Friday 13 December 2019

ಧ್ಯಾನವನೆ ಮಾಡು ಬಿಂಬ ಮೂರುತಿಯ ankita gopala vittala DHYAANAVANE MAADU BIMBA MOORUTIYA

Audio by Mrs. Nandini Sripad

ರಾಗ: ಆನಂದಭೈರವಿ      ತಾಳ: ಖಂಡಚಾಪು

ಧ್ಯಾನವನೆ ಮಾಡು ಬಿಂಬ ಮೂರುತಿಯ || ಪ ||
ಆನಂದದಲಿ ಕುಳಿತು ಅಂತರಂಗದಲಿ || ಅ.ಪ ||

ಸದಾಚಾರನಾಗಿ ದ್ವಾದಶ ಗುರುಗಳಿಗೆರೆಗಿ
ಮುದದಿಂದ ಮೂಲಮಂತ್ರವನು ಜಪಿಸಿ
ಸದಮಲ ಭಕುತಿಯಲಿ ದೇಹಸ್ಥನ ತಿಳಿದು
ಪದುಮಾಸನವ ಹಾಕಿ ಪರಮ ವಿಶ್ವಾಸದಲಿ || ೧ ||

ಅಂಗವನು ಚಲಿಸದೆ ಚೆಂದಾಗಿ ದೃಢದಿಂದ
ಕಂಗಳನು ಮುಚ್ಚಿ ಇಂದ್ರಿಯಂಗಳ ಜರಿದು
ಮಂಗಳ ಶೋಭಿತನ ಅಖಂಡ ಧ್ಯಾನವನು ಅಂತ-
ರಂಗದಿ ಪಾಲಿಸಿ ಎಲ್ಲವನು ಕಾಣೊ || ೨ ||

ಭಗವದ್ರೂಪಗಳೆಲ್ಲ ಒಂದು ಸಾರಿ ಸ್ಮರಿಸಿ
ಮಗುಳೆ ಪರಮಗುರುವಿನ ಮೂರ್ತಿಯನು
ತೆಗೆದು ಆವಾಹನವನೆ ಮಾಡಿ ಅಲ್ಲಿಂದಲೆ
ಸ್ವಗುರು ಬಿಂಬಮೂರುತಿಯಲಿ ಐಕ್ಯವನೆ ಮಾಡೊ || ೩ ||

ತಿರುಗಿ ಮೆಲ್ಲನೆ ಮೂರುರಂಧ್ರದಿಂದಲಿ ನಿನ್ನ
ವರಮೂರ್ತಿಯಲಿ ಚಿಂತನೆಯ ಮಾಡೊ
ಭರದಿಂದ ಎಲ್ಲವನು ತಂದು ಹೃದಯದಲ್ಲಿ
ಸ್ಥಿರವಾಗಿ ಇಪ್ಪ ಮೂರುತಿಯನೆ ಕೂಡಿಕೊ || ೪ ||

ಆತನೆ ಬಿಂಬ ಮೂರುತಿಯೆಂದು ತಿಳಿದುಕೊ
ಆ ತರುವಾಯ ನಾಡಿಗಳ ಗ್ರಹಿಸಿ
ಆ ತೈಜಸನ ತಂದು ವಿಶ್ವಮೂರುತಿಯಲ್ಲಿ
ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ || ೫ ||

ಜ್ಞಾನ ಪ್ರಕಾಶದಲಿ ನಿನ್ನ ಹೃದಯ
ಸ್ಥಾನ ಚೆನ್ನಾಗಿ ಅಷ್ಟದಳ ಕಮಲ ಮಧ್ಯ
ಶ್ರೀನಿವಾಸನ ಮೂರ್ತಿ ನಿಲ್ಲಿಸಿ ಬಾಹ್ಯದಲಿ
ಏನೇನು ಪೂಜೆಗಳ ಅದನೆ ತಿಳಿದು ಮಾಡೋ || ೬ ||

ಗುಣನಾಲ್ಕರಿಂದ ಉಪಾಸನೆಯನು ಮಾಡು
ಕ್ಷಣಕ್ಷಣಕೆ ಹರಿರೂಪ ನೀ ನೋಡುತ
ಅಣುರೇಣು ಚೇತನಕೆ ತಾನೆ ನಿಯಾಮಕ
ಫಣಿಶಾಯಿಯಲ್ಲದೆ ಮತ್ತೊಬ್ಬರಿಲ್ಲವೆಂದು || ೭ ||

ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ
ಸಮವಿಷಯವ ತಿಳಿದು ಒಂದೆ ಭಕುತಿಯಲಿ
ಸಮಾಧಿಗೊಳಗಾಗಿ ದಿವ್ಯದೃಷ್ಟಿಯಲಿ
ಕ್ರಮದಿಂದ ಭರಿತ ಭಾವವನು ಕಾಣೊ || ೮ ||

ಈ ಪರಿ ಧೇನಿಸಲು ದೇವ ಕರುಣವ ಮಾಳ್ಪ
ಪಾಪ ಸಂಚಿತವು ಪ್ರಾರಬ್ಧನಾಶ
ಅಪರೋಕ್ಷಿತನಾಗಿ ನಿನ್ನ ಯೋಗ್ಯತೆಯಿದ್ದಷ್ಟು
ಗೋಪಾಲವಿಠಲನೊಲಿವನಾಗ || ೯ ||
********

No comments:

Post a Comment