Saturday 14 December 2019

ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ankita jagannatha vittala

ಜಗನ್ನಾಥದಾಸರು
ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ
ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ

ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ
ಕಮಲ ಸಂಭವನ ಲೋಕದಲಿ ಮೆರೆದೆ
ಸುಮನಸರ ನುಡಿಗೇಳಿ ಲೋಕಗಳ ದುರಿತೋಪ
ಶಮನ ಗೊಳಿಸಲು ಬಂದೆ ತುಮಲ ಹರುಷದಲಿ 1

ಭೂತನಾಥನ ಜಟಾಜೂಟದಿಂದುದ್ಭವಿಸಿ
ಶ್ವೇತಪಿಂಗಳ ಶೈಲಶಿಖರಕಿಳಿದೇ
ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ
ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ 2

ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ
ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ
ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ
ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ 3

ಜನಪದಗಳಾಗಿ ಕಾನನವಾಗಿ ಮನ್ವಾದಿ
ದಿನಗಳಲ್ಲಾಗಿ ಮತ್ತೇನಾಗಲೀ
ಮನುಜ ಮಜನಗೈಯೆ ವಾಜಪೇಯಾದಿ ಮಖ
ವನುಸರಿಸಿದಕೆ ಫಲವೇನು ತತ್ಪಲವೀವೆ 4

ಅರವತ್ತು ಸಹಸ್ರ ವರುಷಂಗಳಲ್ಲಿ ನಿ
ರ್ಜರ ತರಂಗಿಣಿಯ ಮಜ್ಜನದ ಫಲವು
ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ
ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ 5

ಮನನಶೀಲ ಸುಯೋಗಿಗಳಿಗಾವ ಗತಿಯು ಇಹ
ವನುದಿನದಿ ನಿನ್ನ ತೀರದಲಿ ಇಪ್ಪಾ
ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ
ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ 6

ತಾಯೆ ಎನ್ನನುದಿನದಿ ಹೇಯ ಸಂಸಾರದೊಳ
ಗಾಯಾಸ ಗೊಳಿಸದಲೆ ಕಾಯಬೇಕೊ
ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ
ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ 7
***********

No comments:

Post a Comment