Saturday, 14 December 2019

ರಾಜಬೀದಿಯೊಳಗಿಂದ ಕಸ್ತೂರಿ ರಂಗ ankita hayavadana RAAJABEEDIYOLAGINDA KASTURI RANGA

 ರಾಗ ಶಂಕರಾಭರಣ  ಆದಿತಾಳ 
Audio by Mrs. Nandini Sripad

ಶ್ರೀ ವಾದಿರಾಜರ ಕೃತಿ 


ತೇಜಿಯೇರಿ ಮೆರೆದು ಬಂದ ಕಸ್ತೂರಿ ರಂಗ ।
ರಾಜಬೀದಿಯೊಳಗಿಂದ ॥ ಪ ॥

ಸುತ್ತಮುತ್ತ ಸಾವಿರಾರು ಸಾಲು ದೀವಟಿಗೆ ।
ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು ॥
ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು ।
ಮತ್ತೆ ಸಭಾದಿಂದ ತೇಜಿಯ ಮೆಲ್ಲನೆ ನಡೆಸುತ್ತ ಜಾಣ ॥ 1 ॥

ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ ।
ಮೇಲು ಪಂಚಕಂಗಳೆಲ್ಲ ಮಿಗೆ ಪೊಗಳಲು ॥
ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ ।
ಧೂಳುಗಳೆಬ್ಬಿಸಿ ವೈಹಾಳಿನಿಕ್ಕುತ ಜಾಣ ॥ 2 ॥

ಮುತ್ತಿನ ತುರಾಯಿ ಅಂಗಿ ಮುಂಡಾಸು ।
ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ ॥
ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು ।
ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ ತೇಜಿಯ ಪಿಡಿದು ॥ 3 ॥

ರಂಭೆ ಮೊದಲಾದ ದೇವ ರಮಣಿಯರು ।
ಕುಂಭದಾರತಿಯೆತ್ತಿ ಕೂಡಿ ಪಾಡಲು ॥
ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ ।
ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ ॥ 4 ॥

ವೇದಘೋಷದಿಂದ ವಿಪ್ರರು ಸ್ತುತಿಸಲು ।
ಮೋದದಿಂದ ಗಾಯಕರು ಹಾಡಿ ಪಾಡಲು ॥
ಹಾದಿಬೀದಿಯಲ್ಲಿ ನಿಂತು ಸಜ್ಜನರಿಗೆಲ್ಲ ದೇವ ।
ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ ॥ 5 ॥

ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು ।
ಮುಚ್ಚಿ ತಂದ ಕೆನೆಮೊಸರು ಮೀಸಲು ಬೆಣ್ಣೆಯು ॥
ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು ।
ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು ॥ 6 ॥

ಸಣ್ಣಮುತ್ತು ತೆತ್ತಿಸಿದ ಸಕಲಾತಿ ಗೊಂಡ್ಯ ।
ಹೊನ್ನ ತೆತ್ತಿಸಿದ ಹೊಸ ಹೊಳೆವ ಸೊಬಗಿನ ॥
ಉನ್ನಂತ ಗುಣರಾಯ ಉತ್ತಮ ರಾಜಾಶ್ವವೇರಿ ।
ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ ॥ 7 ॥
***

rAjabeediyoLagininda kastUriranga tEjanEri meredu banda ll

suttamutta sAvirAru sAludeevaTige
hattudikkali beLagutiha hagalu BattigaLu l
ittaravu BhUsuraru sAlugaTTi nintiralu
matte saBhAdinda tEja mellane naDesutta jANa ll

tALaShaKaBEri tamaTe tambUri
modalAda mElupanca kangaLalli mige pogaLolu l
gALigOpurada munde rAyabiDadante sutta
dhULugaLannebbisi oyyALikkuta jANa ll

ramBhe modalAdanta sura ramaNiyaru
kuMBada Arati etti kUDipADalu l
ShamButeertha muKyarella svAmi parAk endenuta
ambujOdhbavAdigaLa ALida SreeraMgadhAma ll

saNNa muttu kettisida sakalAtigonDya
honna hosa hoLeva hoLeva sobagina l
unnanta purarAya uttama rAyaShvavEri
Ganna hayavadana ellarigiShTArtha koDuva ll
***


Rajabeediyolagininda kasturiranga tejaneri meredu banda ||

Suttamutta saviraru saludeevatige  hattudikkali belagutiha hagalu battigalu |
ittaravu bhusuraru salugatti nintiralu  matte sabhadinda teja mellane nadesutta jana ||1||

Talashakaberi tamate tamburi  modalada melupanca kangalalli mige pogalolu |
galigopurada munde rayabidadante sutta  dhulugalannebbisi oyyalikkuta jana ||2||

Rambhe modaladanta sura ramaniyaru  kumbada Arati etti kudipadalu |
shambuteertha mukyarella svami parak endenuta ambujodhbavadigala alida sreeramgadhama ||3||

Sanna muttu kettisida sakalatigondya  honna hosa holeva holeva sobagina |
unnanta puraraya uttama rayashvaveri  Ganna hayavadana ellarigishtartha koduva ||4||
***

ರಾಜಬೀದಿ  - by ಡಾ. ವಿಜಯೇಂದ್ರ ದೇಸಾಯಿ 

ರಾಜಬೀದಿಯೊಳಗಿಂದಾ  ಕಸ್ತೂರಿ ರಂಗ ತೇಜಿಯೇರಿ ಮೆರೆದು ಬಂದಾ|ಪ|
ಸುತ್ತ ಮುತ್ತ ಸಾವಿರಾರು ಸಾಲುದೀವಿಗೆ ಹತ್ತುದಿಕ್ಕಿಲಿ ಬೆಳಗುತಿದ್ದ ಹಗಲು ಬತ್ತಿಯು|ವಿಸ್ತರದಿ ಭೂಸುರರು ಸುತ್ತುಗಟ್ಟಿ ನಿಂತಿರಲು- ಮತ್ತೆ ನಮ್ಮೊಳೆಂತು ತೇಜಿ ಮೆಲ್ಲನೆ ನಡೆಸುತ ಜಾಣ |೧|

ತಾಳ ಶಂಖ ಭೇರಿ ತಂಬೂರಿ ಮೊದಲಾದ - ಮೇಲು ಪಂಚಕಂಗಳೆಲ್ಲ ಮಿಗೆ ಪೊಗಳಲು 
ಗಾಳಿಗೋಪುರ ರಾಯ ಬಿಡದಂತೆ ಸುತ್ತ - ಧೂಳುಗಳೆಬ್ಬಿಸಿ ವೈಹಾಳಿನಿಕ್ಕುತ ಜಾಣ |೨|

ವೇದಘೋಷದಿಂದ ವಿಪ್ರರು ಸುತ್ತಿಸಲು‌- 
ಮೋದದಿಂದ ಗಾಯಕರು ಹಾಡಿ ಪಾಡಲು 
ಹಾದಿಬೀದಿಯಲ್ಲಿ  ನಿಂತ ಭೂಸುರ ಜನರಿಗೆಲ್ಲ   ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ  |೩|
ರಂಭೆ ಮೊದಲಾದ ಸುರಮಣಿಯರು- ತುಂಬಿದಾರತಿ ಎತ್ತಿ‌ ಕೂಡಿಪಾಡಲು
ಶಂಭುಮುಖ ನಿರ್ಜರಾನೀಕ ಪರಾಕೆನುತ -
ಅಂಬುಧಿ ಭವಾದಿಗಳ ಆಳಿದ 
ಶ್ರೀ ರಂಗಧಾಮ ||೪||

ಹಚ್ಚನೆ ಹೆಸರುಬೇಳೆ ಹಾಲು ಕೆನೆಗಳು - ಮುಚ್ಚಿ ತಂದ ಕೆನೆಮೊಸರು ಮೀಸಲು ಬೆಣ್ಣೆಯು
ಅಚ್ಚತುಪ್ಪದಿ ಪಕ್ವವಾದ ಅತಿರಸ ಹುಗ್ಗಿಯನ್ನು
ಮೆಚ್ಚಿ ಉಂಡು ಪಾನಕ ನೀರು ಮಜ್ಜಿಗೆ ಗಳನೆ ಕುಡಿದ ||೫|| 
ಮುತ್ತಿನ ತುರಾಯಿ ಅಂಗಿ ಮುಂಡಾಸು- ತತ್ಥಳಿಪ ವಜ್ರ ಕೆಂಪಿನ ತಾಳಿ ಚೌಕಳಿ

ಮುತ್ತಿನ ಕುಂಡಲಗಳನಿಟ್ಟು ಮೋಹಿಸುತ್ತ ಬೀದಿಯೊಳು - ಕತ್ತಿಯ ಉಡಿಯಲಿ ಕಟ್ಟಿ ಕೈಯಲ್ಲಿ ಪಿಡಿದು ||೬||

ಸಣ್ಣ ಮುತ್ತು ಕೆತ್ತಿಸಿದ ಸಕಲಾತಿಗೊಂಡ್ಯ - ಹೊನ್ನ ತೆತ್ತಿಸಿದ ಹೊಸ ಹೊಳೆವ ಸೊಬಗಿನ
ಉನ್ನಂತ ಗುಣರಾಯ ಉತ್ತಮ ರಾಜಾಶ್ವ ವೇರಿ - ಎನ್ನ ಹಯವದನ ರಂಗ ಎಲ್ಲರಿಗಿಷ್ಡಾರ್ಥ ಕೊಡುತ ||೭||

ರಾಜ ಬೀದಿ

ಶ್ರೀ ವಾದಿರಾಜಯತಿ ವರೇಣ್ಯರ ರಸವತ್ತಾದ ಈ ಪದ್ಯದ ಅರ್ಥ ೩ ಬಗೆಯಿಂದ ತಿಳಿಯುವ ಪ್ರಯತ್ನ --

೧) ದ್ವಾರಕೆಯಲ್ಲಿ

ಅದು ದ್ವಾರಕೆ. ಭವ್ಯ ದಿವ್ಯ ನಗರ. ವೈಕುಂಠ ಪತಿ ಇಲ್ಲಿ ಈಗ ಅಧಿಪತಿ. ಕೇಳಬೇಕೆ? 
ಚಿನ್ನದ  ಉಪ್ಪರಿಗೆ, ಗೋಪುರಗಳ ಅರಮನೆ ಗಳು. ಹಸಿರು ಹೊದ್ದು, ಆಲ್ಹಾದಕರ ಸುಗಂಧದ ಮನೋಹರ ಬಣ್ಣ ಬಣ್ಣಗಳ  ಹೂಬಳ್ಳಿ, ಸಸ್ಯಗಳ ಸುಂದರ ವನ, ಉಪವನಗಳು. ಶೋಭಾಯಮಾನ ರಾಜಬೀದಿಗಳು.  ಉಪಬೀದಿಗಳು. ಅವುಗಳಗುಂಟ ಸಾಲು ಸಾಲು ಸಾವಿರಾರು ದೀಪಗಳು, ದೀಪಸ್ತಂಭಗಳು.
ಕೃಷ್ಣನ ಓಡಾಟ  ತಮ್ಮ ಭಾಗ್ಯ, ತಾವು ಸಿದ್ಧ  ಎಂದು ಸಾರಿ, ದಾರಿ ಕಾಯುತ್ತಿದ್ದ ದಾರಿ, ಹೆದ್ದಾರಿ ಗಳು. 
ಮುತ್ತು ರತ್ನ ಹಚ್ಚಿ ಬಂಗಾರದ ಎಳೆಗಳಿಂದ ಶಿಂಗರಿಸಿದ ಮುಂಡಾಸು ತಲೆಗೆ ಸುತ್ತಿ , ಮೇಲೊಂದು ನವಿಲುಗರಿ ಸಿಗಿಸಿಕೊಂಡು ಶೋಭಿಸುತ್ತಿದ್ದ ಕೃಷ್ಣ.  
ಮುಂಡಾಸಿನ. ಬಂಧನ ತಪ್ಪಿಸಿ ಹಣೆಯ ಮೇಲೆ ಹರಿದಾಡುವ ಕರಿ ಮುಂಗುರುಳು. ಕಿವಿಯಲ್ಲಿ ಹೊಳೆವ ಮಕರಕುಂಡಲಗಳು. ಹಣೆಯ ಅಲಂಕರಿಸಿದ ಕಸ್ತೂರಿ ತಿಲಕ.  ಮುಖದ ಮೇಲೆ ಎಂದೂ ಮಾಸದ ಮಗುಳುನಗೆ. ತುಂಟ ನಗೆ.
ಉಟ್ಟಿದ್ದು ದಿವ್ಯ ಪೀತಾಂಬರ. ಧರಿಸಿದ್ದು ಮುತ್ತಿನ ಅಂಗಿ. ಹೊದ್ದ  ದುಕೂಲ. ಬಂಗಾರದ ಸೊಂಟಪಟ್ಟಿ.  ಅಲ್ಲಿ ಸಿಗಿಸಿದ್ದ‌ ಖಡ್ಗ.  ತುಟಿಗೆ ಕೊಳಲು, ಕೈಯಲ್ಲಿ ಮುತ್ತಿನ ತುರಾಯಿ.
ಅದು ಒಂದು ಧನುರ್ಮಾಸದ ಮುಂಜಾವು. ಬಾನಲ್ಲಿ  ಉದಿಸುವ ಭಾನು.
ಭುವಿಯಲ್ಲಿ ಉದಿಸಿದ ಕೃಷ್ಣ.
ಕೃಷ್ಣನ ಮುಖದ ಕಾಂತಿ, ಸೂರ್ಯನ ಪ್ರಭೆ ಮಿಕ್ಕಿತ್ತು.
ಅರಮನೆಯಿಂದ ಚೆಂದದಿ ಹೊರಬಂದ ಯದುಕುಲಚಂದ್ರ. 
ವನರಾಜನ ನಡಿಗೆ. ಗಜರಾಜನ ಗಾಂಭೀರ್ಯ. ಸುರರಾಜನ ವೈಭವ. ಹಸನ್ಮುಖಿ ದ್ವಾರಕಾಧೀಶನ ಗತ್ತು ಗಮ್ಮತ್ತು. 
ಹೊರಾಂಗಣದಲ್ಲಿ ಕಾಯುತ್ತಿದ್ದ ಭ್ರತ್ಯವರ್ಗ.
ಸುತ್ತ ಸುತ್ತ ತುಂಬಿ ತುಳುಕುವ, ಕೃಷ್ಣನ ನೋಡಲು ಹಾರೈಸಿ ಬಂದ ಪ್ರಜಾ ವರ್ಗ. ಕೃಷ್ಣಾ ನೀ ಬೇಗನೆ ಬಾರೋ, ಮುಖವನೆ ತೋರೋ ಎಂದು ಕಾಯುತ್ತಿದ್ದರು.
ಕೃಷ್ಣನ ಮುಖಕಮಲ ಕಂಡರು. ಸಂತೋಷ ಗೊಂಡರು.
ಹರ್ಷದಿ ಅವರು ಕೃಷ್ಣನಿಗೆ ಹಾಕಿದ ಜಯಕಾರದ ಧ್ವನಿ ಮುಗಿಲು ಮುಟ್ಟಿತು. ಪ್ರತಿಯಾಗಿ ಬಾನಲ್ಲಿ ನೆರೆದ ಸುರವೃಂದ, ಆನಂದ ಉಕ್ಕಿ ಪುರುಷೋತ್ತಮನ ಮೇಲೆ ಪುಷ್ಪವೃಷ್ಟಿ ಕರೆಯಿತು.
ಶಂಖ ಓಂಕಾರ ಊದಿತು. ತಾಳ ಕೃಷ್ಣ ನಾಮ ಭಜಿಸಿತು. ಭೇರಿ ಸರ್ವೋತ್ತಮನಿಗೆ ಜೈಕಾರ 
ಮೊಳಗಿಸಿತು. ತಂಬೂರಿ ನಾದ,  ನಾದಬ್ರಹ್ಮ  ಕೃಷ್ಣನಿಗೆ ಸ್ವಾಗತ ಹಾಡಿತು. ಸುಪ್ರಭಾತಂ ಹೇಳಿತು.
ಸುತ್ತ ನೆರೆದ ವಿಪ್ರರು ವೇದಘೋಶ ಮಾಡಿದರು. 
ಕೃಷ್ಣ ಮುಗಳು ನಕ್ಕ. ಸಾನುರಾಗದಿ ಸರ್ವ ಸುಜನರ ಅವಲೋಕಿಸಿದ. ಅವನ ನೋಟ ಸಜ್ಜನರ ಭವ ಸಂತಾಪ ಕಳೆಯಿತು. ಆನಂದಸಾಗರದಲ್ಲಿ ಮುಳುಗಿಸಿತು. 
ಕೃಷ್ಣ ಹೊರಟಿದ್ದು ದ್ವಾರಕಾ ದೇಶ ಸುತ್ತಲು. ಪ್ರಜೆಗಳ ಯೋಗ ಕ್ಷೇಮ ವಿಚಾರಿಸಲು. ಅದಕ್ಕಾಗಿ ಕೃಷ್ಣ ತೇಜಿ - ಕುದುರೆಯನೇರಿದ.
ಎಂಥಾ ಕುದುರೆ? 
ಬಿಳಿ ಕುದುರೆ. ಬೆಟ್ಟದೆತ್ತರದ ಕುದುರೆ.
ಚೊಕ್ಕ ಚಿನ್ನದ ಜೀನು, ಥಡಿ, ಆಭರಣ ಗಳಿಂದ ಅಲಂಕೃ ತ ಶ್ರಂಗಾರ ಕುದುರೆ. ಮನೋಜವ ಮೀರಿಸಿದ ಬಿಳಿ ಕುದುರೆ.  ಹರಿಯ ಮನವ ಬಲ್ಲ ಹರಿಣಿ ಎಂಬ  ಕುದುರೆ.   ರಮೆ ಇಲ್ಲದ ಅನ್ಯರ ಸ್ಪರ್ಶಿಸುವದಿಲ್ಲ ಬಹು ಮಡಿವಂತ, 
ನಮ್ಮ ರಮಾರಮಣ.
ಲಕ್ಷ್ಮಿಯೇ ಕುದುರೆ ಯಾದಳು.
ನೋಡುವಷ್ಟರಲ್ಲಿ ತೇಜಿಯನೇರಿದ ಕಸ್ತೂರಿ ರಂಗ.
ಮೆಲ್ಲ ಮೆಲ್ಲನೆ, ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ, ಗೆಜ್ಜೆ ಕಾಲ್ಗಳಾ ಬಹು ಚೆಂದದಿ ಧ್ವನಿ ಮಾಡುತ್ತ., ಮಥಿಸಿ ಮಜ್ಜಿಗೆ ಮೇಲ್ ಬೆಣ್ಣೆ ತೇಲಿ ಬರುವಂತೆ, ಬಲು ಠೀವೀಲಿ ಮೋಹಕ ಹೆಜ್ಜೆ ಹಾಕಿತು ಕುದುರೆ.
ರಮಾರಮಣನ ಸವಾರಿ, ಭಕ್ತರ ಹೃದಯಕೆ ಜ್ಞಾನ ಭಕ್ತಿ ಎಂಬ ಸಕ್ಕರೆ ತುಪ್ಪದ ಕಾಲುವೆ ಹರಿಸಿತು.
ಎಲ್ಲೆಡೆ ಆನಂದ ತುಂಬಿ ಉಕ್ಕಿತು. ಬಾನಲ್ಲಿ ನೆರೆದ ರಂಭೆ ಆದಿ ಅಪ್ಸರೆಯರು, ಇಲ್ಲಿ ಭುವಿಯಲ್ಲಿ ಗೋಪಿಯರು - 

'ದೇವಿ, ನಮ್ಮ ದ್ಯಾವರು ಬಂದವ್ರೆ, ಬನ್ನಿರೇ, ನೋಡ ಬನ್ನೀರೇ' ಎಂದು ಹಾಡಿ ಕುಣಿದು ಕುಪ್ಪಳಿಸಿದರು.

ಗರುಡಗಮನ, ಹಯವಾಹನನಾಗಿ ಬಂದಾನೆ, 
ದೇವ ಬಂದಾ ನಮ್ಮ ಸ್ವಾಮಿ ಬಂದಾನೆ., 
ಇಂಥಾ ಪ್ರಭುವ ಕಾಣೆನೋ ಈ ಜಗದೊಳಗೆ -  ಎನ್ನುತ್ತ ಚೆಂದದ ಒಳ್ಳೊಳ್ಲೆ ಪದ ಹಾಡುತ್ತ, ಮುತ್ತಿನಾರತಿ ಎತ್ತಿ ಬೆಳಗಿದರು ಸುಮಂಗಲೆ ಯರೆಲ್ಲ.
ರಾಜಠೀವಿಯಿಂದ ರಾಜಬೀದಿಗಳೊಳಗೆಲ್ಲ
ವೈಭವದಿ ಮೆರೆಯುತ್ತ ತೇಜಿ ಹೊರಟಿತು.
ಸಾಲು ಸಾಲು ಸಾವಿರಾರು ಹಗಲು ದೀಪಗಳು
ರುಕ್ಮಿಣಿ ಕೃಷ್ಣರ ಮುಂದಿನ ಸಾಲು ದೇವರ ದೀಪಗಳಾದವು.
ಹರಿಗೆ ನೈವೇದ್ಯ ಸಮರ್ಪಿಸ ಬೇಕು.
ಏನೇನು ಸಮರ್ಪಿಸಿದರು?
ಅದು ಧನುರ್ಮಾಸ. ಹೆಸರು ಬೇಳೆ ಹುಗ್ಗಿ, ಕಾಸಿದ ತುಪ್ಪ, ಮೀಸಲು ಬೆಣ್ಣೆ,   ಮಧುರ ಗೊಜ್ಜು, ರಸಭರಿತ ಭಕ್ಷ, ಭೋಜ್ಯ ಗಳು, ಮತ್ತೆ  ಹಾಲು, ಕೆನೆ  ಮೊಸರು, ಮಜ್ಜಿಗೆ ಎಲ್ಲ ನಿವೇದನೆ ಮಾಡಿದರು. 
ಏನು ತಥ್ಯ?
ಹಸಿರು ಹೆಸರುಬೇಳೆ. ಅಂದರೆ ಈ ದೇಹ. ಅನೇಕಾನೇಕ ಜನ್ಮಗಳ ದಾಟಿ ಬಂದ ಈ ಮಾನವ  ಜನ್ಮ, ಸಾಧನೆಗಾಗಿ ಕೊಟ್ಟ ಹೊಸ ಕಾಯ. ಹೆಸರುಬೇಳೆ ಬೇಯಬೇಕು.  ಪಾಕವಾಗ ಬೇಕು. 
ಬೆಣ್ಣೆ, ತುಪ್ಪ ಕೂಡ ಬೇಕು. ಮಸಾಲೆ ಹಾಕ ಬೇಕು. ರಸಭರಿತವಾಗಬೇಕು. ಆಗ ಅದು ಹರಿಗೆ ಸಮರ್ಪಿಸಲು ರುಚಿಯಾದ ಪಕ್ವ ಹುಗ್ಗಿ. 
ಹಾಗೇ 
ಈ ಕಾಯ ಪಕ್ವವಾಗಬೇಕು. ಸಂಸಾರ ತಾಪಗಳಲಿ ಬೇಯಬೇಕು. ಸುಖ ದುಃಖಗಳ ಸಹನೆಯೆಂಬುದೇ ಮಸಾಲೆ.  ತಾಳುವಿಕೆಯೇ
ತಪ.  ಹರಿ ಸ್ಮರಣೆ ಮಾಡಿ ನಿರ್ಮಲ ವಾದ ಮನವೇ ಹಾಲು.
ಬುದ್ಧಿಯೇ ಕೆನೆಮೊಸರು. 
ಅನುಭವ ಮಥಿಸಿ ತೆಗೆದ ಧೃಡ ಭಕುತಿಯೇ ಮೀಸಲು ಬೆಣ್ಣೆ.
ಹರಿಮಹಿಮೆಯ ಗಟ್ಟಿ ಜ್ಞಾನವೇ ಹೆತ್ತ ತುಪ್ಪ.
ಇವೆಲ್ಲ ಸದ್ಗುಣಗಳು ಕೂಡೆ, ಹಸಿರು ಹೆಸರು ಬೇಳೆ,-  ಎಂಬ ಎಳಸು ಕಾಯ, ಅತಿರುಚಿ ಹುಗ್ಗಿ,  ಎಂಬ ಪಕ್ವ ಜ್ಞಾನ ಭಕ್ತಿ ಭರಿತ ಸಾಧನೆಯ  ಮನ, ಕಾಯವಾಯಿತು. ಅದನ್ನೇ - ಜ್ಞಾನ ಭಕ್ತಿ ಶರಣಾಗತಿ ಸುಗುಣಗಳನ್ನೇ  ಸುಜನರು -  ನೈವೇದ್ಯ ಎಂದು ಕೃಷ್ಣನಿಗೆ ಸಮರ್ಪಿಸಿದರು. 
ಸಂತಸದಿ ಹರಿ ಸ್ವೀಕರಿಸಿದ.
ಅವರ ಅನಿಷ್ಟ ಕಳೆದ. ಇಷ್ಟಾರ್ಥ ಪೂರೈಸಿದ.
ಪ್ರೀತಿಲಿ ಕುದುರೆಯ ನೇವರಿಸಿ ನಗುನಗುತ
ಮುನ್ನಡೆದ.
ಹೀಗೆ ದಿವ್ಯ ತೇಜಿಯನೇರಿ‌ ಭವ್ಯವಾಗಿ ದೇಶದೊಳಗೊಂದು ಸುತ್ತು ಸುತ್ತಿದ. ದೇಶವಾಸಿಗಳ ಕುಶಲ ವಿಚಾರಿಸಿದ. ಅನಿಷ್ಟ ನಿವಾರಿಸಿದ. ಇಷ್ಟಾರ್ಥ ಕೊಟ್ಟ.
ಮರಳಿ ಅರಮನೆಗೆ ಕೃಷ್ಣ ಬಂದ.
ಭಾಗ -೨
೨) ಬ್ರಹ್ಮಾಂಡದಲ್ಲಿ -

ದ್ವಾರಕೆಗೆ ಸೀಮಿತನಲ್ಲ ಕೃಷ್ಣ, ನಿಸ್ಸೀಮ ಶ್ರೀ ಕೃಷ್ಣ. ಇಡೀ ಬ್ರಹ್ಮಾಂಡದ ದೊರೆ ಆತ . ಅವನೇ ಮೂಲ ನಾರಾಯಣ ನಲ್ಲವೇ! ಬ್ರಹ್ಮಾಂಡದ ತುಂಬೆಲ್ಲ ಆತನ ಪ್ರಜೆಗಳು. ಅವರ ಯೋಗಕ್ಷೇಮದಲ್ಲಿ ಆತನಿಗೆ ಬಹು ಪ್ರೀತಿ. ತನ್ನ ಮಕ್ಕಳಂತೆ ಪಾಲಿಪುನು. ಮಕ್ಕಳ ಯೋಗ ಕ್ಷೇಮ ವಿಚಾರಿಸಲು ಶ್ರೀ ಹರಿ ಹೊರಟ. ಎಲ್ಲಿಂದ ?
ವೈಕುಂಠಪುರಿ. ಅಯೋಧ್ಯ ನಗರಿ. ಎಂತಹದ್ದು ವೈಕುಂಠ ?
ದಾಸರು ಹೇಳುತ್ತಾರೆ - ರತ್ನ ಕೆತ್ತಿಸಿದ ಚಿನ್ನದ ಏಳು ಕೋಟೆಗಳು ಮನ್ಮಥನ ಅಯ್ಯನ ಪುರಿಗೆ. ತನ್ ಮಧ್ಯದಲ್ಲಿ ಅಯೋಧ್ಯಾನಗರಿ ಸುವರ್ಣ ಗೋಪುರ ಒಪ್ಪುತಿಹದು. ಶ್ರೀದೇವಿ ತಾನೇ ಮುರಹರನ ಪಟ್ಟಣದಲ್ಲಿ ಪರಿಪರಿಯ ಚಿನ್ನದ ಅರಮನೆ ಗಳು, ನವ ರತ್ನ ಕೆತ್ತಿದ ಮಂದಿರಗಳು, ಚಿನ್ನ ರನ್ನದ ದ್ವಾರಗಳು. ಮೊದಲಾದ ರೂಪಗಳಲ್ಲಿ ಮಿರಿ ಮಿರಿ ಮಿಂಚುತಿಹಳು. ದಿವ್ಯ ನದಿಯಾಗಿ ಸುತ್ತುತ್ತಿಹಳು. ಕಂಡರಿಯದ ಕೇಳದ ಚಿತ್ರ ವಿಚಿತ್ರ ಮನಮೋಹಕ ಫಲ ಪುಷ್ಪಗಳಿಂದ ಕೂಡಿದ ಬಗೆ ಬಗೆಯ ವನಗಳು ಉಪವನಗಳು. ರನ್ನ ಚಿನ್ನದ ಹಾಸಿನ ರಾಜ ಬೀದಿಗಳು. ದಾರಿಗಳು ಹೆದ್ದಾರಿಗಳು. ಓ ಎಲ್ಲಿಂದ ಆರಂಭ, ಎಲ್ಲಿ ಕೊನೆ ತಿಳಿಯದು ನಿನ್ನಾಟ ವೈಕುಂಠವಾಸ. 

ಅರಮನೆ ದಿವ್ಯ ಸಿಂಹಾಸನದಿಂದ ಲಕ್ಷ್ಮೀ ಸಹಿತ ಮೂಲ ನಾರಾಯಣ ಎದ್ದು ಅರಮನೆ ಯಿಂದ ಹೊರ ಬಂದ. ಲಕ್ಷ್ಮಿ ಆತ್ಮಕ ಉನ್ನತ ಅಶ್ವ ಏರಿದ. ಬ್ರಹ್ಮಾಂಡ ಸುತ್ತಲು ಹೊರಟ
ಮುಕ್ತರೆಲ್ಲ ಮುಕ್ತ ಕಂಠದಿಂದ ಸುಸ್ವರದಿಂದ ಹರಿಯನ್ನು ಸ್ತುತಿಸುತ್ತಿದ್ದರು. ಭವ್ಯ ಬ್ರಹ್ಮಾಂಡಕ್ಕೆ ದಿವ್ಯ ವೈಕುಂಠದಿಂದ ಬಂದ. ಬ್ರಹ್ಮ ವಾಯು ಗರುಡ ಶೇಷ ರುದ್ರ ಇಂದ್ರಾದಿ ಸಕಲ ಸುರರು ಹರಿಯ ಸಂತೋಷದಿ ಸ್ವಾಗತಿಸಿದರು. ಶಂಖ, ತಾಳ ಮದ್ದಲೆ, ನಗಾರಿ ‌ಭೇರಿ ತಂಬೂರಿ ಮೊದಲಾದ ದಿವ್ಯ ಮಂಗಳ ವಾದ್ಯಗಳು ಮೊಳಗಿದವು. 
ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ 
ನಿಗಮ ಗೋಚರ ಬಂದಾ ನಿತ್ಯ ತೃಪ್ತನು ಬಂದಾ ನಗೆ ಮುಖದ ಹರಿ ಬಂದಾನೋ 

ಎಂದೆಲ್ಲ ಸುರವೃಂದ ಹಾಡಿತು.

ಡೋಳಿನ ಮ್ಯಾಲ್ ಕೈಯ ಭರಮಪ್ಪ ಹಾಕ್ಯಾನೋ, ತಾಳವ ಶಿವನಪ್ಪ ತಟ್ಯಾನೋ ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನೋ

ರಂಭೆ ಊರ್ವಶಿ ಮೊದಲಾದ ಸುರರಮಣಿಯರು ಮೋದದಿ ನರ್ತಿಸಿದರು. 
ಹೀಗೆ ವೈಭವದಿ ಪುರುಷೋತ್ತಮ ಉನ್ನತ ಕುದುರೆಯನೇರಿ ಮೆಲ್ಲ ಮೆಲ್ಲನೆ ಹೊರಟ.
ತಮ್ಮ ದೊರೆ ಶ್ರೀಹರಿಯ ನೋಡಿ ಜಗದ ಜನರ ಆನಂದ ಜಗವ ಮೀರಿತು. ಅವರ ಸಂತೋಷದ ಘೋಷ ಗಗನ ಭೇಧಿಸಿತು. 
ದಿವ್ಯ ಅಪರೂಪದ ಸಿಗಲಾರದ ವಸ್ತು ಹರಿ ಸಿಕ್ಕಾನೆಂದು ಸುಜನರು ತಮ್ಮನ್ನು ತಾವೇ ಸಮರ್ಪಿಸಿಕೊಂಡರು. ಭಕ್ಷ ಭೋಜ್ಯಗಳ ನೆಪದಲ್ಲಿ, ತಾವು ಸಾಧಿಸಿದ ಶ್ರದ್ಧೆ ನಿಷ್ಠೆ ಜ್ಞಾನ ಭಕ್ತಿ ವಿರಕ್ತಿ ಶರಣಾಗತಿ ಎಲ್ಲವುಗಳನ್ನು ಹರಿಗೆ ನಿವೇದನೆ ಮಾಡಿದರು. 
ಬ್ರಹ್ಮಾಂಡದ ತನ್ನ ಪ್ರಜೆಗಳನೆಲ್ಲ ಸಾನುರಾಗದಿ ಅವಲೋಕಿಸಿದ. ಅವರ ಭವ ಸಂತಾಪ ಪರಿಹರಿಸಿದ. 
ಪ್ರಸನ್ನನಾದ ಶ್ರೀನಿಕೇತನ. ಕಿಂ ನ ಲಭ್ಯಂ?
ಸುಜನರ ಅನಿಷ್ಟ ಕಳೆದ ಇಷ್ಟಾರ್ಥ ಕೊಟ್ಟ. 
ಭಕ್ತರ ಯೋಗಕ್ಷೇಮ ಮುಗಿಸಿದ. ತೇಜಿಯ ನೇರಿದ ಹರಿ ತನ್ನ ವೈಕುಂಠದ ಅರಮನೆಗೆ ಮರಳಿದ. 


೩ ಪಿಂಡಾಂಡದಲ್ಲಿ - 

ಬ್ರಹ್ಮಾಂಡದಲ್ಲಿ ಏನಿದೆ ಎಲ್ಲವೂ ಪಿಂಡಾಂಡದಲ್ಲಿ ಇದೆ. ಸಾಧನೆಯ ಶರೀರ ಈ ಪಿಂಡಾಂಡ.
ಈ ಪಿಂಡಾಂಡವೇ ಹರಿಯ ಭವ್ಯ ನಗರ. ಹೊರಗೆ ದ್ವಾರವು ನಾಲ್ಕು, ಒಳಗೆ ಐದು ದ್ವಾರಗಳು. ಪರ ದಾರಿಗೆ ಪ್ರಾಣ ಜಯ ವಿಜಯರು. 
ಅಷ್ಟದಳ ಹೃತ್ಕಮಲ ಹರಿಯ ಅರಮನೆ. ಮಧ್ಯೆ ಕೋಟಿ ರವಿಯಂತೆ ಮಿರುಗುವ ಲಕ್ಷ್ಮಿ ಸಹಿತ ಹರಿಯ ಮಂಟಪ 
ಸುಷಮ್ನಾನಾಡಿ, ಹೆದ್ದಾರಿ - ರಾಜಬೀದಿ.
ಉಪಬೀದಿಗಳು ಪಿಂಗಳಾ ಇಡಾ ವೃಜಿಕಾ ಮೊದಲಾದ ಉಪ ನಾಡಿಗಳು. 72,000 ನಾಡಿಗಳು ಬೀದಿ ಉಪಬೀದಿಗಳು.
ಹೃದಯ ಕಮಲ ಅರಮನೆಯಿಂದ ಅರಸು ಶ್ರೀಹರಿ ಹೊರ ಬಂದ. 
ಬ್ರಹ್ಮ ವಾಯು ಭವಾದಿಗಳು ‌ ಕೊಂಡಾಡಿ ಸ್ತುತಿಸಿದರು. ವಾಯು ಉತ್ತುಂಗ ಕುದುರೆಯಾದ. ರಾಜಾಶ್ವ ಆದ.
ಹೆದ್ದಾರಿ ದಾರಿಗಳಲ್ಲಿ ಹರಿಯ ಪ್ರಭೆ ವಾಯು ಪ್ರಭೆ ಸಾಲು ಸಾಲು ಸಹಸ್ರ ದೀಪ ಗಳಾದವು.
ಬಹು ಠೀವಿ. ಬಹು ಗತ್ತು. ಬಹುಭಕ್ತಿ ತುಂಬಿ ಮೆಲ್ಲ ಮೆಲ್ಲನೆ ಹೆಮ್ಮೆಯ ಹೆಜ್ಜೆ ಹಾಕಿತು ಬಿಳಿ ಕುದುರೆ ರಾಜ ಬೀದಿಗಳಲ್ಲಿ, ಪಿಂಡಾಂಡ ದಲ್ಲಿ ನಾಡಿ ನಾಡಿಗಳಲ್ಲಿ. 
ಸುರರೆಲ್ಲ ಪುರುಷೋತ್ತಮನ ಹೊತ್ತ ಸುರತ್ತೋಮ ರಾಜಾಶ್ವದ ಮುಂದೆ. 
ತತ್ವಾಭಿಮಾನಿ ದೇವತೆಗಳು ಸುರರೆಲ್ಲ -
'ಬಂದ ನಮ್ಮ ದೇವ ಗೋವಿಂದ ಚಂದದಿಂದ ಬಂದ ದೇವ ನೋಡಿ 
ಪಾಪ ತರಿಯುವ ಬಿಂಬ ಹರಿ ಬಂದ ಮೋಕ್ಷದಾಯಕ ಸಿರಿ ರಮಣ ಬಂದ' 
ಎಂದು ಗಾನ ಮಾಡಿದರು ನರ್ತಿಸಿದರು. ತಮ್ಮ ಜ್ಞಾನ ಭಕ್ತಿ ಸಾಧನೆಗಳನ್ನೇ ನಿವೇದನೆ ಮಾಡಿದರು.
ಹರಿ ಪಿಂಡಾಂಡಪುರವನ್ನೆಲ್ಲ ಸುತ್ತಾಡಿದ. ವ್ಯವಸ್ಥೆ ನೋಡಿದ. ಕುಶಲವ ಕಂಡ. ಸಂಚಾರವ ಮುಗಿಸಿದ. ಮರಳಿ ಬ್ರದರ್ ಕಮಲದ ಅರಮನೆಗೆ ಬಂದ. 
ಇದು ಪಿಂಡಾಂಡದ ರಾಜಬೀದಿಯೊಳಗೆ ಮೆರೆದು ಬಂದ ಅರಸನ ಕಥೆ.
ಇಂತು ಮೂರು ಬಗೆಯಿಂದ ರಾಜ ಬೀದಿಯೊಳಗಿಂದ ಮೆರೆದು ಬಂದ ರಾಜಾಧಿರಾಜನ ಗುಣಗಾನ ಮಾಡಬಹು ದು. 
ಇಂಥ ಪ್ರಭು ಶ್ರೀ ವಿಷ್ಣು ಶ್ರೀ ಕೃಷ್ಣ ಸಹಸ್ರನಾಮದ ಒಡೆಯನಿಗೆ ಸಾಸಿರ ನಮನಗಳು.
by ಡಾ. ವಿಜಯೇಂದ್ರ ದೇಸಾಯಿ 
ಶ್ರೀ ಕೃಷ್ಣಾರ್ಪಣಮಸ್ತು
****
.

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ
ತೇಜನೇರಿ ಮೆರೆದು ಬಂದಾ | ಪ |

ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ
ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು
ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು
ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ | ೧ |

ತಾಳ ಶಂಖ ಭೇರಿ ತಂಬೂರಿ ಮೊದಲಾದ
ಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲು
ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ
ಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ | ೨ |

ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು
ಮೋದದಿಂದ ಗಾಯಕರು ಮೌರಿ ಪಾಡಲು
ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ
ಅದರಿಂದ ಅಷ್ಟಮೃತಾನ್ನವ ನಿಕ್ಕುತ ಜಾಣ | ೩ |

ರಂಭಾ ಮೊದಲಾದ ಸುರರಮಣಿಯರು
ತುಂಬಿದಾರುತಿಯ ಪಿಡಿದು ಕೂಡಿ ಪಾಡಲು
ಶಂಭು ಮುಖ ನಿರ್ಜರನೇ ಪರಾಕೆನುತಲಿ
ಅಂಬುದಿ ಭವಾದ್ಬಿಗಳ ಆಳಿದ ಶ್ರೀರಂಗನಾಥ | ೪ |

ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು
ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು
ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು
ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳಸವಿದು ಬೇಗ | ೫ |

ಮುತ್ತಿನ ತುರಾಯಿ ಮುಂಡಾಸನದಿ ತತ್ತಳಿಪ
ತಾಳಿ ವಜ್ರ ತಾಳಿ ಚೌಕಳಿ ಮುತ್ತಿನ ಕುಂಡಲನಿಟ್ಟು
ಮೋಹಿಸುತ್ತ ಬೀದಿಯಲ್ಲಿ ಕತ್ತಿಯ
ಕೈಯಲ್ಲಿ ಪಿಡಿದು ಮತ್ತಿಲ್ಲೆ ವಿರಾಜಿಸುತ್ತ | ೬ |

ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು
ಹೊನ್ನಹೊಸ ಜಾನ ಜಂಗುಳಿ ಹೊಳೆವಸೊಬಗಿನ
ಉನ್ನತ ಪಾರಾಯಣ ಉತ್ತಮರಾ ಜಶ್ವವೇರಿ
ಎನ್ನ ಹಯವದನರಂಗ ಎಲ್ಲರಿಗಷ್ಟಾರ್ಥಕೊಡುತ | ೭ |
***

1 comment: