಫಲವಾಹದು
ಉಡುಪಿನ ಯಾತ್ರೆಯ ಮಾಡದಿದ್ದರೆ ಪುಣ್ಯ
ಕೆಡುವದು ಮುದ್ರೆ ಇಲ್ಲದ ದ್ರವ್ಯದಂತೆ
ಜಡಮತಿ ಕಳೆವ ವಿಜಯವಿಠ್ಠಲ ಕೃಷ್ಣ
ಬಿಡನೋ ಬಿಡನೋ ತನ್ನ ಬಳಿಗೆ ಬಂದವನ ॥ 4 ॥
ಆದಿತಾಳ
ಇದೆ ಇದೆ ಭಾಗ್ಯವಿದೆ ಇದೆ ಇದೆ ಭಾಗ್ಯವೆಂದು
ಯದುಕುಲೋತ್ತಮನ ಪದಗಳ ನೋಡುವದು ಭಾಗ್ಯ
ಇದೆ ಇದೆ ಇದೆ ಲಾಭ ಇದೆ ಎನಗೆ ಪರಮ ಲಾಭ
ಸುಧಾ ಗ್ರಂಥ ಓದಿದವರ ಪದ ದರುಶನವಾಗೆ
ಪದ ಹಸ್ತ ನಯನ ನಾಸ ವದನ ಕರ್ನ ನಾಲಿಗೆ
ಸದಾ ಇದ್ದದಕೆ ಸಿದ್ಧ ಇದೆ ಸಾರ್ಥಕ ದಿವಸ
ಮುದದಿಂದ ಎನ್ನಯ ಹೃದಯಾನಂದವಾಯಿತು
ಮಧುಸೂದನ ಕೃಷ್ಣ ವಿಜಯವಿಠ್ಠಲರೇಯನ
ನಿದರುಶನ ಯಾತ್ರಿ ಇಹದಲ್ಲಿ ಫಲವ್ಯಾಕೆ ॥ 5 ॥
ಜತೆ
ಶ್ರೀ ಮದಾಚಾರ್ಯರಿಗೆ ಒಲಿದಾ ಉಡುಪಿನ ಕೃಷ್ಣ
ಶ್ರೀಮನೋಹರ ನಮ್ಮ ವಿಜಯವಿಠ್ಠಲರೇಯಾ ॥
*********
No comments:
Post a Comment