Friday, 13 December 2019

ವಗತನದಲಿ ಸುಖವಿಲ್ಲಾ ವಲ್ಲೆಂದರೆ ankita gopala vittala VAGATANADALI SUKHAVILLA VALLENDARE mundige

Audio by Mrs. Nandini Sripad

ಶ್ರೀ ಗೋಪಾಲದಾಸರ ಕೃತಿ 

 ರಾಗ ಶಂಕರಾಭರಣ           ಆದಿತಾಳ 

ವಗತನದಲಿ ಸುಖವಿಲ್ಲಾ ವಲ್ಲೆಂದರೆ ನೀ ಬಿಡಿಯಲ್ಲಾ ।
ಹಗರಣ ಜಗದೊಳು ಮಿಗಿಲಾಯಿತು ಪನ್ನಗನಗರ ನಿವಾಸಾ ॥ ಪ ॥

ಮೂರು ಬಣ್ಣಿಗಿಯ ಮನಿಗೆ ಮೂರು ಯರಡು ಭೂತಂಗಳು । 
ಮೂರು ನಾಲ್ಕು ಪ್ರಕಾರಕ್ಕೆ ಮೂರಾರು ಛಿದ್ರಗಳು ।
ಮೂರು ಅವಸ್ಥೆಯು ದಿನಕೆ ಮೂರಾನೂರಾರು ಹತ್ತರಲಿ ।
ಮೂರು ವಿಧದ ಅನ್ನದಿಂದಾ ಮೂರು ತಾಪಕ್ಕಾಕಿ ॥ ೧ ॥

ಐದು ಮಂದಿ ಭಾವನವರು ಐವಾರು ಮೈದನಾರಾ ಕೂಡಿ ।
ಐದು ಪರಿ ತಾನಾಗಿ ಮಾವ ಐದು ಕತ್ತಲೆ ಕೋಣೆ ।
ಗೈದಿಸುವಂತೆ ಮಾಡುವರು ಐದು ತಂದು ಬೆಚ್ಚಿಸುವ ।
ಐದನೆ ಬೊಕ್ಕಸದ ಮನೆಯಲೈಧಾದು ನಾ ಕಾಣೆ ॥ ೨ ॥

ಆರಾರು ಯರಡು ಸಾವಿರ ದಾರಿಯಲ್ಲಿ ಹೋಗಿ ಬರುವ । 
ಆರು ಮೂರು ಮೂರು ಸಾವಿರದಾರುನೂರು ನಿತ್ಯದಿ ।
ಆರು ನಾಲ್ಕು ಮಂದಿ ಹಿರಿಯಾ ಪಾರಪತ್ಯಗಾರರಿದಕೆ ।
ಆರು ಯರಡು ವಿಧದಿ ಯನ್ನ ಗಾರು ಮಾಡುತ್ತಿಪ್ಪರು ॥ ೩ ॥

ಆರೆ ಹತ್ತರಾ ಮೂಲಾದಿ ಆರು ಮಂದಿ ಬಿಡದೆ ಎನ್ನ ।
ಘೋರೈಸುವರು ಮರಳೊಂದು ವಿಚಾರ ಮಾಡಲೀಸರೊ ।
ಆರು ಮೂರು ವಿಧದ ಸೋಪಸ್ಕಾರ ವಂದಾದರು ಯಿಲ್ಲ ।
ಆರೆ ಇಬ್ಬರು ಸವತೆರ (ಹೋ)ಘೋರಾಟಕೆನಂಬೆ ॥ ೪ ॥

ಒಬ್ಬ ಬೆಳಕು ಮಾಡಲು ಮತ್ತೊಬ್ಬ ಕತ್ತಲೆಗೈದಿಸುವ ।
ಒಬ್ಬ ಯರಡೂ ಮಾಡಲು ಮತ್ತೊಬ್ಬ ನಿಂತುನೋಳ್ಪ ।
ವಬ್ಬ ಮೂವರ ವಳವಳಗೆ ಹಬ್ಬಿಕೊಂಡಿಪ್ಪುವಾರಂತೆ ।
ಒಬ್ಬನ ಕಾಣದೆ ನಾ ತಬ್ಬಿಬ್ಬಿಗೊಳಗಾದೆ ॥ ೫ ॥

ಮನೆಯೊಳು ನಾಳಿನಾಗ್ರಾಸಕ್ಕನುಮಾನಾ ಸಂದೇಹ್ಯಸಲ್ಲಾ ।
ರಿಣದಿಂದಾ ಕಡೆಹಾಯೋ ಮಾರ್ಗವನು ಲೇಶ ನಾ ಕಾಣೆ ।
ಗುಣಿಸಲು ಈ ಕಾಳಾ ಪುರುಷಾನ ಬಂಧನದಿಂದ ನಾನಿನ್ನು ।
ದಣಿದಿನೊ ಯಿನ್ನೆನ್ನ ನಿನ್ನ ಅಣುಗಾರೊಳಾಡಿಸೊ ॥ ೬ ॥

ಹಡದತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳು ।
ವಡಹುಟ್ಟಿದಾರೈವಾರೆನ್ನ ಕಡೆಗಣ್ಣಿಂದೀಕ್ಷಿಸಾರೂ ।
ಬಿಡದೆ ಹತ್ತಿಲಿ ಕಾದಿಪ್ಪ ನುಡಿಸಾನು ಹಿರಿಯಣ್ಣ ಅವನಾ ।
ಮಡದಿ ತ್ಯಾಗಕೇನೆಂಬೆ ತನ್ನ ವಡವಿ ಲೇಶಾವೀಯಳೋ ॥ ೭ ॥

ಅತ್ತಿಅತ್ತಿಗಿಯು ಯನ್ನ ಸುತ್ತ ಮುತ್ತ ಕಾದು ಕಟ್ಟಿ ।
ಯತ್ತ ತೋರಾರು ನಿನ್ನತ್ತ ಬರಲೀಸಾರು ।
ಹೊತ್ತಿಗೆ ಬಂದೊದಗಿ ನೃಪನಾ ಭೃತ್ಯರು ಯಳದು ವೈವಾಗಾ ।
ಹೆತ್ತಯ್ಯಾ ನೀ ಸಲಹಾದಿರಲೂ ಮತ್ತಾರು ಗತಿಪೇಳೋ ॥ ೮ ॥

ನಿನ್ನ ಹೊಂದಿಯಿಷ್ಟು ಭವಣಿಯನ್ನು ನಾನು ಬಡಲು ಕಂಡೂ ।
ನಿನ್ನ ದೂರಿ ನಗುವಾರು ನಾ ಯಿನ್ನು ತಾಳಲಾರೆ ।
ಘನ್ನ ಮಹಿಮಾ ಸೌಭಾಗ್ಯಸಂಪನ್ನ ಗೋಪಾಲವಿಠ್ಠಲಾ ।
ಬಿನ್ನಪವ ಚಿತ್ತೈಸಿ ಮನ್ನಿಸಯ್ಯಾ ಮಾಧವಾ ॥ ೯ ॥
*********

ಶ್ರೀ ಗೋಪಾಲದಾಸರ ಕೃತಿ 

 ತತ್ತ್ವಸಾರ 

 ರಾಗ ಶಂಕರಾಭರಣ        ಆದಿತಾಳ 

 ವಗತನದಲಿ ಸುಖವಿಲ್ಲಾ ವಲ್ಲೆಂದರೆ ನೀ ಬಿಡಿಯಲ್ಲಾ । 
 ಹಗರಣ ಜಗದೊಳು ಮಿಗಿಲಾಯಿತು ಪನ್ನಗನಗರ ನಿವಾಸಾ ॥ ಪ ॥ 

 ವಿವರಣೆ : ಈ ಸಂಸಾರದಲ್ಲಿ ಲೇಶಮಾತ್ರವೂ ಸುಖವಿಲ್ಲ. ಇದರಲ್ಲಿದ್ದು ತೊಳಲುವುದು ನನ್ನಿಂದಾಗದು ಎಂದರೆ ಪ್ರಾರಬ್ಧಕರ್ಮವನ್ನು ಅನುಭವಿಸಿಯೇ ತೀರಬೇಕೆಂಬುದು ನಿನ್ನ ನಿಯಮವಾಗಿದೆ. ಈ ಪ್ರಪಂಚದಲ್ಲಿ ಕಷ್ಟವು ಅತಿಶಯವಾಗಿದೆ. ಶೇಷಾಚಲವಾಸಿಯಾದ ಅರ್ಥಾತ್ ವೈಕುಂಠನಿಲಯನಾದ ಶ್ರೀ ಶ್ರೀನಿವಾಸನೇ ನನ್ನನ್ನು ( ಎಂದರೆ ಜೀವವರ್ಗವನ್ನು ) ಕರುಣದಿಂದ ಕಾಪಾಡು .

 ಮೂರು ಬಣ್ಣಿಗಿಯ ಮನಿಗೆ ಮೂರು ಯರಡು ಭೂತಂಗಳು । 
 ಮೂರು ನಾಲ್ಕು ಪ್ರಕಾರಕ್ಕೆ ಮೂರಾರು ಛಿದ್ರಗಳು । 
 ಮೂರು ಅವಸ್ಥೆಯು ದಿನಕೆ ಮೂರಾನೂರಾರು ಹತ್ತರಲಿ । 
 ಮೂರು ವಿಧದ ಅನ್ನದಿಂದಾ ಮೂರು ತಾಪಕ್ಕಾಕಿ ॥ ೧ ॥ 

 ವಿವರಣೆ : ಸಂಸಾರ ಮಾಡಲು ಸಾಧನವಾಗಿ ಮುಖ್ಯವಾಗಿ ಶರೀರವಿರಬೇಕು.ಆ ಶರೀರವು ಹೇಗೆ ಇದೆ ಎಂದರೆ , ಮೂರು ಬಣ್ಣಿಗಿಯ ಮನಿಗೆ = ಬಿಳುಪು (ಸತ್ವ) , ಕೆಂಪು (ರಜ) , ಕಪ್ಪು (ತಮ) . ಈ ಮೂರು ಗುಣಗಳಿಂದ ಕೂಡಿ , ಮೂರು ಎರಡು ಭೂತಂಗಳು = 3 + 2 = 5 , ಪೃಥ್ವಿ , ಅಪ್ಪು , ತೇಜ , ವಾಯು , ಆಕಾಶ ವೆಂಬ ಪಂಚಭೂತಗಳಿಂದ ನಿರ್ಮಿಸಲ್ಪಟ್ಟಿದೆ. ಈ ದೇಹವೆಂಬ ಪಟ್ಟಣಕ್ಕೆ , ಮೂರು ನಾಲ್ಕು ಪ್ರಾಕಾರಕ್ಕೆ = 3 + 4 = 7 , ತ್ವಕ್ಕು , ಚರ್ಮ , ಮಾಂಸ , ರುಧಿರ , ಮೇದಸ್ಸು , ಮಜ್ಜ , ಅಸ್ಥಿ ಎಂಬ ಏಳು ವಿಧ ಧಾತುಗಳೆಂಬ ಪ್ರಾಕಾರಗಳಿವೆ . ಈ ಪಟ್ಟಣದಲ್ಲಿ ಬಾಗಿಲುಗಳಂತೆ , ಮೂರಾರು ಛಿದ್ರಗಳು = 3 + 6 = 9 ಕಿಂಡಿಗಳಿವೆ . ಅವು ಎರಡು ಕಣ್ಣುಗಳು , ಎರಡು ಮೂಗಿನ ಹೊಳ್ಳೆಗಳು , ಒಂದು ಬಾಯಿ , ಎರಡು ಕಿವಿಗಳು , ಒಂದು ಗುದ , ಒಂದು ಉಪಸ್ಥಾ , ಹೀಗೆ ಒಂಭತ್ತು ಬಾಗಿಲುಗಳು . ಮೂರು ಅವಸ್ಥೆಯು ದಿನಕೆ = ಈ ದೇಹಕ್ಕೆ ದಿನ ಒಂದಕ್ಕೆ ಮೂರು ಅವಸ್ಥೆಗಳು , ಜಾಗ್ರತ ಸ್ವಪ್ನ ಸುಷುಪ್ತಿ ಎಂಬಿವು ನಡೆಯುತ್ತಿರುತ್ತವೆ. ಮೂರು ನೂರಾರು ಹತ್ತರಲಿ = ಹೀಗೆ ಮುನ್ನೂರು ಅರವತ್ತು ದಿವಸಗಳಲ್ಲಿ ಅರ್ಥಾತ್ ಪ್ರತಿದಿನವೂ , ಮೂರು ವಿಧದ ಅನ್ನದಿಂದಾ = ಮೂರುವಿಧ ಅನ್ನವನ್ನು ತಿನ್ನಬೇಕು ಎಂದರೆ , ಸಂಚಿತ , ಆಗಾಮಿ , ಪ್ರಾರಬ್ಧವೆಂಬ ಮೂರು ವಿಧ ಕರ್ಮಗಳ ಫಲವನ್ನು ಅನುಭವಿಸಬೇಕು. ಮೂರು ತಾಪಕ್ಕಾಕಿ = ಹೀಗೆ ಅನುಭವಿಸುವುದರಲ್ಲಿ ಮೂರು ತಾಪಗಳು ನನ್ನನ್ನು ಬಾಧಿಸುತ್ತವೆ. ಮೂರು ತಾಪಗಳು - ಆಧ್ಯಾತ್ಮಿಕ , ಆದಿದೈವಿಕ , ಆದಿಭೌತಿಕ ( ತನ್ನಿಂದ , ಪರರಿಂದ , ದೈವದಿಂದ ) .
ಈ ತಾಪಗಳನ್ನು ಸಹಿಸಲಾರೆನು . ಸ್ವಾಮಿಯೇ ಕಾಪಾಡು .

 ಐದು ಮಂದಿ ಭಾವನವರು ಐವಾರು ಮೈದನಾರಾ ಕೂಡಿ । 
 ಐದು ಪರಿ ತಾನಾಗಿ ಮಾವ ಐದು ಕತ್ತಲೆ ಕೋಣೆ । 
 ಗೈದಿಸುವಂತೆ ಮಾಡುವರು ಐದು ತಂದು ಬೆಚ್ಚಿಸುವ । 
 ಐದನೆ ಬೊಕ್ಕಸದ ಮನೆಯಲೈಧಾದು ನಾ ಕಾಣೆ ॥ ೨ ॥ 

 ವಿವರಣೆ : ನನ್ನ ಈ ಸಂಸಾರದಲ್ಲಿ , ಐದು ಮಂದಿ ಭಾವನವರು = ಶ್ರವಣ , ನಯನ , ಘ್ರಾಣ , ತ್ವಕ್ಕು , ರಸನ ಎಂಬ ಪಂಚಜ್ಞಾನೇಂದ್ರಿಯಗಳು ( ಜ್ಞಾನೇಂದ್ರಿಯಗಳು ಶ್ರೇಷ್ಠವಾದುವುಗಳಾದ್ದರಿಂದ ಭಾವನವರು ಎಂದರು ) , ಐವರು ಮೈದುನರಾ ಕೂಡಿ = ವಾಕು , ಪಾಣಿ , ಪಾದ , ವಾಯು , ಉಪಸ್ಥಾ ಎಂಬ ಪಂಚ ಕರ್ಮೇಂದ್ರಿಯಗಳು . ಐದು ಪರಿ ತಾನಾಗಿ ಮಾವ = ಮನಸ್ಸು , ಬುದ್ಧಿ , ಚಿತ್ತ , ಅಹಂಕಾರ , ಚೇತನವೆಂಬ ಪಂಚವೃತ್ತಿಯಿಂದ ಕೂಡಿರುವ ಮನಸ್ಸೆಂಬ ಮಾವನು , ಇವರೆಲ್ಲರೂ ಸೇರಿ ನನ್ನನ್ನು ಪರಮಪುರುಷನಾದ ನಿನ್ನ ಬಳಿ ಸೇರಿಸಲೀಸದೆ , ಐದು ಕತ್ತಲೆ ಕೋಣೆಗೆ ಐದಿಸುವಂತೆ ಮಾಡುವರು = ತಾಮಿಸ್ರ , ಅಂಧತಾಮಿಸ್ರ , ಮೋಹ , ಮಹಾ ಮೋಹ , ನಿಧನವೆಂಬ ಆವಿದ್ಯಾ ಪಂಚಕದ ಕತ್ತಲೆ ಕೋಣೆಗೆ , ಬಲವಂತದಿಂದ ಒಯ್ಯುತ್ತಾರೆ. ಹೋಗುವುದಿಲ್ಲವೆಂದು ಮುಷ್ಕರ ಮಾಡಿದರೆ , ಐದು ತಂದು ಬೆಚ್ಚಿಸುವ = ಶಬ್ದ , ಸ್ಪರ್ಷ , ರಸ , ರೂಪ , ಗಂಧವೆಂಬ (ತನ್ಮಾತ್ರೆಗಳೆಂಬ) ಉರಿಯುವ ಕೊಳ್ಳಿಯನ್ನು ತಂದು ಬೆಚ್ಚಿಸುವರು (ಎಂದರೆ ವಿಷಯಗಳಲ್ಲಿ ಮಗ್ನನನ್ನಾಗಿ ಮಾಡಿ ಮುಂದಿನ ಗತಿಯೇನೆಂಬ ದಿಗಿಲನ್ನು ಹುಟ್ಟಿಸುತ್ತಾರೆ.) ಸುಖವಾಗಿರೋಣವೆಂದರೆ ಅದಕ್ಕೆ ಸಾಧಕವಾದ , ಐದನೆ ಬೊಕ್ಕಸದ ಮನೆಯಲೈಧಾದು ನಾ ಕಾಣೆ = ಬೊಕ್ಕಸದ ಮನೆಯನ್ನು ಹೋಗಲೀಯರು . ಬೊಕ್ಕಸಗಳು ಐದು - ಅನ್ನಮಯ , ಪ್ರಾಣಮಯ , ಮನೋಮಯ , ವಿಜ್ಞಾನಮಯ , ಆನಂದಮಯವೆಂಬ ಐದು ಕೋಶಗಳು . ಅವುಗಳಲ್ಲಿ ಕಡೆಯದಾದ ಆನಂದವೆಂಬುದು ಎಲ್ಲಿದೆಯೋ ನಾನು ಕಾಣೆ. ಪರಮಾತ್ಮನೇ ಕಾಪಾಡು . 

 ಆರಾರು ಯರಡು ಸಾವಿರ ದಾರಿಯಲ್ಲಿ ಹೋಗಿ ಬರುವ । 
 ಆರು ಮೂರು ಮೂರು ಸಾವಿರದಾರುನೂರು ನಿತ್ಯದಿ । 
 ಆರು ನಾಲ್ಕು ಮಂದಿ ಹಿರಿಯಾ ಪಾರಪತ್ಯಗಾರರಿದಕೆ । 
 ಆರು ಯರಡು ವಿಧದಿ ಯನ್ನ ಗಾರು ಮಾಡುತ್ತಿಪ್ಪರು ॥ ೩ ॥ 

 ವಿವರಣೆ : ಈ ದೇಹವೆಂಬ ಪಟ್ಟಣಕ್ಕೆ , ಆರಾರು ಎರಡು ಸಾವಿರ ದಾರಿಯಲ್ಲಿ = 6 × 6 = 36 , 36 × 2 = 72 , ಹೀಗೆ 72 000 ನಾಡಿಗಳೆಂಬ ದಾರಿಯಲ್ಲಿ , ಹೋಗಿ ಬರುವ = ವಾಯುದೇವರು ಹೋಗಿಬರುತ್ತಾ ಎಂದರೆ ಉಚ್ಛ್ವಾಸ ನಿಶ್ವಾಸಗಳ ಮೂಲಕ , ನಿತ್ಯದಿ = ದಿನ ಒಂದಕ್ಕೆ , ಆರು ಮೂರು ಮೂರು ಸಾವಿರದಾರುನೂರು = 6 × 3 = 18 , 18 + 3 = 21 , ಹೀಗೆ 21600 ಶ್ವಾಸಜಪಗಳನ್ನು ಮಾಡುತ್ತಿರುತ್ತಾರೆ. ಅದರಿಂದ ನನ್ನ ಮುಂದಿನ ಗತಿಗೆ ಸಾಧನವಾಗುವಂತೆ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಹಾಗಲ್ಲದೆ , ಈ ಮುಖ್ಯಪ್ರಾಣದೇವರಿಂದ ಆಜ್ಞಪ್ತರಾದ , ಆರು ನಾಲ್ಕು ಮಂದಿ = 6 × 4 = 24 ಮಂದಿ , ಹಿರಿಯ ಪಾರಪತ್ಯಗಾರರಿದಕೆ = 5 ಭೂತಗಳು ( ಪೃಥ್ವಿ ,ಅಪ್ಪು , ತೇಜ , ವಾಯು , ಆಕಾಶ ) , 5 ತನ್ಮಾತ್ರೆಗಳು ( ಗಂಧ , ರಸ , ರೂಪ , ಸ್ಪರ್ಶ , ಶಬ್ದ ) , 5 ಕರ್ಮೇಂದ್ರಿಯಗಳು (ವಾಕ್ಕು , ಪಾಣಿ , ಪಾದ , ವಾಯು , ಉಪಸ್ಥಾ ) , 5 ಜ್ಞಾನೇಂದ್ರಿಯಗಳು ( ಶ್ರವಣ , ನಯನ , ಘ್ರಾಣ , ರಸನ , ತ್ವಕ್ಕು ) , 1 ಮನಸ್ಸು , 1 ಬುದ್ಧಿ , 1 ಅಹಂಕಾರ , 1 ಚಿತ್ತ. ಹೀಗೆ 24 ಮಂದಿ ( ತತ್ವಗಳು - ಜಡಗಳು , ಇವುಗಳಿಗೆ ಅಭಿಮಾನಿ ದೇವತೆಗಳು ) ಸೇರಿ , ಆರು ಎರಡು ವಿಧದಿ = 6 + 2 = 8 ವಿಧವಾದ ಮದದಿಂದ , ಎಂದರೆ , ಅನ್ನಮದ , ಅರ್ಥಮದ , ಅಹಂಕಾರಮದ , ವೈಭವಮದ , ಸಾಹಸಮದ , ಧಾತ್ರಿವಶಮದ , ಪ್ರಾಯಮದ , ಮೋಹಮದ . ಇಂತು ತತ್ವಾಭಿಮಾನಿಗಳು , ಎನ್ನ ಗಾರು ಮಾಡುತ್ತಿಪ್ಪರು = ನನಗೆ ಈ ಎಂಟು ಮದಗಳನ್ನು ಹಚ್ಚಿ ಹಾಳು ಮಾಡುತ್ತಾರೆ . 
ಆದುದರಿಂದ ನೀನು ಮೇಲ್ವಿಚಾರಣೆಯನ್ನು ತೆಗೆದುಕೊಂಡು , ಅದರಿಂದ ನನಗೆ ಸತ್ಸಾಧನೆಯಾಗುವಂತೆ ಮಾಡಬೇಕೆಂದು ಬೇಡುತ್ತೇನೆ. 

 ಆರೆ ಹತ್ತರಾ ಮೂಲಾದಿ ಆರು ಮಂದಿ ಬಿಡದೆ ಎನ್ನ । 
 ಘೋರೈಸುವರು ಮರಳೊಂದು ವಿಚಾರ ಮಾಡಲೀಸರೊ । 
 ಆರು ಮೂರು ವಿಧದ ಸೋಪಸ್ಕಾರ ವಂದಾದರು ಯಿಲ್ಲ । 
 ಆರೆ ಇಬ್ಬರು ಸವತೆರ (ಹೋ)ಘೋರಾಟಕೆನಂಬೆ ॥ ೪ ॥ 

 ವಿವರಣೆ : ಆರೆ ಹತ್ತರ ಮೂಲಾದಿ = 6 + 10 = 16 ಕಳೆಗಳುಳ್ಳ ಲಿಂಗ ಶರೀರವನ್ನೇ ಮೂಲಾಧಾರ ಮಾಡಿಕೊಂಡು , 16 ಕಳೆಗಳು - ಪಂಚಭೂತಗಳು , ಪಂಚತನ್ಮಾತ್ರೆಗಳು , ಪಂಚಜ್ಞಾನೇಂದ್ರಿಯಗಳು ಮತ್ತು ಮನಸ್ಸು . ಈ 16 ಕಳೆಗಳುಳ್ಳದ್ದು ಲಿಂಗ ಶರೀರವು . ಇದು ಜೀವನ ಸ್ವರೂಪ ಶರೀರಕ್ಕೆ ಹೊಟ್ಟಿನಂತೆ ಸುತ್ತಲೂ ಆವರಿಸಿಕೊಂಡಿರುತ್ತದೆ. ಆರು ಮಂದಿ ಬಿಡದೆ ಎನ್ನ = ಅರಿಷಡ್ವರ್ಗಗಳು ( ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರ ), ಮರಳೊಂದು ವಿಚಾರ ಮಾಡಲೀಸರೊ = ಮತ್ತೊಂದು ವಿಚಾರ ಮಾಡದಂತೆ , ಘೋರೈಸುವರು = ಸದಾ ಕಾಡುತ್ತಾರೆ. ಆರು ಮೂರು ವಿಧದ ಸೋಪಸ್ಕರ ವಂದಾದರು ಯಿಲ್ಲ = 6 + 3 = 9 , ಶ್ರವಣ , ಕೀರ್ತನ , ಸ್ಮರಣ , ಪಾದಸೇವನ , ಅರ್ಚನ , ವಂದನ , ದಾಸ್ಯ , ಸಖ್ಯ , ಆತ್ಮನಿವೇದನ ವೆಂಬ ನವವಿಧಭಕ್ತಿಗಳೆಂಬ ಸೋಪಸ್ಕರ ಎಂದರೆ ಮುಕ್ತಿಮಾರ್ಗದಲ್ಲಿ ಪಾಥೇಯ ಸ್ವರೂಪವಾದ ಇವುಗಳಲ್ಲಿ ಒಂದಾದರೂ ಇಲ್ಲ. ಆರೆ ಇಬ್ಬರು ಸವತೆರ ಹೋರಾಟಕ್ಕೇನೆಂಬೆ = ಹೇಗಾದರೂ ಸಾಧನ ಮಾಡಿಕೊಳ್ಳೋಣವೆಂದರೆ , ಆಶಾ - ಲಜ್ಜಾ ಎಂಬ ಇಬ್ಬರು ಸವತಿಯರು ಕಲಹವಾಡುತ್ತಾ ನನ್ನನ್ನು ಬಾಧಿಸುತ್ತಾರೆ . ಅಂದರೆ , ಆಸೆಯು ಅಪೇಕ್ಷಿಸಿ ಮುಂದಕ್ಕೆ ತಳ್ಳಿದರೆ , ಲಜ್ಜೆಯು ಹಿಂದಕ್ಕೆ ಎಳೆಯುತ್ತದೆ. ಇವರಿಬ್ಬರ ಹಿಡಿತಕ್ಕೆ ಸಿಕ್ಕಿ ಯಾವಾಗ ಯಾರ ಬಲವು ಹೆಚ್ಚಾಗುತ್ತದೆಯೋ , ಆಗ ಆ ರೀತಿ ನಡೆದು ಅದರಿಂದಾಖುವ ಕಷ್ಟಗಳಿಗೆ ನಾನು ಗುರಿಯಾಗಬೇಕಾಗಿದೆ. 
 ಪರಮಾತ್ಮಾ ಇದನ್ನು ನಾನು ಸಹಿಸಲಾರೆನು , ಕಾಪಾಡು .

 ಒಬ್ಬ ಬೆಳಕು ಮಾಡಲು ಮತ್ತೊಬ್ಬ ಕತ್ತಲೆಗೈದಿಸುವ । 
 ಒಬ್ಬ ಯರಡೂ ಮಾಡಲು ಮತ್ತೊಬ್ಬ ನಿಂತುನೋಳ್ಪ । 
 ಒಬ್ಬ ಮೂವರ ವಳವಳಗೆ ಹಬ್ಬಿಕೊಂಡಿಪ್ಪುವಾರಂತೆ । 
 ಒಬ್ಬನ ಕಾಣದೆ ನಾ ತಬ್ಬಿಬ್ಬಿಗೊಳಗಾದೆ ॥ ೫ ॥ 

 ವಿವರಣೆ : ಈ ದೇಹದಲ್ಲಿ ಜೀವರ ಸಾಧನೆಗಾಗಿ ವಿಶ್ವಾದಿ ರೂಪಗಳಿಂದ ಪರಮಾತ್ಭನು ಮಾಡುವ ವ್ಯಾಪಾರವನ್ನು ವರ್ಣಿಸುತ್ತಾರೆ. ಒಬ್ಬ ಬೆಳಕು ಮಾಡಲು = ವಿಶ್ವನಾಮಕ ಪರಮಾತ್ಮನು ದಕ್ಷಿಣಾಕ್ಷಿ ಸ್ಥಿತನಾಗಿ ಬೆಳಕೆಂಬ ಜಾಗ್ರದಾವಸ್ಥೆಗೆ ಪ್ರೇರಕನಾಗಿದ್ದಾನೆ. ಮತ್ತೊಬ್ಬ ಕತ್ತಲೆಗೈದಿಸುವ = ಪ್ರಾಜ್ಞನಾಮಕ ಪರಮಾತ್ಮನು ಹೃದಯದಲ್ಲಿದ್ದು , ಜೀವನಿಗೆ ಕತ್ತಲೆಯೆಂಬ ಗಾಢನಿದ್ರೆಗೆ ಪ್ರೇರಕನಾಗಿದ್ದಾನೆ. ಒಬ್ಬ ಯರಡೂ ಮಾಡಲು = ತೈಜಸನಾಮಕ ಪರಮಾತ್ಮನು ಕಂಠ ಪ್ರದೇಶದಲ್ಲಿದ್ದು , ಎಚ್ಚರಿಕೆಯೂ ಅಲ್ಲದ ನಿದ್ರೆಯೂ ಅಲ್ಲದ ಸ್ವಪ್ನಾವಸ್ಥೆಗೆ ಪ್ರೇರಕನಾಗಿದ್ದಾನೆ. ಮತ್ತೊಬ್ಬ ನಿಂತು ನೋಳ್ಪ = ತುರ್ಯನಾಮಕ ಪರಮಾತ್ಮನು ಶಿರಸ್ಸಿನ ಹನ್ನೆರಡು ಅಂಗುಲದ ಮೇಲೆ ಇದ್ದು ಆನಂದವನ್ನುಂಟುಮಾಡುತ್ತಾನೆ. ಆತನಿಗೆ ವಾಸುದೇವ ನೆಂದು ಹೆಸರು. ಆತನೇ ಶಿರಸ್ಸಿನ ಮೇಲೆ ಅಮೃತವೃಷ್ಟಿಯನ್ನು ಕರೆಯುವವನು. ಒಬ್ಬ ಮೂವರ ವಳವಳಗೆ ಹಬ್ಬಿಕೊಂಡಿಪ್ಪುವಾರಂತೆ = ಒಬ್ಬನಾದ ಪರಮಾತ್ಮನು ಮೂವರಾದ ಆತ್ಮ , ಅಂತರಾತ್ಮ , ಜ್ಞಾನಾತ್ಮ ರೂಪಗಳಲ್ಲಿ ಒಳಗೊಳಗೆ ಹಬ್ಬಿಕೊಂಡಿರುವನು ಎಂದರೆ ವ್ಯಾಪಿಸಿರುತ್ತಾನೆ. ಒಬ್ಬನ ಕಾಣದೆ = ಹೀಗೆ ವಿಶ್ವ , ತೈಜಸ , ಪ್ರಾಜ್ಞ , ತುರ್ಯ , ಆತ್ಮ , ಅಂತರಾತ್ಮ , ಜ್ಞಾನಾತ್ಮ , ಪರಮಾತ್ಮನೆಂಬ ಎಂಟು ರೂಪಗಳಿಂದ , ನೀನು ನಮ್ಮೊಳಗೆ ಮಾಡುವ ವ್ಯಾಪಾರಗಳ ಬಗೆಯರಿಯದೆ , ನಾ ತಬ್ಬಿಬ್ಬಿಗೊಳಗಾದೆ = ನಾನು ದಿಕ್ಕು ತೋರದೆ ಹೋದೆ. ಆದ್ದರಿಂದ , ದಯಾಬ್ಧಿಯೇ , ನಿನ್ನ ಶರಣರ ದ್ವಾರಾ ಶ್ರುತಿಸ್ಮೃತಿಗಳಲ್ಲಿ ಉಕ್ತವಾದ ನಿನ್ನ ಮಹಾತ್ಮೆಗಳನ್ನು ನನ್ನ ಮನಸ್ಸಿಗೆ ಹಿಡಿಯುವಂತೆ ಬೋಧಿಸಿ , ಈ ಸಂಸಾರದಿಂದ ಪಾರುಗಾಣಿಸು ಎಂದು ಬೇಡುತ್ತೇನೆ. 

 ಮನೆಯೊಳು ನಾಳಿನಾಗ್ರಾಸಕ್ಕನುಮಾನಾ ಸಂದೇಹ್ಯಸಲ್ಲಾ । 
 ರಿಣದಿಂದಾ ಕಡೆಹಾಯೋ ಮಾರ್ಗವನು ಲೇಶ ನಾ ಕಾಣೆ । 
 ಗುಣಿಸಲು ಈ ಕಾಳಾ ಪುರುಷಾನ ಬಂಧನದಿಂದ ನಾನಿಷ್ಟು । 
 ದಣಿದಿನೊ ಯಿನ್ನೆನ್ನ ನಿನ್ನ ಅಣುಗಾರೊಳಾಡಿಸೊ ॥ ೬ ॥ 

 ವಿವರಣೆ : ಮನೆಯೊಳು ನಾಳಿನ ಗ್ರಾಸಕ್ಕೆ ಅನುಮಾನಾ ಸಂದೇಹ್ಯಸಲ್ಲಾ = ಈ ದೇಹದಿಂದ ಮುಂದಣ ಜನ್ಮಕ್ಕೆ ಗ್ರಾಸ ಎಂದರೆ ಸಾಧನೆ ಲೇಶವಾದರೂ ಇಲ್ಲ . ಇದಕ್ಕೆ ಸಂಶಯವಿಲ್ಲ. ಋಣದಿಂದ ಕಡೆಹಾಯೊ ಮಾರ್ಗವನು ಲೇಶ ನಾ ಕಾಣೆ = ಋಣ - ಸಾಲ , ಇದು ಮೂರು ಬಗೆಯಾದದ್ದು - ದೇವಋಣ , ಋಷಿಋಣ , ಪಿತೃಋಣವೆಂದು. ಯಜ್ಞಾದಿಗಳಿಂದ ದೇವಋಣವೂ , ಅಧ್ಯಯನಾದಿಗಳಿಂದ ಋಷಿಋಣವೂ , ಸತ್ಸಂತಾನಾಭಿವೃದ್ಧಿಯಿಂದ ಪಿತೃಋಣವೂ ಪರಿಹಾರವಾಗುತ್ತದೆ. ಗುಣಿಸಲು = ಇದು ಜನ್ಮಜನ್ಮಕ್ಕೂ ನಿಂತು ಅಪಾರವಾಗಿದೆ. ಈ ಋಣದಿಂದ ಪಾರಾಗುವ ಬಗೆಯು ನನಗೆ ತೋರದಾಗಿದೆ. ಕಾಳಾಪುರುಷನ ಬಂಧನದಿಂದ ನಾನಿಷ್ಟು ದಣಿದಿನೊ = ಕಲಿಪುರುಷನ ಬಂಧನದಿಂದ ನಾನಿಷ್ಟು ದಣಿದಿರುವೆನು . ಇದನ್ನು ನೀಗಿಸಬೇಕಾಗಿ , ನಿನ್ನ ಅಣುಗರೊಳು ಆಡಿಸು = ನಿನ್ನನ್ನೇ ಅನುಸರಿಸಿ ನಡೆವ ಭಕ್ತರಲ್ಲಿ , ಸಹವಾಸವನ್ನು ಕೊಟ್ಟು ಉದ್ಧಾರ ಮಾಡು. 

 ಹಡದತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳು । 
 ವಡಹುಟ್ಟಿದಾರೈವಾರೆನ್ನ ಕಡೆಗಣ್ಣಿಂದೀಕ್ಷಿಸಾರೂ । 
 ಬಿಡದೆ ಹತ್ತಿಲಿ ಕಾದಿಪ್ಪ ನುಡಿಸಾನು ಹಿರಿಯಣ್ಣ ಅವನಾ । 
 ಮಡದಿ ತ್ಯಾಗಕೇನೆಂಬೆ ತನ್ನ ವಡವಿ ಲೇಶಾವೀಯಳೋ ॥ ೭ ॥ 

 ವಿವರಣೆ : ಹಡದತಾಯಿ = ಮೂಲ ಪ್ರಕೃತಿಯಾದ ಮಾಯಾದೇವಿಯು ಈ ಜೀವನನ್ನು ಸಂಸಾರದಲ್ಲಿ ಪ್ರವೃತ್ತನನ್ನಾಗಿ ಮಾಡುತ್ತಾಳೆ . ಹಡೆದ ತಾಯಿ ಎಂಬುವ ಮಾತು ಮುಂದಕ್ಕೆ ತನಗೆ ಅಪಕೀರ್ತಿ ತಂದೀತೆಂದು ಸಕಲ ಅನುಕೂಲ ಕೊಟ್ಟು , ಹಿಡಿದು ಬದುಕು ಮಾಡಿಸುವಳು = ಹೊಡೆದು ಬಡಿದು ಬುದ್ಧಿ ಕಲಿಸಿ ಸಾಧನೆಯೆಂಬ ಬದುಕು ಮಾಡಿಸುತ್ತಾಳೆ. ಇದು ಸತ್ಸಾಧನೆಗಾದರೆ ಬಹಳ ಸಂತೋಷ. ಹಾಗಲ್ಲದೆ , ಮುದ್ದಿನಿಂದ ಸಾಕಿ ವಿಷಯೋಪಭೋಗಗಳಲ್ಲೇ ಮಗ್ನನನ್ನಾಗಿ ಮಾಡಿದರೆ ನನ್ನ ಬದುಕು ವ್ಯರ್ಥವಾಗುತ್ತದೆ. ಒಡಹುಟ್ಟಿದರೈವರು ಎನ್ನ ಕಡೆಗಣ್ಣಿಂದೀಕ್ಷಿಸರೂ = ಪ್ರಾಣ , ಅಪಾನ , ವ್ಯಾನ , ಉದಾನ , ಸಮಾನರೆಂಬ ಪಂಚಪ್ರಾಣರು ನನ್ನ ಒಡಹುಟ್ಟಿದವರಾದರೂ ಅಂತಃಕರಣದಿಂದ ನನ್ನ ಕಡೆಗೆ ಪೂರ್ಣ ಕಟಾಕ್ಷದಿಂದ ನೋಡದೆ , ಉಪೇಕ್ಷೆಯಿಂದ , ಕಡೆಗಣ್ಣಿನಿಂದ ಎಂದರೆ ನೋಡಿ ನೋಡದೆ ಓರೆನೋಟದಿಂದ ನೋಡುತ್ತಾರೆ. ಅಂದರೆ ಯೋಗಮಾರ್ಗಕ್ಕೆ ಅನುಕೂಲವಾಗರು ಎಂದರ್ಥ. ಬಿಡದೆ ಹತ್ತಿಲಿ ಕಾದಿಪ್ಪ ಹಿರಿಯಣ್ಣನು ನುಡಿಸನು = ಸದಾ ಸಮೀಪದಲ್ಲಿಯೇ ಕಾದುಕೊಂಡಿರುವನಾದರೂ ಮುಖ್ಯಪ್ರಾಣನೆಂಬ ಹಿರಿಯಣ್ಣನು ಮಾತನಾಡಿಸುವುದೇ ಇಲ್ಲ ಎಂದರೆ ಸತ್ಸಾಧನೆಯ ಪ್ರಸ್ತಾಪವನ್ನೇ ಮಾಡುವುದಿಲ್ಲ. ನಿನ್ನ ಗತಿ ಏನೆಂದು ವಿಚಾರಿಸುವುದಿಲ್ಲ. ಅವನಾ ಮಡದಿ ತ್ಯಾಗಕ್ಕೇನೆಂಬೆ ತನ್ನ ಒಡವೆ ಲೇಶವೀಯಳೋ = ಹೀಗೆ ಒಡಹುಟ್ಟಿದ ಅಣ್ಣನೇ ಉದಾಸೀನನಾದ ಮೇಲೆ , ಅವನ ಹೆಂಡತಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇರಬೇಕು ? ಭಕುತಿದಾಯಕಳಾದ ಭಾರತೀದೇವಿಯೆಂಬ ಈ ಅತ್ತಿಗೆಯು ತನ್ನ ಒಡವೆ ಎಂದರೆ ಸ್ವತ್ತಾದ ಜ್ಞಾನ ಭಕ್ತಿ ವೈರಾಗ್ಯಗಳೆಂಬ ಆಭರಣಗಳಲ್ಲಿ ಒಂದನ್ನೂ ದಯಮಾಡಿ ಕೊಡಳು. ಅವುಗಳಿಲ್ಲದೆ ನಾನು ಶೋಭಿಸೆನು . ಆಕೆಯ ಉದಾರ ಬುದ್ಧಿಗೆ ಏನೆಂದು ಹೇಳಲಿ ? ದೇವಾ , ನೀನಾದರೂ ನಿನ್ನ ಸೊಸೆಗೆ ಹೇಳಿ , ನನ್ನ ಸತ್ಸಾಧನೆಗೆ ಅನುಕೂಲ ಮಾಡಿಕೊಡು ಎಂದು ಪ್ರಾರ್ಥಿಸುತ್ತೇನೆ. 

 ಅತ್ತಿಅತ್ತಿಗಿಯು ಯನ್ನ ಸುತ್ತ ಮುತ್ತ ಕಾದು ಕಟ್ಟಿ । 
 ಯತ್ತ ತೋರಾರು ನಿನ್ನತ್ತ ಬರಲೀಸಾರು । 
 ಹೊತ್ತಿಗೆ ಬಂದೊದಗಿ ನೃಪನಾ ಭೃತ್ಯರು ಯಳದು ವೈವಾಗಾ । 
 ಹೆತ್ತಯ್ಯಾ ನೀ ಸಲಹಾದಿರಲೂ ಮತ್ತಾರು ಗತಿಪೇಳೋ ॥ ೮ ॥ 

 ವಿವರಣೆ : ಅತ್ತೆ ಅತ್ತಿಗೆಯು = ಸಂಶಯ , ವಿಪರ್ಯಯವೆಂಬ ಇಬ್ಬರು ಸ್ತ್ರೀಯರು , ಜರಾಸಂಧನ ಮಕ್ಕಳು , ಕಂಸನ ಹೆಂಡಂದಿರು . ಅಸ್ತಿ ಪ್ರಾಸ್ತಿ ಎಂಬ ನಾಮವುಳ್ಳವರು ; ಲೋಕದ ಅತ್ತೆ ಅತ್ತಿಗೆಯರಂತೆ ನನ್ನನ್ನು ಕಾಡುತ್ತಾ ಸುತ್ತು ಮುತ್ತಿ ನಾನು ಯಾರು ಎಲ್ಲಿದ್ದೇನೆಂದು , ನೀನು ಯಾರು ಎಲ್ಲಿರುವೆಯೆಂದೂ ತಿಳಿಯಗೊಡದಂತೆ , ಎರಡು ತೆರೆಗಳಂತೆ ಇದ್ದು , ಎತ್ತ ತೋರಾರು = ಜೀವನ ಸ್ವರೂಪ ತೋರಗೊಡದಂತೆ ಮುಚ್ಚಿಕೊಂಡಿರುವುದು ಒಂದು . ಪರಮಾತ್ಮನನ್ನು ತೋರಗೊಡದಂತೆ ಮುಚ್ಚಿಕೊಂಡಿರುವುದು ಒಂದು. ಇದೇ ಜೀವನು ಪರಮಾತ್ಮನಿಗೆ ದೂರು ಹೇಳುವ ವಿವರ. ನನಗೆ ಮುಸುಕು ಮುಚ್ಚಿಕೊಂಡಿದೆ. ನನ್ನನ್ನು ನಿನ್ನ ಬಳಿ ಬರಗೊಡದು. ಈ ಮುಸುಕನ್ನು ತೆಗೆಸಿ ನಿನ್ನ ಪಾದ ಸಂದರ್ಶನವನ್ನು ಕರುಣಿಸಿ ಕಾಪಾಡು. ಈ ಸಂಸಾರದಲ್ಲಿ ಹೀಗೆಯೇ ಕಾಲವನ್ನು ನೂಕುತ್ತಿರುವಾಗ , ಹೊತ್ತಿಗೆ ಬಂದೊದಗಿ = ಆಯುಃ ಪ್ರಮಾಣ ಮುಗಿದ ಹೊತ್ತಿಗೆ ಸರಿಯಾಗಿ ಬಂದು , ನೃಪನ ಭೃತ್ಯರು ಎಳೆದು ವೈವಾಗ = ನಿನ್ನಿಂದ ನಿಯಮಿಸಲ್ಪಟ್ಟ ಕಾಲಾಖ್ಯ ಯಮನ ಭೃತ್ಯರು ರೋಗಾದಿ ರೂಪದಿಂದ ಮುತ್ತಿ , ಕಾಡಿ , ಮೃತ್ಯುವಿನ ವಶಮಾಡಿ ಎಳೆದುಕೊಂಡು ಹೋಗುತ್ತಿರುವಾಗ , ಹೆತ್ತಯ್ಯಾ ನೀ ಸಲಹಾದಿರಲೂ = ಸರ್ವಲೋಕಜನಕನಾದ ನೀನೇ ಬಿಡಿಸಿ ಕಾಪಾಡದಿರಲು , ಮತ್ತಾರು ಗತಿಪೇಳೋ = ಇನ್ನು ನಮಗೆ ದಿಕ್ಕು ಯಾರು ? ಪರಮಾತ್ಮ ಈ ಮೃತ್ಯುಬಾಧೆಯಿಂದ ಬಿಡಿಸಿ ನಿತ್ಯಲೋಕವಾದ ವೈಕುಂಠದಲ್ಲಿಟ್ಟು ಕಾಪಾಡು .

 ನಿನ್ನ ಹೊಂದಿಯಿಷ್ಟು ಭವಣಿಯನ್ನು ನಾನು ಬಡಲು ಕಂಡೂ । 
 ನಿನ್ನ ದೂರಿ ನಗುವಾರು ನಾ ಯಿನ್ನು ತಾಳಲಾರೆ । 
 ಘನ್ನ ಮಹಿಮಾ ಸೌಭಾಗ್ಯಸಂಪನ್ನ ಗೋಪಾಲವಿಠ್ಠಲಾ । 
 ಬಿನ್ನಪವ ಚಿತ್ತೈಸಿ ಮನ್ನಿಸಯ್ಯಾ ಮಾಧವಾ ॥ ೯ ॥ 

 ವಿವರಣೆ : ಏನಾದರೂ ಅನಾದ್ಯನಂತ ಕಾಲದಲ್ಲಿಯೂ ನಾನು ನಿನ್ನವನು. ನಿನ್ನನ್ನು ಬಿಟ್ಟು ಅನ್ಯ ರಕ್ಷಕರು ನನಗೆ ಇಲ್ಲ. ಮನಃಪೂರ್ವಕವಾಗಿ ನಾನು ನಿನ್ನನ್ನು ಹೊಂದಿರುತ್ತೇನೆ. ನಿನ್ನ ಹೊಂದಿ ಯಿಷ್ಟು ಭವಣಿಯನ್ನು ನಾನು ಬಡಲು = ಅಂಥಾದ್ದರಲ್ಲಿ ನಾನು ಹೀಗೆ ಕಷ್ಟಕ್ಕೆ ಸಿಕ್ಕಿ ಒದ್ದಾಡುತ್ತಿರಲು , ಕಂಡು ನಿನ್ನ ದೂರಿ ನಗುವಾರು = ಇದನ್ನು ಕಂಡು ಇತರರು ನಾನಾವಿಧವಾಗಿ ನಿನ್ನನ್ನು ದೂರುವರು. ಇದನ್ನು ನಾನು ಕೇಳಿ ಸಹಿಸಲಾರೆ. ಲೋಕದಲ್ಲಿ ಯಾವುದೋ ಒಂದು ನಿಮಿತ್ತದಿಂದ ಪ್ರಿಯರಾಗಿರುವವರನ್ನು ದೂರಿದರೆ ಸಹಿಸಲಾಗುವುದಿಲ್ಲ. ಹೀಗಿರುವಲ್ಲಿ ನೀನು ಅನಿಮಿತ್ತ ಬಾಂಧವನು . ನಮ್ಮನ್ನು ಬಿಟ್ಟಿರುವವನಲ್ಲ. ಪರಮಪ್ರಿಯನು. ನಾ ಯಿನ್ನು ತಾಳಲಾರೆ = ಇಂಥಾ ನಿನ್ನನ್ನು ದೂರಿದರೆ ನಾನು ಹೇಗೆ ತಾನೇ ಸಹಿಸೇನು ? ಘನ್ನ ಮಹಿಮಾ = ಮಹಾಕರುಣಾಳುವೇ , ಸೌಭಾಗ್ಯಸಂಪನ್ನ = ಅಷ್ಟ ಸೌಭಾಗ್ಯ ಸಂಪನ್ನನೇ , ಜ್ಞಾನಿ ಸಂರಕ್ಷಕನೇ , ಪಾಪ ಪರಿಹಾರಕನೇ , ಶರಣ ಪಾಲಕನೇ , ಬಿನ್ನಪವ ಚಿತ್ತೈಸಿ ಮನ್ನಿಸಯ್ಯ ಮಾಧವಾ = ನನ್ನ ವಿಜ್ಞಾಪನೆಯನ್ನು ಮನ್ನಿಸಿ ಕೈಕೊಂಡು ಕಾಪಾಡು. ಲಕ್ಷ್ಮೀಪತಿಯೇ ನಿನಗೆ ಅನಂತಾನಂತ ನಮಸ್ಕಾರಗಳು.


🙏॥ ಶ್ರೀಕೃಷ್ಣಾರ್ಪಣಮಸ್ತು॥🙏
***
ಶ್ರೀ ಗೋಪಾಲದಾಸರು ಮುಂಡಿಗೆ ..

ಐದು ಮಂದಿ ಭಾವನವರು ಐದು ಮೈದುನರು ಕೂಡಿ l ಐದು ಪರಿ ತಾನಾಗಿ ಮಾವನೈದು ಕತ್ತಲ ಕೊಣೆ ಗೈದುವಂತೆ ಮಾಡುವರು l ಐದು ತಂದು ಬೆಚ್ಚಿಸುವರು lಐದನೆ ಬೊಕ್ಕಸದ ಮನೆ ಎಲ್ಲಿದೆಯೋ ನಾ ಕಾಣೆ l l

ಈಗ ಇದರ ಆರ್ಥ ನೋಡುವ ..

ಭಗವಂತ ಕೊಟ್ಟ ಶರೀರದಲ್ಲಿ ಇರುವ ನೆಂಟರು ಅಂದರೆ ಈ ಐದು ಮಂದಿ ಭಾವನವರು. ಪಂಚ ಜ್ಞಾನಂದ್ರಿಯಗಳು ಹಾಗೂ ಪಂಚ ಕರ್ಮೆಂದ್ರಿಯ ಗಳು ಇದರಲ್ಲಿ ಜ್ಞಾನೇಂದ್ರಿಯ ಗಳು ಉತ್ತಮ ವಾದ್ದರಿಂದ ಭಾವನ ಸ್ಥಾನ ಕೊಟ್ಟಿದ್ದಾರೆ. ಶ್ರವಣ, ಚಕ್ಷು, ಪ್ರಾಣ, ಥ್ವಕ್, ರಸನ . ಇನ್ನು ಐದು ಮಂದಿ ಮೈದುನರು  ಕರ್ಮೆಂದ್ರಿ ಯಗಳು .. ವಾಕ್, ಪಾಣಿ, ಪಾದ, ಪಾಯು, ಉಪಸ್ಥ .

ಐದು ಪರಿತಾನಾಗಿ .. ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ, ಚೇತನ ಎಂಬ ಪಂಚ
ವೃತ್ತಿಗಳಿಂದ ಮನಸ್ಸು ಕೊಡಿದೆ. 

ಇದರಲ್ಲಿ ಮನಸ್ಸೇ ಮಾವ. ಇವರೆಲ್ಲರೂ ಸೇರಿ ವಿಷಯ ಸುಖಗಳ ಕಡೆ ಮನಸ್ಸು ಹರಿಯುವಂತೆ ಮಾಡುತ್ತಾರೆ. ಭಗವಂತನ ಸ್ಮರಣೆ ಬಾರದಂತೆ ಮಾಡಿ ,   ಐದು ಕತ್ತಲ ಕೋಣೆ  ಗೈದುವಂತೆ ಮಾಡಿ ಬಿಡುತ್ತಾರೆ. ಐದು ಕತ್ತಲ ಕೋಣೆ .. ತಾಮಿಷ್ರ, ಅಂಧ ತಾಮಿಶ್ರ, ಮೋಹ, ಮಹಾಮೋಹ, ನಿಧನ. 

ಇಲ್ಲಿಗೆ ಹೋಗಲಾರೆ ಎಂದು ಪ್ರತಿಭಟಿಸಿದರೆ ,ಐದು ತಂದು ಬೆಚ್ಚಿಸುವರು. .. ಶಬ್ದ, ಸ್ಪರ್ಶ, ರೂಪ, ರಸ, ಗಂಧ . ಪಂಚ ತನ್ಮಾತ್ರೆಗಳು ವಿಷಯ ಸುಖದ ತೃಷೆ ಹೆಚ್ಚಿಸುವ ಶಬ್ಧಾದಿಗಳ ರೂಪಗಳ  ನೋಟದಿಂದ ,
ಐದನೆ ಬೊಕ್ಕಸದ ಮನೆ ಎಲ್ಲಿದೆಯೋ ಕಾಣೆ .. ಈ ಐದು ಬೊಕ್ಕಸದ ಮನೆಗಳು ..

ಐದು ಕೋಶಗಳು.. ಅನ್ನಮಯ, ಪ್ರಾಣ ಮಯ, ಮನೋಮಯ,ವಿಜ್ಞಾನಮಯ, ಆನಂದ ಮಯ . ಇದರಲ್ಲಿ ದಾಸರು ಹೇಳೋದು ಐದನೆ ಬೊಕ್ಕಸದ ಮನೆ ಅದು
ಆನಂದ ಮಯ ಕೋಶ. ಇದು ಎಲ್ಲಿದೆಯೋ ನಾಕಾಣೆ . ಆದ್ದರಿಂದ ಸಂಸಾರದ ಸಾಗರ ಭವಣೆ ಯಿಂದ ಕಡೆ ಮಾಡೋ ಅಂತ ಪ್ರಾರ್ಥಿಸಿದ್ದಾರೆ .

ಗೋಪಾಲದಾಸರು ತನ್ನ ಕೃತಿಗಳಲ್ಲಿ ಪೂರಾ ಸೂತ್ರಗಳು, ಸ್ಮೃತಿಗಳು, ಶೃತಿಗಳೂ ಎಲ್ಲ ಸೇರಿಸಿದ್ದಾರೆ. ಸಾಮಾನ್ಯ ಜನರಿಗೆ ಆರ್ಥ ಆಗುವುದು ಕಷ್ಟ. ಆದರೆ ಸ್ವಲ್ಪ ತಾಳ್ಮೆಯಿಂದ ಹೊಳ ಹೊಕ್ಕು ನೋಡಿದರೆ ಎಲ್ಲ ನಮ್ಮ ದೇವರು ಆರ್ಥ ಮಾಡಿಸುತ್ತಾನೆ. ಎಲ್ಲ ಅವನು ಜ್ಞಾನ ಕೊಡಬೇಕು.  ಅದನ್ನೇ ಬೇಡಬೇಕು ಅಷ್ಟೇ.
ನಿರಂತರ ಪ್ರಯತ್ನ ಬೇಕು.
***

No comments:

Post a Comment