Friday 27 December 2019

ವೃಂದಾವನ ಪ್ರವೇಶಿಸಿದಂದವ others

ವೃಂದಾವನ ಪ್ರವೇಶಿಸಿದಂದವ
ಚಂದದಿ ಪೇಳುವೆ ಪಾಲಿಪುದು ||

ಇಂದಿರೆಯರಸನ ಪ್ರೇರಣೆಯಿಂದ ಯತಿ
ವೃಂದ ತಿಲಕ ರಾಘವೇಂದ್ರರಾನಂದದಿ ||

ಒಂದು ದಿನವು ಶ್ರೀ ರಾಯರು ಶಿಷ್ಯರ
ವೃಂದಕೆ ಪಾಠವ ಹೇಳುತಿರೆ
ಅಂದು ವಿಮಾನದಿ ಕೃಷ್ಣದ್ವೈಪಾಯನ ಪ
ರಂಧಾಮಕೈದಲು ನೋಡಿ ಕೈ ಮುಗಿದು ||

ಎಷ್ಟು ದಿನವು ನಾವಿಲ್ಲಿರಬೇಕೆಂದು
ಶಿಷ್ಟ ಗುರುವರರು ಕೇಳಿದೊಡೆ
ಕೃಷ್ಣದ್ವೈಪಾಯನರೆರಡು ಬೆಳಗುಳ
ಗಟ್ಟಿಯಾಗಿ ಬೀಸಿ ತೋರಿಸಿ ಪೊರಟರು ||

ನೆರೆದ ಶಿಷ್ಯರದರರ್ಥವೇನೆನುತ
ಗುರುಗಳನ್ನು ತಾವ್ ಕೇಳಿದೊಡೆ
ಎರೆಡು ವರ್ಷ ತಿಂಗಳು ದಿನವೆರಡೆರಡು
ಇರುವುದು ಧರೆಯೊಳಗೆಂದರು ರಾಯರು ||

ಆದವಾನಿಗೆ ಗುರು ಸಂಚಾರ ಪೋಗಿರೆ
ಆ ದಿವಾನ ವೆಂಕಣ್ಣ ಬಲು
ಆದರಿಸಿದ ಬಳಿ ತಾ ನವಾಬನಿಂದ
ಮೋದದಿ ಕೊಡಿಸಿದ ಮಂಚಾಲೆಯನು ||

ಹಿಂದೆ ಪ್ರಹ್ಲಾದರು ಯಾಗವ ರಚಿಸಿದ
ಸುಂದರ ಕ್ಷೇತ್ರವಿದೆಂಬುದನು
ತಂದು ಮನಕೆ ಗುರುರಾಯರೀ ಕ್ಷೇತ್ರವ
ನಂದು ಪಡೆದು ತಾವಿಲ್ಲಿಯೇ ನಿಂತರು ||

ಉತ್ತಮ ನೀಲವರ್ಣದ ಶಿಲೆಯಪಳಿರಿಸಿ
ಕೆತ್ತಿಸಿ ವೃಂದಾವನತರಿಸಿ
ಕ್ಷೇತ್ರರಕ್ಷಣೆಯಗಷ್ಟ ದಿಕ್ಕುಗಳಲಿ ದೇವ
ಮೂರ್ತಿಗಳನು ಸ್ಥಾಪಿಸಿ ನಿಲಿಸಿದರು ||

ವೃಂದಾವನದಲಿ ಸ್ಥಾಪಿಸಲೇಳ್ನೂರು
ಚಂದದ ಸಾಲಿಗಾಮಗಳ
ತಂದಿಟ್ಟರೆ ಸಿದ್ಧತೆಗಳು ಸಕಲವು
ಕುಂದಿಲ್ಲದಂದೆ ನಡೆದಿರಲಾಗಲೆ ||

ಮುಂದಕೆ ತಮ್ಮ ಸಂಸ್ಥಾನವ ವಹಿಸಿ ಯೋ
ಗೀಂದ್ರರೆಂಬ ಪ್ರಿಯ ಶಿಷ್ಯರಿಗೆ
ಸಂದಿಪ ವಿರಹದಿ ನೊಂದಿದ ಶಿಷ್ಯರ
ವೃಂದವ ಬಲು ಸಂತೈಸಿದರಾಗಲೇ||

ನಲವತ್ತೇಳು ಸಂವತ್ಸರ ನಾಲ್ಕು ತಿಂ
ಗಳು ಇಪ್ಪತ್ತೊಂಭತ್ತು ದಿನಕಾಲ
ನಲವಿನಿಂದ ವೇದಾಂತ ಸಾಮ್ರಾಜ್ಯವ
ಸಲಹಿ ಸುಕೀರ್ತಿಯ ಗಳಿಸಿದ ಬಳಿಕ ||

ಸಾವಿರದೈನೂರು ತೊಂಭತ್ಮೂರನೆ
ಕ್ರತು ಸಂವತ್ಸರದ
ಶ್ರಾವಣ ಕೃಷ್ಣ ದ್ವಿತೀಯದ ಗುರುವಾರ
ವಾಸರ ಮುಹೂರ್ತದಿ ಗುರುವರ ||

ಹಸ್ತದಿ ಜಪಮಾಲೆ ಪಿಡಿದು ಯೋಗೀಂದ್ರರ
ಹಸ್ತಲಾಘವವ ಸ್ವೀಕರಿಸಿ
ಸ್ವಸ್ತಿವಾಚನಗಳ್ ವಿಪ್ರರು ಪೇಳುತಿರೆ
ಅರ್ಥಿಯಲಿ ವೃಂದಾವನವ ಪ್ರವೇಶಿಸಿ ||

ಪದ್ಮಾಸನದಲಿ ಮಂಡಿಸಿ ಎದುರಲಿ
ಮುದ್ದುಪ್ರಾಣೇಶನ ನೋಡುತಲಿ
ಪದ್ಮನಾಭನ ಧ್ಯಾನದೊಳಿರೆ ಜಪಸರ
ಬಿದ್ದು ಬಿಡಲು ಮುಚ್ಚಳಿಕೆಯನಿಡಲು ||

ನೆರೆದಿಹ ವಿಪ್ರರು ಜಯ ಜಯವೆನ್ನುತ
ಪರಿಪರಿ ರಾಯರ ಪೊಗಳಿದರು
ಕರಿಗಿರೀಶನ ಕರುಣ ಪಡೆದ ನಮ್ಮ
ಗುರುಸಾರ್ವಭೌಮನ ಸರಿಯಾರಿಹರು ||
********

No comments:

Post a Comment